ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Yagati Raghu Naadig Column: ಋತುಮತಿಯಿಂದ ಋಷಿಪಂಚಮಿಯವರೆಗೆ...!

ಆತ್ಮೀಯತೆಯ ನೆಪದಲ್ಲಿ ಚಿಕ್ಕಪ್ಪ ನನ್ನ ಮೈಮೇಲೆ ಕೈಯಾಡಿಸುವಾಗ, ‘ಇದು ಅಸಹಜವಾಗಿದೆಯಲ್ಲಾ?’ ಎನಿಸುತ್ತಿತ್ತು. ಕ್ರಮೇಣ ‘ಗುಡ್ ಟಚ್, ಬ್ಯಾಡ್ ಟಚ್’ ನಡುವಿನ ವ್ಯತ್ಯಾಸ ಅರಿವಾಗತೊಡಗಿ ಅವನಿಂದ ಅಂತರ ಕಾಯ್ದುಕೊಳ್ಳತೊಡಗಿದೆ

Yagati Raghu Naadig Column: ಋತುಮತಿಯಿಂದ ಋಷಿಪಂಚಮಿಯವರೆಗೆ...!

Profile Ashok Nayak Jan 12, 2025 7:43 AM
ರಸದೌತಣ
ಯಗಟಿ ರಘು ನಾಡಿಗ್‌
naadigru@gmail.com
ಗೆಳತಿ ಜಾನಕಿ,ಹೇಗಿದ್ದೀಯ? ನಿನ್ನ ಸಂಪರ್ಕ ತಪ್ಪಿ ಹೋಗಿ ವರ್ಷಗಳೇ ಆಗಿಬಿಟ್ಟವಲ್ಲೇ? ನಿನ್ನ ನಂಬರ್ ಇರಲಿಲ್ಲ. ಮೊನ್ನೆ ಅದ್ಯಾವುದೋ ಲೇಖನದ ಜತೆ ಪ್ರಕಟವಾಗಿತ್ತು, ಸೇವ್ ಮಾಡಿಕೊಂಡೆ. ಕರೆಗೆ ಯತ್ನಿಸಿದರೂ ನೆಟ್‌ವರ್ಕ್ಸಮಸ್ಯೆಯಿಂದಾಗಿ ಸಾಧ್ಯವಾಗಲಿಲ್ಲ. ಈಗ ಈ ಸಂದೇಶ ಕಳಿಸಿದ್ದರ ಕಾರಣ ಹೇಳ್ತೀನಿ. ನಾವಿಬ್ಬರೂ ಬಹಳ ಹಿಂದೆಜತೆಯಲ್ಲಿ ಓದುತ್ತಿದ್ದಾಗ, ‘ಸೀತೆಯ ಸಂಕಷ್ಟಗಳು’ ಎಂಬ ಪಾಠವಿತ್ತು. ಶಾಲಾ ಪರೀಕ್ಷೆಯಲ್ಲಿ, ‘ಶ್ರೀರಾಮನ ಪತ್ನಿ ಸೀತೆ ತನ್ನ ಜೀವಿತಾವಧಿಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ’ ಎಂಬ ಪ್ರಶ್ನೆಗೆ ನೀನು ಬರೆದಿದ್ದ ಉತ್ತರ ಮೇಷ್ಟ್ರಿಗೆ ತುಂಬಾ ಇಷ್ಟವಾಗಿತ್ತು. “ಪ್ರಶ್ನೆಗೆ ಉತ್ತರಿಸೋದು ಅಂದ್ರೆ ಪುಸ್ತಕದಲ್ಲಿರೋದನ್ನ ಭಟ್ಟಿಇಳಿಸಿಬಿಡೋದಲ್ಲ; ಇಲ್ಲಿ ನೋಡಿ, ಸೀತೆಯ ಸಂಕಷ್ಟಗಳನ್ನ ಜಾನಕಿ ಎಷ್ಟು ಚೆಂದಾಗಿ ತನ್ನದೇ ವಾಕ್ಯಗಳಲ್ಲಿ ವಿಶ್ಲೇಷಿಸಿದ್ದಾಳೆ.
image-59416f0d-7240-4675-a4c2-45eced2da249.jpg
ನಿರೂಪಣೆ ಅಂದ್ರೆ ಇದು!" ಅಂತ ಮೇಷ್ಟ್ರು ಹೊಗಳಿ, ಉತ್ತರ ಪತ್ರಿಕೆಯನ್ನು ಎಲ್ಲರಿಗೂ ತೋರಿಸಿ, ನಂತರ ನಿನಗೇಕೊಟ್ಟಿದ್ದರು. ಆ ಘಟನೆಯಿನ್ನೂ ನನ್ನಲ್ಲಿ ಹಸಿರು. ಏಯ್ ಹುಡುಗಿ, ತಮಾಷೆ ಗೊತ್ತಾ? ಅದೇ ಬರಹ ಈಗ ಮತ್ತೊಮ್ಮೆ ಪಠ್ಯವಾಗಿದೆ. ಅದನ್ನು ನೋಡ್ತಿದ್ದಂತೆ ನಿನ್ನ ನೆನಪಾಯ್ತು. ‘ಸೀತೆಯ ಸಂಕಷ್ಟಗಳು’ ಕುರಿತಾದ ನಿನ್ನ ಆ ಪ್ರಬಂಧವನ್ನು ವಾಟ್ಸಾಪ್ ಮಾಡಿದ್ರೆ ನಮ್ಮ ‘ಲವ-ಕುಶ’ರಿಗೆ ಉಪಯೋಗವಾಗುತ್ತೆ. ನೆಟ್‌ವರ್ಕ್ ಸಿಗುತ್ತಿದ್ದಂತೆಕರೆಮಾಡುವೆ…
ಇಂತು ನಿನ್ನ ಬಾಲ್ಯಸ್ನೇಹಿತ, ರಘುರಾಮ.
ಗೆಳೆಯ ರಘುರಾಮಾ,ನಿನ್ನ ವಾಟ್ಸಾಪ್ ಸಂದೇಶ ‘ಮರುಭೂಮಿಯ ಓಯಸಿಸ್’ ನಂತೆ ಮುದನೀಡಿತು ಕಣೋ. ಲೇಯ್ ಕಳ್ಳಾ, ನನಗೆ ತಿಳಿಸದೆ ಮದುವೆಯಾಗಿದ್ದಲ್ಲದೆ ‘ಲವ-ಕುಶ’ ಎಂಬ ಮಕ್ಕಳನ್ನೂ ಮಾಡ್ಕೊಂಡಿದ್ದೀಯಾ? ನಿನ್ನ ಹೆಂಡತಿ ಹೆಸರೇನು? ಅಯ್ಯೋ ದೇವರೇ… ನಿಂಗೆ ‘ಸೀತೆಯ ಸಂಕಷ್ಟಗಳು’ ಪ್ರಬಂಧ ಬೇಕಲ್ವಾ… ಮೊದಲು ‘ಸಂಕಷ್ಟಗಳನ್ನು’ ವಿವರಿಸುವೆ, ನಂತರ ‘ಕ್ಷೇಮ ಸಮಾಚಾರ’…
“ಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿದ ನಂತರ ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಬೇಕು ಅಂದ್ಕೊಂಡಿದ್ದೆ; ಆದರೆ ಅಪ್ಪ ಸಂಕಷ್ಟದಲ್ಲಿದ್ದರು, ಹಾಸ್ಟೆಲ್‌ಗೆ ಸೇರಿಸೋಕೂ ಅವರಿಗಿಷ್ಟವಿರಲಿಲ್ಲ. ಹೀಗಾಗಿ ಚಿಕ್ಕಪ್ಪ ಇರುವ ಊರಿನ ಕಾಲೇಜಿಗೆ ಸೇರಿಸಿ ಅವನ ಮನೆಯಲ್ಲೇ ನನ್ನನ್ನು ಬಿಡಲು ನಿರ್ಧರಿಸಿದರು. ಆ ಊರು ಅಪರಿಚಿತವಾಗಿದ್ದರೂ, ‘ಅಮ್ಮನಿಲ್ಲದ ನಿನ್ನನ್ನು ಚಿಕ್ಕಪ್ಪ-ಚಿಕ್ಕಮ್ಮ ಮಗಳಂತೆಯೇ ನೋಡ್ಕೋತಾರೆ’ ಅಂತ ಅಪ್ಪ ಭರವಸೆ ತುಂಬಿದರು. ಹೀಗಾಗಿ ಚಿಕ್ಕಪ್ಪನ ಮನೆಪಾಲಾದೆ. ಆದರೆ, ಚಿಕ್ಕಮ್ಮ ಎಲ್ಲಿಗಾದರೂ ಹೋಗಿದ್ದು ಚಿಕ್ಕಪ್ಪ ಒಬ್ಬನೇ ಇರುವಾಗ ಮನೆಯಲ್ಲಿ ರಲು ನನಗೆ ಅದ್ಯಾಕೋ ಅಸುರಕ್ಷಿತ ಭಾವನೆ ಕಾಡುತ್ತಿತ್ತು. ಇದು ‘ಹೋಮ್ ಸಿಕ್‌ನೆಸ್’ ಇರಬೇಕು, ಅದಕ್ಕೇ ಹೀಗಾಗು ತ್ತಿದೆ ಅಂದುಕೊಂಡಿದ್ದೆ.
ಆದರೆ, ಆತ್ಮೀಯತೆಯ ನೆಪದಲ್ಲಿ ಚಿಕ್ಕಪ್ಪ ನನ್ನ ಮೈಮೇಲೆ ಕೈಯಾಡಿಸುವಾಗ, ‘ಇದು ಅಸಹಜವಾಗಿದೆಯಲ್ಲಾ?’ ಎನಿಸುತ್ತಿತ್ತು. ಕ್ರಮೇಣ ‘ಗುಡ್ ಟಚ್, ಬ್ಯಾಡ್ ಟಚ್’ ನಡುವಿನ ವ್ಯತ್ಯಾಸ ಅರಿವಾಗತೊಡಗಿ ಅವನಿಂದ ಅಂತರ ಕಾಯ್ದುಕೊಳ್ಳತೊಡಗಿದೆ. ಆದರೆ ವಿದ್ಯಾಭ್ಯಾಸಕ್ಕೆಂದು ಆ ಮನೆಯಲ್ಲೇ ಇರಬೇಕಾಗಿದ್ದರಿಂದ ಮತ್ತು ತಮ್ಮನಲ್ಲಿ ಅಪ್ಪನಿಗೆ ಅಪಾರ ನಂಬಿಕೆಯಿದ್ದುದರಿಂದ, ಮುಜುಗರವನ್ನು ಒಳಗೇ ಅವಿಸಿಟ್ಟುಕೊಳ್ಳುತ್ತಿದ್ದೆ. ನಾನು ನಗುತ್ತಿದ್ದುದು ಕಾಲೇಜಿನಲ್ಲಿ ಗೆಳತಿಯರ ಸಂಗಡ ಮಾತ್ರವೇ. ಒಮ್ಮೆ ಚಿಕ್ಕಮ್ಮ ಆಸ್ಪತ್ರೆಯ ಪಾಲಾದ್ದರಿಂದ, ನಾನು ಅಡುಗೆ ಮಾಡಿಟ್ಟು ಕಾಲೇಜಿಗೆ ತೆರಳಬೇಕಾಗುತ್ತಿತ್ತು.
ಅಂದು ನುವಾರವಾದ್ದರಿಂದ ಮನೆಯಲ್ಲೇ ಇದ್ದೆ. ಆಸ್ಪತ್ರೆಯಲ್ಲಿದ್ದ ಸಂಬಂಧಿಗಳಿಗೆ ‘ಊಟ ತರುವೆ’ ಎಂದು ನೆಪ ಹೇಳಿ ಮನೆಗೆ ಬಂದ ಚಿಕ್ಕಪ್ಪ, ವರಸೆಯಲ್ಲಿ ಮಗಳಾಗಿದ್ದ ನನ್ನ ಮೇಲೇ ಎರಗಿ ಕಾಮವಾಂಛೆ ತೀರಿಸಿಕೊಳ್ಳಲು ಹಾತೊರೆದ. ‘ಗಿಡುಗ’ನ ಕ್ರೌರ್ಯ ಮತ್ತು ದೇಹಬಲಕ್ಕೆ ‘ಗಿಣಿ’ ಇನ್ನೇನು ಬಲಿಯಾಗುವ ದುಸ್ಥಿತಿ ಒದಗಿತ್ತು. ಅಷ್ಟರಲ್ಲಿ ಹೊರಗೆ ಕೇಳಿದ ಆಂಬುಲೆನ್ಸ್ ಸೈರನ್, ‘ದಬದಬ’ ಬಾಗಿಲು ಬಡಿದ ಶಬ್ದ ನನ್ನನ್ನು ಉಳಿಸಿತು. ನನ್ನನ್ನು ಇದ್ದ ಸ್ಥಿತಿಯಲ್ಲೇ ಬಿಟ್ಟು ಚಿಕ್ಕಪ್ಪ ಮುಂಬಾಗಿಲೆಡೆಗೆ ತೆರಳಿದ. ಬಾಗಿಲು ತೆರೆದು ನೋಡಿದರೆ, ಚಿಕ್ಕಮ್ಮ ಆಸ್ಪತ್ರೆಯಿಂದ ಹೆಣವಾಗಿ ಬಂದಿದ್ದಳು! ಅವಳನ್ನು ಹಾಗೆ ತಂದಿದ್ದು ಸಂಬಂಧಿಕರು. ಅವಳಿದ್ದಾಗಲೇ ನನ್ನ ಮೇಲೆರಗಿದ್ದ ಚಿಕ್ಕಪ್ಪ, ಅವಳು ಸತ್ತ ಮೇಲೆ ಬಿಟ್ಟಾನಾ? ಎಂಬ ತಲ್ಲಣದಲ್ಲಿದ್ದೆ, ಅದೇ ನಿಜವಾಗಬೇಕೇ! ಅವಳನ್ನು ವೈಕುಂಠಕ್ಕೆ ಕಳಿಸಿ, ಬಂಧುಗಳು ಖಾಲಿಯಾದ ನಂತರ, ನಾನು ಅಡುಗೆ ಮನೆಯಲ್ಲಿರುವಾಗ ಗಿಡುಗ ಇನ್ನೊಮ್ಮೆ ಎರಗಿತು!
ಅದೆಲ್ಲಿತ್ತೋ ಧೈರ್ಯ, ಈಳಿಗೆಮಣೆ ಎತ್ತಿಕೊಂಡು ಬೀಸಿಬಿಟ್ಟೆ, ಗಿಡುಗನ ಎದೆಯಲ್ಲಿ ಆಳಗೆರೆ ಮೂಡಿ ರಕ್ತಚಿಮ್ಮಿತು. ‘ಅಮ್ಮಾ…’ ಎಂದು ಚೀರುತ್ತಾ ಬಿದ್ದ. ಅಕ್ಕಪಕ್ಕದವರೆಲ್ಲಾ ಓಡಿಬಂದಾಗ, ‘ಎಣ್ಣೆ ಮೇಲೆ ಕಾಲಿಟ್ಟು ಜಾರಿಬಿದ್ದು, ಈಳಿಗೆಮಣೆ ಚುಚ್ಚಿಕೊಂಡೆ’ ಎಂದು ಕಥೆಕಟ್ಟಿದ, ನನ್ನನ್ನು ಕೆಂಗಣ್ಣಿಂದ ನೋಡುತ್ತಲೇ! ಮರುದಿನ ಕಾಲೇಜು ಮುಗಿಸಿಕೊಂಡು ಬರುವ ಹೊತ್ತಿಗೆ, ಊರಿಂದ ಬಂದಿದ್ದ ಅಪ್ಪ ಹಜಾರದಲ್ಲಿ ಕೂತಿದ್ದರು, ಅವರ ಕಂಗಳು ಕೆಂಡವಾಗಿದ್ದವು.
ತತ್ತರಿಸಿಕೊಂಡು ಎದ್ದುಬಂದವರೇ, ‘ಅಯ್ಯೋ ನಾಯಿ, ಇದಕ್ಕೇನೇ ನಿನ್ನನ್ನು ಪಟ್ಟಣಕ್ಕೆ ಕಳಿಸಿದ್ದೂ…?’ ಎನ್ನುತ್ತ ನನ್ನ ಕೆನ್ನೆಗೆ ರಪರಪ ಬಾರಿಸಿದರು. ನಾನು ದಿಗ್ಭ್ರಾಂತಳಾಗಿದ್ದೆ. ಹಿಂದಿನಿಂದ ಬಂದ ಚಿಕ್ಕಪ್ಪ, ‘ಖರ್ಚಿಗೆ ದುಡ್ಡು ಬೇಕುಅಂದಿದ್ರೆ ನಾನು ಕೊಡ್ತಾ ಇರಲಿಲ್ಲವೇನಣ್ಣಾ? ಇಲ್ನೋಡು, ಹೆಂಡತಿಯ ವೈಕುಂಠ ಸಮಾರಾಧನೆ ಖರ್ಚಿಗೆಂದುಒಟ್ಟುಮಾಡಿದ್ದ ದುಡ್ಡಲ್ಲಿ ೧೦,೦೦೦ ರುಪಾಯಿ ಎಗರಿಸಿಬಿಟ್ಟಿದ್ದಾಳೆ…’ ಎಂದು ದೂರಿ, ನನ್ನ ವ್ಯಾನಿಟಿ ಬ್ಯಾಗ್ತೋರಿಸಿದ. ಅದರಲ್ಲಿ ನೋಟಿನ ಕಂತೆ ಕುಣಿಯುತ್ತಿತ್ತು! ನನ್ನ ಮೇಲಿನ ಆತನ ಆಕ್ರಮಣ, ಅದಕ್ಕೆ ದಕ್ಕಿದ ‘ಈಳಿಗೆ ಮಣೆ ಸೇವೆ’ಯ ಘಟನೆಗೆ ಆತ ಹಚ್ಚಿದ್ದ ತೇಪೆಯಾಗಿತ್ತು ಅದು! ಅಪ್ಪನ ಕಣ್ಣಲ್ಲಿ ನಾನು ಮಾಲುಸಮೇತ ಸಿಕ್ಕಿಕೊಂಡ ಕಳ್ಳಿ. ‘ನೀನು ಓದಿ ಕಡಿದು ಕಟ್ಟೆಹಾಕಿದ್ದು ಸಾಕು, ನಡೀ ಹಳ್ಳಿಗೆ’ ಎಂದು ಅಬ್ಬರಿಸಿ ದರದರನೆ ಎಳೆದೊಯ್ದರು ಅಪ್ಪ. ಅವರಿಗೆ ಏನನ್ನೂ ಹೇಳಲು ಅಶಕ್ಯಳಾಗಿದ್ದೆ. ನನ್ನದೇನೂ ತಪ್ಪಿಲ್ಲದಿದ್ದರೂ, ವೃಥಾ ಅಪವಾದ ಹೊರಬೇಕಾಗಿ ಬಂದಿದ್ದರೂ, ‘ಮೊದಲು ಈ ನರಕದಿಂದ ತೊಲಗಿದರೆ ಸಾಕು’ ಎಂಬ ಎಣಿಕೆಯಲ್ಲಿ ಅಪ್ಪನೊಂದಿಗೆ ಹಳ್ಳಿಗೆ ಮರಳಿದೆ.
ಅದೇನು ಗ್ರಹಚಾರವೋ, ಕೆಲ ದಿನಗಳಲ್ಲೇ ಅಪ್ಪ ಸತ್ತರು. ತತ್ಸಂಬಂಧಿತ ಕಾರ್ಯಗಳನ್ನೆಲ್ಲಾ ಮುಗಿಸಿದ ನಂತರನನ್ನೆದುರು ದೊಡ್ಡ ಶೂನ್ಯ. ‘ಮುಂದೇನು?’ ಎಂಬ ಗೊಂದಲ, ಗಾಢಾಂಧಕಾರ. ಹಾಗಂತ ಎಷ್ಟು ದಿನ ಕೂರಲಾ ದೀತು? ಯಾರದ್ದೋ ಉಸಿರಾಟ ನಿಂತ ಮಾತ್ರಕ್ಕೆ ನಮ್ಮ ಬದುಕು ನಿಲ್ಲುವುದಿಲ್ಲವಲ್ಲಾ! ಪಕ್ಕದೂರಿನ ಒಂದು ಗಾರ್ಮೆಂಟ್ -ಕ್ಟರಿಗೆ ಕೆಲಸಕ್ಕೆ ಸೇರಿಕೊಂಡೆ. ಆ ಕೆಲಸಕ್ಕೆ ಮತ್ತು ಅದನ್ನು ನಿರ್ವಹಿಸುವ ನನ್ನ ವಾರಗೆಯವರಿಗೆ ಕೊಡಲಾಗುವ ಸಂಬಳಕ್ಕಿಂತ ಹೆಚ್ಚು ಮೊತ್ತವೇ ನನಗೆ ನಿಗದಿಯಾದಾಗ, ‘ಅಬ್ಬಾ ದೇವರೇ, ಅಂತೂ ಕಣ್ಣು ಬಿಟ್ಯಲ್ಲಾ!’ ಎಂದು ಮನದಲ್ಲೇ ನಮಿಸಿದೆ.
ತಿಂಗಳ ಸಂಬಳದ ದಿನ ಬಂತು. ಅದನ್ನು ಪಡೆದವರು ಸಂಜೆ ಒಬ್ಬೊಬ್ಬರಾಗೇ ಮನೆಗೆ ತೆರಳಿದರು. ಕೊನೆಯಲ್ಲಿ ನನಗೆ ಬಾಸ್‌ನಿಂದ ಕರೆಬಂತು- ಮೊದಲ ಸಂಬಳ ತೆಗೆದುಕೊಳ್ಳಲು. ಬಾಸ್‌ನ ಕ್ಯಾಬಿನ್‌ಗೆ ತೆರಳಿದರೆ, ಕುರ್ಚಿ ಯಲ್ಲಿರುವ ಬದಲು ಪಕ್ಕದ ಸೋಫಾ ಮೇಲೆ ಕಾಲುಚಾಚಿ ಮಲಗಿದ್ದರು. ಬಂದು ಸೋಫಾದಲ್ಲಿ ಕೂರುವಂತೆ ಸನ್ನೆಮಾಡಿದರು. ‘ಪರವಾಗಿಲ್ಲ, ಇಲ್ಲೇ ಇರ‍್ತೀನಿ, ಅಲ್ಲಿಂದಲೇ ಹೇಳಿ ಸರ್’ ಎಂದೆ. ಸಿಗರೇಟು ಹಚ್ಚಿ ಒಮ್ಮೆ ಹೊಗೆ ಬಿಟ್ಟು ಸಂಬಳ ಎಣಿಸಿಕೊಟ್ಟ ಅವರು, ‘ನಿನ್ನ ವಾರಗೆಯವರಿಗೆ ಕೊಡುತ್ತಿರೋದಕ್ಕಿಂತ ೫ ಸಾವಿರ ಹೆಚ್ಚು ಸಂಬಳ ನಿನಗೆ ಫಿಕ್ಸ್ ಮಾಡಿದ್ದೇಕೆ ಗೊತ್ತೇ? ಅದು ನಿನ್ನ ಕೆಲಸಕ್ಕಲ್ಲ. ನಿನ್ನ ಸೌಂದರ್ಯಕ್ಕೆ, ಯೌವನಕ್ಕೆ…’ ಎಂದುಪೀಠಿಕೆ ಹಾಕಿದರು ಬಾಸ್ ಎಂಬ ‘ಅನ್ನದಾತ’! ಅಷ್ಟು ಹೊತ್ತಿಗಾಗಲೇ ಚಿಕ್ಕಪ್ಪ ಎಂಬ ಗಿಡುಗನ ‘ದೇಹಭಾಷೆ’ ಅರಿತಿದ್ದ ನನಗೆ ಈ ‘ಅನ್ನದಾತನ ಆಡುಭಾಷೆ’ಯನ್ನು ಡಿಕೋಡ್ ಮಾಡುವುದು ಕಷ್ಟವೇನಾಗಲಿಲ್ಲ. ಎಡಗಾಲಿನಚಪ್ಪಲಿ ಬಿಚ್ಚಿ, ಬಾಸ್ ಎಂಬ ಮುಖ-ಮೂತಿ ನೋಡದೆ ರೊಯ್ಯನೆ ತೂರಿ, ಅಲ್ಲಿಂದ ಹೊರಟೆ. ನಡೆದೆ… ನಡೆದೆ…ನಡೆಯುತ್ತಲೇ ಇದ್ದೆ. ‘ಪೋಂ… ಪೋಂ..’ ಎಂಬ ಸದ್ದು ಕೇಳಿದಾಗಲೇ ನನಗೆ ಗೊತ್ತಾಗಿದ್ದು ರೈಲುನಿಲ್ದಾಣಕ್ಕೆ ಬಂದಿರುವೆ ಅಂತ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಸಮಾರಂಭದ ನಿಮಿತ್ತ ಆಯೋಜಿಸಲಾಗಿದ್ದ ವಿಶೇಷ ರೈಲು ನಿಂತಿತ್ತು. ಜ್ಞಾನದ ಹಸಿವು ಮತ್ತು ಹೊಟ್ಟೆಯ ಹಸಿವು ನೀಗುವ ಹವಣಿಕೆಯಲ್ಲಿ ‘ಮರ್ಯಾದೆಗೇಡಿ ರಾವಣ’ ರನ್ನು ನೋಡಿದ್ದಾಯ್ತು, ಈಗ ‘ಮರ್ಯಾದಾ ಪುರುಷೋತ್ತಮ ರಾಮ’ನನ್ನಾದರೂ ದರ್ಶಿಸಿ ಧನ್ಯಳಾಗೋಣ ಎಂದುಕೊಂಡು ರೈಲು ಹತ್ತಿ ಅಯೋಧ್ಯೆ ಸೇರಿ ರಾಮನನ್ನು ಕಣ್ತುಂಬಿಕೊಂಡೆ. ನಂತರ ಮುಂದೇನು ಮಾಡೋದು ಅಂತ ತೋಚದೆ ಸರಯೂ ನದಿಯ ಬಳಿಗೆ ಬಂದೆ. ಆ ನದಿಯಲ್ಲೇ ಜಲಸಮಾಧಿಯಾಗುವ ಮೂಲಕ ಶ್ರೀರಾಮನ ‘ಅವತಾರ ಸಮಾಪ್ತಿ’ಯಾಯಿತಂತೆ, ಸೀತೆಗಂತೂ ಅವಳಿಗೆ ಜನ್ಮವಿತ್ತಿದ್ದ ಭೂಮಿಯೇ ಬಾಯ್ತೆರೆದು ಒಳಕರೆದು ಕೊಂಡಿತಂತೆ. ಈ ‘ಜಾನಕಿ’ ಕಾಲವಾಗುವುದಕ್ಕೂ ಇದೇ ಸಕಾಲವಿರಬಹುದು ಅಂದುಕೊಂಡು ಮೊಬೈಲನ್ನು ಇನ್ನೇನು ದಡಕ್ಕೆ ಎಸೆಯುವವಳಿದ್ದೆ. ‘ಟಿಂಗ್’ ಎಂದು ಅದು ಸದ್ದುಮಾಡಿತು. ನೋಡಿದರೆ ನಿನ್ನ ವಾಟ್ಸಾಪ್….!" ಗೆಳೆಯ ರಘುರಾಮಾ, ‘ಸೀತೆಯ ಸಂಕಷ್ಟಗಳು’ ಪ್ರಬಂಧ ಕಳಿಸುವಂತೆ ನೀನು ಕೇಳಿದ್ದೆ, ಆದರೆ ನಾನೀಗ ಹಂಚಿ ಕೊಂಡಿರೋದು ಈ ‘ಜಾನಕಿ’ಯ ಸಂಕಷ್ಟಗಳನ್ನು! ಇಷ್ಟೂ ವರ್ಷ ಯಾರಲ್ಲೂ ಹೇಳಿಕೊಳ್ಳದಿದ್ದ ಅಳಲು ಇದು. ‘ಹೆಣ್ಣಿನ ಸಂಕಷ್ಟದ ಆದಿ ಮತ್ತು ಅಂತ್ಯ ಯಾವಾಗ?’ ಅಂತ ಕೇಳಿದ್ದಕ್ಕೆ, ‘ಋತುಮತಿ ಯಾಗುವುದರಿಂದ ಹಿಡಿದು ಋಷಿ ಪಂಚಮಿಯವರೆಗೆ’ ಅಂತ ಅದ್ಯಾರೋ ಉತ್ತರಿಸಿದ್ರಂತೆ! ಅದೆಂಥಾ ‘ನಿಷ್ಠುರ ಉತ್ತರ’ ಎಂಬುದೀಗ ಅರಿವಾಗಿದೆ. ಶಾಲೆ ಯಲ್ಲಿರುವಷ್ಟು ದಿನವೂ, ಮನೆಯಿಂದ ತಂದ ಊಟವನ್ನು ನನ್ನೊಂದಿಗೆ ಹಂಚಿಕೊಂಡ ಆಪ್ತಮಿತ್ರನಾದ ನಿನ್ನಲ್ಲಿ ನನ್ನ ಸಂಕಷ್ಟ ಹಂಚಿಕೊಳ್ಳಬೇಕೆನ್ನಿಸಿತು…. ತಪ್ಪು ತಿಳೀಬೇಡ. ಸದ್ಯಕ್ಕೆ ಅಯೋಧ್ಯೆ ಯಲ್ಲಿರುವೆ, ನೆಟ್‌ವರ್ಕ್ ಸಮಸ್ಯೆ. ಹೀಗಾಗಿ ಮಾತಿಲ್ಲ, ಬರೀ ಕಥೆ! ಊರಿಗೆ ಮರಳಿದ ಮೇಲೆ ಫೋನ್ ಮಾಡುವೆ, ಪ್ರಬಂಧವನ್ನೂ ಸ್ಕ್ಯಾನ್ ಮಾಡಿ ವಾಟ್ಸಾಪ್ ಮಾಡುವೆ…
***
ನಲ್ಮೆಯ ಗೆಳತಿ,‘ಜಾನಕಿಯ ಸಂಕಷ್ಟ’ ಕರುಳು ಕತ್ತರಿಸುವಂತಿದೆ. ಅಂದಹಾಗೆ, ನೀನಂದುಕೊಂಡಂತೆ ನಾನು ಮದುವೆಯಾಗಿಲ್ಲ, ‘ಲವ-ಕುಶ’ರು ನಾನು ಅನಾಥಾಶ್ರಮದಿಂದ ಕರೆತಂದ ಮಕ್ಕಳು. ಅಪ್ಪ ಅನ್ನೋನು ಸಿಕ್ಕಿದ್ದರೂ ಅಮ್ಮನ ವಾತ್ಸಲ್ಯ ದಿಂದ ಅವು ವಂಚಿತ. ‘ಲವ-ಕುಶ’ರಿಗೆ ‘ಜಾನಕಿ’ಯಮ್ಮನ ವಾತ್ಸಲ್ಯದ ಧಾರೆ ಸಿಗಬಹುದೇ? ಯೋಚಿಸಿ ನೋಡು. ಹಾಗಾದಲ್ಲಿ, ಈ ರಘು‘ರಾಮ’ನ ಬಾಳೂ ಬೆಳಗುತ್ತದೆ. ಇದಕ್ಕೆ ನಿನಗೊಪ್ಪಿಗೆಯಿದ್ದರೆ, ‘ಸೀತೆಯ ಸಂಕಷ್ಟಗಳು’ ಪ್ರಬಂಧವನ್ನು ನೀನು ವಾಟ್ಸಾಪ್ ಮಾಡೋದು ಬೇಡ; ನಿನ್ನನ್ನು ನಮ್ಮ ಮನೆ ತುಂಬಿಸಿಕೊಳ್ಳುವಾಗ ಅದರ ‘ಹಸ್ತಪ್ರತಿ’ ಕೊಟ್ಟರೂ ಸಾಕು…
ಇಂತು, ‘ಜಾನಕಿ’ಯ ನಿರೀಕ್ಷೆಯಲ್ಲಿರುವ, ರಘು‘ರಾಮ’.
ಇದನ್ನೂ ಓದಿ: Yagati Raghu Nadig column