Sunday, 15th December 2024

ನಾನೇಕೆ ಕೆಲಸ ಬಿಟ್ಟೆ..?

– ಮಾಧುರಿ ಭಾವೆ

ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಇಂಟರ್ ಸ್ಕೂಲ್ ಕಾಂಪಿಟೇಶನ್ ನಡೆಸಬೇಕು.

‘ಬೇಡ ನೋಡು, ಕೆಲಸ ಬಿಡಬೇಡ, ಕೆಲಸ ಬಿಟ್ರೆ ನೀ ಕೆಟ್ಟೆ’ ನನ್ನ ಅಕ್ಕನ ಉವಾಚ. ‘ಕೆಲಸ ಬಿಡಬೇಡವೇ, ಇದು ನಿನ್ನ ವ್ಯಕ್ತಿತ್ವದ ಪ್ರಶ್ನೆ’ ನನ್ನ ಗೆಳತೀನೂ ಹೇಳಿದಳು. ‘ನೀನು ಕೆಲಸ ಬಿಡುವುದು ನನಗೇನೂ ಒಪ್ಪಿಗೆ ಇಲ್ಲ’ ಎಂದು ೮೨ ವರ್ಷದ, ಇನ್ನೂ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುವ ನನ್ನ ತಂದೆ ಸಹ ಹೇಳಿದರು. ಆದರೂ ನಾ ಕೆಲಸ ಬಿಟ್ಟೆ. ಹೌದು ನಾನು ಶಿಕ್ಷಕಿ. ೨೨ ವರ್ಷಗಳ ಅನುಭವವಿದೆ. ನಾನು ಬಯಸಿ ಬಯಸಿ ಶಿಕ್ಷಕಿಯಾದವಳು. ಬೇರೆ ಯಾವ ಕೆಲಸವೂ ಸಿಗಲಿಲ್ಲವೆಂತಲೋ, ಬಹಳ ರಜೆ ಸಿಗುತ್ತದೆ ಅಂತಲೋ, ಕೆಲಸದ ಅವಧಿ ಕಮ್ಮಿ ಇರುತ್ತದೆ ಎಂದು ಕುಟುಂಬ ಮತ್ತು ಕೆಲಸ ಎರಡನ್ನೂ ನಿಭಾಯಿಸಲು ಸುಲಭ ಎಂತಲೋ ಅಳೆದು ತೂಗಿ ಬಹಳ ಲೆಕ್ಕಚಾರ ಹಾಕಿ ಶಿಕ್ಷಕಿಯಾದವಳಲ್ಲ. ಬಿಎಡ್ ಮಾಡುವಾಗಲೇ ನನ್ನ ಮನಃಶಾಸ್ತ್ರದ ಅಧ್ಯಾಪಕಿ, ‘ನೀನು ಬಹಳ ವರ್ಷ ಕೆಲಸ ಮಾಡುವುದಿಲ್ಲ, ನಿನ್ನ ಉತ್ಸಾಹ ಮತ್ತು ಚಟುವಟಿಕೆಗಳನ್ನು ನೋಡಿದರೆ ನೀನು ಬಹಳ ಬೇಗ ಬರ್ನೌಟ್ ಆಗುವ ಸಾಧ್ಯತೆ ಇದೆ’ ಎಂದಿದ್ದರು.

ಅದೇ ಕಾರಣವೇ? ಕಾಕತಾಳಿಯವೇ? ಗೊತ್ತಿಲ್ಲ. ನಾನು ಕೆಲಸ ಬಿಡಲು ನಿರ್ಧರಿಸುವುದಕ್ಕೆ ದೈಹಿಕ ಕಾರಣಗಳನ್ನು ಮಾತ್ರ ಕೊಡ ಬಯಸುತ್ತೇನೆ. ‘ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ’ ಪ್ರಶಸ್ತಿಯೊಂದಿಗೆ ಬಿಎಡ್ ಮುಗಿಸಿದೆ. ಮರುದಿನವೇ ಶಾಲೆಯೊಂದರಲ್ಲಿ ಸಂದರ್ಶನ. ಕೆಲಸ ಸಿಕ್ಕೇ ಬಿಟ್ಟಿತು. ಎಲ್ಲಾ ಚಟುವಟಿಕೆಗಳಲ್ಲೂ ತನು ಮನದಿಂದ ಭಾಗವಹಿಸಿದ ಸಂತೃಪ್ತಿಯ ಭಾವ ಯಾವಾಗಲೂ ಇರುತ್ತಿತ್ತು. ವರುಷಗಳು ಉರುಳಿ
ದವು. ಆಪಾದಮಸ್ತಕದವರೆಗೂ ತೊಂದರೆಗಳು ಕಾಣಿಸಿಕೊಳ್ಳಲಾರಂಭಿಸಿದವು. ತಲೆಯಿಂದ ಶುರು ಮಾಡುತ್ತೇನೆ. ಶಾಲೆಗೆಂದು ಬೇಗ ಎದ್ದು ತಿಂಡಿ ಮಾಡಿ ನಾಲ್ಕು ಜನರ ಡಬ್ಬಿಗಳಿಗೂ ತುಂಬಿಸಿ ತಯಾರಾಗಿ ಹೊರಡಲೇ ಒದ್ದಾಡುತ್ತಿರುವಾಗ ವಾರಕ್ಕೆರಡು ಬಾರಿ ತಲೆ ಸ್ನಾನ ಮಾಡುವುದು ಕಷ್ಟವಾಗುತ್ತಿತ್ತು. ಪರಿಣಾಮ ಹೊಟ್ಟು, ಕೂದಲುದುರುವುದು ಮತ್ತು ಕೂದಲು ಬಿಳಿಯಾಗ ತೊಡಗಿತ್ತು. ಎಲ್ಲಾ ವಿಶೇಷ ಕಾರ್ಯಕ್ರಮಗಳಿಗೆ ಕೂದಲಿಗೆ ಬಣ್ಣ ಹಾಕಲೇಬೇಕಾಯಿತು. ವರ್ಷವಿಡೀ ವಿಶೇಷ ಕಾರ್ಯಕ್ರಮಗಳು. ರಾಸಾಯನಿಕ ವಸ್ತುಗಳನ್ನು ಬಳಸಲು ಇಷ್ಟಪಡದ ನನಗೆ ತುಂಬಾ ತೊಂದರೆಯಾಗುತ್ತಿತ್ತು. ಮದರಂಗಿ ಹಚ್ಚೋಣ ವೆಂದರೆ ಅದು ಒಂದು ದೊಡ್ಡ ರಾಮಾಯಣ. ‘ಆರೆಂಜ್ ಟೀಚರ್’ ಎನ್ನುವ ಹಣೆಪಟ್ಟಿ ಬೇರೆ.

ಹಣೆಯ ಮೇಲೆ ಹೇರ್‌ಡೈ ತಾಗಿದ್ದರಂತೂ ಎಲ್ಲರೂ ಅದನ್ನೇ ನೋಡುತ್ತಿದ್ದಾರೆ ಎನ್ನುವ ಹಿಂಜರಿಕೆ. ಇನ್ನೂ ಹುಬ್ಬಿನ ಕಥೆ ಹೇಳುವುದಾದರೆ, ಬ್ಯೂಟಿ ಪಾರ್ಲರ್‌ಗೆ ಹೋಗುತ್ತಲೇ ಇರಬೇಕು, ತುಂಬಾ ಬೆಳೆದರೆ ಮಕ್ಕಳಿಗೆ ನನ್ನನ್ನು ನೋಡಿ ಎಲ್ಲಿ ಭಯ ವಾಗುತ್ತದೆಯೋ ಎನ್ನುವ ಆತಂಕ. ಕ್ರೂರ ಸಿಂಗ್ ನಂತೆ ಕಾಣುವ ಹುಬ್ಬುಗಳನ್ನು ಸಮಯಕ್ಕೆ ಸರಿಯಾಗೆ ತಿದ್ದಿ ತೀಡುತ್ತಲೇ ಇರಬೇಕು. ಕಣ್ಣುಗಳು ಸುಸ್ತಾಗಿವೆ ಪಾಪ. ಉತ್ತರ ಪತ್ರಿಕೆ ತಿದ್ದಿ, ನೋಟ್ಸ್ ಕರೆಕ್ಷನ್ ಮಾಡಿ, ಪ್ರಶ್ನೆ ಪತ್ರಿಕೆ ತಯಾರಿ ಇತ್ಯಾದಿಯಿಂದ. ಕಣ್ಣಿನ ಪಾತ್ರ ಬಹುದೊಡ್ಡದು. ಕನ್ನಡಕ ಬರುವ ತಯಾರಿ ನಡೆದಿದೆ. ಸುಸ್ತಾದ ಕಣ್ಣುಗಳು ಚಂದ ಕಾಣಲಿ ಎಂದು ಕಾಜಲ್ ಬಳಸಬೇಕು. ಅದನ್ನು ಹಚ್ಚಿಕೊಳ್ಳದಿದ್ದರೆ ಜ್ವರ ಬಂದವರ ಹಾಗೆ ಕಾಣುತ್ತದೆ ಮುಖ. ಮತ್ತೆ ರಾಸಾಯನಿಕಗಳ ಬಳಕೆ.

ಇನ್ನು ಮೂಗಿಗೆ ಶೀತ ಬಂದರಂತೂ ಆಯಿತು. ಸೀಮೆ ಸುಣ್ಣದ ಧೂಳಿನಿಂದ ಸೀನಿದ್ದೂ ಸೀನಿದ್ದೇ. ಮಕ್ಕಳಿಗೆ ಅರ್ಥ ಆಗುತ್ತಿತ್ತು. ಆದರೂ ಕೊರೋನ ನಂತರ ಎಲ್ಲರೂ ವಕ್ರದೃಷ್ಟಿಯಿಂದ ನೋಡುತ್ತಿದ್ದರು. ಇನ್ನೂ ಬಾಯಿ. ತುಟಿಗೆ ಬಣ್ಣವಿರಬೇಕು, ಹಲ್ಲುಗಳು ಹೊಳೆಯುತ್ತಿರಬೇಕು ಮತ್ತು ಮಕ್ಕಳ ಹತ್ತಿರ ಹೋದಾಗ ಬಾಯಿಂದ ದುರ್ವಾಸನೆ ಬರಬಾರದು. ಇವೆಲ್ಲವಕ್ಕೂ ವ್ಯವಸ್ಥೆಯಾಗಬೇಕು. ಮುಖದ ಚರ್ಮದ ಮೇಲೆ ೪೦ರ ನಂತರ ಕಾರ್ಮೋಡದಂತೆ ಕಪ್ಪು ಕಲೆಗಳು ಬರಲಾರಂಭಿಸುತ್ತವೆ. ಕೆಲವೊಬ್ಬರಿಗೆ ಇದರಿಂದ ಕೀಳರಿಮೆಯೂ ಉಂಟಾಗಬಹುದು. ಮತ್ತೆ ಒಂದಿಷ್ಟು ಪದರಿನ ಲೇಪನ ಮುಖದ ಮೇಲೆ. ದಿನದಲ್ಲಿ ಸಾವಿರಾರು ಬಾರಿ ನಾವು ತಲೆಯಾಡಿಸುತ್ತಿರಬೇಕು. ತಲೆ ಕುತ್ತಿಗೆಯ ಮೇಲೆ ನಿಂತಿದೆ. ಕುತ್ತಿಗೆಯ ಆರೋಗ್ಯಕ್ಕೆ ಕುತ್ತು ಬಂದಿದೆ. ಕೆಲವು ಶಿಕ್ಷಕಿಯರು ಕುತ್ತಿಗೆ ಪಟ್ಟಿ ಧರಿಸಲು ಶುರುಮಾಡಿದ್ದಾರೆ. ಈಗಂತೂ ಕಂಪ್ಯೂಟರ್ ಬಳಕೆ ಶಿಕ್ಷಣ
ಕ್ಷೇತ್ರದಲ್ಲಿ ಭಾರಿ ಆಗಿದ್ದರಿಂದ ಪ್ರಶ್ನೆಪತ್ರಿಕೆ ಮಾಡಲು, ಉತ್ತರ ಪತ್ರಿಕೆ ತಿದ್ದಲು, ನೋಟ್ಸ್ ತಿದ್ದಲು, ಕೂತುಕೂತು ಸ್ಪಾಂಡಿಲೈಟಿಸ್ ತರಹದ ತೊಂದರೆಗಳು ಭಾರಿಯಾಗಿವೆ. ಕುತ್ತಿಗೆಯಂತೆ ಬೆನ್ನು ಸಹ ಭಾರಿ ತೊಂದರೆಗೆ ಒಳಗಾಗಿದೆ.

ಇನ್ನು ಹೊಟ್ಟೆ. ಡಬ್ಬಿಯ ಊಟ, ಮಧ್ಯ ಮಧ್ಯಗೆಳತಿಯರು ಕೊಡುವ ತಿಂಡಿಗಳು, ಹುಟ್ಟಿದ ಹಬ್ಬದ ಚಾಕೊಲೇಟ್, ತಿರುಪತಿ ಪ್ರಸಾದ, ಅಯ್ಯಪ್ಪನ ಪ್ರಸಾದ, ಸಾಯಿಬಾಬಾ ಪ್ರಸಾದ, ಚುನಾವಣೆಯಲ್ಲಿ ಗೆದ್ದ ಮಕ್ಕಳು ಕೊಡುವ ಸಿಹಿ, ಬೋರ್ಡ್ ಫಲಿತಾಂಶ ಬಂದಾಗ ಬಂಪರ್ ಸ್ವೀಟ್ಸ್. ಕ್ಯಾಲೊರಿಗಳ ಲೆಕ್ಕಾಚಾರ ತಲೆಕೆಳಗಾಗಿದೆ. ವ್ಯಾಯಾಮ ಮಾಡಲು ಪುರುಸೊತ್ತಿಲ್ಲ. ಅದು ಯಾವಾಗ ದಪ್ಪ ಆಗುತ್ತಾ ಹೋಗುತ್ತೇವೋ ಗೊತ್ತಿಲ್ಲ.
ಇನ್ನು ಕಾಲುಗಳದ್ದಂತೂ ಅವಸ್ಥೆ. ಒಂದೊಂದು ದಿನ ಬೆಳಗ್ಗೆ ಎಂಟರಿಂದ ಮಧ್ಯಾಹ್ನ ನಾಲ್ಕರವರೆಗೆ ಕೂತೇ ಇರುವುದಿಲ್ಲ. ವೆರಿಕೋಸ್ ವೇನ್ಸ್, ಕಾಲು ನೋವು, ಪಾದಗಳಲ್ಲಿ ಊತ ಎಲ್ಲ ಸರ್ವೇಸಾಮಾನ್ಯ. ಪಾದಗಳಿಗೆ ಇಡೀ ದೇಹವನ್ನು ಹೊತ್ತು ತಿರುಗುವ ಜವಾಬ್ದಾರಿ. ಅದನ್ನು ನಿಭಾಯಿಸಿ ಸಾಕಾಗಿ ಬಿರಿಬಿಟ್ಟುಕೊಂಡಿದೆ. ಅದರ ಉಪಚಾರ ಮಾಡಲು ಎಲ್ಲಿದೆ ಸಮಯ? ಸೌಂದರ್ಯ ವರ್ಧಕಗಳ ಕಾರುಬಾರು ಒಂದಾದರೆ, ಉಡುಪಿನ ದರ್ಬಾರು ಇನ್ನೊಂದು ತೊಂದರೆ. ಆಗಸ್ಟ್ ೧೫ಕ್ಕೆ ತ್ರಿವರ್ಣ ಸೀರೆ ಬೇಕು. ಈ ವರ್ಷ ಉಟ್ಟಿದ್ದು ಮುಂದಿನ ವರ್ಷ ಉಡಲಾಗುವುದಿಲ್ಲ. ಕ್ರಿಸ್‌ಮಸ್‌ಗೆ ಕೆಂಪು ಬಣ್ಣದ್ದು, ಹಬ್ಬ ಹರಿದಿನಗಳಿಗೆ ರೇಷ್ಮೆ ಸೀರೆ, ವಾರ್ಷಿಕೋತ್ಸವ ಮತ್ತು ಸೈನ್ಸ್ ಎಕ್ಸಿಬಿಷನ್‌ಗೆ ವಿಶೇಷ ದಿರಿಸು, ಸ್ಪೋರ್ಟ್ಸ್ ಡೇಗೆ ಜೀನ್ಸ್, ವೈಟ್ ಟಾಪ್, ಶೂಸ್, ಹೊಸ ಹೊಸ ಬಗೆಯ ಫ್ಯಾಷನ್ ಆಭರಣಗಳು, ಇವುಗಳನ್ನೆಲ್ಲ ಹೊಂದಿಸುವ ಹೊತ್ತಿಗೆ ಸಾಕು ಬೇಕಾಗುತ್ತದೆ.

ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಇಂಟರ್ ಸ್ಕೂಲ್ ಕಾಂಪಿಟೇಶನ್ ನಡೆಸಬೇಕು. ನಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ತಯಾರಿ ಮಾಡಿಕೊಂಡು ಕರೆದುಕೊಂಡು ಹೋಗಬೇಕು. ಶಾಲೆಗೆ ಒಳ್ಳೆಯ ಅಡ್ಮಿಶನ್ ಮಾಡಿಸಲು ತರಹೇವಾರಿ ಸರ್ಕಸ್ ಮಾಡಬೇಕಾಗುತ್ತದೆ.
ಮನೆಗೆ ಬಂದ ನಂತರ ಮನೆಯ ಕೆಲಸವನ್ನು ಕೈಕಾಲು ಮಾಡುತ್ತಿರುತ್ತದೆ. ಆದರೆ ತಲೆ ಮಾತ್ರ ಇನ್ನು ಶಾಲೆಯಲ್ಲೇ ಇರುತ್ತದೆ. ನಾಳೆಯ ಮತ್ತು ಮುಂಬರುವ ಕಾರ್ಯಕ್ರಮಗಳ ತಯಾರಿ ಮಾಡುತ್ತಿರುತ್ತದೆ. ಇದೆಲ್ಲವನ್ನೂ ಮೀರಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕ ಶಿಕ್ಷಕಿಯಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಿಮ್ಮ ಸೇವೆ ಹೀಗೇ ಮುಂದುವರಿಯುತ್ತಿರಲಿ. ಭಾರತದ ಭವ್ಯ ನಾಗರಿಕರ ನಿರ್ಮಾಣದಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು. ಸಹನೆಯಿಂದಿರಿ, ಸಂತೋಷವಾಗಿರಿ ಮತ್ತು ಆರೋಗ್ಯದಿಂದಿರಿ.