Sunday, 15th December 2024

ಕಾವೇರಿ ಸಂಕಷ್ಟ ಸೂತ್ರಕ್ಕೇಕೆ ಗಮನ ಹರಿಸುತ್ತಿಲ್ಲ?

ಕಾವೇರಿ ನದಿ ನೀರು ಹಂಚಿಕೆ ವಿವಾದ ತಾರಕಕ್ಕೇರಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗುವ ಪ್ರತಿ ವರ್ಷ ತಮಿಳುನಾಡು ಸಾಮಾನ್ಯ ವರ್ಷದಂತೆ ನೀರು ಕೇಳುವುದು, ಅದಕ್ಕಾಗಿ ಸುಪ್ರೀಂ ಮೆಟ್ಟಿಲೇರುವುದು, ಈ ವಿಚಾರದಲ್ಲಿ ರಾಜಕೀಯ ಮೇಲಾಟಗಳು ನಡೆಯುವುದು ಸಾಮಾನ್ಯ. ಆದರೆ, ಈ ವಿವಾದಕ್ಕೆ ಮೂಲ ಕಾರಣ ಸಂಕಷ್ಟ ಸೂತ್ರ ಇಲ್ಲದಿರುವುದೇ.

ಕಾವೇರಿ ನೀರು…
ಕರ್ನಾಟಕದಲ್ಲಿ ಮಳೆ ಕೊರತೆಯಾದ ಎಲ್ಲಾ ವರ್ಷಗಳಲ್ಲೂ ಅತಿಹೆಚ್ಚು ಸದ್ದು ಮಾಡುವ, ಎರಡು ರಾಜ್ಯಗಳ ಮಧ್ಯೆ ವಿವಾದ, ಸಂಘರ್ಷಕ್ಕೆ ಕಾರಣವಾಗುವ, ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿ ರಾಜಕೀಯ ಲಾಭಕ್ಕಾಗಿ ಮೇಲಾಟಗಳು ನಡೆಯುವ, ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಪ್ರತ್ಯೇಕ ಪಕ್ಷಗಳ ಸರಕಾರವಿದ್ದರೆ ಕೇಂದ್ರದ ಮೇಲೆ ಆರೋಪಕ್ಕೆ ಕಾರಣವಾಗುವ, ರಾಜ್ಯ ಸರಕಾರದ ವಿರುದ್ಧ ಕಾವೇರಿ ಕೊಳ್ಳ ವ್ಯಾಪ್ತಿಯ ಜನರು ಬೀದಿಗಿಳಿದು ಪ್ರತಿಭಟನೆ ನಡೆಯುವ ಯಾವುದಾದರೂ ಒಂದು ವಿಷಯವಿದೆ ಎಂದರೆ ಅದು ಕಾವೇರಿ ನೀರು. ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾನೂನು ಸಮರ,
ರಾಜಕೀಯ ಹೋರಾಟಗಳು ನಡೆಯುವ ಈ ಅಂಶ ರಾಜಕೀಯ ಪಕ್ಷಗಳ ಮಧ್ಯೆ ಹಳೇ ಮೈಸೂರು ಭಾಗದಲ್ಲಿ ತಮ್ಮ ಶಕ್ತಿಪ್ರದರ್ಶನ, ರಾಜಕೀಯ ಬಲಹೆಚ್ಚಿಸಿಕೊಳ್ಳುವ ಪ್ರಯತ್ನಗಳಿಗೆ ದಾರಿ ಮಾಡುಕೊಡುತ್ತದೆ. ಈ ವಿವಾದಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ಗೊತ್ತಿದ್ದರೂ ಸಮಸ್ಯೆಯ ಮೂಲಕಕ್ಕೆ ಕೈಹಾಕಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಯಾವುದೇ ಗಂಭೀರ ಪ್ರಯತ್ನಗಳು ನಡೆಯದೇ ಇರುವುದರಿಂದ ಕಾವೇರಿ ನದಿ ನೀರು ಹಂಚಿಕೆ ಎಂಬುದು ಎರಡೂ ರಾಜ್ಯಗಳ ಮಧ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಒಂದೊಮ್ಮೆ ಈ ಸಮಸ್ಯೆಗೆ ಪರಿಹಾರ ಸೂತ್ರಗಳನ್ನು ಕರ್ನಾಟಕ ರೂಪಿಸಿದರೂ ರಾಜಕೀಯ ಕಾರಣಗಳಿಗೆ ತಮಿಳುನಾಡು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಕಾವೇರಿ ಜನರ ಸಮಸ್ಯೆಗಿಂತ ಮುಖ್ಯವಾಗಿ ರಾಜಕೀಯ ಸಮಸ್ಯೆಯಾಗಿ ಉಳಿದುಕೊಂಡಿದೆ. ಹಾಗೆಂದು ಕಾವೇರಿ ವಿವಾದ ಇತ್ತೀಚಿನ ವರ್ಷಗಳಲ್ಲಿ ಹುಟ್ಟಿಕೊಂಡ ವಿವಾದವೇನೂ ಅಲ್ಲ. ಅದಕ್ಕೆ ೧೨೦ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ಮಧ್ಯೆ ಒಪ್ಪಂದಗಳಾಗಿದ್ದವು. ಕಾವೇರಿ ನದಿಗೆ ರಾಜ್ಯದಲ್ಲಿ ನಿರ್ಮಿಸಿರುವ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡಬೇಕಿತ್ತು. ಈ ಮಧ್ಯೆ ಕರ್ನಾಟಕದಲ್ಲಿ ಯಾವುದೇ ನೀರಾವರಿ ಯೋಜನೆ ಕೈಗೊಳ್ಳುವುದಿದ್ದರೂ ಮದ್ರಾಸ್ ಪ್ರೆಸಿಡೆನ್ಸಿಯ ಅನುಮತಿ ಪಡೆಯಬೇಕು ಎಂದು ನಿರ್ಧಾರವಾಗಿತ್ತು. ನಿರ್ಧಾರವಾಗಿತ್ತು ಎನ್ನುವುದಕ್ಕಿಂತ ಬ್ರಿಟೀಷರು ಅಂತಹ ಒಂದು ಒಪ್ಪಂದ ಮಾಡಿಕೊಳ್ಳುವಂತೆ ನೋಡಿಕೊಂಡಿದ್ದರು. ಹೀಗಾದರೂ ಆಗೆಲ್ಲಾ ವಾಡಿಕೆ ಅಥವಾ ಅದಕ್ಕಿಂತ ಹೆಚ್ಚು ಮಳೆ ಬೀಳುತ್ತಿದ್ದುದರಿಂದ ನೀರಿನ ಹಂಚಿಕೆ ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಸ್ವಾತಂತ್ರ್ಯಾನಂತರ ಅಭಿವೃದ್ಧಿ ಹೆಚ್ಚಾಗುತ್ತಿದ್ದಂತೆ ಸಮಸ್ಯೆ ಆರಂಭವಾಯಿತು. ಒಂದೆಡೆ ಬೆಳೆ ಬೆಳೆಯುವ ಪ್ರದೇಶಗಳು ಹೆಚ್ಚಾದರೆ, ಇನ್ನೊಂದೆಡೆ ಮಳೆ ಕೊರತೆ ಕಾಣಿಸಿಕೊಳ್ಳಲಾರಂಭಿಸಿತ್ತು. ೧೯೮೦ರ ದಶಕದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ನೀರು ಹಂಚಿಕೆ ವಿವಾದ ತಾರಕ್ಕೇರಿತು. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ೧೯೯೦ರಲ್ಲಿ ಕಾವೇರಿ ನ್ಯಾಯಾಧಿಕರಣ ಸ್ಥಾಪಿಸಲಾಯಿತು. ವಿಚಾರಣೆ ಆರಂಭಿಸಿದ ನ್ಯಾಯಾಧಿಕರಣ ಕರ್ನಾಟಕ ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿ ವರ್ಷ ೨೦೫ ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಇದಕ್ಕೆ ಸೆಡ್ಡು ಹೊಡೆದ ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಈ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿದ್ದರು.

ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಹೋದರೂ ಬಂಗಾರಪ್ಪ ಜಗ್ಗಲಿಲ್ಲ. ಈ ಮಧ್ಯೆ ಕಾವೇರಿ ನ್ಯಾಯಾಧಿ ಕರಣದ ಮಧ್ಯಂತರ ಆದೇಶಕ್ಕೆ ಸಂಬಂಧಿ ಸಿದಂತೆ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದರೂ ಕ್ಯಾರೇ ಎನ್ನದೆ ಕೇಂದ್ರದ ವಿರುದ್ಧವೇ ಬಂದ್‌ಗೆ ಕರೆ ನೀಡಿದರು. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರ ಇದ್ದಾಗ್ಯೂ ಬಂಗಾರಪ್ಪ ಮಣಿಯಲಿಲ್ಲ. ನಂತರದಲ್ಲಿ ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾದಾಗಲೂ ಇಂತಹದ್ದೇ ಪರಿಸ್ಥಿತಿ ಉದ್ಭವವಾಗಿತ್ತು. ಸುಪ್ರೀ ಕೋರ್ಟ್ ಆದೇಶ ಉಲ್ಲಂಸಿ ತಮಿಳುನಾಡಿಗೆ ನೀರು ಬಿಡದೇ ಇರುವ ತೀರ್ಮಾನ ಕೈಗೊಂಡ ಪರಿಣಾಮ ಸರಕಾರದ ಮುಖ್ಯ ಕಾರ್ಯದರ್ಶಿಯವರೇ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಈ ಮಧ್ಯೆ ಕಾವೇರಿ ನೀರು ಹಂಚಿಕೆ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧಿಕರಣ ೨೦೦೭ರಲ್ಲಿ ಅಂತಿಮ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಎಲ್ಲಾ ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋದವು. ೨೦೧೮ರಲ್ಲಿ ನ್ಯಾಯಾಧಿ ಕರಣದ ಆದೇಶದಲ್ಲಿ ಕೊಂಚ ಮಾರ್ಪಾಟು ಮಾಡಿ ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆಯಾದರೆ ವಾರ್ಷಿಕ ೭೪೦ ಟಿಎಂಸಿಯಷ್ಟು ನೀರು ಲಭ್ಯವಾಗುತ್ತದೆ ಎಂಬುದನ್ನು ಆಧರಿಸಿ ಕರ್ನಾಟಕಕ್ಕೆ ೨೮೪.೭೫ ಟಿಎಂಸಿ, ತಮಿಳುನಾಡಿಗೆ ೪೦೪.೨೫ ಟಿಎಂಸಿ, ಕೇರಳಕ್ಕೆ ೩೦ ಟಿಎಂಸಿ ಮತ್ತು ಪುದುಚೇರಿಗೆ ೭ ಟಿಎಂಸಿಯಷ್ಟು ನೀರನ್ನು ಹಂಚಿಕೆ ಮಾಡಿತು. ಈ ಪೈಕಿ ತಮಿಳುನಾಡಿನಲ್ಲೇ ೨೨೭ ಟಿಎಂಸಿಯಷ್ಟು ನೀರು ಲಭ್ಯವಿರುವುದರಿಂದ ಕರ್ನಾಟಕ ವಾರ್ಷಿಕ ೭೭.೨೫ ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕು ಎಂದು ಹೇಳಿತಲ್ಲದೆ, ಯಾವ ಸಂದರ್ಭದಲ್ಲಿ ಎಷ್ಟು ನೀರು ಹಂಚಿಕೆ ಮಾಡಬೇಕು ಎಂಬುದನ್ನೂ ನಿಗದಿಪಡಿಸಿತ್ತು. ಆದರೆ, ಅಲ್ಲಿಗೆ ವಿವಾದ ಮುಗಿಯಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರಗಳನ್ನು ರಚಿಸಲಾಯಿತು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಈ ಕುರಿತು ತೆಗೆದುಕೊಳ್ಳುವ ಅಂತಿಮ ತೀರ್ಮಾನವನ್ನು ಎರಡೂ ರಾಜ್ಯಗಳು ಪಾಲಿಸಬೇಕು ಎಂದು ನಿರ್ಧಾರವಾಯಿತು.

ಒಂದೊಮ್ಮೆ ನದಿ ಮೇಲಿನ ರಾಜ್ಯವಾಗಿರುವ (ಅಪ್ಪರ್ ರೈಪೀರಿಯನ್ ಸ್ಟೇಟ್) ಕರ್ನಾಟಕ ಪ್ರಾಧಿಕಾರದ ಆದೇಶದಂತೆ ನೀರು ಬಿಡುಗಡೆ ಮಾಡದೇ ಇದ್ದರೆ ಆಗ ಪ್ರಾಧಿಕಾರವೇ ಕೇಂದ್ರ ಸರಕಾರದ ನೆರವಿನೊಂದಿಗೆ
ನೀರು ಬಿಡುಗಡೆ ಮಾಡಬೇಕು ಎಂದೂ ತೀರ್ಮಾನವಾಯಿತು. ಆದರೆ, ಇದುವರೆಗೆ ಕರ್ನಾಟಕ ಅದಕ್ಕೆ ಅವಕಾಶ ಕೊಟ್ಟಿಲ್ಲ. ಆದರೂ ವಿವಾದ ಮಾತ್ರ ನಿಂತಿಲ್ಲ. ಕರ್ನಾಟಕದಲ್ಲಿ ಮಳೆ ಕೊರತೆಯಾದರೂ ತಮಿಳುನಾಡು ಸಾಮಾನ್ಯ ವರ್ಷದಂತೆ ನೀರು ಕೇಳುವುದು, ಕರ್ನಾಟಕ ಅದನ್ನು ನಿರಾಕರಿಸುವುದು, ಪ್ರಾಧಿಕಾರ ಮಧ್ಯೆಪ್ರವೇಶಿಸಿ ಸೂತ್ರವೊಂದನ್ನು ರೂಪಿಸಿ ಇಂತಿಷ್ಟು ಮಳೆ ಕೊರತೆ ಇರುವುದರಿಂದ ಇಷ್ಟು ಪ್ರಮಾಣದಲ್ಲಿ ನೀರು ಹರಿಸಿ ಎಂದು ಆದೇಶಿಸುವುದು, ಅದನ್ನು ಕರ್ನಾಟಕ ಪಾಲಿಸುವುದು, ರೈತರು ಪ್ರತಿಭಟನೆ ನಡೆಸುವುದು, ಸರಕಾರದ ವಿರುದ್ಧ ಪ್ರತಿಪಕ್ಷಗಳು ವಾಕ್ಸಮರ ನಡೆಸಿ ರಾಜಕೀಯ ಲಾಭಕ್ಕೆ ಪ್ರಯತ್ನಿಸುವುದು, ಮತ್ತೊಂದೆಡೆ ಪ್ರಾಧಿಕಾರದ ಆದೇಶ ಪ್ರಶ್ನಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಡೆಯುತ್ತಲೇ ಇದೆ.

ಇಷ್ಟೆಲ್ಲಾ ಇದ್ದರೂ ಸಮಸ್ಯೆಯ ಮೂಲ ಕಾರಣಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಾಧಿಕಾರವಾಗಲೀ, ಕೇಂದ್ರ ಸರಕಾರವಾಗಲೀ, ಸುಪ್ರೀಂ ಕೋರ್ಟ್ ಆಗಲೀ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದೇ ಇಲ್ಲ. ಈ ಸಮಸ್ಯೆ ಆರಂಭವಾಗಿದ್ದೂ ಕಾವೇರಿ ನ್ಯಾಯಾಧಿಕರಣ ನೀಡಿದ ಅಂತಿಮ ತೀರ್ಪಿನಿಂದಲೇ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆ ವೇಳೆ ಲಭ್ಯವಾಗುವ ನೀರನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದ ನ್ಯಾಯಾಧಿಕರಣ,
ವಾಡಿಕೆಗಿಂತ ಕಡಿಮೆ ಮಳೆಯಾದರೆ ಯಾವ ರೀತಿ ನೀರು ಹಂಚಿಕೆ ಮಾಡಬೇಕು ಎಂಬ ಸೂತ್ರವನ್ನು ಹೇಳಲೇ ಇಲ್ಲ. ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅದು ಕೂಡ ಅಂತಿಮ ತೀರ್ಪು ನೀಡಿತಾದರೂ ಸಂಕಷ್ಟ ಸೂತ್ರದ ಬಗ್ಗೆ ಹೇಳಲೇ ಇಲ್ಲ. ನಂತರ ರಚನೆಯಾದ ನದಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಗಳು ಕೂಡ ಇದುವರೆಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲಿಲ್ಲ. ಹೀಗಾಗಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಾಗಲೆಲ್ಲಾ ಎರಡೂ ರಾಜ್ಯಗಳ ಮಧ್ಯೆ ವಿವಾದ ನಡೆಯುತ್ತಲೇ ಇದೆ.

ಇಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕಿಂತ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ತಮಿಳುನಾಡು ಸರಕಾರದ ನಡೆಯೇ ವಿವಾದ ಮುಂದುವರಿಯಲು ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಸಂಕಷ್ಟ ಸಂದರ್ಭದಲ್ಲಿ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸರಕಾರ ಮೇಕೆದಾಟು ಯೋಜನೆ ಆರಂಭಿಸಲು ನಿರ್ಧರಿಸಿತು. ಮೇಕೆ ದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿ ಅದರಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವುದು, ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಸಲು ಸ್ವಲ್ಪ ಮಟ್ಟಿನ ನೀರು ಬಳಸಿಕೊಳ್ಳುವುದು ಮತ್ತು ಜಲಾಶಯದಲ್ಲಿ ಸಂಗ್ರಹವಾದ ನೀರಿನಲ್ಲಿ
ವಿದ್ಯುತ್ ಉತ್ಪಾದನೆ ಮಾಡಿ ಆ ನೀರನ್ನು ತಮಿಳು ನಾಡಿಗೆ ಬಿಡುವುದು ಈ ಯೋಜನೆಯ ಮೂಲ ಉದ್ದೇಶ. ಆದರೆ, ತಮಿಳುನಾಡು ಮಾತ್ರ ಈ ಯೋಜನೆಗೆ ಅಡ್ಡಿಪಡಿಸುತ್ತಿದೆ. ನೀರಾವರಿ ಯೋಜನೆಗೆ ತಮಿಳುನಾಡಿನ ಅನುಮತಿ ಪಡೆಯಬೇಕು ಎಂಬ ಆದೇಶ ಇದೆಯಾದರೂ ಮೇಕೆದಾಟು ನೀರಾವರಿ ಉದ್ದೇಶ ಹೊಂದಿಲ್ಲದೇ ಇದ್ದರೂ ತಮಿಳು ನಾಡು ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ ಯೋಜನೆಯ
ಉದ್ದೇಶವನ್ನು ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ಗಮನಕ್ಕೆ ಕರ್ನಾಟಕ ತಂದರೂ ತಮಿಳುನಾಡಿನ ಒತ್ತಡದಿಂದಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ತಮಿಳುನಾಡು ಸಹಕರಿಸುತ್ತಿಲ್ಲ
ಅಂತಾರಾಜ್ಯ ಜಲವಿವಾದಗಳಲ್ಲಿ ನದಿಯ ಮೇಲ್ಭಾಗದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪದೇಪದೆ ಸಾಬೀತಾಗುತ್ತಿದೆ. ಇಂಥ ಸಂದರ್ಭದಲ್ಲಿ ನೆರೆಯ ರಾಜ್ಯಗಳು ವಸ್ತುಸ್ಥಿತಿ ಮತ್ತು ಮಾನವೀಯತೆಯ ಆಧಾರದ ಮೇಲೆ ಮುಂದುವರಿಸಬೇಕು ಎಂಬ ಮಾತು ವಿವಾದ ಶುರುವಾದಾಗಲೆಲ್ಲಾ ಕೇಳಿಬರುತ್ತದೆ. ಆದರೆ, ವಿವಾದ ತಣ್ಣಗಾಗುತ್ತಿದ್ದಂತೆ ಆ ಮಾತು ತೆರೆಮರೆಗೆ ಸರಿಯುತ್ತಿದ್ದು, ಪರಸ್ಪರ ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಾಗುವುದು ಕಡಿಮೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ಸೌಹಾರ್ದತೆಯಿಂದ ವಿವಾದ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ತಮಿಳುನಾಡು ಸಹಕರಿಸುತ್ತಿಲ್ಲ ಎಂಬುದಕ್ಕೆ ವಾಡಿಕೆಗಿಂತ ಕಡಿಮೆ ಮಳೆಯಾದಾಗಲೆಲ್ಲಾ ವಿವಾದ ತೀವ್ರವಾಗುವುದೇ ಸಾಕ್ಷಿ.

ಸಂಕಷ್ಟ ಸೂತ್ರ ಇಲ್ಲದೇ ಇರುವುದು ಕಾವೇರಿ ನದಿ ನೀರು ವಿವಾದಕ್ಕೆ ಪ್ರಮುಖ ಕಾರಣವಾಗಿದ್ದರೆ, ಮೇಕೆದಾಟು ಯೋಜನೆ ಪೂರ್ಣಗೊಂಡರೆ ಈ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ ಎಂಬುದು ಎರಡೂ ರಾಜ್ಯಗಳು ಮತ್ತು ಕೇಂದ್ರ ಸರಕಾರಕ್ಕೆ ಗೊತ್ತಿರುವ ಸತ್ಯ. ಆದರೆ, ರಾಜಕೀಯ ಕಾರಣಗಳಿಗಾಗಿ ತಮಿಳುನಾಡು ಎತ್ತುವ ಆಕ್ಷೇಪಗಳಿಗೆ ಮಣಿದು ಕೇಂದ್ರ ಸರಕಾರ ಈ ಎರಡೂ ವಿಚಾರಗಳನ್ನು ಇತ್ಯರ್ಥಗೊಳಿಸಲು ಗಂಭೀರವಾಗಿ ಪ್ರಯತ್ನಿ ಸುತ್ತಲೇ ಇಲ್ಲ. ರಾಜಕೀಯ ಪಕ್ಷಗಳದ್ದೂ ಅಧಿಕಾರದಲ್ಲಿದ್ದಾಗ ಒಂದು ನಡೆಯಾದರೆ, ಪ್ರತಿಪಕ್ಷದಲ್ಲಿದ್ದಾಗ ಇನ್ನೊಂದು ನಡೆಯಾ ಗುತ್ತಿರುವುದರಿಂದ ಸದ್ಯಕ್ಕೆ ಈ ಎರಡೂ ವಿಚಾರ ಗಳಿಗೆ ಮುಕ್ತಿ ಸಿಗುವ
ಮತ್ತು ವಿವಾದ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ.

ಲಾಸ್ಟ್ ಸಿಪ್: ತನಗೆ ಲಾಭವಾಗದೇ ಇದ್ದರೂ ಪರವಾಗಿಲ್ಲ, ಇನ್ನೊಬ್ಬರಿಗೆ ನಷ್ಟವಾಗಬೇಕು ಎಂಬುದೇ ಕಾವೇರಿ ವಿಚಾರದಲ್ಲಿ ನೆರೆ ರಾಜ್ಯದ ಸೂತ್ರ.