ರಸದೌತಣ
ರಘು ನಾಡಿಗ್
naadigru@gmail.com
ಹಬ್ಬದ ನಿಮಿತ್ತ ಹುಟ್ಟೂರು ಯಗಟಿಗೆ ರೈಲಿನಲ್ಲಿ ಹೊರಟಿದ್ದೆ. ಎಲ್ಲ ಬೋಗಿಗಳೂ ತುಂಬಿ ತುಳುಕುತ್ತಿದ್ದವು, ಹೀಗಾಗಿ ಯಾವುದೋ ಬೋಗಿಯೊಳಗೆ ತೂರಿಕೊಂಡು ಸಿಕ್ಕ ಕಂಪಾರ್ಟ್ಮೆಂಟಿನಲ್ಲಿ ಸೀಟು ಹಿಡಿಯಬೇಕಾಗಿ ಬಂತು. ಅದರಲ್ಲಿದ್ದವರೆ ಪರಸ್ಪರ ಪರಿಚಯಸ್ಥರೇ ಅನಿಸುತ್ತೆ, ಹೀಗಾಗಿ ಹಾಡು-ಹರಟೆ-ತಮಾಷೆ ಸಾಗಿದ್ದವು. ಈ ಮಧ್ಯೆ ಯಾರೋ ರೇಡಿಯೋದ ಕಿವಿ ಹಿಂಡುತ್ತಿದ್ದಂತೆ, “ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ” ಎಂಬ ಗೀತೆ ಹೊಮ್ಮತೊಡಗಿತು.
ಅದು ಕಲ್ಪನಾ- ಗಂಗಾಧರ್ ಅಭಿನಯದ ‘ಸೀತಾ’ ಎಂಬ ಚಲನಚಿತ್ರದ ಹಾಡು. ಆರ್.ಎನ್.ಜಯಗೋಪಾಲ್ ಸಾಹಿತ್ಯ, ಜಾನಕಿಯಮ್ಮನ ಕಂಠ, ಕೇಳಬೇಕೇ? ಮಧ್ಯವಯಸ್ಕರೊಬ್ಬರು ಅದಕ್ಕೆ ತಲೆದೂಗುತ್ತಾ, “ನೀವೇನೇ ಹೇಳಿ, ನಮ್ ಆರ್.ಎನ್.ಜಯಗೋಪಾಲ್ ಹಾಡಂದ್ರೆ ಹಾಡು, ಅದು ಯಾವುದೇ ಕವಿತೆಗಿಂತ ಕಮ್ಮಿ ಇರೋಲ್ಲ..” ಎಂದು ಷರಾ ಬರೆದರು. ಅವರ ಮಾತಿನ್ನೂ ಮುಗಿದಿರಲಿಲ್ಲ, ಎದುರಿಗಿದ್ದ ಮತ್ತೊಬ್ಬರು, “ಯೇ, ಸುಮ್ನಿರ್ರಿ ರೀ… ಅದರ ಸಾಹಿತ್ಯ ಹಿಂದಿ ಹಾಡಿನ ನಕಲು.
ರಾಜೇಶ್ ಖನ್ನಾ-ಶರ್ಮಿಳಾ ಟ್ಯಾಗೋರ್ ಅಭಿನಯದ ‘ಆರಾಧನಾ’ ಚಿತ್ರದ ‘ಕೋರಾ ಕಾಗಜ್ ಥಾ ಯೇ ಮನ್ ಮೇರಾ, ಲಿಖ್ ದಿಯಾ ನಾಮ್ ಉಸ್ ಪೇ ತೇರಾ’ ಅನ್ನೋ ಹಾಡನ್ನೇ ನಿಮ್ ಜಯಗೋಪಾಲ್ ಸಾಹೇಬ್ರು ಪದ ಗಳನ್ನು ಒಂದಿಷ್ಟು ಆಚೀಚೆ ಮಾಡಿ ‘ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ’ ಅಂತ ಬರೆದಿದ್ದಾರೆ” ಎಂದು ಕಿಚಾಯಿಸಿದರು.
ಹೀಗೆಂದವರು, ಮತ್ತೊಬ್ಬ ಚಲನಚಿತ್ರ ಗೀತಸಾಹಿತಿ ಗೀತಪ್ರಿಯರ ಅಭಿಮಾನಿ. ತಗಳ್ಳಿ ಶುರುವಾಯ್ತಲ್ಲ ಅವರಿಬ್ಬರ
ಕಿತ್ತಾಟ! ಕಿಚಾಯಿಸಿಕೊಂಡ ವ್ಯಕ್ತಿ ಸುಮ್ಮನೆ ಕೂರುವ ಜಾಯಮಾನದವರಾಗಿರಲಿಲ್ಲ; ತಮ್ಮಭಿಮಾನದ ಆರ್.
ಎನ್. ಜಯಗೋಪಾಲ್ರನ್ನು ಗೇಲಿ ಮಾಡಿದ್ದಕ್ಕೆ ಅವರು, “ಓಹೋಹೊ ಸಾಕು ಸುಮ್ನಿರ್ರಿ ರೀ, ನಿಮ್ ಗೀತಪ್ರಿಯ
ಅವರದ್ದೂ ಒಂದು ಸಾಹಿತ್ಯವಾ? ‘ಬೆಸುಗೆ’ ಚಿತ್ರದಲ್ಲಿ ‘ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ, ಜೀವನವೆ ಸುಂದರ
ಬೆಸುಗೆ’ ಅನ್ನೋ ಹಾಡು ಬರೆದಿದ್ದಾರ ಅವರು? ಅದರಲ್ಲಿ ‘ಬೆಸುಗೆ’ ಅನ್ನೋ ಪದ ಎಷ್ಟು ಸಲ ಬರುತ್ತೆ ಅಂತ ಲೆಕ್ಕ
ಹಾಕೋದ್ರೊಳಗೆ ನಮ್ ಮಿದುಳಿನ ನರಗಳ ‘ಬೆಸುಗೆ’ ಬಿಟ್ಕೊಂಡು ಹೋಗಿರುತ್ತೆ…” ಎಂದು ತಮ್ಮೆದುರಿದ್ದವರ
ಕಾಲೆಳೆದರು! ಹೀಗೆ ಒಂದಾದ ಮೇಲೊಂದು ಗೀತೆಗಳ ಕುರಿತಾಗಿ ಅವರ ಕಿತ್ತಾಟ ಮುಂದುವರಿಯಿತು…ನನ್ನ ಮನವೇಕೋ ಫ್ಲ್ಯಾಷ್ಬ್ಯಾಕ್ಗೆ ತೆರಳಿ ‘ಮಾಂಗಲ್ಯ ಭಾಗ್ಯ’ ಚಿತ್ರದ ಘಟನೆಯೊಂದನ್ನು ಮೆಲುಕು ಹಾಕಿತು.
ರಾಜನ್-ನಾಗೇಂದ್ರ ಸಂಗೀತ ನಿರ್ದೇಶನವಿದ್ದ ಈ ಚಿತ್ರದ ಗೀತೆಗಳೆಲ್ಲವೂ ಸೂಪರ್ಹಿಟ್! ಅದರಲ್ಲೂ, “ಆಸೆಯ
ಭಾವ, ಒಲವಿನ ಜೀವ, ಒಂದಾಗಿ ಬಂದಿದೆ; ಹೊಸಬಗೆ ಗುಂಗಿನ ನಿಶೆ ತಾನೇರಿದಂತಿದೆ” ಎಂಬ ಹಾಡಂತೂ ಆಗ
ಬೆಂಗಳೂರು-ಭದ್ರಾವತಿ ಆಕಾಶವಾಣಿ ಕೇಂದ್ರಗಳ ‘ಚಿತ್ರರಂಜಿನಿ’ ಎಂಬ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ
ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿತ್ತು. ಆಗೆ ಚಲನಚಿತ್ರಗಳ ಗೀತಸಾಹಿತಿ ಎಂದರೆ ಜನರು ಸಹಜವಾಗೇ
ನೆನಪಿಸಿಕೊಳ್ಳುತ್ತಿದ್ದುದು ಚಿ.ಉದಯಶಂಕರ್ ಅವರನ್ನು. ಹೀಗಾಗಿ, ಉದಯಶಂಕರ್ ಯಾವುದಾದರೂ ಕಾರ್ಯ ಕ್ರಮದಲ್ಲಿ ನೇರವಾಗಿ ಸಿಕ್ಕಾಗಲೋ, ಫೋನ್ ಅಥವಾ ಪತ್ರದ ಮೂಲಕವೋ ಅಭಿಮಾನಿಗಳು “ಆಸೆಯ ಭಾವ, ಒಲವಿನ ಜೀವ” ಹಾಡಿನ ಕುರಿತಾಗಿ ಉಖಿಸಿ “ತುಂಬಾ ಚೆನ್ನಾಗಿ ಬರೆದಿದ್ದೀರಿ” ಎಂದು ಶ್ಲಾಘಿಸುತ್ತಿದ್ದರು. ತಮಾಷೆಯೆಂದರೆ ಆ ಹಾಡನ್ನು ಬರೆದವರು ಮತ್ತೊಬ್ಬ ಸಾಹಿತಿ ವಿಜಯ ನಾರಸಿಂಹ. ಈ ಸಂಗತಿಯನ್ನು ಉದಯಶಂಕರ್ ಸಾಕಷ್ಟು ಅಭಿಮಾನಿಗಳಿಗೆ ಹೇಳಿ ಹೇಳಿ ಸುಸ್ತಾದರು!
ಕೊನೆಗೊಮ್ಮೆ ಅವರು ಸ್ವತಃ ವಿಜಯನಾರಸಿಂಹರ ಲ್ಯಾಂಡ್ಲೈನ್ಗೆ ಕರೆಮಾಡಿದರು. ವಿಜಯನಾರಸಿಂಹರು ಕರೆ ಸ್ವೀಕರಿಸಿ “ಹಲೋ” ದಾಗ, ಅತ್ತ ಕಡೆಯಿಂದ ಉದಯಶಂಕರ್ ತಾವ್ಯಾರೆಂದು ಹೇಳಿಕೊಳ್ಳದೆಯೇ, “ಹಲೋ, ಯಾರು ‘ಆಸೆಯ ಭಾವ’ನಾ ಮಾತಾಡ್ತಾ ಇರೋದು?” ಅಂತ ತಮಾಷೆಯಾಗಿ ಕೇಳಿದರು. ವಿಜಯನಾರಸಿಂಹರಿಗೆ ತಲೆಬುಡ ಅರ್ಥವಾಗದೆ, “ಇಲ್ಲ, ನಾನು ವಿಜಯನಾರಸಿಂಹ ಮಾತಾಡ್ತಾ ಇರೋದು; ನೀವು ರಾಂಗ್ ನಂಬರ್ಗೆ ಕರೆ ಮಾಡಿ ದ್ದೀರಿ…” ಎಂದು ಹೇಳಿ ಇನ್ನೇನು ಫೋನ್ ಕಟ್ ಮಾಡುವವರಿದ್ದರು.
ಅಷ್ಟರಲ್ಲಿ ಉದಯಶಂಕರ್, “ಸರ್, ಸರ್, ಕಟ್ ಮಾಡ್ಬೇಡಿ, ನಾನು ಚಿ.ಉದಯಶಂಕರ ಮಾತಾಡ್ತಾ ಇರೋದು…” ಎಂದಾಗ, ವಿಜಯನಾರಸಿಂಹರು ಹುಸಿಮುನಿಸು ಬೆರೆತ ನಗೆಯ ದನಿಯಲ್ಲಿ, “ಹಾಗಂತ ನೇರವಾಗಿ ಹೇಳೋದಲ್ವೇ ನ್ರೀ ಉದಯ, ಅದನ್ನ ಬಿಟ್ಟು ‘ಆಸೆಯ ಭಾವ’ನಾ ಮಾತಾಡ್ತಾ ಇರೋದು ಅಂತ ನಿಮ್ಮ ಭಾವನ ಬಗ್ಗೆ ಕೇಳೋದಾ?” ಅಂದ್ರು (ಆಗಲೂ ವಿಜಯನಾರಸಿಂಹರಿಗೆ, ಈ ಉದಯಶಂಕರ್ ತಮ್ಮ ‘ಆಸೆಯ ಭಾವ’ ಗೀತೆಯ ಬಗ್ಗೆ ಮಾತಾಡ್ತಿ ರೋದು ಅನ್ನೋದು ಗೊತ್ತಾಗಿರಲಿಲ್ಲವಂತೆ!). ಅವರ ಗೊಂದಲವನ್ನು ಲಪಕ್ಕನೆ ಗ್ರಹಿಸಿದ ಉದಯ ಶಂಕರ್, “ಸರ್, ನಾನು ಮಾತಾಡ್ತಿರೋದು ನಮ್ಮ ಭಾವನ ಬಗ್ಗೆ ಅಲ್ಲ, ‘ಮಾಂಗಲ್ಯಭಾಗ್ಯ’ ಚಿತ್ರದಲ್ಲಿ ನೀವು ಬರೆದಿರೋ ‘ಆಸೆಯ ಭಾವ’ ಗೀತೆಯ ಬಗ್ಗೆ. ಅಭಿಮಾನಿಗಳೆಲ್ಲರೂ ಅದು ನನ್ನ ಗೀತೆ ಅಂದ್ಕೊಂಡು ನನಗೆ ಮೆಚ್ಚುಗೆ-ಶುಭಾಶಯ ಕಳಿಸ್ತಾ ಇದ್ದಾರೆ.
ತಗೊಳ್ಳಿ, ಈ ಫೋನ್ ಮೂಲಕವೇ ಅದಷ್ಟನ್ನೂ ನಿಮಗೆ ವರ್ಗಾಯಿಸುತ್ತಿದ್ದೇನೆ. ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಸರ್. ಹೆಣ್ಣನ್ನು ಅದೆಷ್ಟು ಕಾವ್ಯಾತ್ಮಕವಾಗಿ ಬಣ್ಣಿಸಿದ್ದೀರಿ, ಏನ್ ಕಥೆ. ಚಿತ್ರಗೀತೆಯಾದರೂ ಇದು ಯಾವ ರಮ್ಯಕವಿತೆ ಗಿಂತ ಕಮ್ಮಿ ಸರ್? ಸಂಗೀತ ನಿರ್ದೇಶಕರು ನೀಡೋ ಟ್ಯೂನ್, ಮೀಟರ್ ಮತ್ತು ತಾಳ-ಗತಿಯನ್ನು ಇಟ್ಕೊಂಡು, ಒತ್ತಡದ ತುರ್ತಿನ ಇಂಥ ಗೀತೆ ಬರೆಯೋದು ನಿಜಕ್ಕೂ ಸವಾಲು ಸರ್. ಆ ಕಲೆ ನಿಮಗೆ ಸಿದ್ಧಿಸಿದೆ. ನಿಮ್ಮಂಥ ಗೀತರಚನೆಕಾರರ ಕಾಲದ ನಾನೂ ಇದ್ದೀನಿ ಅನ್ನೋದು ನನ್ನ ಪುಣ್ಯ ಸರ್” ಎಂದು ಮನದುಂಬಿ ಶ್ಲಾಸಿದರಂತೆ.
ಫೋನಿನ ಈ ಬದಿಯಲ್ಲಿ ಈ ಮಾತು ಕೇಳಿಸಿಕೊಳ್ಳುತ್ತಿದ್ದ ವಿಜಯನಾರಸಿಂಹರ ಕಣ್ಣುಗಳು ಅಷ್ಟೊತ್ತಿಗಾಗಲೇ ಅಕ್ಷರಶಃ ಕೊಳಗಳಾಗಿದ್ದವು! ಗೀತರಚನೆಯಂಥ ಒಂದೇ ಕ್ಷೇತ್ರದಲ್ಲಿ ದುಡಿಯುತ್ತಿದ್ದರೂ ಅವರಿಬ್ಬರಲ್ಲಿ ‘ವೃತ್ತಿಮತ್ಸರ’ ಇರಲಿಲ್ಲ; ವೃತ್ತಿಯಲ್ಲಿ ಸಹಜವಾಗಿರುವ ಸ್ಪರ್ಧೆಯನ್ನೂ ಮೀರಿದ ಮಮತೆ-ವಾತ್ಸಲ್ಯ, ಆಪ್ಯಾಯತೆ ಅವರಿಬ್ಬರಲ್ಲಿ ಕೆನೆಗಟ್ಟಿತ್ತು! ಈ ಪ್ರಸಂಗ ನೆನಪಾಗೋದಕ್ಕೆ ಇನ್ನೂ ಒಂದು ಕಾರಣವಿದೆ. ಚಲನಚಿತ್ರ ರಸಿಕರು ತಂತಮ್ಮ ಮೆಚ್ಚಿನ ನಟನ ಕುರಿತಾಗಿ ಆರಾಧನಾ ಭಾವವನ್ನು ಬೆಳೆಸಿಕೊಳ್ಳುವುದಿದೆ. ಒಬ್ಬೊಬ್ಬ ನಾಯಕನಟ ಒಂದೊಂದು ಗುಂಪಿಗೆ ಮೆಚ್ಚುಗೆಯಾಗಬಹುದು. ಇದರಲ್ಲಿ ತಪ್ಪೇನಿಲ್ಲ, ಆದರೆ ಅದು ಅತಿರೇಕಕ್ಕೆ ಹೋಗಿ, ಇಬ್ಬರ ಅಭಿಮಾನಿಗಳೂ ಪರಸ್ಪರರನ್ನು ದ್ವೇಷಿಸುವ, ಕತ್ತಿಮಸೆಯುವ ಹಂತಕ್ಕೆ ಹೋಗುವುದಿದೆಯ, ಅದು ಮಾತ್ರ ಅಪಾಯಕಾರಿ. ‘ಗಂಧದಗುಡಿ’ ಚಲನಚಿತ್ರದಲ್ಲಿನ ಗುಂಡು ಹಾರಿಸುವ ದೃಶ್ಯದಲ್ಲಿ ಆದ ಎಡವಟ್ಟು ಹಾಗೂ
ಅದರ ಸುತ್ತಮುತ್ತ ಹಬ್ಬಿಕೊಂಡ ಅಪಪ್ರಚಾರಗಳ ಕಾರಣದಿಂದಾಗಿ ಡಾ.ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್
ಅಭಿಮಾನಿಗಳು ದಶಕಗಳವರೆಗೆ ಕಿತ್ತಾಡುವಂತಾಯಿತು.
ಸಾಲದೆಂಬಂತೆ, 1981ರ ಡಿಸೆಂಬರ್ನಲ್ಲಿ ಅಣ್ಣಾವ್ರ ‘ಕೆರಳಿದ ಸಿಂಹ’ ಚಿತ್ರ ಬಿಡುಗಡೆಯಾಗಿ, 1982ರ ಫೆಬ್ರವರಿ ಯಲ್ಲಿ ವಿಷ್ಣುವರ್ಧನ್ ಅವರ ‘ಸಾಹಸಸಿಂಹ’ ಚಿತ್ರ ಬಿಡುಗಡೆಯಾದಾಗಲೂ, ಈ ಎರಡೂ ಶೀರ್ಷಿಕೆಗಳಲ್ಲಿ ‘ಸಿಂಹ’ ಎಂಬುದು ‘ಕಾಮನ್ ಫ್ಯಾಕ್ಟರ್’ ಆಗಿದ್ದನ್ನು ಕಂಡು ಕೆಲವರು, “ಮೊದಲ ಚಿತ್ರಕ್ಕೆ ಪ್ರತ್ಯುತ್ತರ ನೀಡಲೆಂದೇ ಎರಡನೇ ಚಿತ್ರಕ್ಕೆ ಹಾಗಂತ ಹೆಸರಿಡಲಾಗಿದೆ” ಎಂಬರ್ಥದಲ್ಲಿ ಗಾಳಿಸುದ್ದಿ ಹಬ್ಬಿಸಿದ್ದುಂಟು ಮತ್ತು ಅದು ಕೆಲಕಾಲ ಅಭಿಮಾನಿಗಳ ನಡುವೆ ಶೀತಲಸಮರಕ್ಕೂ ಕಾರಣವಾಗಿದ್ದುಂಟು. ಆದರೆ, ‘ಗಂಧದಗುಡಿ’ ಚಿತ್ರದ ನಂತರ ಡಾ.ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಮತ್ತೆ ಜತೆಯಾಗಿ ನಟಿಸಲಿಲ್ಲ ಎನ್ನುವುದನ್ನು ಬಿಟ್ಟರೆ, ವೈಯಕ್ತಿಕ ನೆಲೆಯಲ್ಲಿ ಉತ್ತಮ ಬಾಂಧವ್ಯವನ್ನೇ ಹೊಂದಿದ್ದರು.
ಅದರಲ್ಲೂ ವಿಷ್ಣುವರ್ಧನ್ರ ‘ಯಜಮಾನ’ ಚಿತ್ರವನ್ನು ವೀಕ್ಷಿಸಿದ ನಂತರ ಅಣ್ಣಾವ್ರು, ವಿಷ್ಣುರನ್ನು ಮುಖತಃ ಭೇಟಿಯಾಗಬೇಕು ಎಂದು ಇನ್ನಿಲ್ಲದಂತೆ ಹಂಬಲಿಸಿದ್ದುಂಟು. ಒಟ್ಟಾರೆ ಹೇಳುವುದಾದರೆ, ‘ಗಂಧದಗುಡಿ’
ಪ್ರಕರಣದ ತರುವಾಯದ ಕಾಲಘಟ್ಟದ ವಿವಿಧ ಸಂದರ್ಭಗಳಲ್ಲೂ ವೈಯಕ್ತಿಕ ನೆಲೆಯಲ್ಲಿ ರಾಜ್ಕುಮಾರ್
ಮತ್ತು ವಿಷ್ಣುವರ್ಧನ್ರ ನಡುವಿನ ಸಂಬಂಧ ಚೆನ್ನಾಗೇ ಇತ್ತು (ವಾಸ್ತವವಾಗಿ, ಅಣ್ಣಾವ್ರ ‘ಕವಿರತ್ನ ಕಾಳಿದಾಸ’ ಚಿತ್ರದ ಭೋಜರಾಜನ ಪಾತ್ರವನ್ನು ವಿಷ್ಣುವರ್ಧನ್ ನಿರ್ವಹಿಸಬೇಕಾಗಿತ್ತಂತೆ, ಅಣ್ಣಾವ್ರಿಗೂ ಆ ಬಯಕೆ ಇತ್ತಂತೆ; ಆದರೆ ಅಷ್ಟರಗಲೇ ಪಾರ್ವತಮ್ಮನವರು ಶ್ರೀನಿವಾಸಮೂರ್ತಿ ಯವರಿಗೆ ಪ್ರಾಮಿಸ್ ಮಾಡಿದ್ದರಿಂದ ವಿಷ್ಣು ಅವರಿಗೆ ಆ ಅವಕಾಶ ತಪ್ಪಿತು ಎನ್ನಲಾಗುತ್ತದೆ).
ಇಲ್ಲಿ ಸಿನಿಮಾ ಕ್ಷೇತ್ರವನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿದೆಯಷ್ಟೇ. ಹಾಗೆ ನೋಡಿದರೆ, ರಾಜಕಾರಣ, ಸಾಹಿತ್ಯ ಸೇರಿದಂತೆ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಆಯಾ ಕಾಲಘಟ್ಟದ ಘಟಾನುಘಟಿಗಳ ನಡುವೆ ಸಹಜ ವಾಗಿಯೇ ವೃತ್ತಿಸಹಜ ಸ್ಪರ್ಧೆ/ಪೈಪೋಟಿ ಇರುತ್ತವೆ ಮತ್ತು ಅವು ಆರೋಗ್ಯಕರವಾಗಿದ್ದಲ್ಲಿ ಉತ್ತಮ ಕೆಲಸ/ಕೃತಿ ಹೊಮ್ಮುವುದಕ್ಕೆ ಕಾರಣವಾಗುತ್ತವೆ. ಇಂಥ ಸ್ಪರ್ಧೆಯಲ್ಲಿ ತೊಡಗಿದ ‘ಆಟಗಾರರು’ ಬಹುತೇಕವಾಗಿ ವೈಯಕ್ತಿಕ
ನೆಲೆಯಲ್ಲಿ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿರುತ್ತಾರೆ; ಆದರೆ ಆ ಪೈಪೋಟಿಯನ್ನು ‘ಹಳದಿ ಕಣ್ಣು’ಗಳಲ್ಲಿ ಕಂಡು ಹುಳಿ ಹಿಂಡುವವರ ಮಾತನ್ನೇ ನಿಜವೆಂದು ನಂಬುವ ಅಭಿಮಾನಿಗಳು-ಅನುಯಾಯಿಗಳು ವಿನಾಕಾರಣ ಕಿತ್ತಾಡಿ, ಸ್ನೇಹ-ಸಂಬಂಧವನ್ನು ಹುಳಿಯಾಗಿಸಿಕೊಳ್ಳುತ್ತಾರೆ. ಇದು ಬೇಕಾ?
(ಲೇಖಕರು ಪತ್ರಕರ್ತರು)