Tuesday, 26th November 2024

Yagati Raghu Nadig Column: ಅಕ್ಷರಗಳು ಆಚೀಚೆ ಆದಾಗಿನ ಎಡವಟ್ಟುಗಳು

ರಸದೌತಣ

ಯಗಟಿ ರಘು ನಾಡಿಗ್

naadigru@gmail.com

ಕಾಗುಣಿತದ ತಪ್ಪಿಲ್ಲದೆ ಅಕ್ಷರಗಳನ್ನು ಬರೆಯುವುದು ಎಷ್ಟು ಮುಖ್ಯವೋ, ಅಕ್ಷರದ ಸಾಲು ಮತ್ತು ಪ್ಯಾರಾಗಳಲ್ಲಿ ಯಥೋಚಿತ ಜಾಗಗಳಲ್ಲಿ ವಿರಾಮ ಚಿಹ್ನೆಗಳನ್ನು ಬಳಸಬೇಕಾದ್ದೂ ಅಷ್ಟೇ ಮುಖ್ಯ. ಕೆಲವೊಮ್ಮೆ ಈ ಎರಡೂ ಪರಿಪಾಠಗಳಿಗೆ ‘ಎಳ್ಳು- ನೀರು’ ಬಿಡುವುದರಿಂದಾಗಿ ಅಥವಾ “ಅಲ್ಪವಿರಾಮ, ಅರ್ಧವಿರಾಮ, ಪೂರ್ಣವಿರಾಮ, ಆಶ್ಚರ್ಯಸೂಚಕ ಚಿಹ್ನೆ ತಾನೇ? ಎಲ್ಲೋ ಒಂದು ಕಡೆ ಹಾಕಿದರಾಯ್ತು” ಎಂಬ ನಿರ್ಲಕ್ಷ್ಯ ಭಾವದಿಂದಾಗಿ ವಿಷಯ ಪ್ರಸ್ತುತಿಯಲ್ಲಿ ಎಡವಟ್ಟಾಗುವುದಿದೆ.

‘ಡೆಡ್‌ಲೈನ್’ ಎಂಬ ‘ಲೈನ್ ಆಫ್ ಕಂಟ್ರೋಲ್’ನಲ್ಲೇ ದಿನದೂಡಬೇಕಾಗಿ ಬರುವ‌ ಪತ್ರಕರ್ತರು ಗಡಿಬಿಡಿಯ ತೆಕ್ಕೆಗೆ ಕಸುಬನ್ನು ಒಪ್ಪಿಸಿ ಇಂಥ ಸಾಕಷ್ಟು ಎಡವಟ್ಟು ಪ್ರಸಂಗಗಳಿಗೆ ಕಾರಣೀಭೂತರಾಗುವುದುಂಟು. ಇದು ಸುಮಾರು ಎರಡೂವರೆ ದಶಕದ ಹಿಂದಿನ ಕಥೆ. ರಾತ್ರಿ 11 ಗಂಟೆ. ಪತ್ರಿಕಾಲಯವೊಂದಕ್ಕೆ ಕೊನೇ ಕ್ಷಣದಲ್ಲಿ ಕ್ರೈಮ್ ಸುದ್ದಿ‌ ಯೊಂದು ಬಂತು. ಆಗಿನ್ನೂ ಸುದ್ದಿಮನೆಗಳಿಗೆ ಇಂಟರ್‌ನೆಟ್/ಇ-ಮೇಲ್, ವಾಟ್ಸ್ಯಾಪ್, ಪ್ರತಿ ಮೇಜಿಗೂ ಕಂಪ್ಯೂ ಟರ್ ಇತ್ಯಾದಿ ಸೌಕರ್ಯಗಳು ಈಗಿರುವ ಪರಿಯಲ್ಲಿ ದಾಂಗುಡಿ ಇಟ್ಟಿರಲಿಲ್ಲ. ಯುಎನ್ ಐ/ಪಿಟಿಐನಂಥ ಸುದ್ದಿ ಸಂಸ್ಥೆಗಳು ಇಂಗ್ಲಿಷ್‌ನಲ್ಲಿ ಕಳಿಸುತ್ತಿದ್ದ ಸುದ್ದಿಗಳು ಟೆಲಿಪ್ರಿಂಟರ್‌ನಲ್ಲಿ ಒಡಮೂಡುತ್ತಿದ್ದವು ಅಥವಾ ವರದಿಗಾರರು ಫ್ಯಾಕ್ಸ್ ಮೂಲಕ ತುರ್ತುಸುದ್ದಿ ಗಳನ್ನು ಕಳಿಸುತ್ತಿದ್ದರು.

ಹಾಗೆ ಫ್ಯಾಕ್ಸ್‌ನಲ್ಲಿ ಬಂದ ಕ್ರೈಮ್ ಸುದ್ದಿಯ ಪ್ರತಿಯನ್ನು ತೆಗೆದುಕೊಂಡ ಸುದ್ದಿ ಸಂಪಾದಕರು, ಅಷ್ಟು ಹೊತ್ತಿಗಾ ಗಲೇ ಮನೆಗೆ ಹೊರಡಲು ಸಜ್ಜಾಗಿದ್ದ ಉಪಸಂಪಾದಕರೊಬ್ಬರಿಗೆ ಅದನ್ನು ಕೊಟ್ಟು “ಬೇಗ ಇದನ್ನೊಂದು ಡಬಲ್ ಕಾಲಂ ಸುದ್ದಿಯಾಗಿ ಪರಿಷ್ಕರಿಸಿ ಬರೆದುಕೊಟ್ಟು ನಂತರ ಮನೆಗೆ ಹೊರಡಿ; ಇದು ಪತ್ರಿಕೆಯ ಇವತ್ತಿನ ಆವೃತ್ತಿಯಲ್ಲೇ ಹೋಗಬೇಕು” ಎಂದು ತಾಕೀತು ಮಾಡಿದರು. ಅಂತೆಯೇ ನಿಯತ್ತಾಗಿ ಒಪ್ಪವಾಗಿ ಬರೆದುಕೊಟ್ಟ ಆ ಉಪಸಂಪಾ ದಕರು, ಕಂಪೋಸ್ ಮಾಡುವುದಕ್ಕೆಂದು ಅದನ್ನು ಕಂಪ್ಯೂಟರ್ ವಿಭಾಗಕ್ಕೆ ನೀಡಿ ಮನೆಗೆ ತೆರಳಿದರು. ಅದನ್ನು ಕಂಪೋಸ್ ಮಾಡಿದ ಮೇಲೆ ಪ್ರಿಂಟ್‌ಔಟ್ ತೆಗೆದುಕೊಂಡು ಕರಡು ತಿದ್ದಿ ‘ಒಕೆ’ ಮಾಡಲು ಸಮಯವಿರಲಿಲ್ಲ.

ಹೀಗಾಗಿ ಸುದ್ದಿ ಸಂಪಾದಕರು ಪುಟ ವಿನ್ಯಾಸಕಾರನಿಗೆ, “ಸುದ್ದಿಯನ್ನು ಕಂಪೋಸ್ ಮಾಡಿ ಅಪರಾಧ ಸುದ್ದಿಗಳ ಪುಟಕ್ಕೆ ತೆಗೆದು ಕೊಂಡುಬಿಡಿ, ಪುಟದಲ್ಲೇ ಆ ಸುದ್ದಿಯ ಮೇಲೊಮ್ಮೆ ಕಣ್ಣುಹಾಯಿಸುತ್ತೇನೆ, ಹೆಚ್ಚು ಸಮಯವಿಲ್ಲ” ಎಂದರು. ಅಂತೆಯೇ ಆ ಸುದ್ದಿಯೊಂದಿಗೆ ವಿನ್ಯಾಸಗೊಂಡ ಪುಟ, ಅವಲೋಕನಕ್ಕೆಂದು ಸುದ್ದಿ ಸಂಪಾದಕರ ಬಳಿಗೆ ಬಂತು. ಎಲ್ಲ ಸುದ್ದಿಗಳ ಕಡೆಗೂ ‘ಹದ್ದಿನಕಣ್ಣು’ ಬೀರಿ ಪರಿಶೀಲಿಸಿ, ಪುಟದಲ್ಲಿ ತಪ್ಪುಗಳು ಇಲ್ಲದಿದ್ದುದಕ್ಕೆ ಅವರು ಹೆಮ್ಮೆಯಿಂದ ಎದೆ ಸೆಟೆಸಿಕೊಂಡರು. ಕೊನೆಯ ಕ್ಷಣದಲ್ಲಿ ಬಂದ ಕ್ರೈಮ್ ಸುದ್ದಿಯ ಮೇಲೆ ಅವರ ದೃಷ್ಟಿ ಹರಿಯಿತು. ಸುದ್ದಿಯ ಹೂರಣವನ್ನೆಲ್ಲಾ ಒಂದಕ್ಷರ ಬಿಡದಂತೆ ಪರಿಶೀಲಿಸಿದ ಅವರಿಗೆ, ಶೀರ್ಷಿಕೆಯನ್ನು ನೋಡು ತ್ತಿದ್ದಂತೆ ಎದೆ ‘ಧಸಕ್’ ಎಂದಿತು.

ಅದು ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಸುದ್ದಿಯಾಗಿತ್ತು, ಆದರೆ ಶೀರ್ಷಿಕೆಯಲ್ಲಿ “ವಿವಾಹಿತೆಯ ಮೇಲೆ ಘೋರ ಅತ್ಯಾಚಾರ ನಮ್ಮ ವಿಶೇಷ ಪ್ರತಿನಿಧಿಯಿಂದ” ಎಂದು ಅಕ್ಷರಗಳು ಮೂಡಿದ್ದವು! ವಾಸ್ತವವಾಗಿ, “ವಿವಾಹಿತೆಯ ಮೇಲೆ ಘೋರ ಅತ್ಯಾಚಾರ” ಎಂಬುದಷ್ಟೇ ಸುದ್ದಿ ಶೀರ್ಷಿಕೆಯಾಗಿದ್ದು, “ನಮ್ಮ ವಿಶೇಷ ಪ್ರತಿನಿಧಿಯಿಂದ” ಎಂಬುದು ಸುದ್ದಿ ಶೀರ್ಷಿಕೆಯ ಅಡಿಯಲ್ಲಿ ಮುದ್ರಿಸಲಾಗುವ ‘ಬೈಲೈನ್’ ಸ್ವರೂಪದ ಪದಗುಚ್ಛವಾಗಿತ್ತು. ಆದರೆ ಕಂಪ್ಯೂಟರ್ ವಿಭಾಗದ ಕಂಪೋಸಿಟರ್ ಮಹಾಶಯರು ಅವೆರಡನ್ನೂ ಒಟ್ಟಿಗೆ ಸೇರಿಸಿ ಕಂಪೋಸ್ ಮಾಡಿ, ಪುಟವಿನ್ಯಾಸ ಮಾಡಿಬಿಟ್ಟಿದ್ದರು!!

ಕೆಲವೊಮ್ಮೆ ತಲ್ಲಣದ ಕಾರಣದಿಂದಲೋ, ಅನ್ಯಮ ನಸ್ಕತೆಯಿಂದಲೋ, ಕೆಲವರು ಏನೋ ಹೇಳುವುದಕ್ಕೆ
ಹೋಗಿ ಮತ್ತೇನನ್ನೋ ಒದರಿಬಿಟ್ಟು ಆಭಾಸ ಮಾಡಿಕೊಳ್ಳುವುದಿದೆ. ಅಂಥದೊಂದು ಎಡವಟ್ಟಿನ ಪ್ರಸಂಗ ಇಲ್ಲಿದೆ.
ಇದು ದಶಕಗಳ ಹಿಂದೆ ಘಟಿಸಿದ್ದು. ಆ ಕಾಲಘಟ್ಟದಲ್ಲಿ ಆಕೆ ಕನ್ನಡದ ಅತ್ಯಂತ ಜನಪ್ರಿಯ ನಟೀಮಣಿ. ಸ್ಟುಡಿಯೋ
ದಲ್ಲಿ ಚಲನಚಿತ್ರವೊಂದರ ಅಂದಿನ ಚಿತ್ರೀಕರಣ ಮುಗಿದು, ನಿರ್ದೇಶಕರು ‘ಪ್ಯಾಕಪ್’ ಎಂದು ಘೋಷಿಸಿದ್ದೂ ಆಯಿತು. ಕ್ಯಾಮರಾ ತಂತ್ರಜ್ಞರು ಹಾಗೂ ಬೆಳಕಿನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದವರು ತಂತಮ್ಮ ಪರಿಕರ
ಗಳನ್ನು ಬಿಚ್ಚಿ, ಪ್ಯಾಕ್ ಮಾಡಿ ವಾಹನಗಳಿಗೆ ತುಂಬುವ ಕಾರ್ಯದಲ್ಲಿ ವ್ಯಸ್ತರಾದರು. ಗ್ರೀನ್ ರೂಮ್‌ಗೆ ಹೋಗಿ
ಮೇಕಪ್ ಅನ್ನು ತೊಡೆದುಕೊಂಡು ಬಂದ ಆ ನಟೀಮಣಿ, ನಿರ್ದೇಶಕರು ಕೂತಿದ್ದ ಕುರ್ಚಿಯ ಬಳಿಗೆ ತೆರಳಿದರು.

ಮಾರನೆಯ ದಿನದ ಚಿತ್ರೀಕರಣಕ್ಕೆ ಸಂಬಂಧಿಸಿ ಮಾಹಿತಿ ಪಡೆಯುವುದು ಆಕೆಯ ಉದ್ದೇಶವಾಗಿತ್ತು. ಆದರೆ ಆ
ನಿರ್ದೇಶಕರೋ, ಮರುದಿನ ಚಿತ್ರೀಕರಿಸಬೇಕಾದ ದೃಶ್ಯಗಳ ಕುರಿತು ತಲೆಕೆಡಿಸಿಕೊಂಡು ಸ್ಕ್ರಿಪ್ಟ್‌ನಲ್ಲಿ ಮುಖ
ಹುದುಗಿಸಿಕೊಂಡು ಕೂತಿದ್ದರು. ಕೆಮ್ಮಿ ಗಂಟಲು ಸರಿಮಾಡಿಕೊಂಡ ನಟೀಮಣಿ, ತಾವು ಕೇಳಬೇಕೆಂದಿದ್ದ
ಪ್ರಶ್ನೆಗಳನ್ನು ಕೇಳಿದರು, ನಿರ್ದೇಶಕರೂ ಅವಕ್ಕೆ ಉತ್ತರಿಸಿ, ಮತ್ತೆ ಸ್ಕ್ರಿಪ್ಟ್‌ನಲ್ಲಿ ಮುಖ ಹುದುಗಿಸಿಕೊಂಡರು.
ಕೆಲ ಕ್ಷಣದಲ್ಲೇ ಆ ನಟಿ ಸ್ಟುಡಿಯೋದ ಚಾವಣಿ ಕಿತ್ತುಹೋಗುವಂತೆ ಜೋರಾಗಿ ಕೂಗಾಡಲಾರಂಭಿಸಿದರು.

ತಾಂತ್ರಿಕ ಸಾಧನಗಳನ್ನು ಪ್ಯಾಕ್ ಮಾಡಿ ವಾಹನಗಳಿಗೆ ತುಂಬಿಸಲು ಸಜ್ಜಾಗಿದ್ದ ತಂತ್ರಜ್ಞರು, ಸೆಟ್ ಬಾಯ್‌ಗಳು,
ಸಹನಟ-ನಟಿಯರೆಲ್ಲರೂ ಆ ಕೋಪೋದ್ರಿಕ್ತ ನಟೀಮಣಿಯ ಅವತಾರವನ್ನು ಕಂಡು ಬೆಚ್ಚಿಬಿದ್ದರು. ನಿರ್ದೇ
ಶಕರೂ ದಿಗಿಲುಗೊಂಡಿದ್ದರ ಜತೆಗೆ, “ಅದು ಹಾಗಲ್ಲಮ್ಮಾ… ಹೀಗೆ” ಎನ್ನುತ್ತಾ ಅದೇನೋ ಸಮಜಾಯಿಷಿ ನೀಡಲು ಹರಸಾಹಸ ಪಡುತ್ತಿದ್ದರೂ ಆ ನಟೀ ಮಣಿಯ ಕೋಪ ತಣ್ಣಗಾಗಿರಲಿಲ್ಲ. ಈ ‘ಹವಾಮಾನ ವೈಪರೀತ್ಯ’ ಮುಂದುವರಿದಿತ್ತು; ಅಲ್ಲಿದ್ದ ಕುರ್ಚಿಯಲ್ಲಿ ಕೆಲಕಾಲ ಕುಕ್ಕರಿಸಿದ ನಟೀಮಣಿ, ಕೋಪ ತಣ್ಣಗಾದ ಮೇಲೆ ಎದ್ದು ಕಾರನ್ನು ಹತ್ತಿ ಮನೆಗೆ ಹೊರಟರು.

ಇತ್ತ ನಿರ್ದೇಶಕರು ತಲೆಯ ಮೇಲೆ ಕೈಹೊತ್ತು ಕೂತುಬಿಟ್ಟರು. ತಾರಾ ಬಳಗದವರು ಮತ್ತು ತಂತ್ರಜ್ಞರೆಲ್ಲ
ಅವರಲ್ಲಿಗೆ ಸಾಗಿ ಮೆಲುದನಿಯಲ್ಲಿ, “ಏನಾಯ್ತು ಸರ್?” ಎಂದು ಕೇಳಿದರು. ವಾಸ್ತವವಾಗಿ ಆಗಿದ್ದಿಷ್ಟು-
ಮಾರನೆಯ ದಿನದ ಚಿತ್ರೀಕರಣಕ್ಕೆ ಎಷ್ಟು ಹೊತ್ತಿಗೆ ಬರಬೇಕು, ಯಾವ ಉಡುಪನ್ನು ಧರಿಸಿ ಬರಬೇಕು?
ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದರು ಆ ನಟೀಮಣಿ. ಅದಕ್ಕೆ ತಕ್ಕಂತೆಯೇ ನಿರ್ದೇಶಕರು ಉತ್ತರವನ್ನೂ ನೀಡಿದ್ದರು.

ಆದರೆ ಹಾಗೆ ಉತ್ತರಿಸುವಾಗ ಆದ ಸಣ್ಣ ಎಡವಟ್ಟಿನಿಂದಾಗಿ ಆ ನಟೀಮಣಿ ಕೆರಳಿ ಕೆಂಡವಾಗಿ ಸೂರು ಕಿತ್ತು ಹೋಗುವಂತೆ ಕಿರುಚಾಡಿದ್ದರು. ಆ ಸ್ಟುಡಿಯೋದಲ್ಲಿ ಮಾರನೆಯ ದಿನ ಕಥಾನಾಯಕಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯ ದೃಶ್ಯದ ಚಿತ್ರೀಕರಣವಿತ್ತು. ಸ್ಟುಡಿಯೋ ಸೆಟ್‌ಗೆ ಎಷ್ಟು ಹೊತ್ತಿಗೆ ಬರಬೇಕೆಂಬುದನ್ನು ನಟೀಮಣಿಗೆ ಹೇಳಿದ ನಿರ್ದೇಶಕರು ಮತ್ತೆ ಸ್ಕ್ರಿಪ್ಟ್‌ನಲ್ಲಿ ಮುಖ ಹುದುಗಿಸಿಕೊಂಡಿದ್ದರು. ಅದಕ್ಕೆ ತಲೆಯಾಡಿಸಿದ ನಟೀಮಣಿ, “ಅದು ಸರಿ ಸರ್, ಯಾವ ಡ್ರೆಸ್ ಹಾಕ್ಕೊಂಡು ಬರಬೇಕು?” ಎಂದು ಮರುಪ್ರಶ್ನೆ ಹಾಕಿದ್ದರು.

ಕೆಲಸದ ಒತ್ತಡದಲ್ಲಿದ್ದ ನಿರ್ದೇಶಕರು ಸ್ಪ್ರಿಪ್ಟ್‌ನಿಂದ ಮುಖ ಮೇಲೆತ್ತದೆಯೇ ಉತ್ತರಿಸಿದರು. ಅಲ್ಲೇ ಆಗಿದ್ದು ಎಡವಟ್ಟು! “Birthday Dress ನಲ್ಲಿ ಬಾರಮ್ಮಾ” ಅಂತ ಹೇಳೋಕ್ಕೆ ಹೋಗಿ ಆ ನಿರ್ದೇಶಕರು “”Birthsuit ನಲ್ಲಿ ಬಾರಮ್ಮಾ” ಎಂದು ಹೇಳಿಬಿಟ್ಟಿದ್ದರು! ಅಂದರೆ, ‘ಹುಟ್ಟುಹಬ್ಬದ ಉಡುಗೆ’ ಯಲ್ಲಿ ಬನ್ನಿ ಅಂತ ಹೇಳೋಕ್ಕೆ ಹೋಗಿ ಆ ಟೆನ್ಷನ್ ಪಾರ್ಟಿ ನಿರ್ದೇಶಕರು ‘ಹುಟ್ಟುಡುಗೆ’ಯಲ್ಲಿ ಬನ್ನಿ ಅಂತ ಹೇಳಿಬಿಟ್ಟಿದ್ದರು! ಹಾಗೆ, ‘ಬೆತ್ತಲೆಯಾಗಿ ಬನ್ನಿ’ ಅಂತ ಹೇಳಿದರೆ ಸಿಟ್ಟು ಬರೋದು ಸಹಜ ತಾನೇ? ಹೀಗಾಗಿ ಆ ನಟೀಮಣಿ ಕೂಗಾಡಿದ್ದರು!!

ಮತ್ತೊಂದು ಪುಟ್ಟ ಪ್ರಸಂಗವನ್ನು ನೋಡೋಣ. ಇದು ಕಾಗುಣಿತದಲ್ಲಿ ಮಾಡುವ ಸಣ್ಣ ಪುಟ್ಟ ಬದಲಾವಣೆ ಯಿಂದ ಏರ್ಪಡುವ ‘ಕಚಗುಳಿ’ ಸನ್ನಿವೇಶಕ್ಕೆ ಒಂದು ನಿದರ್ಶನ. ಇದು ಸಾಕಷ್ಟು ವರ್ಷಗಳ ಹಿಂದೆ ‘ಮಯೂರ’ ಮಾಸಪತ್ರಿಕೆಯ ‘ಅಂಗೈಯಲ್ಲಿ ಅರಮನೆ’ ಅಥವಾ ‘ಬುತ್ತಿ ಚಿಗುರು’ ಅಂಕಣಗಳ ಪೈಕಿ ಒಂದರಲ್ಲಿ ಓದುಗರೊಬ್ಬರು ಹಂಚಿಕೊಂಡಿದ್ದ ಕಾಲೇಜು ದಿನಗಳ ಅನುಭವ. ಅದರ ಸಾರಸಂಗ್ರಹ ರೂಪವಿದು: ಕನ್ನಡ ತರಗತಿಯಲ್ಲಿ ವಿದ್ಯಾರ್ಥಿಗಳೆಲ್ಲರೂ ಆಸೀರಾಗಿದ್ದರು. ಅಂದು ಉಪನ್ಯಾಸಕರು ಬೋಧಿಸಬೇಕಿದ್ದ ಪದ್ಯದ ಹೆಸರು ‘ನಿವೇದನ’ ಅಂತ. ಅವರು ಬರುವುದಕ್ಕಿನ್ನೂ ಸಮಯವಿದ್ದುದರಿಂದ ಉತ್ಸಾಹಿ ಮತ್ತು ವಿಧೇಯ ವಿದ್ಯಾರ್ಥಿಯೊಬ್ಬ ಚಾಕ್ ಪೀಸ್ ತೆಗೆದುಕೊಂಡು ‘ನಿವೇದನ’ ಎಂದು ಬೋರ್ಡ್ ಮೇಲೆ ಬರೆದು ತನ್ನ ಜಾಗಕ್ಕೆ ಮರಳಿದ. ಇದನ್ನು ನೋಡಿದ ಅವನ ತರಲೆ ಸ್ನೇಹಿತ ಸುಮ್ಮನಿರಲಾರದೆ ಬೋರ್ಡ್ ಬಳಿಗೆ ತೆರಳಿ ಅದರ ಮೇಲೆ ಬರೆದಿದ್ದ ಪದದ ‘ನಿ’ ಅಕ್ಷರದ ಪಕ್ಕದಲ್ಲಿ ಒಂದು ದೀರ್ಘವನ್ನು ಬರೆದು, ಪದವನ್ನು ಒಡೆದು, ತನ್ನ ಜಾಗದಲ್ಲಿ ಬಂದು ಕೂತ.

ಹೀಗಾಗಿ, ಮುಂಚೆ ‘ನಿವೇದನ’ ಎಂದು ಇದ್ದುದು ಈಗ ‘ನೀವೇದನ’ ಎಂದಾಗಿತ್ತು! ಕೆಲ ಕ್ಷಣದಲ್ಲೇ ಕನ್ನಡ ಉಪನ್ಯಾ ಸಕರು ತರಗತಿಯೊಳಗೆ ಬಂದರು; ವಿದ್ಯಾರ್ಥಿಗಳೆಲ್ಲರೂ ಎಂದಿನಂತಿರದೆ ಮುಸುಮುಸು ನಗುತ್ತಿರುವುದನ್ನು ಕಂಡು, ಪ್ರಾರಬ್ಧಗಳು ಏನೋ ಎಡವಟ್ಟು ಮಾಡಿವೆ’ ಅಂದುಕೊಂಡೇ ಬೋರ್ಡ್ ಕಡೆಗೆ ನೋಡಿದರು. ಅವರ ಊಹೆ ನಿಜವಾಗಿತ್ತು- ‘ನೀವೇ ದನ’ ಎಂಬ ಪದಗುಚ್ಛ ಅಲ್ಲಿ ರಾರಾಜಿಸುತ್ತಿತ್ತು! ಇದು ತರಗತಿಯ ತರಲೆಯೊಬ್ಬ ತಮ್ಮನ್ನು ದ್ದೇಶಿಸಿ ಮಾಡಿದ ಕಿತಾಪತಿ ಎಂಬುದು ಅವರಿಗೆ ಗೊತ್ತಾಗಿ ಹೋಯ್ತು.

ಆದರೆ ಅವರೂ ಸಾಕಷ್ಟು ಕೆರೆಗಳ ನೀರು ಕುಡಿದ ಅನುಭವಿಯೇ ಆಗಿದ್ದರಿಂದ ಕೊಂಚವೂ ವಿಚಲಿತರಾಗದೆ, ಚಾಕ್‌ಪೀಸ್ ಎತ್ತಿಕೊಂಡು ‘ದನ’ದ ಪಕ್ಕದಲ್ಲಿ ‘ಗಳು’ ಎಂದು ಬರೆದುಬಿಟ್ಟರು. ಬೋರ್ಡ್ ಮೇಲಿನ ಅಂತಿಮ ಅಕ್ಷರ-ಲಿತ- ‘ನೀವೇ ದನಗಳು’ ಎಂದಾಗಿತ್ತು! ಕಿತಾಪತಿ ಮಾಡಿದ್ದ ವಿದ್ಯಾರ್ಥಿಯು ತರಗತಿ ಮುಗಿಯುವವರೆಗೂ ತಲೆಯೆತ್ತಲಿಲ್ಲ!!

(ಲೇಖಕರು ಪತ್ರಕರ್ತರು)

ಇದನ್ನೂ ಓದಿ: Viral video: ಮೈಸೂರು ಅರಮನೆ ಗೇಟ್‌ ಮುರಿದು ಧಾವಿಸಿದ ಆನೆಗಳು, ಜನ ದಿಕ್ಕಾಪಾಲು