Saturday, 28th September 2024

A S Balasubramanya Column: ವಿಶ್ವ ಸುದ್ದಿ ದಿನ; ಸತ್ಯ ಆರಿಸಿ

ತನ್ನಿಮಿತ್ತ

ಎ.ಎಸ್.ಬಾಲಸುಬ್ರಮಣ್ಯ

ಸುದ್ದಿ ಮಾಧ್ಯಮಗಳ ಸಂಖ್ಯೆ ಹೆಚ್ಚಿದಂತೆ, ಅದರ ಸ್ವಭಾವ ಮತ್ತು ಅದರ ಹೂರಣ ಬದಲಾಗುತ್ತಿದೆ. ಆಧುನಿಕ
ಸಂವಹನ ಮಾಧ್ಯಮಗಳ ಬೆಳವಣಿಗೆ ವೇಗ ಪಡೆದುಕೊಂಡಂತೆ, ಸುದ್ದಿ ಪ್ರಸಾರ ಸಹ ಬದಲಾಯಿತು. ಟೆಲಿಗ್ರಾಫ್, ದೂರವಾಣಿ, ಪತ್ರಿಕೆಗಳು, ಬಾನುಲಿ, ಟಿವಿ ಮತ್ತು ಈಗಿನ ಅತ್ಯಾಧುನಿಕ ಡಿಜಿಟಲ್ ಸಂವಹನ ಸಾಧನಗಳು
ಭರಪೂರ ಸುದ್ದಿಗಳನ್ನು ಜಗತ್ತಿನ ಮೂಲೆಮೂಲೆಗಳಿಂದ ಹೊತ್ತು ತರುತ್ತಿವೆ. ಪಾರಿವಾಳಗಳು ಓಲೆಗಳ ಮೂಲಕ
ಸಂದೇಶಗಳನ್ನು ತಲುಪಿಸುವುದನ್ನು ಪುರಾಣಗಳಲ್ಲಿ ಓದಿದ್ದೇವೆ.

ತ್ರಿಲೋಕ ಸಂಚಾರಿ ನಾರದಮುನಿ ಮೂರೂ ಲೋಕಗಳ ದೇವಾನು ದೇವತೆಗಳು ಮತ್ತು ರಾಜಮಹಾರಾಜರಿಗೆ ಅಂದಿನ ಜಗತ್ತಿನ ಬಹು ಪ್ರಮುಖ ಸುದ್ದಿಮೂಲವಾಗಿದ್ದ. ಆಶ್ಚರ್ಯಕರವೆಂದರೆ, ಕುರುಕ್ಷೇತ್ರದ ಯುದ್ಧದ ನೇರ ವರದಿಯ ವಿವರಣೆಯನ್ನು ಕಣ್ಣುಕಾಣದ ಧೃತರಾಷ್ಟ್ರನಿಗೆ ಸಂಜಯ ವಿವರಿಸಿದ. 1851 ರಲ್ಲಿ ರಾಯಿಟರ್ ಸುದ್ದಿ ಸಂಸ್ಥೆಯ ಸಂಸ್ಥಾಪಕ ಪಾಲ್ ಜೂಲಿಯಸ್ ರಾಯಿಟರ್ ಪಾರಿವಾಳಗಳನ್ನು ಬಳಸಿ ವಾಣಿಜ್ಯ ವಾರ್ತೆಗಳನ್ನು ಪ್ಯಾರಿಸ್‌ನಿಂದ ಲಂಡನ್‌ಗೆ ತರಿಸುತ್ತಿದ್ದ.

ಟೆಲಿಗ್ರಾಫ್ ಆಗಮನದ ನಂತರ ಸುದ್ದಿ ವೇಗ ಪಡೆದುಕೊಂಡಿತು.‌ ನಾಲ್ಕಾರು ತಿಂಗಳ ನಂತರ ಬರುತ್ತಿದ್ದ ಪತ್ರಿಕೆಗಳಿಗೆ,
ಬ್ರಿಟಿಷ್ ಸರಕಾರದ ಆದೇಶಗಳಿಗೆ ಈ ಇಂಡಿಯಾ ಕಂಪನಿಯ ಅಧಿಕಾರಿಗಳು ಕಾಯುತ್ತಿದ್ದರು. ಆಳ ಸಮುದ್ರದಲ್ಲಿ
1858 ರಲ್ಲಿ ಅಳವಡಿಸಿದ ಕೇಬಲ್‌ಗಳು ಜಗತ್ತಿನ ಪ್ರಮುಖ ದೇಶಗಳನ್ನು ಸಂಪರ್ಕಿಸುವ ಅತ್ಯಂತ ವೇಗದ ಮೊದಲ
ಸಂವಹನ ಜಾಲಗಳಾದವು. ಈಗ ಸಂವಹನ ಉಪಗ್ರಹಗಳು ಮತ್ತು ಕಡಲಾಳದಲ್ಲಿರುವ ಕೇಬಲ್‌ಗಳು ಕ್ಷಣಮಾತ್ರ ದಲ್ಲಿ ನಿಮ್ಮ ಚಿತ್ರಗಳು ಮತ್ತು ಸಂದೇಶಗಳನ್ನು ಇಂದು ಅಂತರ್ಜಾಲದ ಮೂಲಕ ಇಡೀ ಜಗತ್ತಿಗೆ ವರ್ಗಾಯಿಸುತ್ತವೆ.

ಪತ್ರಿಕೆಗಳು, ಬಾನುಲಿ, ಟಿವಿ ವಾಹಿನಿಗಳು ಮತ್ತು ಡಿಜಿಟಲ್ ಮಾಧ್ಯಮಗಳು ಮಾಹಿತಿ ಮನರಂಜನೆಯನ್ನು ಎಡೆಯಿಂದ ತುಂಬಿ ತರುತ್ತಿವೆ. ಸುದ್ದಿ ಮಾಧ್ಯಮಗಳು ತರಬೇತಿ ಪಡೆದ ಪತ್ರಕರ್ತರಿಂದ ಸುದ್ದಿಯನ್ನು ಸಂಗ್ರಹಿಸಿ ಅದರ ಸತ್ಯಾಸತ್ಯತೆಯನ್ನು ಅನುಭವಿ ಪತ್ರಕರ್ತರು ಸಂಪಾದನಾ ಮಟ್ಟದಲ್ಲಿ ಮಗದೊಮ್ಮೆ ಜವಾಬ್ದಾರಿಯುತ ವಾಗಿ ಪರಿಶೀಲಿಸಿ, ವ್ಯಾಕರಣ ದೋಷಗಳನ್ನು ಸರಿಪಡಿಸಿ, ಕಾನೂನಾತ್ಮಕ ಅಂಶಗಳನ್ನು ಗಮನದಲ್ಲಿರಿಸಿ, ಸಂಕ್ಷಿಪ್ತ ವಾದ ತಲೆಬರಹ ನೀಡಿ ಓದುಗರಿಗೆ ಶಿಸ್ತುಬದ್ಧವಾಗಿ ತಲಪಿಸುತ್ತವೆ. ಸುದ್ದಿಮನೆಯಿಂದ ಹೊರಬರುವ ಸುದ್ದಿ ಅನೇಕ ಪರೀಕ್ಷೆಗಳಿಗೆ ಒಳಪಡುತ್ತದೆ. ಇದಕ್ಕೆ gate keeping ಪ್ರಕ್ರಿಯೆ ಎಂದು ಪತ್ರಿಕಾ ಭಾಷೆಯಲ್ಲಿ ಕರೆಯಲಾಗು ತ್ತದೆ. ಆದರೆ, ಡಿಜಿಟಲ್ ಮಾಧ್ಯಮದ ಆಗಮನದನಂತರ, ಸುದ್ದಿ ಪ್ರಸಾರ ಸಾರ್ವಜನೀಕರಣಗೊಂಡಿತು.

ಅಂದರೆ. ತಂತ್ರಜ್ಞಾನ ತಿಳಿದಿರುವ ಮತ್ತು ತನ್ನ ಸುತ್ತಲಿನ ಬೆಳವಣಿಗೆಗಳನ್ನು ಇತರರಿಗೆ ತಿಳಿಸುವ ಕುತೂಹಲ ಹೊಂದಿರುವ ಎಲ್ಲರೂ ಈ ಕ್ಷೇತ್ರಕ್ಕೆ ಧುಮುಕಿದರು. ಯುಟ್ಯೂಬ, ಫೇಸ್‌ಬುಕ್, ಇನ್ಸ್‌ಟಾಗ್ರಾಂ, ಟ್ವಿಟ್ಟರ್ ಮಾಧ್ಯಮ ಗಳು ಇವರೆಲ್ಲರಿಗೂ ವೇದಿಕೆಯಾದವು. ಸ್ಮಾರ್ಟ್ ಫೋನ್ ಹಿಡಿದ ಎಲ್ಲರೂ ಸುದ್ದಿ ಸಂಗ್ರಹ ಮತ್ತು ವಿತರಣೆಯ ಪಾಲುದಾರರಾದರು. ಬಳಕೆದಾರರ ಹಿತಾಸಕ್ತಿಗಳಿಗಿಂತ ಸ್ಮಾರ್ಟ್ಫೋನ್ ಹಿಡಿದವರ ಆಸಕ್ತಿಗಳು ಮತ್ತು ಪಕ್ಷಪಾತಗಳು ಮೇಲುಗೈ ಸಾಧಿಸಿದವು. ಸುದ್ದಿಕ್ಷೇತ್ರ ಮಲಿನಗೊಂಡಿತು.

ಈ ಪ್ರವೃತ್ತಿಗಳನ್ನು ಒಂದು ಮಟ್ಟದಲ್ಲಿ ಹಲವು ಸುದ್ದಿ ವಾಹಿನಿಗಳು ಆಗಲೇ ಪರಿಚಯಿಸಿದ್ದರು. ಡಿಜಿಟಲ್ ಮಾಧ್ಯಮಗಳು ಮತ್ತು ವೇದಿಕೆಗಳ ಅತ್ಯಪೂರ್ವ ವಿಸ್ತರಣೆಯಿಂದ ಸುದ್ದಿಮಾಲಿನ್ಯ ಮತ್ತಷ್ಟು ವಿಷಕಾರಿಯಾಯಿತು. ಬೇಜವಾಬ್ದಾರಿಯುತ ಹಾಗು ಸುದ್ದಿ ತಿರುಚುವಿಕೆ ಹೆಚ್ಚಳ ಕಂಡಿತು. ಚಿತ್ರಗಳ ಮಾರ್ಫಿಂಗ್ ಮತ್ತು ವಿಡಿಯೋ
ಸಂಕಲನದಲ್ಲಿ ಉದ್ದೇಶಪೂರ್ವಕವಾಗಿ ಅನಗತ್ಯ ವಿಷಯಗಳ ತುರುಕುವಿಕೆ ಸಾಮಾನ್ಯವಾಯಿತು. ಈ ಹೊಸ ಮಾಧ್ಯಮಕ್ಕೆ fact checking ಅನಿವಾರ್ಯವಾಯಿತು. ಡಿಜಿಟಲ್ ಮಾಧ್ಯಮಗಳಲ್ಲಿ ಬರುವ ಸುದ್ದಿ, ಚಿತ್ರಗಳು ಮತ್ತು ವಿಡಿಯೋಗಳಿಗೆ ಕಡಿವಾಣ ಹಾಕುವ ಪರಿಸ್ಥಿತಿ ಅನಿವಾರ್ಯವಾಯಿತು.

ಈ ಹಿನ್ನೆಲೆಯಲ್ಲಿ ಪ್ರಮುಖ ಸುದ್ದಿ ಮಾಧ್ಯಮಗಳಾದ ಪತ್ರಿಕೆಗಳು ಎಚ್ಚೆತ್ತುಕೊಂಡು ‘ಸುದ್ದಿ’ಯ ಪಾವಿತ್ರ್ಯತೆಯನ್ನು
ಓದುಗರಿಗೆ ಮನದಟ್ಟು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿತು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ 28 ರಂದು ‘ವಿಶ್ವ ಸುದ್ದಿ ದಿನ’ ಆಚರಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ದೇಶಗಳ ಪತ್ರಿಕಾ ಪ್ರಕಾಶಕರ ಜಾಗತಿಕ ವೇದಿಕೆ ಯಾದ WAN&IFRA, (World Associ-ation of Newspapers) ಮಾಧ್ಯಮ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ವಸ್ತು-ವಿಷಯ ಆಧಾರಿತ ಸುದ್ದಿಯನ್ನು ಬೆಂಬಲಿಸಲು ವಿಶ್ವವ್ಯಾಪಿ ಆಂದೋಲನವನ್ನು ಆರಂಭಿಸಿವೆ. ವಾನ್-ಇ- 3000 ಸುದ್ದಿ ಪ್ರಕಾಶಕರು ಮತ್ತು ತಂತ್ರಜ್ಞಾನ ಕಂಪನಿಗಳು ಮತ್ತು 120 ದೇಶಗಳಲ್ಲಿ 18000 ಪ್ರಕಟಣೆಗಳನ್ನು ಪ್ರತಿನಿಧಿಸುವ 60 ರಾಷ್ಟ್ರೀಯ ಪ್ರಕಾಶಕರ ಸಂಘಗಳನ್ನು ಒಳಗೊಂಡ ವಿಶ್ವದ ಮಾಧ್ಯಮಗಳ ಜಾಗತಿಕ ಸಂಸ್ಥೆಯಾಗಿದೆ.

ಸ್ವತಂತ್ರ ಮಾಧ್ಯಮವನ್ನು ನಿರ್ವಹಿಸಲು ವಿಶ್ವದಾದ್ಯಂತದ ಪತ್ರಕರ್ತರು ಮತ್ತು ಪ್ರಕಾಶಕರ ಹಕ್ಕುಗಳನ್ನು ರಕ್ಷಿ ಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಈ ಆಂದೋಲನಕ್ಕೆ ವಿಶ್ವ ಸಂಪಾದಕರ ವೇದಿಕೆ ಮತ್ತು ಕೆನಡಾ
ಪತ್ರಿಕೋದ್ಯಮ ಫೌಂಡೇಶನ್ ಬೆನ್ನೆಲುಬಾಗಿ ನಿಂತಿವೆ. ವಾನ್-ಇ- ಅಧ್ಯಕ್ಷರಾದ ಲಾಡಿನಾ ಹೈಮ್‌ಗಾರ್ಟ್ನರ್
ಅವರು ತಮ್ಮ ಸಂದೇಶದಲ್ಲಿ ಸತ್ಯ ಆಧಾರಿತ ಪತ್ರಿಕೋದ್ಯಮದ ತತ್ವಗಳನ್ನು ರಕ್ಷಿಸುವ ಬದ್ಧತೆಯನ್ನು ನಾವು ಒತ್ತಿಹೇಳುತ್ತೇವೆ.

ತಪ್ಪು ಮಾಹಿತಿಯಿಂದ ತುಂಬಿದ ಜಗತ್ತಿನಲ್ಲಿ, ನಿಖರವಾದ, ವಿಶ್ವಾಸಾರ್ಹ ಮತ್ತು ಸ್ವತಂತ್ರ ಸುದ್ದಿಗಳನ್ನು ನೀಡುವ ಪತ್ರಕರ್ತರ ಜವಾಬ್ದಾರಿಯು ಎಂದಿಗಿಂತಲೂ ಈಗ ನಿರ್ಣಾಯಕವಾಗಿದೆ. ಸತ್ಯವು ಕೇವಲ ಒಂದು ಆಯ್ಕೆಯಲ್ಲ-ಅದು ಮುಕ್ತ ಮತ್ತು ಪ್ರಜಾಪ್ರಭುತ್ವ ಸಮಾಜದ ಅಡಿಪಾಯವಾಗಿದೆ ಎಂಬುದನ್ನು ನೆನಪಿಸುತ್ತದೆ ಎಂದು
ತಿಳಿಸಿದ್ದಾರೆ.

‘ವಿಶ್ವ ಸುದ್ದಿ ದಿನವು ವಿಶ್ವಾದ್ಯಂತದ ಓದುಗರಲ್ಲಿ ಸ್ವತಂತ್ರ ಮತ್ತು ಧೈರ್ಯಶಾಲಿ ಪತ್ರಕರ್ತರು ವಹಿಸುವ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುವ ಮತ್ತು ನೆನಪಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ. ಪತ್ರಕರ್ತರು ಸತ್ಯಕ್ಕೆ ಕಾರಣ ವಾಗುವ ಪುರಾವೆಗಳನ್ನು ಒದಗಿಸುತ್ತಾರೆ. ತಪ್ಪು ಮಾಹಿತಿಯಿಂದ ತುಂಬಿದ ವಿಷಕಾರಿ ಮಾಹಿತಿ ಪರಿಸರ ವನ್ನು ಮುಕ್ತಗೊಳಿಸುವ ಪ್ರಯತ್ನ ಇದಾಗಿದೆ. ಸತ್ಯವನ್ನು ಆರಿಸಿ ಅಭಿಯಾನವು ವಸ್ತು-ವಿಷಯ ಆಧಾರಿತ ವರದಿ ಮಾಡುವ ಪತ್ರಕರ್ತರ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ.

ಬ್ರಿಕಿಕ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮಾರಿಯಾ ರೆಸ್ಸಾ ಅವರ ಪ್ರಕಾರ ಗದ್ದಲ ಮತ್ತು ಹಿಂಸಾಚಾರವು ಅಂತಿಮವಾಗಿ ಕಡಿಮೆಯಾಗುತ್ತದೆ, ಮತ್ತು ಸತ್ಯ ಹಾಗು ಸಭ್ಯತೆಯನ್ನು ಆಧರಿಸಿದ ಸುದ್ದಿ ಮರಳುತ್ತದೆ. ಸದ್ಯಕ್ಕೆ,
ಪ್ರತಿ ಕ್ಷಣ, ಪ್ರತಿ ದಿನ ನಾವು ಸತ್ಯವನ್ನು ರಕ್ಷಿಸಲು ಹೋರಾಡುತ್ತೇವೆ’ ಎಂದಿದ್ದಾರೆ.

ವಿಶ್ವ ಸುದ್ದಿ ದಿನವು ನಾಗರಿಕರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಸೇವೆ ಸಲ್ಲಿಸುವ ವಿಶ್ವಾಸಾರ್ಹ ಸುದ್ದಿ ಮತ್ತು ಮಾಹಿತಿ ಯನ್ನು ಒದಗಿಸುವಲ್ಲಿ ಪತ್ರಕರ್ತರು ವಹಿಸುವ ಪಾತ್ರದ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವ ಜಾಗತಿಕ ಉಪಕ್ರಮವಾಗಿದೆ. ಪ್ರಜಾಸತ್ತೆಯ ಯಶಸ್ಸಿನಲ್ಲಿ ಪತ್ರಿಕೆಗಳ ಪಾತ್ರ ಬಹು ಮಹತ್ತರವಾದುದು. ಅದು ಈಗಲೂ ಮುಂದುವರಿದೆ. ಮುದ್ರಿತ ಪತ್ರಿಕೆಗಳಿರಲಿ ಇಲ್ಲವೇ ಅವುಗಳ ಡಿಜಿಟಲ್ ವೇದಿಕೆಗಳೇ ಇರಲಿ, ವಸ್ತುಸ್ಥಿತಿ ಆಧರಿಸಿ ಮಾಡಲಾಗುವ ಸುದ್ದಿ, ಚಿತ್ರ ಇಲ್ಲವೇ ವಿಡಿಯೋಗಳಿರಲಿ, ತರಬೇತಿ ಹೊಂದಿದ ಪತ್ರಕರ್ತ ಹೊರತರುವ ಸುದ್ದಿ ಯನ್ನು ಸ್ವೀಕರಿಸುವ ಮತ್ತು ಬೆಂಬಲಿಸುವ ಮನೋಭಾವವನ್ನು ಓದುಗರಾದ ನಾವೆಲ್ಲರೂ ಬೆಳೆಸಿಕೊಳ್ಳ ಬೇಕಾಗಿದೆ. ಇದು ಪ್ರಜಾಸತ್ತೆಯ ರಕ್ಷಣೆಗೆ ಅತ್ಯವಶ್ಯ.

(ಲೇಖಕರು ವಿಶ್ರಾಂತ ಪತ್ರಿಕೋದ್ಯಮ
ಪ್ರಾಧ್ಯಾಪಕರು ಮತ್ತು ಸಂವಹನ ತಜ್ಞರು)

ಇದನ್ನೂ ಓದಿ: Job News: 50,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಸಲ್ಲಿಸಿ