Friday, 20th September 2024

ವಿಶ್ವ ಶಾಂತಿಯೇ ಇಂದಿನ ಅಗತ್ಯ

ತನ್ನಿಮಿತ್ತ
ರಾಜು. ಭೂಶೆಟ್ಟಿ

ಜಗತ್ತಿಗೆ ಶಾಂತಿಯ ಮೌಲ್ಯವನ್ನು ತಿಳಿಸಿಕೊಡುವ ಸಲುವಾಗಿ ಪ್ರತೀ ವರ್ಷ ಸೆಪ್ಟೆೆಂಬರ್-21ನ್ನು ವಿಶ್ವ ಶಾಂತಿ ದಿನವನ್ನಾಗಿ ಆಚರಿಸಲಾಗುತ್ತದೆ. ಶಾಂತಿಯಿಂದ ರಾಷ್ಟ್ರ – ರಾಷ್ಟ್ರಗಳ ನಡುವಿನ ಬಾಂಧವ್ಯ, ಸಮಾಜ ಸುವ್ಯವಸ್ಥೆೆ ಸಾಧ್ಯ. ಯುದ್ಧ, ಗಲಭೆ, ರಕ್ತಪಾತಗಳಂಥ ಅಮಾನವೀಯ ಕೃತ್ಯಗಳನ್ನು ತಡೆಯುವ ಶಕ್ತಿ ಶಾಂತಿಗಿದೆ. ಶಾಂತಿ – ಅಭಿವೃದ್ಧಿ – ಉಜ್ವಲ ಭವಿಷ್ಯಕ್ಕೆ ಒಂದ ಕ್ಕೊಂದು ಸಂಬಂಧವಿದೆ. ಅದರಲ್ಲೂ, ಮುಖ್ಯವಾಗಿ ಶಾಂತಿ, ಅಂಹಿಸೆಯ ಮಹತ್ವ ಎಂಥದ್ದು ಎಂದು ಇಡೀ ವಿಶ್ವಕ್ಕೆ ಅರ್ಥೈಸಿದ ಶಾಂತಿ ಪ್ರಿಯ ರಾಷ್ಟ್ರ ನಮ್ಮ ಭಾರತ. ಶಾಂತಿ, ಅಹಿಂಸೆಯ ಮೂಲಕವೇ ಸ್ವಾತಂತ್ರ್ಯ ಪಡೆಯಲಾಯಿತು.

ನ್ಯೂಯಾರ್ಕ್‌ನ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಶಾಂತಿ ಗಂಟೆಯನ್ನು ಬಾರಿಸುವ ಮೂಲಕ ವಿಶ್ವ ಶಾಂತಿ ದಿನ ವನ್ನು ಆಚರಿಸಲಾಗುತ್ತದೆ. ಶಾಂತಿ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಹಾಗಾದರೆ ಶಾಂತಿ ಪಡೆಯಲು ಕ್ರಮಿಸಬೇಕಾದ ದೂರ ವೆಷ್ಟು? ಈ ವರ್ಷದ ಮಟ್ಟಿಗೆ ನೋಡುವುದಾದರೆ ಯಾವುದೇ ದಣಿವಿಲ್ಲದೆ ನಿರಂತರವಾಗಿ ತನ್ನ ಕರಾಳ ಛಾಯೆಯನ್ನು ಬೀರಿ ನಿರಂತರವಾಗಿ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಜಗತ್ತಿನ ಎಲ್ಲ ರಾಷ್ಟ್ರಗಳ ದೊಡ್ಡ ವೈರಿ ಎಂದರೆ ಅದು ಕೋವಿಡ್-19 ವೈರಸ್ ಎಂದು ಹೇಳಬಹುದಾಗಿದೆ.

ವಿಶ್ವದ ಯಾವುದೇ ಒಂದು ಭಾಗದಲ್ಲಿನ ಸಮಸ್ಯೆಯು ಎಲ್ಲ ರಾಷ್ಟ್ರಗಳಿಗೆ ವ್ಯಾಪಿಸಿತು, ಅದರ ದುಷ್ಪರಿಣಾಮ ಎಂತಹುದು? ಎಂಬುದನ್ನು ಕೋವಿಡ್ – 19 ಮಹಾಮಾರಿ ತೋರಿಸಿಕೊಟ್ಟಿದೆ. ಅಂದರೆ ಬರೀ ಕೇವಲ ಯುದ್ಧಗಳಷ್ಟೇ ಅಲ್ಲ, ಕೆಲವೊಂದು ಗಂಭೀರ ಸಾಂಕ್ರಾಮಿಕ ರೋಗಗಳು ಸಹ ವಿಶ್ವದ ಅಶಾಂತಿಗೆ ಕಾರಣವಾಬಹುದೆಂಬುದನ್ನು ಕೋವಿಡ್-19 ಪಾಠ ಕಲಿಸಿದೆ. ಅದಕ್ಕಾಗಿ, ಜಾಗತಿಕ ಶಾಂತಿಯೆಂಬುದು ತುಂಬಾ ಮಹತ್ವದ್ದು. ವಿಶ್ವದ ಯಾವುದೇ ಒಂದು ರಾಷ್ಟ್ರದ ಸಮಸ್ಯೆಯು ಎಲ್ಲ ರಾಷ್ಟ್ರಗಳ ಮೇಲೂ ಗಂಭೀರ ಪರಿಣಾಮ ಬೀರಬಹುದಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ಕೋವಿಡ್-19ನಂಥ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿ ಇದರ ವಿರುದ್ಧ ಜಯಿಸುವುದೇ ಇಂದಿನ ಪ್ರಮುಖ ಆದ್ಯತೆಯಾಗ ಬೇಕಿದೆ. ಕೋವಿಡ್-19ನಂತೆ ಇನ್ನೂ ಹಲವಾರು ಸಾಂಕ್ರಾಮಿಕ ರೋಗಗಳಿಂದ ವಿಶ್ವವನ್ನು ಮುಕ್ತಗೊಳಿಸಿ, ಶಾಂತಿ ನೆಲೆಸುವಂತೆ ಮಾಡಲು ಎಲ್ಲ ರಾಷ್ಟ್ರಗಳು ಶ್ರಮಿಸಬೇಕಿದೆ. ಪ್ರತೀ ವರ್ಷ ಒಂದು ನಿರ್ದಿಷ್ಟ ಥೀಮ್‌ನೊಂದಿಗೆ ಆಚರಿಸಲ್ಪಡುವ ವಿಶ್ವ ಶಾಂತಿ ದಿನವು ಈ ವರ್ಷ Shaping peace together ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.

ಈಗಾಗಲೇ, ಜಗತ್ತಿನ ಇತಿಹಾಸ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವ ಎರಡು ಭಯಾನಕ ಜಾಗತಿಕ ಮಹಾಯುದ್ಧಗಳನ್ನು ಕಂಡಿದೆ. ಅಂತಹ ಭೀಕರ ಯುದ್ಧಗಳಿಂದ ಸಿಕ್ಕಿದ್ದಾದರೂ ಏನು? ಕೆಲವೊಂದು ರಾಷ್ಟ್ರಗಳು ತಮ್ಮ ಸ್ವಾರ್ಥ ಉದ್ದೇಶಕ್ಕಾಗಿ ನಿರಂತರ ಅಣ್ವಸ್ತ್ರಗಳನ್ನು ಸಂಗ್ರಹಿಸುತ್ತಾ ಸಾಗುತ್ತಿರುವುದು. ಈ ಅಣ್ವಸ್ತ್ರಗಳ ಸಂಗ್ರಹಿಸುವಿಕೆಗಾಗಿ ಹಲವಾರು ಪ್ರಬಲ ರಾಷ್ಟ್ರ ಗಳ ಮಧ್ಯೆ ತೀವ್ರವಾದ ಪೈಪೋಟಿಯನ್ನು ಹುಟ್ಟು ಹಾಕಿವೆ. ವಿಶ್ವಶಾಂತಿಯ ಮಾತುಗಳನ್ನಾಡುತ್ತಲೇ ರಕ್ಷಣೆಯ ಹೆಸರಿನಲ್ಲಿ ಪ್ರತಿಯೊಂದು ರಾಷ್ಟ್ರಗಳು ಕೋಟ್ಯಂತರ ರುಪಾಯಿಗಳ ವೆಚ್ಚವನ್ನು ಕೇವಲ ಮಿಲಿಟರಿ, ರಕ್ಷಣೆ, ಶಸ್ತ್ರಾಸ್ತ್ರ ಸಂಗ್ರಹಕ್ಕೆ ಬಳಸು ತ್ತಿವೆ.

ಈಗಾಗಲೇ ಎರಡನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಷಿಮಾ ಹಾಗೂ ನಾಗಾಸಾಕಿಯ ಮೇಲೆ ಅಣುಬಾಂಬ್ ದಾಳಿ ಮಾಡಿ ಲಕ್ಷಾಂತರ ಜನರ ಸಾಗೀಡಾದ ಕರಾಳ ಇತಿಹಾಸ ಕಣ್ಣ ಮುಂದೆಯೇ ಇರುವಾಗ ಅದರಿಂದ ಕಲಿತ ಪಾಠವಾದರೂ ಏನು? ಅಣ್ವಸ್ತ್ರ ಮುಕ್ತ ವಿಶ್ವ ನಿರ್ಮಾಣ ಬೇಕಾಗಿಲ್ಲವೇ? ಅಣ್ವಸ್ತ್ರ ಸಂಗ್ರಹ ಮಾಡಿಕೊಂಡು ವಿಶ್ವಶಾಂತಿಯ ಬಗ್ಗೆ ಮಾತನಾಡುವುದರ ಹಿಂದಿನ ಉದ್ದೇಶವಾದರೂ ಏನು? ಈ ಎಲ್ಲ ಪ್ರಶ್ನೆಗಳಿಗೆ ವಿಶ್ವದ ಬಲಾಢ್ಯ ರಾಷ್ಟ್ರಗಳು ಉತ್ತರ ಕಂಡುಕೊಳ್ಳಬೇಕಿದೆ.

ಇಂತಹ ಘೋರ ಪರಿಣಾಮಗಳನ್ನು ಕಂಡ ವಿಶ್ವವು, ಮನುಕುಲಕ್ಕೆ ಶಾಪವಾಗಿರುವ ಈ ಅಣ್ವಸ್ತ್ರಗಳನ್ನು ಮುಕ್ತಗೊಳಿಸುವತ್ತ ಗಮನಹರಿಸ ಬೇಕಿತ್ತು. ಆದರೆ ಆದದ್ದೇನು? ಅಂದು ಹಿರೋಷಿಮಾದ ಮೇಲೆ ಪ್ರಯೋಗಿಸಲಾದ ಲಿಟ್ಲ ಬಾಯ್ ಅಣುಬಾಂಬ್ ಕ್ಕಿಂತಲೂ ನೂರಾರು ಪಟ್ಟು ಬಲಶಾಲಿಯಾದ ಅಣು ಬಾಂಬ್‌ಗಳನ್ನು ವಿಶ್ವದ ಬಲಿಷ್ಠ ರಾಷ್ಟ್ರಗಳು ಸಂಗ್ರಹ ಮಾಡಿಕೊಂಡಿವೆ. ಶಾಂತಿಗಾಗಿ ಕೈಜೋಡಿಸಲಿ – ಇಂದು ವಿಶ್ವವು ಬಡತನ, ಹಸಿವು, ನಿರುದ್ಯೋಗ,ಹವಾಮಾನ ವೈಪರೀತ್ಯ, ಬರಗಾಲದಂಥ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ವಿಷಯಗಳ ಕುರಿತಂತೆ ಗಂಭೀರ ಚರ್ಚೆಗಳು ನಡೆಯಲಿ. ವಿಶ್ವ ಸಂಸ್ಥೆಯು ಎಲ್ಲ ಪ್ರಕಾರದ ಮನುಕುಲದ ನಾಶಕ್ಕಾಗಿ ನಡೆಯುವ ಎಲ್ಲ ರೀತಿಯ ಮಾರಕ ಯುದ್ಧಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಕಠಿಣ ನಿರ್ಣಯವನ್ನು ಕೈಗೊಳ್ಳಬೇಕು.

ಮುಂದಿನ ಪೀಳಿಗೆಗೆ ಅತ್ಯುತ್ತಮವಾದದ್ದನ್ನು ನೀಡಬೇಕಾಗಿದ್ದು, ಜಗತ್ತಿನ ಅಭಿವೃದ್ಧಿಹೊಂದಿದ ರಾಷ್ಟ್ರಗಳು ತಮ್ಮ ಪ್ರತಿಷ್ಠೆ ಯನ್ನು ಬದಿಗೊತ್ತಿ ವಿಶ್ವಶಾಂತಿಗಾಗಿ ಕೈ ಜೋಡಿಸಬೇಕು.