Sunday, 22nd December 2024

Yagati Raghu Nadig Column: ಸ್ನೇಹ ಅತಿಮಧುರ, ಸ್ನೇಹ ಅದು ಅಮರ…

ರಸದೌತಣ

ಯಗಟಿ ರಘು ನಾಡಿಗ್

“ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು, ಜೀವನದ ನಂತ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು, ಗೆಳೆತನವೆ ಇಹಲೋಕಕಿರುವ ಅಮೃತ, ಅದನುಳಿದರೇನಿಹುದು ಜೀವನ್‌ಮೃತ” ಎಂದಿದ್ದಾರೆ ಕವಿ ಚೆನ್ನವೀರ ಕಣವಿಯವರು. ಗೆಳೆತನಕ್ಕಿರುವ ಮಹತ್ವ, ಅದರ ಸವಿರುಚಿಯನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಬಣ್ಣಿಸಲು ಸಾಧ್ಯವಿಲ್ಲವೇನೋ…

ಗೆಳೆತನ ಎಂದಾಕ್ಷಣ ನೆನಪಿಗೆ ಬರುವಂಥದ್ದು, ಮಹಾಭಾರತದಲ್ಲಿ ದುರ್ಯೋಧನ ಮತ್ತು ಕರ್ಣರ ನಡುವೆ ರೂಪು ಗೊಂಡಿದ್ದ ಅಸೀಮ ಬಾಂಧವ್ಯ. ಕೌರವರು ಮತ್ತು ಪಾಂಡ ವರ ಶಸ್ತ್ರವಿದ್ಯಾ ಪ್ರದರ್ಶನ ನಡೆಯುವಾಗ ಅಪರಿಚಿತ ನಾಗಿ -ಅಭ್ಯಾಗತನಾಗಿ ಅಖಾಡಕ್ಕೆ ಆಗಮಿಸುವ ಕರ್ಣ, ಅದುವರೆಗೂ ಸರ್ವರ ಮೆಚ್ಚುಗೆಗೆ ಪಾತ್ರನಾಗಿದ್ದ ಅರ್ಜುನ ನನ್ನು ತಾನು ಎದುರಿಸುವುದಾಗಿ ಸವಾಲೆಸೆಯುತ್ತಾನೆ. ಆದರೆ ಕೃಪಾಚಾರ್ಯರು, “ಸೂತಪುತ್ರ ಕರ್ಣನನ್ನು ಅರ್ಜುನ ನಿಗೆ ಸರಿಸಮನಾಗಿ ಪರಿಗಣಿಸಲಾಗದು” ಎಂದು ವಿರೋಧಿಸುತ್ತಾರೆ. ಅಷ್ಟು ಹೊತ್ತಿಗಾಗಲೇ ಭೀಮನಿಂದ ಸೋಲುಂಡು ಕೊತಕೊತ ಕುದಿಯುತ್ತಿದ್ದ ದುರ್ಯೋಧನ ಈ ವಿರೋಧದ ಮಾತು ಕೇಳುತ್ತಿದ್ದಂತೆಯೇ ಎದ್ದು ಬಂದು ಕರ್ಣನ ಪರ ನಿಂತು, ಸ್ಥಳದಲ್ಲೇ ಅವನನ್ನು ಅಂಗರಾಜ್ಯದ ಅಧಿಪತಿಯಾಗಿ ಘೋಷಿಸುತ್ತಾನೆ. ದುರ್ಯೋ ಧನನ ಮೇಲೆ ಕರ್ಣನಿಗೆ ಗೌರವಾದರಗಳು ಮೂಡುವುದಕ್ಕೆ ಈ ಘಟನೆ ಕಾರಣ ಗುತ್ತದೆ. ಕ್ರಮೇಣ ಅವರಿಬ್ಬರ ನಡುವೆ ‘ರಾಜಪದವಿ’ ಯನ್ನೂ ಮೀರಿದ ಸ್ನೇಹ ಬೆಳೆಯುತ್ತದೆ.

ದಿನಗಳೆದಂತೆ ಈ ನಂಟು ಅದೆಷ್ಟು ಗಟ್ಟಿಯಾಗುತ್ತದೆಯೆಂದರೆ, ಪತ್ನಿ ಭಾನುಮತಿಯೊಂದಿಗೆ ದುರ್ಯೋಧನ
ಅಂತಃಪುರದಲ್ಲಿರುವಾಗಲೂ ಅಲ್ಲಿಗೆ ಧಾರಾಳವಾಗಿ ಪ್ರವೇಶಿಸುವಷ್ಟರ ಮಟ್ಟಿಗಿನ ಸ್ವಾತಂತ್ರ್ಯ ಕರ್ಣನಿಗೆ ಸಿಗುತ್ತದೆ. ಇದಕ್ಕೆ ಕಾರಣ, ಕರ್ಣನ ಮೇಲೆ, ಅವನ ಗೆಳೆತನದ ಮೇಲೆ ದುರ್ಯೋಧನನಿಗಿದ್ದ ಅಚಲ ನಂಬಿಕೆ ಮತ್ತು ಭಾನು ಮತಿಗೆ ಕರ್ಣನ ಮೇಲಿದ್ದ ಅಚಲ ವಿಶ್ವಾಸ. ಹೀಗಾಗಿ ಈ ಮೂವರೂ ನಿಜಾರ್ಥದ ಗೆಳೆಯರೇ ಆಗಿ ಬಿಡುತ್ತಾರೆ. ಪರಸ್ಪರರ ಸಂಗತಿ ಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಹಂಚಿಕೊಳ್ಳುವಷ್ಟರ ಮಟ್ಟಿಗಿನ ನಂಬಿಕೆ-ವಿಶ್ವಾಸ ಅವರ ನಡುವೆ ಕೆನೆಗಟ್ಟುತ್ತದೆ, ಸದರ ಮೂಡುತ್ತದೆ.

ಒಮ್ಮೆ ಕರ್ಣನು ದುರ್ಯೋಧನನ ಅಂತಃಪುರಕ್ಕೆ ಬಂದಾಗ ಭಾನುಮತಿ ಒಬ್ಬಳೇ ಇರುತ್ತಾಳೆ. ಸಾಕಷ್ಟು ಹೊತ್ತು ನಿರೀಕ್ಷಿಸಿದರೂ ದುರ್ಯೋಧನನ ಸುಳಿವಿಲ್ಲ. ಆತ ಬರುವವರೆಗೆ ಪಗಡೆಯನ್ನಾದರೂ ಆಡೋಣ ಎಂದು ಕರ್ಣ-ಭಾನುಮತಿ ನಿರ್ಧರಿಸುತ್ತಾರೆ. ಆಟ ಕಾವೇರುತ್ತಿದ್ದಂತೆ ಭಾನುಮತಿಗೆ ತಾನು ಸೋಲುವುದು ನಿಶ್ಚಿತ ಎಂದೆನಿಸಿ, ಅರ್ಧದಲ್ಲೇ ಆಟವನ್ನು ಕೈಬಿಟ್ಟು ಮೇಲೇಳುತ್ತಾಳೆ. ಆದರೆ ಮತ್ತೆ ಆಟಕ್ಕೆ ಕೂರಿಸಿಕೊಳ್ಳುವ ‘ಬಲವಂತದ ಯತ್ನ ವಾಗಿ’ ಕರ್ಣ ಅವಳನ್ನು ಎಳೆದಾಗ, ಆ ಕೊಸರಾಟದಲ್ಲಿ ಆಕೆಯ ಸೊಂಟದಲ್ಲಿದ್ದ ಮುತ್ತಿನ ಡಾಬು ನೆಲಕ್ಕೆ ಅಪ್ಪಳಿಸಿ ಅದರ ಮುತ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಚೆಲ್ಲಾಡುತ್ತವೆ. ಅದೇ ಸಮಯಕ್ಕೆ ದುರ್ಯೋಧನ ಅಲ್ಲಿಗೆ ಬಂದುಬಿಡು ತ್ತಾನೆ…!

ಅಂತಃಪುರದಲ್ಲಿ ಅರೆಕ್ಷಣ ಮೌನಸಾಮ್ರಾಜ್ಯ. ಮೂವರಲ್ಲೂ ಮಾತಿಲ್ಲ ಕಥೆಯಿಲ್ಲ. ನೆಲದ ಮೇಲೆ ಚೆಲ್ಲಾಡಿರುವುದು
ಮುತ್ತಿನ ಮಣಿಗಳು, ಅವು ಅಡಕವಾಗಿದ್ದು ಡಾಬಿನಲ್ಲಿ ಆ ಡಾಬು ಬಿಗಿದುಕೊಂಡಿದ್ದು ಭಾನುಮತಿಯ ಸೊಂಟ ದಲ್ಲಿ, ಅದು ಕಿತ್ತು ಆಚೆ ಬಂದಿದ್ದು ಕರ್ಣ-ಭಾನುಮತಿಯರ ನಡುವಿನ ಕೊಸರಾಟದಲ್ಲಿ…. ಈ ವೇಳೆ ಅವರಿಬ್ಬರಲ್ಲಿ ಅದ್ಯಾವ ಭಾವ ಗಿರಕಿ ಹೊಡೆಯುತ್ತಿದ್ದಿರಬಹುದು ಒಮ್ಮೆ ಕಲ್ಪಿಸಿಕೊಳ್ಳಿ!

“ನನ್ನನ್ನು, ನನ್ನ ಸ್ನೇಹವನ್ನು ಅಪಾರವಾಗಿ ನಂಬಿದ್ದ ದುರ್ಯೋಧನ ಈ ಘಟನೆಯಿಂದಾಗಿ ನನ್ನನ್ನು ತಪ್ಪಾಗಿ
ತಿಳಿದುಕೊಂಡನೇ? ಇದರಿಂದಾಗಿ ನಮ್ಮಿಬ್ಬರ ನಡುವಿನ ಸ್ನೇಹ ಸಮಾಪ್ತಿಯಾಗುವುದೇ?” ಎಂಬ ಕಸಿವಿಸಿ ಕರ್ಣನಲ್ಲಿ
ಕೆನೆಗಟ್ಟಿದ್ದರೆ, “ಗಂಡನಿಲ್ಲದ ವೇಳೆ ಪರಪುರುಷನೊಂದಿಗೆ ‘ಪಗಡೆಯಾಟ’ಕ್ಕೆ ಕೂತಿದ್ದೂ ಅಲ್ಲದೆ, ಸೊಂಟದ ಡಾಬು
ಕಳಚುವಷ್ಟರ ಮಟ್ಟಿಗಿನ ‘ಕೊಸರಾಟ’ಕ್ಕೆ ಒಡ್ಡಿಕೊಂಡಳಲ್ಲಾ… ಎಂದು ಪತಿಯು ತನ್ನ ಚಾರಿತ್ರ್ಯವನ್ನು ಶಂಕಿಸ ಬಹುದೇ” ಎಂಬ ತಲ್ಲಣ ಭಾನುಮತಿಯಲ್ಲಿ ಹರಳುಗಟ್ಟಿರುತ್ತದೆ. ಆದರೆ ದುರ್ಯೋಧನ ಇಂಥ ಯಾವ ಭಾವಕ್ಕೂ ಆಸ್ಪದ ಕೊಡದೆ, ಆ ಬೆಳವಣಿಗೆಗೆ ತಲೆಯನ್ನೇ ಕೆಡಿಸಿಕೊಳ್ಳದೆ, “ಕೆಳಗೆ ಬಿದ್ದ ಮುತ್ತುಗಳನ್ನು ಆರಿಸಿಕೊಡಲೇ ಅಥವಾ ಪೋಣಿಸಿ ಕೊಡಲೇ?” ಎಂದು ಕೇಳಿ ಸಂದರ್ಭವನ್ನು ತಿಳಿಯಾಗಿಸುತ್ತಾನೆ. ಇದು ಪತ್ನಿ ಭಾನುಮತಿ ಮತ್ತು ಮಿತ್ರ ಕರ್ಣನಲ್ಲಿ ದುರ್ಯೋಧನ ಇಟ್ಟಿದ್ದ ನಂಬಿಕೆ-ವಿಶ್ವಾಸಗಳ ತಾಕತ್ತು, ಹಕೀಕತ್ತು! ಬೇರೊಬ್ಬ ಆಗಿದ್ದಿದ್ದರೆ, ಕರ್ಣ ಮತ್ತು ಭಾನುಮತಿ ತಲ್ಲಣಿಸಿ ಕಲ್ಪಿಸಿಕೊಂಡಂತೆಯೇ ಆಗಿಬಿಡುತ್ತಿತ್ತೇನೋ?!

ಆದರೆ ಈ ಘಟನೆಗೆ ಸಾಕ್ಷಿಯಾಗಿದ್ದವನು ಕೌರವ. ಆತ ‘ಛಲದೊಳ್ ದುರ್ಯೋಧನ” ಆಗಿದ್ದರ ಜತೆಗೆ, ನಂಬಿಕೆ-
ವಿಶ್ವಾಸದ ತಳಹದಿಯಿದ್ದ ‘ಸ್ನೇಹಸೌಧ’ದ ನಿರ್ಮಾತೃವೂ ಆಗಿದ್ದ. ಹೀಗಾಗಿ ದುರ್ಯೋಧನ ಲವಲೇಶವೂ ಶಂಕಿಸ ಲಿಲ್ಲ. ಈ ವೈಶಿಷ್ಟ್ಯದಿಂದಾಗಿಯೇ ಅವನ ಮೇಲಿನ ಕರ್ಣನ ಗೌರವ ಮತ್ತಷ್ಟು ಹೆಚ್ಚಾಯಿತು, ಗೆಳೆತನದ ನಂಟು ಗಟ್ಟಿಯಾಗುತ್ತಲೇ ಹೋಯಿತು. ಕುರುಕ್ಷೇತ್ರದ ರಕ್ತರಂಜಿತ ಕೆಸರಲ್ಲಿ ಕರ್ಣನ ರಥದ ಚಕ್ರವು ಹೂತುಹೋಗಿ, ಆತ ಅಸಹಾಯಕನಾಗಿ ಸೋತು-ಸತ್ತು, ದುರ್ಯೋಧನನ ಪಾಳಯದ ಸೋಲು ಖಾತ್ರಿಯಾಗುವವರೆಗೂ ಅವರಿಬ್ಬರ ನಡುವಿನ ಈ ನಂಟು ಗಟ್ಟಿಯಾಗೇ ಇತ್ತು…

ಸ್ನೇಹದ ನಂಟು ಏನೆಲ್ಲಾ ಅದ್ಭುತ ಕಥನಗಳಿಗೆ ‘ಮುನ್ನುಡಿ’ ಬರೆಯಬಲ್ಲದು ಎಂಬುದನ್ನು ಹೇಳಲಿಕ್ಕೆ ಈ ಸುದೀರ್ಘ ಪೀಠಿಕೆ ನೀಡಬೇಕಾಯಿತು. ಸ್ನೇಹದ ಮಹತ್ವವನ್ನು ಸಾರುವ ಪ್ರಸಂಗಗಳು ಸಾಕಷ್ಟಿವೆ. ಶ್ರೀಕೃಷ್ಣ ಮತ್ತು ಕುಚೇಲ, ಭೋಜ ರಾಜ ಮತ್ತು ಕವಿರತ್ನ ಕಾಳಿದಾಸ ಇವರುಗಳ ನಡುವೆ ಅರಳಿ ಹೂವಾಗಿ, ಸಾಮಾಜಿಕ ಶ್ರೇಣೀ ಕರಣವನ್ನೂ, ಸಿರಿತನ- ಬಡತನವನ್ನೂ ಮೀರಿ ಬೆಳೆದ ಗೆಳೆತನ ಇದಕ್ಕೆ ಮತ್ತೆರಡು ಉದಾಹರಣೆ.

***

ಇತ್ತೀಚಿನ ದಶಕಗಳಲ್ಲಿನ ಇಂಥ ಒಂದಷ್ಟು ನಿರ್ದಶನ ಗಳನ್ನು ಪರಿಗಣಿಸಿದರೆ, ‘ಆಣ್ಣಾವ್ರು’ ಎಂದೇ ಅಭಿಮಾನದಿಂದ
ಕರೆಯಲ್ಪಡುವ ಖ್ಯಾತ ಕಲಾವಿದ ಡಾ.ರಾಜ್‌ಕುಮಾರ್ ಮತ್ತು ಚಲನಚಿತ್ರ ಸಾಹಿತಿ ಚಿ.ಉದಯಶಂಕರ್ ನಡುವಿನ
ಸುದೀರ್ಘ ಸ್ನೇಹ ನೆನಪಾಗುತ್ತದೆ. ಅದರಲ್ಲೂ, ‘ಅಣ್ಣಾವ್ರ’ ಸಂಸ್ಥೆಯು ಚಲನಚಿತ್ರ ನಿರ್ಮಾಣದಲ್ಲಿ ಸಕ್ರಿಯವಾದ
ಮೇಲಂತೂ, ಗೀತರಚನೆ ಮಾತ್ರವಲ್ಲದೆ ಕಥೆ-ಚಿತ್ರಕಥೆ- ಸಂಭಾಷಣೆ ವಿಭಾಗಗಳಿಗೂ ಸಂಸ್ಥೆಗೆ ಉದಯಶಂಕರ್
ಅನಿವಾರ್ಯವಾಗಿಬಿಟ್ಟರು. ಇದಕ್ಕೆ ಉದಯಶಂಕರರ ಜನ್ಮಜಾತ ಪ್ರತಿಭೆ ಒಂದು ಕಾರಣವಾದರೆ, ಸ್ನೇಹದ ಹಣೆ
ಪಟ್ಟಿಯಡಿ ‘ಅಣ್ಣಾವ್ರು’ ಅವರ ಮೇಲಿಟ್ಟಿದ್ದ ನಂಬಿಕೆ ಮತ್ತೊಂದು ಕಾರಣವಾಗಿತ್ತು. ಚಿತ್ರನಿರ್ಮಾಣ ಸಂಬಂಧ
ವಾಗಿ ಬೇರೆ ಯಾರೋ ಹೇಳಿದಾಗ ಇಷ್ಟವಾಗದಿದ್ದ ಕಥೆಯು, ಉದಯಶಂಕರ್ ಹೇಳಿದಾಕ್ಷಣ ಅಣ್ಣಾವ್ರಿಗೆ ಮತ್ತು
ಪಾರ್ವತಮ್ಮನವರಿಗೆ ಇಷ್ಟವಾಗಿಬಿಡುತ್ತಿತ್ತಂತೆ. ಇದಕ್ಕೆ ಕಾರಣ, ಕಥೆ ಹೇಳುವಾಗ ಅಣ್ಣಾವ್ರ ಚಹರೆ, ದೇಹಭಾಷೆ ಮತ್ತು ಭಾವಾಭಿವ್ಯಕ್ತಿಯ ತಾಕತ್ತನ್ನು ಗಮನ ದಲ್ಲಿರಿಸಿಕೊಂಡು ಉದಯಶಂಕರ್ ಅವರು ಅದಕ್ಕೆ ತುಂಬುತ್ತಿದ್ದ ರಂಜನೀಯ ಅಂಶಗಳು ಮತ್ತು ಪ್ರೇಕ್ಷಕರನ್ನು ಎರಡೂವರೆ ಗಂಟೆ ಹಿಡಿದಿಟ್ಟುಕೊಳ್ಳಲು ಅನುವಾಗುವಂತೆ ಕಥಾನಿರೂಪಣೆಗೆ ಅವರು ನೀಡುತ್ತಿದ್ದ ‘ಟ್ವಿಸ್ಟ್’ಗಳು. ಹೀಗಾಗಿ, ಒಂದು ಘಟ್ಟ ದಲ್ಲಿ ಸಂಸ್ಥೆಯಿಂದ ನಿರಾಕರಿಸಲ್ಪಟ್ಟ ಕಥೆಯೂ ಉದಯ ಶಂಕರರ ‘ತಾಂತ್ರಿಕ’ ಮತ್ತು ‘ಮಾಂತ್ರಿಕ’ ಸ್ಪರ್ಶದಿಂದಾಗಿ ಸ್ವೀಕೃತವಾಗಿ ಬಿಡುತ್ತಿತ್ತು. ಇದು ಚಿತ್ರಕಥೆ-ಸಂಭಾಷಣೆಗಳ ರಚನೆಯನ್ನೂ, ಕಲಾವಿದರ ಅಭಿನಯದ ಭಾಗವನ್ನೂ ಸಲೀಸುಮಾಡಿಬಿಡುತ್ತಿತ್ತು. ‘ಆಕಸ್ಮಿಕ’ದಂಥ ಕೈಬೆರಳೆಣಿಕೆಯ ಚಿತ್ರಗಳಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಹಂಸಲೇಖಾರ ಪ್ರವೇಶವಾಗಿದ್ದು ಬಿಟ್ಟರೆ, ಸಂಸ್ಥೆ ನಿರ್ಮಿಸಿದ ಅಣ್ಣಾವ್ರ ಅಭಿನಯದ ಬಹುತೇಕ ಚಿತ್ರಗಳಲ್ಲಿದ್ದುದು ಉದಯಶಂಕರರ ಕೈವಾಡವೇ. ಅಷ್ಟರಮಟ್ಟಿಗೆ ಅವರು ‘ದೊಡ್ಮನೆ’ಗೆ ಅನಿವಾರ್ಯವಾಗಿಬಿಟ್ಟಿದ್ದರು. ಆದರೆ, All good things must come to an end ಎಂಬ ಮಾತಿನಂತೆ ‘ಉದಯ’ಶಂಕರ್ ‘ಅಸ್ತಂಗತ’ರಾದಾಗ ಅಣ್ಣಾವ್ರ ಚಿತ್ರಸಂಸ್ಥೆ ಕಂಗಾಲಾಗಿದ್ದುಂಟು. ಕಾರಣ, ರಾಜಣ್ಣನ ಅಭಿನಯದ ‘ಒಡಹುಟ್ಟಿದವರು’ ಚಿತ್ರದ ‘ಸ್ಕ್ರಿಪ್ಟ್’ ಅನ್ನು ಉದಯ ಶಂಕರರು ಕಟ್ಟಿಕೊಟ್ಟಿದ್ದು ಹೌದಾದರೂ, ಮಿಕ್ಕ ಕೆಲ ಕಾರ್ಯ ಗಳು ಅಪೂರ್ಣವಾಗಿದ್ದವು. ಚಿತ್ರಕ್ಕೆ ಒಂದು ಹಾಡನ್ನೇನೋ ಅವರು ಬರೆದಿಟ್ಟಿ ದ್ದರು; ಆದರೆ ಮಿಕ್ಕ ಹಾಡುಗಳಿಗಾಗಿ ಸಂಸ್ಥೆಯು ವಿಜಯನಾರಸಿಂಹ, ಗೀತಪ್ರಿಯ, ಶ್ರೀರಂಗ, ಎಂ.ಎನ್.ವ್ಯಾಸರಾವ್ ಮತ್ತು ಹಂಸಲೇಖಾರನ್ನು ನೆಚ್ಚಬೇಕಾಗಿ ಬಂತು. ಈ ಮಿಕ್ಕವರು ಪ್ರತಿಭಾವಂತ ರಲ್ಲ ಅಂತಲ್ಲ; ಆದರೆ ಅದುವರೆಗೂ ವಿವಿಧ ನೆಲೆಯಲ್ಲಿ ಉದಯಶಂಕರರನ್ನೇ ನೆಚ್ಚಿದ್ದ ಅಣ್ಣಾವ್ರ ಚಿತ್ರಸಂಸ್ಥೆಗೆ ಅವರ ಅಗಲಿಕೆ ದುಬಾರಿಯಾಗಿ ಪರಿಣಮಿಸಿದ್ದಂತೂ ನಿಜ.

ಹಿಂದಿ ಚಿತ್ರರಂಗದ ‘ಷೋಮ್ಯಾನ್’ ರಾಜ್ ಕಪೂರ್ ಮತ್ತು ಹಿನ್ನೆಲೆ ಗಾಯಕ ಮುಖೇಶ್ ನಡುವೆಯಿದ್ದದ್ದೂ ವ್ಯವಹಾರವನ್ನೂ ಮೀರಿದ ನಂಟೇ. ರಾಜ್ ಕಪೂರರ ಹಾಡಿನ ಅಭಿನಯಕ್ಕೆ ಮುಖೇಶರ ಗಾಯನವಿಲ್ಲದಿದ್ದರೆ ಆ ಪ್ರಸ್ತುತಿ ಅಪೂರ್ಣ ಎಂದು ಅಭಿಮಾನಿಗಳು ಮತ್ತು ಚಿತ್ರೋದ್ಯಮಿಗಳು ಪರಿಭಾವಿಸು ವಷ್ಟರ ಮಟ್ಟಿಗೆ ಅವರಿಬ್ಬರ ಬಾಂಧವ್ಯ ಅನನ್ಯವಾಗಿತ್ತು. ಆದರೆ ಮುಖೇಶ್ ತೀರಿಕೊಂಡಾಗ, “ನನ್ನ ದನಿಯನ್ನೇ ಕಳೆದುಕೊಂಡುಬಿಟ್ಟೆ” ಎಂದು ರಾಜ್ ಕಪೂರ್ ಪ್ರಲಾಪಿಸಿದ್ದುಂಟು. ಮಾತ್ರವಲ್ಲ, ಯಾವತ್ತಿಗೂ ರಾಜ್ ಕಪೂರರ ಆಯ್ಕೆಯ/ಮೆಚ್ಚಿನ ಸಂಗೀತ ನಿದೇಶಕರೆನಿಸಿ ಕೊಂಡಿದ್ದು ‘ಶಂಕರ್-ಜೈಕಿಶನ್’; ‘ಬರ್ಸಾತ್’ನಿಂದ ಮೊದಲ್ಗೊಂಡು ‘ಕಲ್ ಆಜ್ ಔರ್ ಕಲ್’ವರೆಗಿನ ಸ್ವಂತ ನಿರ್ಮಾಣದ 10 ಚಿತ್ರಗಳು ಸೇರಿದಂತೆ, ಒಟ್ಟು 20 ಚಿತ್ರಗಳಲ್ಲಿ ‘ಶಂಕರ್-ಜೈಕಿಶನ್’ ಜೋಡಿಯನ್ನು ಸಂಗೀತ ನಿರ್ದೇಶನಕ್ಕೆ ರಾಜ್ ಕಪೂರ್ ಬಳಸಿಕೊಂಡರು. ಈ ಪೈಕಿ ಜೈಕಿಶನ್‌ರ ಮರಣದ ನಂತರವಷ್ಟೇ ಅವರು ವಿಭಿನ್ನ ಆಯ್ಕೆಗಳೆಡೆಗೆ ಹೊರಳಿದ್ದು!

‘ಸಾಕ್ಷಾತ್ಕಾರ’, ‘ಕಪ್ಪು ಬಿಳುಪು’, ‘ಕರುಳಿನ ಕರೆ’, ‘ಕಾಲೇಜುರಂಗ’, ‘ಎಡಕಲ್ಲು ಗುಡ್ಡದ ಮೇಲೆ’, ‘ಧರ್ಮ ಸೆರೆ’, ‘ರಂಗ ನಾಯಕಿ’ ಚಿತ್ರಗಳನ್ನು ಹೊರತುಪಡಿಸಿದರೆ ಪುಟ್ಟಣ್ಣ ಕಣಗಾಲರ ಮಿಕ್ಕೆಲ್ಲ ಚಿತ್ರಗಳಿಗೆ ಸಂಗೀತ ನೀಡಿದವರು ವಿಜಯಭಾಸ್ಕರ್. ಇವರಿಬ್ಬರ ನಡುವೆ ಹಾಸು ಹೊಕ್ಕಾಗಿದ್ದ ಗೆಳೆತನ, ಚಿತ್ರಕೃಷಿಗೆ ಸಂಬಂಧಿಸಿ ಪರಸ್ಪರರ
ಗ್ರಹಿಕೆಯ ‘ವೇವ್‌ಲೆಂಥ್’ ಸರಿಹೊಂದುತ್ತಿದ್ದುದು ಇದಕ್ಕೆ ಕಾರಣ.

ಇದು ದೊರೆ-ಭಗವಾನ್ ನಿರ್ದೇಶಕ ಜೋಡಿಗೂ ಅನ್ವಯಿಸುವ ಮಾತು. ‘ದೊರೆ-ಭಗವಾನ್’ ಎಂದರೆ ಒಬ್ಬರೇ ವ್ಯಕ್ತಿ ಎಂದು ಸಾಕಷ್ಟು ಮಂದಿ ಭಾವಿಸಿದ್ದರ ಮಟ್ಟಿಗಿನ ನಂಟು ಹಾಗೂ ‘ಅಂಡರ್‌ಸ್ಟ್ಯಾಂಡಿಂಗ್’ ಈ ಜೋಡಿಯದ್ದು. ಬರೋಬ್ಬರಿ ೨೭ ಚಿತ್ರಗಳನ್ನು ನಿರ್ದೇಶಿಸಿದ ಹಾಗೂ ಬಹುತೇಕ ಚಿತ್ರಗಳಿಗೆ ರಾಜನ್-ನಾಗೇಂದ್ರ ಜೋಡಿಯನ್ನೇ
ಸಂಗೀತ ನಿರ್ದೇಶಕರಾಗಿ ಬಳಸಿಕೊಂಡ ಹೆಗ್ಗಳಿಕೆ ಇವರದ್ದು. ಈ ಚಿತ್ರಗಳ ಪೈಕಿ ಹೆಚ್ಚಿನವು ಸೂಪರ್‌ಹಿಟ್! ಆದರೆ ಮಧ್ಯೆ ಒಮ್ಮೆ, ಕಾರಣಾಂತರಗಳಿಂದ ಭಗವಾನ್ ಅವರು ಈ ನಂಟನ್ನು ಕಳಚಿಕೊಂಡು ಅನಂತ್‌ನಾಗ್-ಮಾಲಾಶ್ರೀ ಅಭಿನಯದ ‘ಮಾಂಗಲ್ಯ ಬಂಧನ’ ಚಿತ್ರವನ್ನೂ, ದೊರೆಯವರು ಮರಣಿಸಿದ ನಂತರ ಅನಂತ್‌ನಾಗ್ ಅಭಿನಯದ ‘ಅಪೂರ್ವ ಗೊಂಬೆ’ ಚಿತ್ರವನ್ನೂ ಒಬ್ಬಂಟಿಯಾಗೇ ನಿರ್ದೇಶಿಸಿದರು; ಆದರೆ ‘ದೊರೆ-ಭಗವಾನ್’ ಟ್ರೇಡ್‌ಮಾರ್ಕ್ ಅನ್ನು, ಅವರ ಗೆಳೆತನವನ್ನು ಒಪ್ಪಿದ್ದ-ಅಪ್ಪಿದ್ದ ಚಿತ್ರರಸಿಕರು ಈ ‘ಒಂಟಿ ಪ್ರಸ್ತುತಿ’ಯನ್ನು ಅದೇಕೋ ಮೆಚ್ಚಲಿಲ್ಲ ಎಂಬುದು ಕಾಕತಾಳೀಯವೂ ಇರಬಹುದು!

ಒಟ್ಟಿನಲ್ಲಿ, ‘ಸ್ನೇಹ ಅತಿಮಧುರ, ಸ್ನೇಹ ಅದು ಅಮರ!

ಇದನ್ನೂ ಓದಿ: Yagati Raghu Nadig Column: ಅಕ್ಷರಗಳು ಆಚೀಚೆ ಆದಾಗಿನ ಎಡವಟ್ಟುಗಳು