Wednesday, 4th December 2024

ಮನೋರೋಗಿಗಳು ಝೂ ಪ್ರಾಣಿಗಳಾಗಿದ್ದರು !

ಹಿಂದಿರುಗಿ ನೋಡಿದಾಗ

ಮಧ್ಯಯುಗದ ವೈದ್ಯರು ಮನೋರೋಗಗಳಿಗೆ ಎರಡು ಕಾರಣಗಳಿವೆ ಎಂದು ನಂಬಿದ್ದರು. ಮೊದಲನೆಯದು ದುಷ್ಟಶಕ್ತಿಗಳು ಮೆಟ್ಟಿಕೊಳ್ಳುವುದು ಹಾಗೂ ಎರಡನೇಯದ್ದು ಶೈತಾನನ ವಶಕ್ಕೆ ಒಳಗಾಗಿ ಮಾಟಗಾತಿಯರಾಗುವುದು. ಮನೋರೋಗಗಳನ್ನು ಗುಣಪಡಿಸಲು ರೋಗಿಗಳ ತಲೆಯಲ್ಲಿ ಕಪಾಲರಂಧ್ರನವನ್ನು ಮಾಡಿ, ತಲೆಯ ಒಳಗೆ ಅಡಗಿರುವ ದುಷ್ಟಶಕ್ತಿ ಹೊರಹೋಗಲು ಅವಕಾಶವನ್ನು ಮಾಡಿಕೊಡುತ್ತಿದ್ದರು.

ರಕ್ತನಾಳವನ್ನು ಛೇದಿಸಿ ರಕ್ತವನ್ನು ಹೊರಹರಿಸುತ್ತಿದ್ದರು. ಸಿಕ್ಕಾಪಟ್ಟೆ ಭೇದಿಯಾಗಲು ವಿರೇಚಕಗಳನ್ನು ಕೊಡುತ್ತಿದ್ದರು. ಬರೆ
ಹಾಕುತ್ತಿದ್ದರು. ಕಾದ ನೀರನ್ನು/ಎಣ್ಣೆಯನ್ನು ಸುರಿಯುತ್ತಿದ್ದರು. ಮನೋರೋಗಿಗಳಿಗೆ, ಅದರಲ್ಲೂ ಮಾಟಗಾತಿಯರಿಗೆ ಗಲ್ಲು ಶಿಕ್ಷೆಯನ್ನು ಕೊಡುತ್ತಿದ್ದರು ಇಲ್ಲವೇ ಅವರನ್ನು ಸಾರ್ವಜನಿಕವಾಗಿ ನಾಲ್ಕು ರಸ್ತೆ ಕೂಡುವಲ್ಲಿ ಕಟ್ಟಿಗೆಯನ್ನು ಒಡ್ಡಿ ಸುಟ್ಟು ಹಾಕುತ್ತಿದ್ದರು.

ಆಗ ಇಸ್ಲಾಂ ದೇಶದಲ್ಲಿ ಆಸ್ಪತ್ರೆಗಳು ಆರಂಭವಾದವು. ಮನೋರೋಗಿಗಳಿಗೆಂದೇ ವಿಶೇಷ ವಿಭಾಗ ಆರಂಭಿಸಲಾಯಿತು. ಅವರನ್ನು ಮಾನವೀಯವಾಗಿ ನಡೆಸಿಕೊಳ್ಳಲಾರಂಭಿಸಿದರು. ಈ ಹಿನ್ನೆಲೆಯಲ್ಲಿ ಮಧ್ಯಯುಗದ ಯೂರೋಪಿನ ಕೆಲವು ದೇಶ ಗಳಲ್ಲಿ ಮನೋರೋಗಿಗಳಿಗಾಗಿ ಮೆಂಟಲ್ ಅಸೈಲಮ್ ಎಂಬ ವಿಶೇಷ ಮಾನಸಿಕ ಆಶ್ರಯ ಧಾಮ ಆರಂಭಗೊಂಡವು. ಮನೋ ರೋಗಿಗಳಿಗೆ ಅನ್ನ, ಆಶ್ರಯ, ಚಿಕಿತ್ಸೆ ಮತ್ತು ವಸತಿಯನ್ನು ಒದಗಿಸುತ್ತಿದ್ದವು. ಮನೋರೋಗಿಗಳ ಆಶ್ರಯಧಾಮದ ಪರಿಕಲ್ಪನೆ ಶ್ರೇಷ್ಠವಾಗಿದ್ದರೂ ಅದರ ಅನುಷ್ಠಾನ ಮಾತ್ರ ನರಕ ಸದೃಶವಾಗಿದ್ದವು.

ವಿಪರೀತ ರೋಗಿಗಳು, ಸ್ವಚ್ಛತೆ ಶೂನ್ಯ. ಸೀಮಿತ ಸ್ನಾನ ಶೌಚಾದಿಗಳ ಅನುಕೂಲತೆ, ಪೌಷ್ಠಿಕ ಆಹಾರದ ಕೊರತೆಯಿತ್ತು. ಅನೇಕರು ಅರೆಬರೆ ಅಥವಾ ನಗ್ನವಾಗಿರುತ್ತಿದ್ದರು. ಜಗಳ ಮಾಡುವವರನ್ನು, ಕಿರುಚಾಡುವವರನ್ನು ಕೋಣೆಯಲ್ಲಿ ಬಂಧಿಸಿಡುತ್ತಿದ್ದರು. ಮೊದಲನೆಯದು ಅವರ ಕೈ ಮತ್ತು ಕಾಲುಗಳಿಗೆ ಸರಪಳಿಯನ್ನು ಹಾಕಿ ಬಂಧಿಸುತ್ತಿದ್ದರು. ಆ ಸರಪಳಿಯನ್ನು ನೆಲದಲ್ಲಿ ಅಥವ ಗೋಡೆಯಲ್ಲಿ ನೆಟ್ಟಿರುತ್ತಿದ್ದ ಗೂಟಕ್ಕೆ ಕಟ್ಟಿಹಾಕುತ್ತಿದ್ದರು. ಅವರು ಸೀಮಿತ ವಲಯದಲ್ಲಿ ಮಾತ್ರ ಕೈಕಾಲನ್ನು ಆಡಿಸಿಕೊಂಡು ಇರಬೇಕಾಗಿತ್ತು. ಅತ್ಯುಗ್ರ ಆಕ್ರಮಣಶೀಲ ಮನೋಭಾವದ ಮನೋರೋಗಿಗಳನ್ನು ನಿರ್ಬಂಧ ಕವಚದಲ್ಲಿ (ಸ್ಟ್ರೈಟ್ ಜಾಕೆಟ್) ಇರಿಸುತ್ತಿದ್ದರು.

ಹೆಸರೇ ಸೂಚಿಸುವ ಹಾಗೆ ಇದೊಂದು ಅತ್ಯಂತ ಬಿಗಿಯಾದ ಉಡುಪು ಆಗಿರುತ್ತಿತ್ತು. ಕೈಕಾಲುಗಳನ್ನು ಆಡಿಸಲು ಅವಕಾಶವಿರು ತ್ತಿರಲಿಲ್ಲ. ಅನೇಕ ಸಲ ಅವರು ತಮ್ಮ ನೈಸರ್ಗಿಕ ಕ್ರಿಯೆಗಳನ್ನು ಇರುವ ಸ್ಥಿತಿಯಲ್ಲೇ ಮಾಡಿಮುಗಿಸಬೇಕಾಗಿತ್ತು. ಯೂರೋಪಿನ ಇಂತಹ ಶೋಚನೀಯ ಕಾಲಘಟ್ಟದಲ್ಲಿ, ಮನೋರೋಗಿಗಳಿಗೆ ಮನವೀಯತೆಯ ಸ್ಪರ್ಶವನ್ನು ನೀಡಿ, ಅವರೂ ಸಹ ಎಲ್ಲರಂತೆ ಬದುಕಲು ಅವಕಾಶವನ್ನು ಮಾಡಿಕೊಟ್ಟು, ಆಧುನಿಕ ಮನೋವೈದ್ಯಕೀಯದ ಪಿತಾಮಹ ಎಂಬ ಅಭಿದಾನಕ್ಕೆ ಪಾತ್ರನಾದವನು ಫಿಲಿಪ್ ಪೀನೆಲ್ (೧೭೪೫-೧೮೨೬). ಎಂಬ ಫ್ರೆಂಚ್ ವೈದ್ಯ.

ಪೀನೆಲ್ ದಕ್ಷಿಣ ಫ್ರಾನ್ಸಿನ ಜಾನ್ಕ್ವೇರೆಸ್ ಎಂಬಲ್ಲಿ ಓರ್ವ ವೈದ್ಯರ ಕುಟುಂಬದಲ್ಲಿ ಜನಿಸಿದ. ೨೨ ವರ್ಷದ ಪೀನೆಲ್ ಸೌಮ್ಯ ಸ್ವಭಾವದವನಾಗಿದಕ್ಕೆ ಎಲ್ಲರೂ ಇವನು ಪಾದ್ರಿಯಾಗಲು ಲಾಯಕ್ಕು ಎಂದು ಭಾವಿಸಿದ್ದರು. ಹಾಗಾಗಿ ಅವನನ್ನು ಧರ್ಮಶಾಸ್ತ್ರ ವನ್ನು ಕಲಿಯಲೆಂದು ಟೌಲೋಸ್ ನಗರಕ್ಕೆ ಕಳುಹಿಸಿದರು. ಟೌಲೋಸ್ ನಗರದಲ್ಲಿ, ಪೀನಲ್ ಪುನರುತ್ಥಾನದ (ರಿನೇಸಾನ್ಸ್) ಅವಧಿಯಲ್ಲಿ ಮಿಂಚಿದ ಮಹಾನ್ ಲೇಖಕರ ಕೃತಿ ಗಳನ್ನು ಓದಿದ. ದೇವರು ಧರ್ಮದ ಹೆಸರಿನಲ್ಲಿ ಚರ್ಚ್ ಮಾಡುತ್ತಿದ್ದ ಮೋಸ ಗಳನ್ನು ಅರ್ಥಮಾಡಿಕೊಂಡ. ತಾನೂ ಇದರಲ್ಲಿ ಒಬ್ಬನಾಗುವುದು ಅರ್ಥವಿಲ್ಲ ಎನ್ನುವುದನ್ನು ಮನಗಂಡ. ೧೭೭೦ರ ವೇಳೆಗೆ, ತಾನು ತನ್ನ ತಂದೆಯ ಹಾಗೆ ವೈದ್ಯನಾಗಬೇಕೆಂದು ನಿರ್ಧರಿಸಿದ.

೧೭೭೩ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದ. ಮಾಂಟೆಪೆಲ್ಲಿಯರ್ ಎಂಬಲ್ಲಿ ೪ ವರ್ಷ ವೈದ್ಯಕೀಯ ವೃತ್ತಿಯಲ್ಲಿ ತೊಡಗಿ ಮತ್ತಷ್ಟು ಅನುಭವ ಪಡೆದು ೧೭೭೮ರಲ್ಲಿ ಪ್ಯಾರಿಸ್ ನಗರಕ್ಕೆ ಬಂದ. ಪೀನೆಲ್‌ಗೆ ವೈದ್ಯವೃತ್ತಿಯನ್ನು ಆರಂಭಿಸಲು ಪರವಾನಗಿ
ದೊರೆಯಲಿಲ್ಲ. ಏಕೆಂದರೆ ಟೌಲೋಸ್ ಗ್ರಾಮೀಣ ಪ್ರದೇಶವಾಗಿತ್ತು. ಅಲ್ಲಿ ಪಡೆದ ವೈದ್ಯಕೀಯ ಪದವಿಗೆ ಮಾನ್ಯತೆಯಿರಲಿಲ್ಲ. ಹಾಗಾಗಿ ಪೀನಲ್ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಯಿತು. ದುರದೃಷ್ಟವಶಾತ್ ಎರಡು ಸಲ ಈ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ಹಾಗಾಗಿ ಅವನು ವೈದ್ಯ ವೃತ್ತಿಯನ್ನು ತ್ಯಜಿಸಿ, ಹೊಟ್ಟೆ ಪಾಡಿಗೆ ನಾನಾ ರೀತಿಯ ಚಿಕ್ಕಪುಟ್ಟ ಕೆಲಸಗಳನ್ನು ತೊಡಗಿದ. ಹೀಗೆಯೇ ೧೫ ವರ್ಷಗಳನ್ನು ಕಳೆದುಬಿಟ್ಟ. ಕೊನೆಗೆ ಅಮೆರಿಕಕ್ಕೆ ವಲಸೆ ಹೋಗೋಣ ಎಂದು ತೀರ್ಮಾನವನ್ನು ತೆಗೆದುಕೊಳ್ಳುವ ವೇಳೆಗೆ ಅವನಿಗೆ ಮನೋರೋಗಿಗಳ ಬಗ್ಗೆ ಕುತೂಹಲವು ಬೆಳೆಯಿತು.

ಪೀನೆಲ್ ಗೆಳೆಯನೊಬ್ಬನು ನರವಿಷಣ್ಣತೆಗೆ (ನರ್ವಸ್ ಮೆಲಾಂಕಲಿ) ತುತ್ತಾದ. ಈ ವಿಷಣ್ಣತೆಯೂ ತೀವ್ರ ಸ್ವರೂಪವನ್ನು ತಳೆದು ಉನ್ಮಾದಕ್ಕೆ (ಮೇನಿಯ) ಎಡೆಮಾಡಿಕೊಟ್ಟಿತು. ಆತ ಆತ್ಮಹತ್ಯೆಯನ್ನು ಮಾಡಿಕೊಂಡ. ಈ ಘಟನೆ ಪೀನೆಲ್ ಮೇಲೆ ಅತೀವ
ಪ್ರಭಾವವನ್ನು ಬೀರಿತು. ಈ ಸಾವನ್ನು ತಡೆಗಟ್ಟಬಹುದಾಗಿತ್ತು ಎನ್ನುವುದು ಅವನ ಸ್ಪಷ್ಟ ನಿಲುವಾಗಿತ್ತು. ಇನ್ನು ಮುಂದಾ ದರೂ ಇಂತಹ ಅಕಾಲಿಕ ಸಾವನ್ನು ತಡೆಗಟ್ಟಬೇಕು ಎಂದು ನಿರ್ಧರಿಸಿದ. ಅಂದಿನ ಫ್ರಾನ್ಸ್ ದೇಶದಲ್ಲಿ ಒಂದು ಖಾಸಗಿ ಮಾನಸಿಕ ಆರೋಗ್ಯಧಾಮವಿತ್ತು (ಮೆಂಟಲ್ ಸ್ಯಾನಿಟೋರಿಯಮ್). ಪೀನೆಲ್ ಅಲ್ಲಿ ಕೆಲಸಕ್ಕೆ ಸೇರಿಕೊಂಡ. ಐದು ವರ್ಷಗಳ ಕಾಲ ಕೆಲಸ ವನ್ನು ಮಾಡಿದ. ಈ ಅವಧಿಯಲ್ಲಿ ಆರೋಗ್ಯಧಾಮದಲ್ಲಿದ್ದ ಪ್ರತಿಯೋರ್ವ ಮನೋರೋಗಿಯ ಹಿನ್ನೆಲೆ ಹಾಗೂ ಅವರ ಮನಸ್ಸಿನ ಸಧ್ಯದ ಸ್ಥಿತಿ-ಗತಿಗಳನ್ನು ನಿಕಟವಾಗಿ ಅಧ್ಯಯನ ಮಾಡಿದ.

ಅವರು ಅನುಭವಿಸುತ್ತಿರುವ ಮಾನಸಿಕ ಸಮಸ್ಯೆಗಳ ಸ್ವರೂಪವನ್ನು ತನ್ನದೇ ಆದ ರೀತಿಯಲ್ಲಿ ವರ್ಗೀಕರಿಸಿದ ಹಾಗೂ ಅವರ
ಸಮಸ್ಯೆಗಳಿಗೆ ಸೂಕ್ತ ಉಪಶಮನವನ್ನು ನೀಡಲು ತನ್ನದೇ ಆದ ಚಿಕಿತ್ಸಾ ವೈವಿಧ್ಯತೆಯನ್ನು ರೂಪಿಸಿದ. ೧೭೮೦ರ ದಶಕದಲ್ಲಿ ಪ್ಯಾರಿಸ್ ನಗರದಲ್ಲಿ ಮೇಡಮ್ ಹೆಲ್ವೇಶಿಯಸ್ ಎಂಬಾಕೆಯು ನಡೆಸುತ್ತಿದ್ದ ಪ್ರತಿಷ್ಠಿತರ ಗೋಷ್ಠಿಯೂ ಪ್ರಖ್ಯಾತವಾಗಿತ್ತು. ಈ ಗೋಷ್ಠಿಗೆ ಪೀನೆಲ್ ಆಹ್ವಾನಿತನಾಗಿದ್ದ. ಫ್ರೆಂಚ್ ಕ್ರಾಂತಿಕಾರರ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದ ಪೀನೆಲ್, ಸಹಜವಾಗಿ ಎಲ್ಲ ಕ್ರಾಂತಿಕಾರಿಗಳಿಗಳ ನಿಕಟ ಸಂಪರ್ಕಕ್ಕೆ ಬಂದ. ಅವರ ವಿಶ್ವಾಸಗಳಿಸಿದ.

ಫ್ರಾನ್ಸಿನ ಕ್ರಾಂತಿಯಲ್ಲಿ ಭಾಗವಹಿಸಿದ್ದ ಅನೇಕ ಹೋರಾಟಗಾರರು ಮುಂದೆ ರೂಪುಗೊಂಡ ಸರಕಾರದಲ್ಲಿ ಆಯಕಟ್ಟಿನ
ಜಾಗಗಳಲ್ಲಿ ಮೆರೆಯಲಾರಂಭಿಸಿದರು. ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಪೀನಲ್ ೧೭೯೩ರಲ್ಲಿ ಬೀಸೆತ್ರ ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಈ ಆಸ್ಪತ್ರೆಯಲ್ಲಿ ನಾಲ್ಕು ಸಾವಿರ ಜನರು ಬಂಧನದಲ್ಲಿದ್ದರು. ಇವರಲ್ಲಿ ಕಳ್ಳರು,
ಸುಳ್ಳರು, ದರೋಡೆಕೋರರಿದ್ದರು. ಲೈಂಗಿಕರೋಗಗಳಿಂದ ಪೀಡಿತರಾಗಿದ್ದವರಿದ್ದರು. ಇವರಲ್ಲಿ ಸುಮಾರು ೨೦೦ ಮನೋರೋಗಿಗಳಿದ್ದರು. ಪೀನೆಲ್‌ನನ್ನು ಈ ಕೆಲಸಕ್ಕೆ ಶಿಫಾರಸು ಮಾಡಿದ ವೈದ್ಯರು, ಪೀನೆಲ್ ಈ ಮನೋರೋಗಿಗಳ ಸ್ಥಿತಿ-ಗತಿಯನ್ನು ಸುಧಾರಿಸುತ್ತಾನೆಂದು ಎಂದು ನಂಬಿದ್ದರು.

ಬೀಸೆತ್ರ ಆಸ್ಪತ್ರೆಗೆ ಬಂದ ಪೀನೆಲ್ ನೇರವಾಗಿ ೭ನೇ ವಾರ್ಡಿಗೆ ಹೋದ. ಅಲ್ಲಿ ೨೦೦ ಮನೋರೋಗಿಗಳು ಇದ್ದರು. ಈ ಮನೋ ರೋಗಿಗಳ ಅಧಿಕ್ಷಕನಾಗಿ ಅವರ ಯೋಗಕ್ಷೇಮವನ್ನು ಜೀನ್ ಬ್ಯಾಪ್ಟಿಸ್ಟ್ ಪುಸ್ಸಿನ್ (೧೭೪೬-೧೮೧೧) ಎಂಬ ಆಸ್ಪತ್ರೆಯ ಅಧಿಕ್ಷಕನು ನೋಡಿಕೊಳ್ಳುತ್ತಿದ್ದ. ಪುಸ್ಸಿನ್ ಕ್ಷಯರೋಗ ಪೀಡಿತನಾಗಿ, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖನಾಗಿದ್ದ. ಕೊನೆಗೆ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡ. ೧೭೮೬ರಲ್ಲಿ ಆತನ ಮಡದಿ ಮಾರ್ಗರೆಟ್ ಸಹ ಸಹಾಯಕಳಾಗಿ ಕೆಲಸಕ್ಕೆ ಸೇರಿಕೊಂಡಳು. ಇವರಿಬ್ಬರು ಮನೋರೋಗಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಲಾರಂಭಿಸಿದರು.

ಪ್ರತಿಯೊಬ್ಬ ರೋಗಿಯ ಹಿನ್ನೆಲೆ, ರೋಗಲಕ್ಷಣ, ಚಿಕಿತ್ಸಾ ಸ್ವರೂಪ, ಚಿಕಿತ್ಸೆಗೆ ಪ್ರತಿಸ್ಪಂದನೆ ಇತ್ಯಾದಿಗಳನ್ನೆಲ್ಲ ದಾಖಲು
ಮಾಡಿದ್ದರು. ಪೀನಲ್ ಬೀಸೆತ್ರ ಆಸ್ಪತ್ರೆಯ ವೈದ್ಯನಾಗಿ ಬಂದಾಗ, ಪುಸ್ಸಿನ್ ದಂಪತಿಗಳು ಸಿದ್ಧಪಡಿಸಿದ್ದ ದಾಖಲೆಗಳನ್ನು
ನೋಡಿದ. ಅವನಿಗೆ ತುಂಬಾ ಸಂತೋಷವಾಯಿತು. ಪುಸ್ಸಿನ್ ಮೂಲಕ ಪ್ರತಿಯೊಬ್ಬ ರೋಗಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹ ಮಾಡಿದ.

ಹಲವು ಕ್ರಾಂತಿಕಾರಕ ಕ್ರಮ
ಬೀಸೆತ್ರ ಆಸ್ಪತ್ರೆಯಲ್ಲಿ ಒಂದು ಕೆಟ್ಟ ಪದ್ಧತಿಯು ಅಸ್ತಿತ್ವದಲ್ಲಿತ್ತು. ಊರಿನ ಜನ ಹಾಗೂ ಊರನ್ನು ನೋಡಲು ಬಂದ ಪ್ರವಾಸಿಗರು ಶುಲ್ಕ ತೆತ್ತು ಹೇಗೆ ಪ್ರಾಣಿ ಸಂಗ್ರಹಾಲಯಕ್ಕೆ ಹೋಗುತ್ತಿದ್ದರೋ, ಹಾಗೆಯೇ ಶುಲ್ಕ ತೆತ್ತು ಬೀಸೆತ್ರ ಆಸ್ಪತ್ರೆಗೆ
ಬರುತ್ತಿದ್ದರು. ಅಲ್ಲಿ ಸರಪಳಿಯಿಂದ ಬಿಗಿದಿದ್ದ ಮನೋರೋಗಿಗಳನ್ನು ವಿಚಿತ್ರ ಪ್ರಾಣಿಗಳೆಂಬಂತೆ ನೋಡುತ್ತಿದ್ದರು. ಅವರನ್ನು
ಅಣಕಿಸುತ್ತಿದ್ದರು. ಬೈಯುತ್ತಿದ್ದರು, ಉಗಿಯುತ್ತಿದ್ದರು, ಚುಚ್ಚುತ್ತಿದ್ದರು, ಕಲ್ಲಿನಿಂದ ಹೊಡೆಯುತ್ತಿದ್ದರು. ಇದು ಅತ್ಯಂತ ಅಮಾನವೀಯವಾಗಿತ್ತು. ಆಸ್ಪತ್ರೆಗೆ ಸಾಕಷ್ಟು ಆದಾಯವನ್ನು ತರುತ್ತಿದ್ದ ಈ ಅನಾಗರಿಕ ಪ್ರವೃತ್ತಿಗೆ ಕೂಡಲೇ ತಡೆ ಹಾಕಿದ. ಆಸ್ಪತ್ರೆಯು ಮತ್ತೊಂದು ಝೂ ಆಗದಂತೆ ಕಠಿಣ ನಿಯಮಗಳನ್ನು ರೂಪಿಸಿದ.

ಪ್ರತಿದಿನ ಆಸ್ಪತ್ರೆಗೆ ಬರುತ್ತಿದ್ದ ಪೀನೆಲ್ ವಾರ್ಡಿಗೆ ಹೋಗಿ ಪ್ರತಿಯೊಬ್ಬ ರೋಗಿಯನ್ನು ಮಾತನಾಡಿಸುತ್ತಿದ್ದ. ರೋಗಿಯ ಚರ್ಯೆ, ವರ್ತನೆಗಳನ್ನು ಗಮನಿಸುತ್ತಿದ್ದ. ಹೀಗೆ ಎಲ್ಲ ರೋಗಿಗಳ ರೋಗಚರಿತ್ರೆ, ರೋಗಲಕ್ಷಣ, ರೋಗಚಿಹ್ನೆಗಳನ್ನೆಲ್ಲ ಸಂಗ್ರಹಿಸಿ, ಅವನ್ನು ಕ್ರಮಬದ್ಧವಾಗಿ ಜೋಡಿಸಿದ. ಮಾನಸಿಕ ಕಾಯಿಲೆಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಲು ಪ್ರಯತ್ನಿಸಿದ. ಮನೋ ರೋಗಿಗಳನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿದ. ಅವರಿಗೆ ಸ್ನಾನ ಸೌಲಭ್ಯಗಳನ್ನು ಒದಗಿಸಿದ. ಹೊಟ್ಟೆ ತುಂಬಾ ರುಚಿ ಯಾದ ಊಟವನ್ನು ಬಡಿಸಿದ. ಸರಪಳಿ ಅಥವ ನಿರ್ಬಂಧ ಕವಚದಿಂದ ಮುಕ್ತರನ್ನಾಗಿಸಿದ. ಅವರಿಗೆ ಓಡಾಡಲು ಅವಕಾಶವನ್ನು ಮಾಡಿಕೊಟ್ಟ.

ಪುಸ್ಸಿನ್ ದಂಪತಿಗಳ ಸಹಯೋಗದಲ್ಲಿ ಪೀನಲ್ ಕೈಗೊಂಡ ಈ ಕ್ರಮಗಳ ಪರಿಣಾಮವಾಗಿ ಬೀಸೆತ್ರ ಆಸ್ಪತ್ರೆಯಲ್ಲಿ ಸಂಭವಿಸು ತ್ತಿದ್ದ ಸಾವು ನೋವಿನ ಸಂಖ್ಯೆ ಕಡಿಮೆಯಾಯಿತು. ಮನೋವಿಕಲತೆಯಿಂದ ಗುಣಮುಖರಾದ ಸಾಕಷ್ಟು ಜನರು ಆಸ್ಪತ್ರೆ ಯಿಂದ ಬಿಡುಗಡೆಯನ್ನು ಪಡೆದರು. ಹೊಸ ಜೀವನವನ್ನು ಆರಂಭಿಸಿದರು. ಇಂತಹ ಪವಾಡ ಮೊದಲ ಬಾರಿಗೆ ಯೂರೋಪಿನಲ್ಲಿ ನಡೆಯಿತು. ಪೀನಲ್ ಜಾರಿಗೆ ತಂದ ಸುಧಾರಣೆಗಳ ಫಲವಾಗಿ ಪೀನೆಲ್ಲನಿಗೆ ವರ್ಗಾವಣೆಯಾಯಿತು. ಯೂರೋಪ್ ಖಂಡದ ಲ್ಲಿಯೇ ಅತ್ಯಂತ ಬೃಹತ್ ಆಸ್ಪತ್ರೆ ಎಂದರೆ ಅದು ಸಾಲ್‌ಪಿತ್ರೀಯೇಹ ಆಸ್ಪತ್ರೆಯಾಗಿತ್ತು. ಇಲ್ಲಿ ನಾನಾ ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಂದ ನರಳುತ್ತಿದ್ದ ೭೦೦೦ ಮಾನಸಿಕ ರೋಗಿಗಳಿದ್ದರು. ಆ ಆಸ್ಪತ್ರೆಯ ನಿರ್ದೇಶಕನಾಗಿ ಪೀನೆಲ್ ನೇಮಕಗೊಂಡ. ಪೀನೆಲ್ ತನ್ನೊಂದಿಗೆ ಪುಸ್ಸಿನ್ ದಂಪತಿಗಳನ್ನು ಕರೆದೊಯ್ದ.

೧೮೦೧ರಲ್ಲಿ ಪೀನೆಲ್ ತನ್ನ ಮನೋರೋಗಗಳ ವರ್ಗೀಕರಣ ಕಾರ್ಯವನ್ನು ಮುಗಿಸಿದ. ಬುದ್ಧಿಭ್ರಮಣೆಯ ಪ್ರಕರಣಗ್ರಂಥ ಎಂಬ ಪುಸ್ತಕವನ್ನು ಪ್ರಕಟಿಸಿದ. ಈ ಪುಸ್ತಕವನ್ನು ಬರೆಯುವಾಗ, ಹಿಂದಿನ ಶತಮಾನಗಳಲ್ಲಿ ಆಗಿ ಹೋದ ವೈದ್ಯರು ಮನೋರೋಗಗಳ ಬಗ್ಗೆ ಏನೆಲ್ಲ ಹೇಳಿದ್ದರೋ, ಆ ಎಲ್ಲವನ್ನು ತಿರಸ್ಕರಿಸಿದ. ತಾನು ಕಣ್ಣಾರೆ ಕಂಡದ್ದನ್ನು, ತನ್ನ ಅನುಭವಕ್ಕೆ ಬಂದದ್ದನ್ನು, ತನಗೆ ಸರಿ ಎನಿಸಿದ್ದನ್ನು ಮಾತ್ರ-ತನ್ನ ರೋಗಪ್ರಕರಣಗಳಿಂದ ತಾನು ಕಲಿತ ವಿಚಾರಗಳಿಗೆ ಮಾತ್ರ-ಅದ್ಯತೆಯನ್ನು ನೀಡಿ ಈ ಪುಸ್ತಕವನ್ನು ಬರೆದ. ಅವನು ಮನೋರೋಗಗಳನ್ನು ಐದು ಗುಂಪುಗಳಲ್ಲಿ ವರ್ಗೀಕರಿಸಿದ. ವಿಷಣ್ಣತೆ (ಮೆಲಾಂಕೋಲಿಯ) ಸನ್ನಿರಹಿತ ಉನ್ಮಾದ (ಮೇನಿಯ ವಿಥೌಟ್ ಡೆಲಿರಿಯಂ) ಸನ್ನಿಸಹಿತ ಉನ್ಮಾದ (ಮೇನಿಯ ವಿಥ್ ಡೆಲಿರಿಯಂ) ಬುದ್ಧಿಮಾಂದ್ಯತೆ (ಡಿಮೆನ್ಷಿಯ) ಮತ್ತು ಹೆಡ್ಡತನ (ಈಡಿಯಾಟಿಸಂ). ಇಂತಹ ಪ್ರಯತ್ನವನ್ನು ಪೀನೆಲ್ ಮೊದಲ ಬಾರಿಗೆ ಕೈಗೊಂಡ.

ಈ ಮನೋರೋಗಗಳನ್ನು ಗುಣಪಡಿಸಲು ಅಗತ್ಯವಾದ ನೈತಿಕ ಚಿಕಿತ್ಸೆಯನ್ನು ವಿಸ್ತೃತವಾಗಿ ಬರೆದ. ಪೀನಲ್, ನೈತಿಕ ಅಥವಾ ಮಾರಲ್ ಎಂಬ ಪದಕ್ಕೆ ಇಂದು ಆರೋಪಿತವಾಗಿರುವ ಅರ್ಥದಲ್ಲಿ ಬಳಸಲಿಲ್ಲ. ಮನೋರೋಗಿಯು ತನ್ನ ಮನಸ್ಸಿನ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶವಿರಬೇಕು. ವೈದ್ಯರು ರೋಗಿಯೊಂದಿಗೆ ಆತ್ಮೀಯವಾಗಿ
ಮಾತನಾಡಬೇಕು. ಅವರ ವಿಶ್ವಾಸವನ್ನು ಗಳಿಸಬೇಕು. ವೈದ್ಯ ಮತ್ತು ರೋಗಿಯ ನಡುವೆ ಪಾಲಕರು-ಮಕ್ಕಳ ನಡುವಿನಂತಹ ಸಂಬಂಧವು ಬೆಳೆಯಬೇಕು. ಆಗ ವೈದ್ಯರು ಸ್ವಲ್ಪ ಕಠಿಣ ವಾಗಿ ಮಾಗ್ತನಾಡಿದರೂ, ಅದು ತನ್ನ ಒಳ್ಳೆಯದಕ್ಕೇ ಎಂಬ ನಂಬಿಕೆಯು ಬೆಳೆಯಬೇಕು. ಇವೆಲ್ಲವೂ ಆ ಮಾರಲ್ ಟ್ರೀಟ್ಮೆಂಟ್ ಎಂಬ ಹೆಸರಿನ ಹಿನ್ನೆಲೆಯಲ್ಲಿತ್ತು.

ಪೀನಲ್ ತನ್ನ ಪುಸ್ತಕದಲ್ಲಿ ತನ್ನಿಂದ ಚಿಕಿತ್ಸೆಯನ್ನು ಪಡೆದು, ಪೂರ್ಣಗುಣಮುಖನಾಗಿ, ಸಮಾಜಕ್ಕೆ ಹಿಂದಿರುಗಿ, ಎಲ್ಲರಂತೆ
ಸಹಜ ಬದುಕನ್ನು ನಡೆಸುತ್ತಿದ್ದ ರೋಗಿಗಳ ಪ್ರಕರಣಗಳು ಬರೆದಿದ್ದ. ಅಲ್ಲಿಯವರೆಗೆ ಮೆಂಟಾಲ್ ಅಸೈಲಮ್ ಎಂದರೆ ಪಾಯಿಂಟ್ ಆಫ್ ನೋ ರಿಟರ್ನ್ ಎಂದು ಕುಖ್ಯಾತವಾಗಿತ್ತು. ಇದನ್ನು ಮೊದಲ ಬಾರಿಗೆ ಬದಲಿಸಿದ ಡಾ. ಫಿಲಿಪ್ಪ ಪೀನಲ್!