ಸ್ವಾಸ್ಥ್ಯ ಸಂಪದ
Yoganna55@gmail.com
ಗ್ರಾಮೀಣ ಮತ್ತು ನಗರ ಮಹಿಳೆಯರ ಹಾಗೂ ಉದ್ಯೋಗಸ್ಥ ಮಹಿಳೆಯರ ಪರಿಸರಗಳು ವಿಭಿನ್ನವಾಗಿದ್ದು, ಅದಕ್ಕನುಗುಣವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕ ಮಹಿಳೆಯರಲ್ಲಿ ಪೌಷ್ಟಿಕಾಂಶಗಳ ಕೊರತೆ ಮತ್ತು ಸೋಂಕು ರೋಗಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಮಾನವನ ಸೃಷ್ಟಿ ಅತ್ಯದ್ಭುತ. ಅದರಲ್ಲೂ ಪುರುಷ ಮಹಿಳೆ ಎಂಬ ವಿಭಿನ್ನ ಲಿಂಗದವರ ಸೃಷ್ಟಿ ಮತ್ತು ಅವರಿಬ್ಬರ ನಡುವಿನ ಅತ್ಯಾಕರ್ಷಣೆಯ ಭಾವ ಗಳ ಹಿಂದಿನ ಉದ್ದೇಶ ಅತ್ಯಾಶ್ಚರ್ಯ! ಪುರುಷ ಮತ್ತು ಸೀಯರಿಗೆ ಸೃಷ್ಟಿ ವಿಭಿನ್ನವಾದ ಸಮಾನ ಜವಾಬ್ದಾರಿಗಳನ್ನು ನೀಡಿದ್ದರೂ ಸಮಾಜ ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ ಎಣಿಸುತ್ತಿರುವುದು ಸಮಂಜಸವಲ್ಲ.
ಮಹಿಳೆಯರ ಹಕ್ಕುಗಳು, ತಾರತಮ್ಯ ನಿವಾರಣೆ, ಮಹಿಳೆಯರ ಅಭಿವೃದ್ಧಿ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿ, ಮಹಿಳೆಯರನ್ನು ಸಮಾನಸ್ಥಿತಿಗೆ ತರುವ ಉದ್ದೇಶದಿಂದ ಜಾಗೃತಿ ಮೂಡಿಸುವ ಸಲುವಾಗಿ ಪ್ರಪಂಚಾದ್ಯಂತ ಮಾರ್ಚ್ ೮ ರಂದು ವಿಶ್ವ ಮಹಿಳಾ ದಿನಾಚರಣೆಗೆ ಕರೆ ನೀಡಲಾಗಿದ್ದು, ಅಂದು ಪ್ರಪಂಚದ್ಯಾಂತ ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಅರಿವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಲೇಖನವಿದು.
ಸ್ತ್ರೀ ಮತ್ತು ಪುರುಷರ ದೈಹಿಕ ರಚನೆಗಳು, ಸಂತಾನಾಂಗಗಳ ಭಿನ್ನತೆಯಿಂದಾಗಿ, ದೇಹದ ಇನ್ನಿತರ ಅಂಗಾಂಗಗಳ ರಚನೆ ಮತ್ತು ಕಾರ್ಯಗಳಲ್ಲಿ ಸಾಮ್ಯತೆ ಇದ್ದರೂ ಲೈಂಗಿಕ ಹಾರ್ಮೋನ್ ಗಳಿಂದಾಗಿ ಕಾರ್ಯಗಳಲ್ಲಿ ವಿಭಿನ್ನತೆ ಯನ್ನು ಕಾಣಬಹುದಾಗಿರುತ್ತದೆ. ಸ್ತ್ರೀ ಮತ್ತು ಪುರುಷರ ಲೈಂಗಿಕ ಹಾರ್ಮೋ ನ್ಗಳು ಭಾವನೆಗಳನ್ನು ಒಳ ಗೊಂಡಂತೆ ದೇಹದ ಇನ್ನಿತರ ಅಂಗಾಂಗಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಸ್ತ್ರೀಯರ ವಿಶಿಷ್ಟ ಮೈಕಟ್ಟು, ತಲೆ ಕೂದಲುಗಳ ಬೆಳವಣಿಗೆ, ಧ್ವನಿ ಮತ್ತು ಸ್ತ್ರೀಯ ಮಾತೃ ಹೃದಯದ ವಿಶಿಷ್ಟ ಭಾವಗಳಿಗೆ ಸ್ತ್ರೀಯ ಲೈಂಗಿಕ ಹಾರ್ಮೋನ್ಗಳಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರಾನ್ ಗಳ ಬಹು ಮುಖ್ಯ ಕಾರಣ. ಈ ಹಾರ್ಮೋನ್ ಗಳಿಂದಾಗಿ ಪುರುಷರಿಗಿಂತ ಸ್ತ್ರೀಯರ ಆರೋಗ್ಯ ಸಮಸ್ಯೆಗಳು ತುಸು ಭಿನ್ನವಾ ಗಿರುತ್ತವೆ.
ಸ್ತ್ರೀಯರ ದೈಹಿಕ ಚಟುವಟಿಕೆಗಳು ಪುರುಷಗಿಂತ ವಿಭಿನ್ನವಾಗಿರುವುದರಿಂದ ಇವರ ಆರೋಗ್ಯ ಸಮಸ್ಯೆಗಳೂ ಸಹ ವಿಭಿನ್ನವಾಗಿರುತ್ತವೆ. ಸ್ತ್ರೀ ಲೈಂಗಿಕ ಹಾರ್ಮೋನ್ಗಳಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರಾನ್ ಗಳು ಮುಟ್ಟಿಗೆ ಕಾರಣವಾಗಿದ್ದು, ಇವು ಮೂಳೆಗಳನ್ನು ಗಟ್ಟಿಗೊಳಿಸುವುದಲ್ಲದೆ ಹೃದಯದ ಶುದ್ಧ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆದು ಸ್ತ್ರೀಯರಿಗೆ ಹೃದಯಾಘಾತದಿಂದ ರಕ್ಷಣೆ ನೀಡುತ್ತವೆ. ಈ ಹಾರ್ಮೋನ್ಗಳ ಪ್ರಮಾಣ
ಕಡಿಮೆಯಾದಲ್ಲಿ ಮೂಳೆಗಳ ಶಿಥಿಲತೆ ಮತ್ತು ಶುದ್ಧ ರಕ್ತನಾಳಗಳ ಜಿಡ್ಡುಗಟ್ಟುವಿಕೆ ಹೆಚ್ಚಾಗುತ್ತವೆ. ಗ್ರಾಮೀಣ ಮತ್ತು ನಗರ ಮಹಿಳೆಯರ ಹಾಗೂ ಉದ್ಯೋಗಸ್ಥ ಮಹಿಳೆಯರ ಪರಿಸರಗಳು ವಿಭಿನ್ನವಾಗಿದ್ದು, ಅದಕ್ಕನುಗುಣವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕ ಮಹಿಳೆಯರಲ್ಲಿ ಪೌಷ್ಟಿಕಾಂಶಗಳ ಕೊರತೆ ಮತ್ತು ಸೋಂಕು ರೋಗಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಇವರುಗಳು ಬರಿಗಾಲಿನಲ್ಲಿ ನಡೆದು ಬಯಲಿನಲ್ಲಿ ಮಲಮೂತ್ರಗಳನ್ನು ವಿಸರ್ಜನೆ ಮಾಡುವುದರಿಂದ ಕೊಕ್ಕೆ ಹುಳುಗಳ ಹಾವಳಿ ಹೆಚ್ಚಾಗಿ ರಕ್ತಹೀನತೆ ಯಿಂದ ಬಳಲುತ್ತಾರೆ. ಪಟ್ಟಣದ ಮಹಿಳೆಯರು ವ್ಯಾಯಾಮವಿಲ್ಲದೆ, ಅತಿ ಶಕ್ತಿದಾಯಕ ಆಹಾರವನ್ನು ಸೇವಿಸುವುದರಿಂದ ಸ್ಥೂಲ ಕಾಯಕ್ಕೀಡಾಗಿ ಮಂಡಿನೋವು, ಏರುರಕ್ತ ಒತ್ತಡ, ಸಕ್ಕರೆ ಕಾಯಿಲೆ ಇತ್ಯಾದಿ ಹಲವಾರು ಬಗೆಯ ಅನಾರೋಗ್ಯ ಸಮಸ್ಯೆಗಳಿಗೀಡಾಗುತ್ತಿದ್ದಾರೆ.
ಉದ್ಯೋಗಸ್ಥ ಮಹಿಳೆಯರು ಔದ್ಯೋಗಿಕ ಮತ್ತು ಸಾಂಸಾರಿಕ ಜವಾಬ್ದಾರಿಗಳೆರಡನ್ನೂ ಒಂದೇ ಕಾಲದಲ್ಲಿ ನಿರ್ವಹಿಸಬೇಕಾದುದರಿಂದ ಅತೀವ ಮಾನಸಿಕ ಒತ್ತಡಕ್ಕೀಡಾಗಿ ಮನೋರೋಗಗಳಿಗೆ ತುತ್ತಾಗಿ ಆತ್ಮಹತ್ಯೆ ಮತ್ತಿತರ ಮನೋರೋಗಗಳು ಆಧುನಿಕ ಸ್ತ್ರೀಯರಲ್ಲಿ ಹೆಚ್ಚಾಗುತ್ತಿವೆ. ಭಾರತೀಯ ಸ್ತ್ರೀಯರಿಗೆ ಸಾಂಸಾರಿಕ ಜವಾ ಬ್ದಾರಿ ಪುರುಷರಿಗಿಂತ ಹೆಚ್ಚಾಗಿದ್ದು, ತಮ್ಮ ಬದುಕಿನ ಬಹುಪಾಲು ಸಮಯವನ್ನು ಕುಟುಂಬದ ಆರೈಕೆಯಲ್ಲಿಯೇ ಕಳೆದು ತಮ್ಮ ಆರೈಕೆಯನ್ನು ಉದಾಸೀನ ಮಾಡುತ್ತಾರೆ. ಸಾಂಸಾರಿಕ ಕೆಲಸಗಳ ಒತ್ತಡ ದಿಂದಾಗಿ ಕಾಯಿಲೆಯ ಪ್ರಥಮ ಹಂತದಲ್ಲಿ ಕಾಣಿಸಿಕೊಳ್ಳುವ ತೊಂದರೆ ಗಳನ್ನು ಉದಾಸೀನ ಮಾಡಿ ಕಾಯಿಲೆಯ ಉಗ್ರವಾದ ಹಂತದಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುತ್ತಾರೆ.
ಮಹಿಯರಿಗೆ ಆರ್ಥಿಕ ಸ್ವಾತಂತ್ರ್ಯವಿಲ್ಲದಿರುವುದೂ ಸ್ವಯಂಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಬಹುಬೇಗ ಮುಂದಾಗದಿರುವುದಕ್ಕೆ ಪ್ರಮುಖ
ಕಾರಣವಾಗಿದ್ದು, ಇದು ಸಹ ಸ್ತ್ರೀಯರ ಆರೋಗ್ಯ ಸಮಸ್ಯೆ ಬಿಗಡಾಯಿಸಲು ಪ್ರಮುಖ ಕಾರಣ. ಸ್ತ್ರೀಯರಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವ ದೈಹಿಕ ಚಟುವಟಿಕೆಗಳಿಲ್ಲದ ಬದುಕು, ಆರ್ಥಿಕ ಸ್ವಾತಂತ್ರ್ಯವಿಲ್ಲದಿರುವಿಕೆ, ಪುರುಷರ ಮೇಲೆ ಅವಲಂಬಿಸಿರುವಿಕೆ, ಉದಾಸೀನತೆಯಿಂದಾಗಿ ಸ್ತ್ರೀಯರಲ್ಲಿ ಅಪರೂಪವಾಗಿದ್ದ ಸಕ್ಕರೆಕಾಯಿಲೆ, ಏರುರಕ್ತ ಒತ್ತಡ, ಹೃದಯಾಘಾತ, ಸ್ಥೂಲಕಾಯ ಮತ್ತು ಮನೋರೋಗಗಳು ಇಂದು ಅವರಲ್ಲಿ ಅಧಿಕವಾಗಿ ಕಾಣಿಸಿಕೊಂಡು ಉಗ್ರ ರೂಪತಾಳುತ್ತಿವೆ. ಸ್ತ್ರೀಯರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳೆಂದರೆ, ಕ್ಯಾನ್ಸರ್ಗಳು ಆಧುನಿಕ ಮಹಿಳೆಯರಲ್ಲಿ ಬದಲಾದ ಜೀವನಶೈಲಿಯಿಂದಾಗಿ ಸ್ತನಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.
ಮಕ್ಕಳಿಗೆ ದೀರ್ಘಕಾಲ ಸ್ತನಪಾನ ಮಾಡಿಸದಿರುವುದು ಇದಕ್ಕೆ ಪ್ರಮುಖ ಕಾರಣ. ಸ್ತ್ರೀಯರು ಆಗಿಂದಾಗ್ಯೆ ಕನ್ನಡಿಯ ಮುಂದೆ ನಿಂತು ತಮ್ಮ ಸ್ತನಗಳನ್ನು
ಗೆಡ್ಡೆಗಳಿಗಾಗಿ ಸ್ವಯಂ ಪರೀಕ್ಷಿಸಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡು ಬಹುಬೇಗ ಗುರುತಿಸುವುದರಿಂದ ಈ ಕ್ಯಾನ್ಸರ್ನಿಂದ ಸಂಪೂರ್ಣವಾಗಿ
ಮುಕ್ತರಾಗಬಹುದು. ಮಗುವಿಗೆ ದೀರ್ಘಕಾಲ ಅಂದರೆ ಕನಿಷ್ಠ ೧ವರ್ಷವಾದರೂ ಸ್ತನಪಾನ ಮಾಡಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಇದಲ್ಲದೇ ಗರ್ಭಕೋಶದ ಕುತ್ತಿಗೆ ಭಾಗದ ಕ್ಯಾನ್ಸರ್ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ಬಹುಬೇಗ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಪೂರ್ಣವಾಗಿ ವಾಸಿಯಾಗುವ ಕ್ಯಾನ್ಸರ್ ಇದು. ಬಿಳಿಸೆರಗು, ಮುಟ್ಟಿನ ನಡುವೆ ರಕ್ತಸ್ರಾವ, ದುರ್ವಾಸನೆಯ ಸ್ರಾವಗಳು, ಕಿಬ್ಬೊಟ್ಟೆ ನೋವು ಇದರ ಪ್ರಮುಖ ರೋಗಲಕ್ಷಣ ಗಳಾಗಿದ್ದು ಈ ತೊಂದರೆಗಳು ಕಾಣಿಸಿಕೊಂಡಲ್ಲಿ ತಪಾಸಣೆ ಅತ್ಯವಶ್ಯಕ.
ಸಕ್ಕರೆ ಕಾಯಿಲೆ
ಸ್ತ್ರೀಯರಲ್ಲಿ ಕಾಣಿಸಿಕೊಳ್ಳುತ್ತಿರುವ ಸಕ್ಕರೆಕಾಯಿಲೆ ಪುರುಷರಿಗಿಂತ ವಿಭಿನ್ನವಾಗಿದ್ದು, ಹೃದ್ರೋಗದ ತೊಂದರೆ ಇವರುಗಳಲ್ಲಿ ಬಹುಬೇಗ ಕಾಣಿಸಿ ಕೊಳ್ಳುತ್ತವೆ. ಸ್ಥೂಲಕಾಯ ಜೊತೆಗೂಡಿರುತ್ತದೆ. ಅತಿ ಬಾಯಾರಿಕೆ, ಅತಿಯಾಗಿ ಹಸಿವಾಗುವಿಕೆ ಮತ್ತು ಮೂತ್ರ ಸುರಿಕೆ, ತೂಕ ನಷ್ಟ ಇವು ಸಕ್ಕರೆ ಕಾಯಿಲೆಯ ರೋಗ ಲಕ್ಷಣಗಳು. ಬಹುಪಾಲು ಸ್ತ್ರೀಯರು ಸಕ್ಕರೆಕಾಯಿಲೆಯನ್ನು ಉದಾಸೀನ ಮಾಡುವುದರಿಂದ ಸಕ್ಕರೆಕಾಯಿಲೆಯ ಅವಘಡಗಳಾದ ನರತೊಂದರೆ, ಹೃದಯಾಘಾತ, ಮೂತ್ರಜನಕಾಂಗದ ವಿಫಲತೆ ಇವರುಗಳಲ್ಲಿ ಹೆಚ್ಚು. ಸಕ್ಕರೆಕಾಯಿಲೆಯನ್ನು ಗುರುತಿಸಿದ ತಕ್ಷಣ ನಿರಂತರ ಸಮಂಜಸ ಚಿಕಿತ್ಸೆ ಅತ್ಯವಶ್ಯಕ.
ಹೃದಯಾಘಾತ
ಹೃದಯಾಘಾತ ಇಂದು ಸ್ತ್ರೀಯರಲ್ಲಿ ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ದೈಹಿಕ ಚಟುವಟಿಕೆಗಳಿಲ್ಲದಿರುವಿಕೆ, ಸ್ಥೂಲಕಾಯ ಮತ್ತು ಅತಿಯಾದ ಮಾನಸಿಕ ಒತ್ತಡ ಬಹುಮುಖ್ಯ ಕಾರಣಗಳು ಎನ್ನಲಾಗಿದೆ. ಹೃದಯಾಘಾತ ಪುರುಷರಿಗಿಂತ ಮಹಿಳೆಯರಲ್ಲಿ ಗಂಭೀರಸ್ವರೂಪ ತಾಳುತ್ತದೆ. ಎದೆನೋವು, ದಮ್ಮು, ಎದೆಬಡಿತ, ಮೈಕೈ ಬೆವರುವಿಕೆ ಇತ್ಯಾದಿ ಇದರ ಪ್ರಮುಖ ರೋಗತೊಂದರೆಗಳು.
ಮಾನಸಿಕ ಅವ್ಯವಸ್ಥೆಗಳು
ಸ್ತ್ರೀಯರ ಮನಸ್ಸು ಬಹುಮೃದುವಾಗಿದ್ದು, ಬದುಕಿನ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ತರಬೇತಿ ಬಹುಪಾಲು ಸ್ತ್ರೀಯರಿಗಿಲ್ಲದ
ಪರಿಣಾಮವಾಗಿ ಆಧುನಿಕ ಮಹಿಳೆಯರು ಅತೀವ ಮಾನಸಿಕ ಒತ್ತಡಕ್ಕೀಡಾಗಿ ಹಲವಾರು ಬಗೆಯ ಮಾನಸಿಕ ರೋಗಗಳಿಗೆ ಅತಿಯಾಗಿ ಈಡಾಗುತ್ತಿದ್ದಾರೆ. ಆತ್ಮಹತ್ಯೆ ಮತ್ತು ಮಾನಸಿಕ ಕುಂದಿಕೆ ಸೀಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಹಿಳೆಯರ ಮನಸ್ಸನ್ನು ಸದೃಢಗೊಳಿಸುವ ಮಾನಸಿಕ ತರಬೇತಿ ಅತ್ಯವಶ್ಯಕ.
ಲೈಂಗಿಕತೆ
ಲೈಂಗಿಕಾಸಕ್ತಿ ಸ್ತ್ರೀಯರಲ್ಲಿ ಪುರುಷರಿಗಿಂತ ಸಹಜವಾಗಿ ಕೆಳಸ್ತರದಲ್ಲಿದ್ದು, ಅದನ್ನು ಪ್ರಚೋದಿಸಿ ಜೀವಂತವಾಗಿಡುವ ಸಂಗಾತಿಯ ಆಯ್ಕೆ ಬಹುಮುಖ್ಯ. ಲೈಂಗಿಕ ಕ್ರೀಡೆಯಲ್ಲಿ ಪುರುಷನ ಪಾತ್ರ ಕ್ರಿಯಾತ್ಮಕವಾಗಿದ್ದು, ಅವನು ಬಹುಬೇಗ ಲೈಂಗಿಕಸುಖವನ್ನು ಪಡೆಯುತ್ತಾನೆ. ಆದರೆ ಮಹಿಳೆ ಲೈಂಗಿಕ ಕ್ರೀಡೆ ಯಲ್ಲಿ ನಿಧಾನವಾಗಿ ಹಂತಹಂತವಾಗಿ ಕಾಮಸುಖವನ್ನು ಪಡೆಯುವು ದರಿಂದ ಪುರುಷ ಸೀಗೆ ಸಂತೃಪ್ತಿ ಸಿಗುವರೆವಿಗೆ ಕ್ರೀಡೆಯಲ್ಲಿ ಕ್ರಿಯಾಶೀಲ ನಾಗಿರಬೇಕು.
ಬಹು ಪಾಲರಲ್ಲಿ ಇದಾಗದಿರುವುದರಿಂದ ಬಹುಪಾಲು ಸ್ತ್ರೀಯರು ಸೂಕ್ತ ಕಾಮಸುಖ ಸಿಗದೆ ದೀರ್ಘಾವಧಿಯಲ್ಲಿ ಕಾಮಾಸಕ್ತಿಯನ್ನು ಕಳೆದುಕೊಂಡು
ನೈಜಸುಖದಿಂದ ವಂಚಿತರಾಗುತ್ತಾರೆ. ಲೈಂಗಿಕ ಶಿಕ್ಷಣದಿಂದ ಮಾತ್ರ ಈ ಸಮಸ್ಯೆ ನಿವಾರಣೆ ಸಾಧ್ಯ. ಕೆಲ ಮಹಿಳೆಯರು ಹಿಂಜರಿಕೆ ಸ್ವಭಾವದಿಂದಾಗಿ ಲೈಂಗಿಕ ರೋಗಗಳು ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೆ ಮಾನಸಿಕ ಕುಂದಿಕೆಗಳಿಗೊಳಗಾಗುತ್ತಾರೆ. ಈ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸು ವುದು ಆರೋಗ್ಯಕರ.
ಮುಟ್ಟಿನ ಅಂತ್ಯ
ಲೈಂಗಿಕ ಹಾರ್ಮೋನ್ಗಳ ಉತ್ಪತ್ತಿಯ ನಿಲುಗಡೆಯೊಂದಿಗೆ ಮುಟ್ಟಿನ ಅಂತ್ಯ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ತಲೆನೋವು, ಮೈಕೈ ನೋವು, ಮೈ ಬಿಸಿಯಾಗುವಿಕೆ, ಎದೆಬಡಿತ, ಬೆನ್ನುನೋವು, ಏರುರಕ್ತ ಒತ್ತಡ ಮತ್ತು ಹೃದ್ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವು ಮಹಿಳೆಯರು ಈ ಅವಧಿ ಯಲ್ಲಿ ಅತೀವ ಮಾನಸಿಕ ತಳಮಳಕ್ಕೆ ಈಡಾಗುತ್ತಾರೆ. ಈ ವೇಳೆ ಮೂಳೆಗಳು ಶಿಥಿಲಗೊಳ್ಳುವುದರಿಂದ ಮೂಳೆಮುರಿತಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ವೈದ್ಯರ ಸಲಹೆ ಮತ್ತು ಮಾನಸಿಕ ತರಬೇತಿಯಿಂದ ಈ ಸಮಸ್ಯೆಗಳನ್ನು ನಿಯಂತ್ರಿಸಲಾಗುತ್ತದೆ.
ಗರ್ಭಿಣಿಯರ ಸಮಸ್ಯೆ
ಗರ್ಭಧಾರಣೆ ಸ್ತ್ರೀಯ ದೇಹದ ಮೇಲೆ ದೈಹಿಕ ಮತ್ತು ಭಾವನಾತ್ಮಕವಾದ ಪರಿಣಾಮವನ್ನುಂಟು ಮಾಡುತ್ತದೆ. ಪೌಷ್ಠಿಕ ಆಹಾರಾಂಶಗಳ ನೀಡಿಕೆ
ಅತ್ಯವಶ್ಯಕ. ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸಕ್ಕರೆಕಾಯಿಲೆಯನ್ನು ಉದಾಸೀನ ಮಾಡಿದಲ್ಲಿ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆ ಗಳುಂಟಾಗಬಹುದು. ಈ ಅವಧಿಯಲ್ಲಿ ಸಕ್ಕರೆಕಾಯಿಲೆ ನಿಯಂತ್ರಣ ಅತ್ಯವಶ್ಯಕ. ಇಲ್ಲದಿದ್ದಲ್ಲಿ ಮಗುವಿಗೂ ಸಕ್ಕರೆಕಾಯಿಲೆ ಬರಬಹುದು. ಸಾಂಸಾ ರಿಕ ಜೀವನಕ್ಕೆ ಮಾತ್ರ ಬಂಧಿತವಾಗಿದ್ದ ಮಹಿಳೆ ಇಂದು ಜಾಗೃತಗೊಂಡು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ತನ್ನ ಸಾಂಸಾರಿಕ ಜವಾ ಬ್ದಾರಿಯ ಜೊತೆ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ದಿಕ್ಕಿನಲ್ಲಿ ರೂಪುಗೊಳ್ಳುತ್ತಿದ್ದು, ಅವಳು ಉದಾಸೀನ ಮಾಡದೆ ತನ್ನ ಆರೋಗ್ಯದ ಬಗ್ಗೆಯೂ ಜಾಗೃತಿ ವಹಿಸುವುದು ಅತ್ಯವಶ್ಯಕ.
ಮಾನವ ಕುಲದ ಸಂತಾನವನ್ನು ಮುಂದುವರೆಸುವ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಸಂತಾನಲಕ್ಷ್ಮಿಯನ್ನು ಗೌರವಿಸಿ ಪೋಷಿಸುವುದು
ಪ್ರತಿಯೊಬ್ಬರ ಕರ್ತವ್ಯವಲ್ಲವೇ? ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೆ ದೇವತಾಃ (ಎಲ್ಲಿ ನಾರಿ ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ರಮಿಸುತ್ತಾರೆ.)