Thursday, 12th December 2024

Yatheesh Balkur Column: ಎತ್ತ ಸಾಗುತ್ತಿದೆ ಭವಿಷ್ಯದ ಭಾರತ?

ಪ್ರಸ್ತುತ

ಯತೀಶ್‌ ಬಳ್ಕೂರ್

ಒಂದೆಡೆ ತಮ್ಮ ಜೀವದ ಹಂಗು ತೊರೆದು, ದೇಶವನ್ನು ಕಾಯುತ್ತಿರುವ ಸೈನಿಕರು ಗಡಿಯಲ್ಲಿ ಕಷ್ಟಪಡುತ್ತಿದ್ದಾರೆ. ಅನ್ನ ನೀಡುವ ರೈತ ಸಮುದಾಯ ಫಸಲು ಬೆಳೆಯುವ ಭೂಮಿಯಲ್ಲಿ ಬೆವರು ಹರಿಸಿ ಕಷ್ಟ ಪಡುತ್ತಿದ್ದಾರೆ.

ವಿಜ್ಞಾನಿಗಳು, ವೈದ್ಯರು, ಎಂಜಿನಿಯರುಗಳು, ಪ್ರಾಮಾಣಿಕ ಅಧಿಕಾರಿಗಳು, ಮಾಧ್ಯಮ ರಂಗ, ಶ್ರಮಿಕ ವರ್ಗ ಹೀಗೆ ಸಂಘಟಿತ ಹಾಗೂ ಅಸಂಘಟಿತ ವಲಯದ ಪ್ರತೀ ಪರಿಶ್ರಮಿಗಳು ತಮ್ಮ ಜೀವನೋಪಾಯದ ಜತೆಜತೆಗೆ, ದೇಶದ ಅಭಿವೃದ್ಧಿಯ ನಾಗಾಲೋಟಕ್ಕೆ ಪ್ರಾಮಾಣಿಕ ತೆರಿಗೆ ಪಾವತಿದಾರರಾಗಿ, ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ.

ಪ್ರಧಾನಿಯ ಕನಸಾದ 2047 ರ ವಿಕಸಿತ ಭಾರತ ಕಲ್ಪನೆಗೆ ಜೀವತುಂಬುತ್ತಿರುವವರು ಇದೇ ಪರಿಶ್ರಮಿಗಳು. ಆದರೆ, ಜನರ ತೆರಿಗೆಯನ್ನೇ, ಅಭಿವೃದ್ಧಿಗೆ ಅನುದಾನ ಎನ್ನುವ ಹೆಸರಿನಲ್ಲಿ, ಲೂಟಿ ಹೊಡೆಯಲು, ಚುನಾವಣೆ ವ್ಯವಸ್ಥೆ ಯನ್ನೇ ಭ್ರಷ್ಟತೆಯ ಪರಾಕಾ ಷ್ಠೆಗೆ ತಲುಪಿಸಿರುವ ಶೇ.99 ರಷ್ಟು ರಾಜಕಾರಣಿಗಳು, ಜನಪ್ರತಿನಿಧಿಗಳು, ಮಾತ್ರ ದೇಶದ ಶ್ರಮಿಕ ವರ್ಗದ ಯಾವುದೇ ತ್ಯಾಗವನ್ನು, ಮನಗಾಣದೆ, ಯಾವುದೇ ಅಂಜಿಕೆ, ಅವಮಾನ, ಪಾಪಕೃತ್ಯದ ಭಯ ವಿಲ್ಲದೇ ಚೆಕ್‌ಮೇಟ್ ರಾಜಾಹುಲಿ, ಆರ್‌ಟಿಜಿಎಸ್ ಬಾಹುಬಲಿಗಳಂತೆ, ಜೈಲಿಗೆ ಹೋಗಿಬಂದರೂ, ಪುನಃ ಜೈಲಿಗೆ ಹೋಗುವ ಅಂಜಿಕೆಯೂ ಇಲ್ಲದೇ, ತಮ್ಮ ಹಣದ, ಅಧಿಕಾರದ ಮದದಿಂದ, ವರ್ಗಾವಣೆಯಲ್ಲಿ, ನೇಮಕಾತಿ ಯಲ್ಲಿ, ಸಾಂಕ್ರಾಮಿಕ ರೋಗದ ಸಂದರ್ಭಗಳಲ್ಲಿ, ಅಂಗನವಾಡಿ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಮೊಟ್ಟೆಯಲ್ಲಿಯೂ ಕಮಿಷನ್ ಆಸೆಗೆ ಜೊಲ್ಲು ಸುರಿಸುತ್ತಾ, ದೇಶದ ಹೆಮ್ಮೆಯ ವಿಮಾನ ನಿಲ್ದಾಣದ ಕಾಮಗಾರಿ ಯಲ್ಲಿಯೂ ಲಂಚ ಪಡೆಯುತ್ತಾ, ನಾಟಕ ಆಡುತ್ತಾ, ಪದೇ ಪದೇ ಜನರಿಂದ ತಿರಸ್ಕ್ರತ ಎನಿಸಿದರೂ, ಅಟಲ್ ಬಿಹಾರಿ ವಾಜಪೇಯಿ ಯವರ ಪರಿಶುದ್ಧ ರಾಜಕೀಯ ಜೀವನಕ್ಕೆ ಹೋಲಿಸಿ ಕೊಳ್ಳುತ್ತಾ, ಲಂಚದ ಆಸೆಗೆ ಡಿನೋಟಿಫಿಕೇಶನ್ ಮಾಡುತ್ತಾ, ಐಶಾರಾಮಿ ಹೋಟೆಲ್‌ಗಳಲ್ಲಿನ ತಮ್ಮ ಕರ್ಮಕಾಂಡ ತಿಳಿದವರಿಗೆ, ಬ್ಲ್ಯಾಕ್ ಮೇಲ್ ಮಾಡುತ್ತಾ ನಾಚಿಕೆ ಇಲ್ಲದೇ ಜೀವನ ಮಾಡುತ್ತಿರುವವರು ಇನ್ನೊಂದೆಡೆ.

ಇವರು ಹಣದಿಂದ, ಅಧಿಕಾರದಿಂದ ಶಾಸಕರನ್ನು, ಅಧಿಕಾರಿಗಳನ್ನು, ಸಿನಿಮಾ ನಟಿಯರನ್ನು, ಮನೆಗೆಲಸ ದವರನ್ನು, ಇಷ್ಟೇ ಯಾಕೆ ತಮಗೆ ಬೇಕೆನಿಸಿದ ಎಲ್ಲವನ್ನೂ – ಎಲ್ಲರನ್ನೂ ಖರೀದಿಸಲು ಯತ್ನಿಸುತ್ತಾರೆ. ಒಪ್ಪದೇ ಇದ್ದವರನ್ನು ಅವರ ಕೌಟುಂಬಿಕ ದೌರ್ಬಲ್ಯ ತೋರಿಸಿಯೋ, ಗನ್ ತೋರಿಸಿಯೋ ಹೆದರಿಸಿ ತಮಗೆ ಬೇಕೆದ್ದಿದ್ದು ಪಡೆಯಲು ಯತ್ನಿಸಿರುವುದನ್ನು ಕಳೆದ ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಇನ್ನು ಮುಂದಾದರೂ, ಈ ಅನಿಷ್ಠಗಳೆಲ್ಲ ಕೊನೆಗಾಣಬೇಕು. ಭಾರತ ಪ್ರತೀ ಮತದಾರ ಎಚ್ಚರಗೊಳ್ಳಬೇಕು. ಇಂತಹ ಅಯೋಗ್ಯರಿಂದ ಆಳಿಸಿಕೊಳ್ಳುವಷ್ಟು ತಾನು ಅಯೋಗ್ಯನೇ? ಎಂಬುದನ್ನು ಮನಗಾಣಬೇಕು.

2023 ರ ಟ್ರಾನ್ಸಪರನ್ಸಿ ಇಂಟರ್‌ನ್ಯಾಷನಲ್ ವರದಿಯಲ್ಲಿ, ಭಾರತ 39 ಅಂಕಗಳೊಂದಿಗೆ, 180 ದೇಶಗಳ ಪಟ್ಟಿಯಲ್ಲಿ 93 ನೇ‌ ಸ್ಥಾನ ಪಡೆದಿರುವುದು, ಸಹ ಇದೇ ಭ್ರಷ್ಟರೇ ಸೃಷ್ಟಿಸಿರುವ, ಈ ಭ್ರಷ್ಟ ವ್ಯವಸ್ಥೆಯಿಂದ. ಈ ಎಲ್ಲ ಭ್ರಷ್ಟ ರಾಜಕಾರಣಿಗಳನ್ನು, ಯಾವುದೇ ಪಕ್ಷ, ಜಾತಿ, ಮತ, ಪಂಥ ನೋಡದೇ, ಆರೋಪ ಬಂದ ತಕ್ಷಣ ಮಂಪರು ಪರೀಕ್ಷೆ ಗೆ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ವೈeನಿಕವಾಗಿ ಒಳಪಡಿಸುವ ಕಠಿಣ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬರಬೇಕು.

ತಪ್ಪಿತಸ್ಥರೆಂದು ಸಾಬೀತಾದ್ದಲ್ಲಿ ಜನಪ್ರತಿನಿಧಿಗಳಾಗುವ ಭವಿಷ್ಯದ ಯಾವುದೇ ಆಯ್ಕೆಯನ್ನು ಅಂಥವರಿಗೆ ನೀಡದೇ ಕಠಿಣ ಶಿಕ್ಷೆಗೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯು, ಶೀಘ್ರವಾಗಿ ಗುರಿಪಡಿಸಬೇಕು. ಆಗ ಮಾತ್ರ ಭ್ರಷ್ಟರ ಎದೆಯಲ್ಲಿ ಭಯ ಹುಟ್ಟಲು ಸಾಧ್ಯ. ವಂಶವಾದ, ಭ್ರಷ್ಟಚಾರವನ್ನು ಅಮೂಲಾಗ್ರವಾಗಿ ಖಂಡಿಸುತ್ತಿರುವ, ನಮ್ಮ ಮಾನ್ಯ ಪ್ರಧಾನಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆ ಈ ದಿಶೆಯಲ್ಲಿ ಮುಂದಡಿ ಇಟ್ಟಲ್ಲಿ ಮಾತ್ರ ಭ್ರಷ್ಟ ಮುಕ್ತ ದೇಶಗಳಲ್ಲಿ ಹಾಗೆ, ಅಭಿವೃದ್ಧಿಯಲ್ಲಿ ನಮ್ಮ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಭ್ರಷ್ಟರ ಕಿಸೆ ಸೇರುವ, ಪ್ರಾಮಾಣಿಕ ತೆರಿಗೆದಾರರ ಪರಿಶ್ರಮದ ಹಣ ದೇಶದ ಅಭಿವೃದ್ಧಿಗೆ ಮಾತ್ರ ಬಳಕೆ ಆಗುತ್ತದೆ. ನಮ್ಮ ಪೂರ್ವಜರು, ಸ್ವಾತಂತ್ರ್ಯ ಹೋರಾಟಗಾರು ಕಟ್ಟಿದ ಈ ದೇಶದ ತ್ಯಾಗ-ಬಲಿದಾನಗಳಿಗೂ ಸಾರ್ಥಕ ಭಾವ ಮೂಡುತ್ತದೆ. ನಮ್ಮ ನೇತಾರರು ಈ ದಿಶೆಯಲ್ಲಿ ಯೋಚಿಸಲಿ. ಹೀಗಾದ್ದಲ್ಲಿ, 2047ಕ್ಕಿಂತ ಪೂರ್ವದ ವಿಕಸಿತ ಭಾರತ ಕಲ್ಪನೆಯೂ, ಸಾಕಾರವಾಗಿರುತ್ತದೆ.

ಲೇಖಕ: ಹವ್ಯಾಸಿ ಬರಹಗಾರ

ಇದನ್ನೂ ಓದಿ: Parinita Ravi Column: ನಮ್ಮ ಪ್ರತಿಚ್ಛಾಯೆಯನ್ನು ನಿರ್ಮಿಸುವವರು ಯಾರು ?