ವಿಶೇಷ ವರದಿ: ರಮೇಶ ನಾಯಕ ಗೋನವಾರ
ಮರಳಿನ ‘ಮಾಮೂಲಿ’ಗೆ ಅಧಿಕಾರಿಗಳು ಮರಳು…!
ಸಿಂಧನೂರು: ತಾಲೂಕು ವ್ಯಾಪ್ತಿಯ ಹೊಳೆ-ಹಳ್ಳಗಳಲ್ಲಿ ಮರಳಿಗಾಗಿ ಯಂತ್ರಗಳಿಂದ ಬಗೆಯಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಟಿಪ್ಪರ್, ಹಿಟಾಚಿಗಳು ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಿವೆ. ಜನ ಮರಳೋ ಜಾತ್ರೆ ಮರಳೋ, ಎನ್ನುವಂತೆ ಮಾಮೂಲಿಗೆ ಕೆಲ ಅಧಿಕಾರಿಗಳು ಮರುಳಾದ ಕಾರಣ ರಾಜಾರೋಷವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಲಾಗುತ್ತಿದೆ.
ಪ್ರಭಾವಿಗಳ ಕೃಪಾಕಟಾಕ್ಷದಿಂದ ಹಾಡಹಗಲೇ ಮರಳು ಸಾಗಣೆ ಮಾಡುತ್ತಿದ್ದಾರೆ. ಅಕ್ರಮಕ್ಕೆ ನಿಯಂತ್ರಣ ಹೇರಿ, ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕಾದವರೇ ಪರೋಕ್ಷವಾಗಿ ಮರಳು ಮಾಫಿಯಾದವರ ಸಾಥ್ ನೀಡಿರುವ ಆರೋಪ ಗಳು ಕೇಳಿಬಂದಿವೆ.
ನಿಯಮ ಉಲ್ಲಂಘಿಸಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದರೂ ಜಾಣಕುರುಡು ಮೆರೆಯುತ್ತಿರುವ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ನಡೆ ಸಂಶಯಕ್ಕೆ ಎಡೆಮಾಡಿದೆ.
ಯಾವ್ಯಾವ ಹಳ್ಳ..?
ತಾಲೂಕಿನ ಗೋನವಾರ, ಜಾಲವಾಡಗಿ, ಯಾಪಲಪರ್ವಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಪೋತ್ನಾಳ್ ಹಳ್ಳ ಹಾಗೂ ಆಯನೂರು, ಹೆಡಗಿನಾಳ ಬಳಿಯಿರುವ ತುಂಗಭದ್ರಾ ನದಿಪಾತ್ರದಿಂದ ಮರಳು ದಂಧೆಕೋರರು ಹಗಲು-ರಾತ್ರಿ ಯೆನ್ನದೇ ಮರಳು ಸಾಗಣೆ ಮಾಡುತ್ತಿದ್ದಾರೆ. ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಯಥೇಚ್ಛವಾಗಿ ಮರಳನ್ನು ಸಾಗಿಸಲಾಗುತ್ತಿದೆ. ಮರಳು ಸಾಗಿಸುವ ಭರದಲ್ಲಿ ಹಳ್ಳಿಗಳಲ್ಲಿ ಟಿಪ್ಪರ್ ಹಾಗೂ ಲಾರಿಗಳನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸುತ್ತಿರುವುದರಿಂದ ಈ ಮಾರ್ಗದಲ್ಲಿನ ಊರುಗಳು ಜನರು ಭಯಭೀತ ರಾಗಿದ್ದಾರೆ.
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರದ ಕಟ್ಟುನಿಟ್ಟಿನ ಆದೇಶಗಳಿದ್ದರೂ ಇವುಗಳನ್ನು ಅನುಷ್ಠಾನ ಗೊಳಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆ ಅಧಿಕಾರಿಗಳು ಆಸೆ, ಆಮಿಷ ಗಳಿಗೆ ಬಲಿಯಾಗಿ, ಏನೂ ಗೊತ್ತಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಹಳ್ಳಗಳ ವ್ಯಾಪ್ತಿಯ ಗ್ರಾಮಗಳ ಜನರ ಆರೋಪವಾಗಿದೆ.
ಸ್ಟಾಕ್ಯಾರ್ಡ್ ಇಲ್ಲ, ರಾಯಲ್ಟಿಯೂ ಇಲ್ಲ.. : ತಾಲೂಕು ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾನೂನುಬದ್ಧವಾಗಿ ಮರಳು ಸ್ಟಾಕ್ಯಾರ್ಡ್ ಮಾಡದಿರುವುದು ದಂಧೆಕೋರರಿಗೆ ಸ್ವರ್ಗವೇ ಬಾಯ್ದೆರೆದಂತಾಗಿದೆ. ನಯಾಪೈಸೆ ರಾಯಲ್ಟಿ ಕಟ್ಟದೇ ಅಡ್ಡಮಾರ್ಗದಲ್ಲಿ ದಿನವೂ ಮೂರ್ನಾಲ್ಕು ಟಿಪ್ಪರ್ ಮರಳು ಸಾಗಣೆ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ಕಟ್ಟದೇ ವಂಚಿಸುತ್ತಿದ್ದಾರೆ. ಇಷ್ಟೆಲ್ಲ ಭಾನಗಡಿಗಳು ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧ ಇಲ್ಲದಂತೆ ಇರುವುದು ಸಾರ್ವಜನಿಕ ವಲಯ ದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯಲ್ಲಿ ಜಿಲ್ಲಾ ಮರಳು ಸಮಿತಿ, ತಾಲೂಕು ಮರಳು ಸಮಿತಿಗಳು ಅಸ್ತಿತ್ವ ದಲ್ಲಿ ಇವೆಯಾ ? ಅಥವಾ ಇದ್ದರೂ ಅಕ್ರಮಕ್ಕೆ ಪರೋಕ್ಷ ಒಪ್ಪಿಗೆ ನೀಡಿವೆಯೇ ? ಎಂದು ಪರಿಸರವಾದಿಗಳು, ಸಾರ್ವಜನಿಕರು ಹಾಗೂ ಹಳ್ಳಗಳ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನಕ್ಕೆ ಶರಣು
ಕಳೆದ ಕೆಲವು ದಿನಗಳಿಂದ ಹಳ್ಳ ಹಾಗೂ ತುಂಗಭದ್ರಾ ನದಿಪಾತ್ರದ ಸ್ಥಗಳಿಂದ ಮರಳು ಅಕ್ರಮ ಸಾಗಣೆ ನಡೆಯು ತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನಕ್ಕೆ ಶರಣಾಗಿದೆ ಎನ್ನುವುದು ಜನಸಾಮಾನ್ಯರ ದೂರಾಗಿದೆ. ಸಿಆರ್ಜೆಡ್ ಮತ್ತು ನಾನ್ ಸಿಆರ್ಜೆಡ್ ಪ್ರದೇಶದಲ್ಲಿ ಗುರುತಿಸಲಾದ ಮರಳು ಗಣಿ ಬ್ಲಾಕ್ಗಳು ಯಾವುವು ? ಅವುಗಳಲ್ಲಿ ಸಂಗ್ರಹಿಸಿದ ರಾಜಧನವೆಷ್ಟು ? ಆಯಾ ಗ್ರಾಮ ಪಂಚಾಯಿತಿಗೆ ಹಂಚಿಕೆ ಮಾಡಬೇಕಾದ ಮೊತ್ತವೆಷ್ಟು ? ಎರಡ್ಮೂರು ವರ್ಷಗಳಲ್ಲಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧ ದಾಖಲಿಸಿದ ವಿವಿಧ ಪ್ರಕರಣಗಳ ಸಂಖ್ಯೆಯೆಷ್ಟು ? ವಸೂಲಾತಿ ಮಾಡಿದ ದಂಡ ಎಷ್ಟು ? ಅಕ್ರಮ ಮರಳು ಗಣಿಗಾರಿಕೆ ಸಂಬಂಧ ವಶಪಡಿಸಿಕೊಂಡ ವಾಹನಗಳ ಸಂಖ್ಯೆ ಎಷ್ಟು ? ಎಂಬುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಾರ್ವಜನಿಕ ವಾಗಿ ಬಹಿರಂಗ ಪಡಿಸುವ ಮೂಲಕ ಮರಳು ಅಕ್ರಮ ಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.
*
ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಸಮರ್ಥತೆಯಿಂದಾಗಿಯೇ ಸಿಂಧನೂರು ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆ ಮಿತಿ ಮೀರಿದೆ. ನದಿಪಾತ್ರ ಸೇರಿದಂತೆ ಹಳ್ಳಗಳಲ್ಲಿ ನೈಸರ್ಗಿಕ ಸಂಪತ್ತನ್ನು ಮನಬಂದಂತೆ ಲೂಟಿ ಹೊಡೆಯಲಾಗುತ್ತಿದೆ. ಸರ್ಕಾರಕ್ಕೆ ಕನಿಷ್ಠ ರಾಯಲ್ಟಿ ಕಟ್ಟದೇ ಪ್ರಭಾವಿ ರಾಜ ಕಾರಣಿಗಳ ಹಿಂಬಾಲಕರು ಅವ್ಯವಹಾರ ಮುಂದುವರಿಸಿದ್ದು, ಕೆಲ ಇಲಾಖೆಯ ಅಧಿಕಾರಿಗಳು ಪರೋಕ್ಷವಾಗಿ ಇದಕ್ಕೆ ಸಾಥ್ ನೀಡುತ್ತಿರುವುದರಿಂದಲೇ, ಜಿಲ್ಲೆಯಲ್ಲಿ ಹಾಡ ಹಗಲೇ ಮರಳು ಟಿಪ್ಪರ್ಗಳು ತಿರುಗಾಡುತ್ತಿವೆ.
ಹೌದು. ಸಿಂಧನೂರು ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಂಧೆ ನಡೆಯುವ ಮಾಹಿತಿ ಬಂದಿದೆ ಅದರಿಂದ ಮುಂದಿನ ಎರಡು ದಿನಗಳಲ್ಲಿ ಅಕ್ರಮ ಮರಳು ದಂಧೇಕೋರರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
ಪುಷ್ಪಾವತಿ-ಖನಿಜ ಮತ್ತು ಭೂ ಇಲಾಖೆ ನಿರ್ದೆಶಕಿ ರಾಯಚೂರು.
ಸಿಂಧನೂರು ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಂಧೆಕೋರರ ತುಂಬಾ ಆಗಿದೆ ಹಳ್ಳ ಕೋಳ್ಳಗಳನ್ನು ಕೋಳ್ಳೆ ಹೊಡೆಯುದರಿಂದ ನೀರಿನ ಅಂತರ ಪ್ರಮಾಣ ಕಡಿಮೆಯಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವಿದೆ ಅಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳ ಕೈವಾಡ ಸಹ ಇದೇ ದಂಧೆ ಕೋರರನ್ನು ಎಡೆಮುರಿ ಕಟ್ಟಿ ಬಂದ್ ಮಾಡಬೇಕು ಇಲ್ಲವಾದರೆ ರಾಯಚೂರಿನ ಖನಿಜ ಮತ್ತು ಭೂ ಇಲಾಖೆ ಮುಂದೇ ಧರಣಿ ಕುಳಿತುಕೊಳ್ಳು ತ್ತೇವೆ.
ಬಸವರಾಜ ಖರಬದಿನ್ನಿ -ಎ ಎಸ್ ಎಸ್ ಕೆ ದಲಿತ ಸಂಘಟನೆ ಜಿಲ್ಲಾಧ್ಯಕ್ಷರು ರಾಯಚೂರು
ಇದನ್ನೂ ಓದಿ: Raichur Accident: ರಾಯಚೂರು ಅಪಘಾತ; ಗಾಯಾಳು ಮಕ್ಕಳಿಗೆ ಉಚಿತ ಚಿಕಿತ್ಸೆ, ಮೃತರಿಗೆ ಪರಿಹಾರದ ಭರವಸೆ ಕೊಟ್ಟ ಸಿಎಂ