Sunday, 15th December 2024

ಅಮಿತ್ ಶಾ ಆತುರಕ್ಕೆ ಕಾರಣವೇನು?

-ಆರ್.ಟಿ.ವಿಠ್ಠಲಮೂರ್ತಿ
ತೆಲುಗುದೇಶಂ ಪಕ್ಷದ ಕೆಲ ನಾಯಕರು ಕಳೆದ ಗುರುವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ಮಧ್ಯೆ ಹೊಂದಾಣಿಕೆ ಆಗಬೇಕು ಅಂತ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಕಳಿಸಿದ ಪ್ರಸ್ತಾವವನ್ನು ಈ ಸಂದರ್ಭದಲ್ಲಿ ಅವರು ನಡ್ಡಾ ಮುಂದಿಟ್ಟರಂತೆ. ಆದರೆ ತೆಲುಗುದೇಶಂ ಜತೆ ಹೊಂದಾಣಿಕೆ ಮಾಡಿಕೊಳ್ಳುವ ನಾಯ್ಡು ಪ್ರಸ್ತಾವವನ್ನು ನಡ್ಡಾ ತಿರಸ್ಕರಿಸಿದ್ದಾರೆ. ‘ಆಂಧ್ರಪ್ರದೇಶದಲ್ಲಿ ನಮಗೆ ಬೆಂಬಲ ನೀಡಲು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಿದ್ಧರಾಗಿದ್ದಾರೆ. ಹೀಗಾಗಿ ತೆಲುಗುದೇಶಂ ಜತೆ ಮೈತ್ರಿ ಮಾಡಿಕೊಳ್ಳುವ ಆಸಕ್ತಿ ನಮ್ಮ ಪಕ್ಷಕ್ಕಿಲ್ಲ’ ಎಂದವರು ಕಡ್ಡಿ ಮುರಿದಂತೆ ಹೇಳಿದಾಗ, ನಾಯ್ಡು ಪರವಾಗಿ ಬಂದ ನಾಯಕರು ಮಂಕಾದರಂತೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಇಂಪ್ರೂವೈಸ್ ಮಾಡಿದ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿದಿದೆ.

ಹೀಗಾಗಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ನಮ್ಮ ಜತೆ ಬಂದರೆ ಸಾಕು ಅಂತ ನಡ್ಡಾ ಹೇಳಿದಾಗ ನಾಯ್ಡು ಆಪ್ತರು ನಿರಾಸೆಯಿಂದ ಹಿಂದಿರುಗಿದ್ದಾರೆ. ಅಂದ ಹಾಗೆ, ಇತ್ತೀಚೆಗೆ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡ ನಂತರ ಬಿಜೆಪಿ ವರಿಷ್ಠರ ಗೇಮ್‌ಪ್ಲಾನು ಬದಲಾಗಿದೆ. ಅದರ ಪ್ರಕಾರ, ಕರ್ನಾಟಕದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದಕ್ಕಿಂತ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಪಕ್ಷಕ್ಕೆ ಹೆಚ್ಚು ಶಕ್ತಿ ದೊರೆಯುವಂತಾಗಬೇಕು ಎಂಬುದು ಅವರ ಯೋಚನೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣದಲ್ಲಿ ಕೆ.ಚಂದ್ರಶೇಖರರಾವ್ (ಕೆಸಿಆರ್) ಅವರ ಮೇಲೆ ಬಿಜೆಪಿ ವರಿಷ್ಠರ ಗಮನ ಹರಿದಿದೆ. ಕುತೂಹಲದ ವಿಷಯವೆಂದರೆ, ಜಗನ್ ಮೋಹನ್ ರೆಡ್ಡಿ ಮತ್ತು ಕೆ.ಚಂದ್ರಶೇಖರರಾವ್ ಇಬ್ಬರೂ ಮೊನ್ನೆ ಮೊನ್ನೆಯ ತನಕ ಬಿಜೆಪಿಯ ವಿರುದ್ಧ ಕಿಡಿ ಕಾರುತ್ತಿದ್ದರು. ಆದರೆ ದಿಲ್ಲಿಯ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಕೆಸಿಆರ್ ಪುತ್ರಿ ಕವಿತಾ ಅವರನ್ನು ಸಿಬಿಐ ಟೈಟು ಮಾಡಿದ ಮೇಲೆ ಆಟ ಬದಲಾಗಿದೆ.

ಅರ್ಥಾತ್, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು ಬಿಜೆಪಿಯ ಜತೆ ಹೊಂದಿಕೊಳ್ಳಲು ರೆಡಿಯಾಗಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕತೆಯೂ ಇದಕ್ಕಿಂತ ಭಿನ್ನವೇನಲ್ಲ. ಗಣಿಗಾರಿಕೆಯಿಂದ ಹಿಡಿದು ಹಲವು ಹಗರಣಗಳ ಜಾಡು ಹಿಡಿದು ಕೇಂದ್ರದ ತನಿಖಾ ತಂಡಗಳು ಮುಗಿಬಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಅಂತ ಜಗನ್‌ಗೆ ಗೊತ್ತಿದೆ. ಹೀಗಾಗಿ ಪಾರ್ಲಿಮೆಂಟ್
ಚುನಾವಣೆಯಲ್ಲಿ ಬಿಜೆಪಿ ಜತೆ ಸೇರಿ ಮುಂದಡಿ ಇಡಲು ಅವರು ಟ್ರಿಮ್ಮಾಗಿ ರೆಡಿಯಾಗುತ್ತಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಟ್ಟು ೪೧ ಪಾರ್ಲಿಮೆಂಟ್ ಕ್ಷೇತ್ರಗಳಿವೆ. ನಾಳೆ ಜಗನ್ ಮತ್ತು ಚಂದ್ರಶೇಖರರಾವ್ ಅವರ ಜತೆಗೂಡಿ ಹೋದರೆ ಈ ೨ ರಾಜ್ಯಗಳಿಂದ ಮಿನಿಮಮ್ ೩೦ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಹೀಗೆ ೩೦ ಸೀಟು ಬಂದರೆ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕನಿಷ್ಠ ೨೦ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ.

ಅಲ್ಲಿಗೆ ದಕ್ಷಿಣ ಭಾರತದಿಂದ ಬರೋಬ್ಬರಿ ೫೦ ಸೀಟುಗಳು ದಕ್ಕಿದಂತಾಗುತ್ತವೆ. ಆಗ, ಬಿಜೆಪಿಗೆ ಕರ್ನಾಟಕವೇ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ
ಸ್ಲೋಗನ್ನು ಏನಿದೆ, ಅದು ಕಳಚಿ ಬಿದ್ದು ಎಲ್ಲ ಕಡೆ ಕಮಲದ ಪ್ರಭಾವ ಹರಡಿದಂತಾಗುತ್ತದೆ ಎಂಬುದು ಬಿಜೆಪಿ ವರಿಷ್ಠರ ಯೋಚನೆ. ಅವರ ಈ ಯೋಚನೆ ಕರ್ನಾಟಕದ ಬಿಜೆಪಿ ನಾಯಕರಲ್ಲಿ ಒಂದು ಎಚ್ಚರ ಮೂಡಿಸಿದೆಯಲ್ಲದೆ, ಇನ್ನು ಕಷ್ಟ ಪಡದಿದ್ದರೆ ನಮ್ಮ ಮಾರ್ಕೆಟ್ ವ್ಯಾಲ್ಯೂ ಕಡಿಮೆಯಾಗುತ್ತದೆ ಎಂಬ ಧಾವಂತಕ್ಕೆ ಕಾರಣವಾಗಿದೆ. ಪರಿಣಾಮ? ಇದ್ದಕ್ಕಿದ್ದಂತೆ ಮೇಲೆದ್ದು ನಿಂತ ರಾಜ್ಯದ ಬಿಜೆಪಿ ನಾಯಕರು ಸೆಪ್ಟೆಂಬರ್ ೮ರ ಶುಕ್ರವಾರ ಕಾಂಗ್ರೆಸ್ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ಬಿಜೆಪಿ ನಡೆಸಿದ ಅತ್ಯಂತ ದೊಡ್ಡ ಹೋರಾಟವಿದು ಎಂಬುದನ್ನು ಗಮನಿಸಿದರೆ ದಿಲ್ಲಿ ನಾಯಕರು ಕೊಟ್ಟ ಇಂಜೆಕ್ಷನ್ನಿನ ಪವರ್ ಏನು ಎಂಬುದು ಸ್ಪಷ್ಟವಾಗುತ್ತದೆ.

ವಿಜಯೇಂದ್ರರಿಗೆ ಪ್ರಾಮಿನೆನು
ಅಂದ ಹಾಗೆ, ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ಜತೆಗಿನ ಮೈತ್ರಿಗೆ ಬಿಜೆಪಿ ನಾಯಕ ಅಮಿತ್ ಶಾ ತೋರಿಸಿರುವ ಆಸಕ್ತಿ ಕುತೂಹಲ ಕೆರಳಿಸಿದೆ. ವಾಸ್ತವವಾಗಿ ೩ ತಿಂಗಳ ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಅಮಿತ್ ಶಾ ಮಾತುಕತೆ ನಡೆಸಿದ್ದರು. ‘ನಿಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿ. ನಂತರ ಕರ್ನಾಟಕ ವಿಧಾನಸಭೆಯಲ್ಲಿ ನೀವೇ ಪ್ರತಿಪಕ್ಷ ನಾಯಕರಾಗಿ’ ಅಂತ ಈ ಮಾತುಕತೆಯ ಸಂದರ್ಭದಲ್ಲಿ ಅಮಿತ್ ಶಾ ಹೇಳಿದ್ದರಂತೆ. ಆದರೆ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಕುರಿತು ಆಸಕ್ತಿ ತೋರದ ಕುಮಾರಸ್ವಾಮಿ, ಹೊಂದಾಣಿಕೆ ಮಾಡಿಕೊಂಡರೆ ಅನುಕೂಲ ಜಾಸ್ತಿ ಅಂತ ಹೇಳಿ ಬಂದಿದ್ದರು.

ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಅಲ್ಲಿಗೇ ನಿಂತು ಹೋಗಿತ್ತಲ್ಲದೆ ಅವರ ಪಾಡಿಗೆ ಅವರು, ಇವರ ಪಾಡಿಗೆ ಇವರು ಎಂಬಂತೆ ಸುಮ್ಮನಿದ್ದುಬಿಟ್ಟಿದ್ದರು. ಆದರೆ ದಿನಗಳೆದಂತೆ ಕರ್ನಾಟಕದ ಲಿಂಗಾಯತ ಸಮು ದಾಯ ಬಿಜೆಪಿಯಿಂದ ದೂರವಾಗುತ್ತಿರುವುದು ಅಮಿತ್ ಶಾ ಗಮನಕ್ಕೆ ಬಂದಿದೆ. ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಘೀ, ಮಲೇರಿಯಾಗೆ ಹೋಲಿಸಿದರಲ್ಲ? ಈ ಬೆಳವಣಿಗೆಯ ಬಗ್ಗೆ ದೇಶದ ಹಲವೆಡೆ ವಿರೋಧ ವ್ಯಕ್ತವಾದರೂ ಕರ್ನಾಟಕದಲ್ಲಿ ಲಿಂಗಾಯತ ಮಠಾಧಿಪತಿಗಳು ಧ್ವನಿ ಎತ್ತಲಿಲ್ಲ. ಅರ್ಥಾತ್, ಪ್ರಬಲ ಲಿಂಗಾಯತ ಸಮುದಾಯ ಕರ್ನಾಟಕದಲ್ಲಿ ಬಿಜೆಪಿ ಯಿಂದ ದೂರವಾಗುತ್ತಿದೆ ಎಂಬ ಮೆಸೇಜು ಅಮಿತ್ ಶಾ ಅವರಿಗೆ ತಲುಪಿದೆ. ಹಾಗಂತಲೇ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ತತ್ಕಾಲಕ್ಕಾದರೂ ಪ್ರಾಮಿನೆನ್ಸು ಕೊಟ್ಟು ಪಾರ್ಲಿಮೆಂಟ್ ಚುನಾವಣೆಯ ತನಕ ಲಿಂಗಾಯತ ಶಕ್ತಿಯನ್ನು ಸಮಾಧಾನಪಡಿಸಿ ಎಂದು ರಾಜ್ಯದ ನಾಯಕರಿಗೆ ಸೂಚನೆ ನೀಡಿದ ಅಮಿತ್ ಶಾ ಅವರು, ಮತ್ತೊಂದು ಕಡೆಯಿಂದ ಜೆಡಿಎಸ್ ಜತೆಗಿನ ಹೊಂದಾಣಿಕೆಗೆ ತರಾತುರಿ ತೋರಿಸಿದ್ದಾರೆ. ಪ್ರಬಲ ಲಿಂಗಾಯತ ಮತಬ್ಯಾಂಕಿನಲ್ಲಿ ಆಗುವ ಕೊರತೆಯನ್ನು, ಒಕ್ಕಲಿಗ ಮತ ಬ್ಯಾಂಕಿನ ಮೂಲಕ ಬ್ಯಾಲೆನ್ಸು ಮಾಡುವುದು ಅವರ ಯೋಚನೆ.

ಪಾರ್ಲಿಮೆಂಟಿಗೆ ಯೋಗಿ ಹೋಗಲಿ
ಇನ್ನು ಬಿಜೆಪಿ-ಜೆಡಿಎಸ್ ಮಧ್ಯೆ ಹೊಂದಾಣಿಕೆಯಾದರೆ ಮಾಜಿ ಸಚಿವ, ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗುವ ಸಾಧ್ಯತೆ ಜಾಸ್ತಿ. ಅಂದ ಹಾಗೆ, ಬಿಜೆಪಿ-ಜೆಡಿಎಸ್ ಮೈತ್ರಿ ಎಂದ ತಕ್ಷಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ, ಕೇಂದ್ರ ಮಂತ್ರಿಯಾಗಲು ಬಯಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕುಮಾರ ಸ್ವಾಮಿ ಅವರ ಆಪ್ತಮೂಲಗಳ ಪ್ರಕಾರ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ.ಯೋಗೀಶ್ವರ್ ಮೈತ್ರಿಕೂಟದ ಅಭ್ಯರ್ಥಿಯಾಗಲಿ ಎಂಬುದು ಕುಮಾರಸ್ವಾಮಿ ಅವರ ಯೋಚನೆಯಂತೆ. ಕಾರಣ? ಇವತ್ತು ಯೋಗೀಶ್ವರ್ ಅವರನ್ನು ತಾವು ಬೆಂಬಲಿಸಿದರೆ ನಾಳೆ ಅವರು ತಮ್ಮನ್ನು, ತಮ್ಮ ಪುತ್ರ ನಿಖಿಲ್ ಅವರನ್ನು ಬೆಂಬಲಿಸುತ್ತಾರೆ ಎಂಬ ಯೋಚನೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ಪವರ್ ಜಾಸ್ತಿ. ಎಲ್ಲದರಷ್ಟೇ ಮುಖ್ಯವಾಗಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿರುವ ಡಿ.ಕೆ.ಸುರೇಶ್  ವಿಷಯದಲ್ಲಿ ಕಮಲ ಪಾಳಯ ಕುದಿಯುತ್ತಿದೆ. ಹೀಗಿರುವಾಗ ಸಿ.ಪಿ.ಯೋಗೀಶ್ವರ್ ಅವರು ಗೆದ್ದು ಪಾರ್ಲಿಮೆಂಟಿಗೆ ಹೋಗಬಹುದು ಎಂಬುದು ಕುಮಾರಸ್ವಾಮಿ ಯೋಚನೆ.

ಬೊಮ್ಮಾಯಿಗೆ ಕೇಂದ್ರ ಸಚಿವರಾಗುವ ಕನಸು
ಈ ಮಧ್ಯೆ ಬಿಜೆಪಿ ಪಾಳಯದಿಂದ ಇಂಟರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ. ಅದರ ಪ್ರಕಾರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವರಾಗುವ ಆಸೆ ಮೊಳೆತಿದೆಯಂತೆ. ಇಲ್ಲಿ ಪ್ರತಿಪಕ್ಷ ನಾಯಕರಾಗುವ ಆಸೆ ಅವರಿಗೆ ಇದೆಯಾದರೂ, ಅದು ಸಿಗದೆ ಹೋದರೆ ಸುಮ್ಮನೆ ಸೆಂಟ್ರಲ್ಲಿಗೆ ಹೋಗುವುದೇ ವಾಸಿ ಅಂತನ್ನಿಸಿದೆಯಂತೆ. ಹೀಗಾಗಿ ಹಾವೇರಿ ಲೋಕಸಭಾ ಕ್ಷೇತ್ರ ದಿಂದ ಬಿಜೆಪಿ ಕ್ಯಾಂಡಿಡೇಟ್ ಆಗಲು ಬಯಸಿರುವ ಅವರು, ಈ ಕ್ಷೇತ್ರದಿಂದ ಲಿಂಗಾಯತರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಕಷ್ಟ ಎಂಬ ಮೆಸೇಜನ್ನು ವರಿಷ್ಠರಿಗೆ ರವಾನಿಸಿದ್ದಾರೆ. ಅಂದ ಹಾಗೆ, ಹಾವೇರಿ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಈ ಸಲ ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಸರ್ಕಸ್ಸು ಮಾಡುತ್ತಿದ್ದಾರೆ. ಆದರೆ ಇಲ್ಲಿ ಲಿಂಗಾ ಯತರಿಗೇ ಟಿಕೆಟ್ ಕೊಡಬೇಕು ಎಂಬ ವಾದಕ್ಕೆ ಮನ್ನಣೆ ಸಿಕ್ಕರೆ, ತಾವು ದಿಲ್ಲಿಗೆ ಹೋಗಿ ಕೇಂದ್ರ ಸಚಿವರಾಗಬಹುದು ಎಂಬುದು ಬೊಮ್ಮಾಯಿ ಯೋಚನೆ. ಅಂದ ಹಾಗೆ, ಇಲ್ಲಿ ಮುಖ್ಯಮಂತ್ರಿಯಾದವರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಸಿಗುವುದು ತುಂಬ ಕಷ್ಟವೇನಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಡಿ.ವಿ.ಸದಾನಂದಗೌಡರು ಅವಧಿಗೂ ಮುನ್ನ ಕೆಳಗಿಳಿದರೇನೋ ನಿಜ. ಆದರೆ ಅವರ ಪಕ್ಷನಿಷ್ಠೆಯನ್ನು ಗುರುತಿಸಿದ ಬಿಜೆಪಿ ಹೈಕಮಾಂಡ್ ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡು ಅವರಿಗೆ ಗೌರವ ನೀಡಿತ್ತು. ಈ ಸಲ ತಮಗೂ ಅಂಥ ಲಕ್ಕು ಸಿಗಬಹುದು ಎಂಬುದು ಬೊಮ್ಮಾಯಿ ಯೋಚನೆ. ಎಲ್ಲಕ್ಕಿಂತ ಮುಖ್ಯವಾಗಿ ತಾವೂ
ಪಕ್ಷನಿಷ್ಠರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ತಮಗೆ ಪಟ್ಟ ಕಟ್ಟಿದ ಸಂದರ್ಭದಲ್ಲಿ ವರಿಷ್ಠರು ಏನು ಹೇಳಿದ್ದರೋ, ಅದನ್ನು ಚಾಚೂ ತಪ್ಪದೆ ಮಾಡಿದ್ದೇನೆ. ಹೀಗಾಗಿ ಮುಂದಿನ ದಿನಗಳಲ್ಲಿ ತಮಗೆ ಕೇಂದ್ರ  ಮಂತ್ರಿ ಸ್ಥಾನ ಗಟ್ಟಿ ಎನ್ನುವುದು ಬೊಮ್ಮಾಯಿ ಥಿಂಕಿಂಗು.