Tuesday, 10th September 2024

Raichur Accident: ರಾಯಚೂರು ಅಪಘಾತ; ಗಾಯಾಳು ಮಕ್ಕಳಿಗೆ ಉಚಿತ ಚಿಕಿತ್ಸೆ, ಮೃತರಿಗೆ ಪರಿಹಾರದ ಭರವಸೆ ಕೊಟ್ಟ ಸಿಎಂ

Raichur Accident

ಬೆಂಗಳೂರು: ರಾಯಚೂರು ಜಿಲ್ಲೆಯ ಮಾನ್ವಿ ಬಳಿ ನಡೆದ ಭೀಕರ ಅಪಘಾತದಲ್ಲಿ (Raichur Accident) ಇಬ್ಬರು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಗಾಯಾಳು ಮಕ್ಕಳಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಹಾಗೂ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಸುದ್ದಿ ಕೇಳಿ ಸಂಕಟವಾಯಿತು. ಮೃತ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡ ಮಕ್ಕಳಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು, ಮೃತ ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು. ಮಕ್ಕಳನ್ನು ಕಳೆದುಕೊಂಡ ಪೋಷಕರ ದುಃಖದಲ್ಲಿ ನಾನೂ ಭಾಗಿ ಎಂದು ತಿಳಿಸಿದ್ದಾರೆ.

ಏನಿದು ಘಟನೆ?
ರಾಯಚೂರು ಜಿಲ್ಲೆಯ ಮಾನ್ವಿ ಬಳಿ ಸ್ಕೂಲ್ ಬಸ್ ಮತ್ತು ಸಾರಿಗೆ ಬಸ್ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಸ್ಕೂಲ್‌ ಬಸ್ಸಿನಲ್ಲಿದ್ದ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಈ ದುರ್ಘಟನೆ ನಡೆದಿದೆ. ಒಂದನೇ ತರಗತಿ ವಿದ್ಯಾರ್ಥಿ ಸಮರ್ಥ, ಏಳನೇ ತರಗತಿ ವಿದ್ಯಾರ್ಥಿ ಶ್ರೀಕಾಂತ್‌ ಮೃತ ನತದೃಷ್ಟರು. ಸ್ಕೂಲ್ ಬಸ್‌ನೊಳಗೆ ಇದ್ದ ಮೂವರು ಮಕ್ಕಳ ಕಾಲುಗಳು ತುಂಡಾಗಿವೆ.

ಕಪಗಲ್‌ನಿಂದ ಮಾನ್ವಿ ಕಡೆ ಹೊರಟಿ ಖಾಸಗಿ ಶಾಲೆಯ ಬಸ್‌ ಹಾಗೂ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್‌ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ರಭಸಕ್ಕೆ ಮಕ್ಕಳಿಬ್ಬರ ಕಾಲು ತುಂಡಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶಾಲಾ ಬಸ್‌ನಲ್ಲಿ ಒಟ್ಟು 32 ಮಕ್ಕಳಿದ್ದರು. ಎಲ್ಲರಿಗೂ ಗಾಯಗಳಾಗಿವೆ. ಈ ಪೈಕಿ ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಈ ಪೈಕಿ 18 ಜನರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 14 ಮಕ್ಕಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮೃತ ಬಾಲಕ ಮತ್ತು ಬಾಲಕಿ ಕುಡಿ ಗ್ರಾಮದವರು ಎಂದು ತಿಳಿದುಬಂದಿದೆ. ರಿಮ್ಸ್ ಆಸ್ಪತ್ರೆಗೆ ಎಸ್‌ಪಿ ಮತ್ತು ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಿಮ್ಸ್ ಆಸ್ಪತ್ರೆ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಎರಡು ಬಸ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದ ಪರಿಣಾಮ ಸಿಂಧನೂರು- ರಾಯಚೂರು ರಸ್ತೆ ಬಂದ್ ಆಗಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ಗಂಭೀರ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ 3 ಲಕ್ಷ ಪರಿಹಾರ ಸಾರಿಗೆ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಉಳಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಹೆಚ್ಚುವರಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ತಿಳಿಸಿದ್ದಾರೆ.

ಈ ಸುದ್ದಿ ಓದಿ: Multi-Car Crash: ಅಮೆರಿಕದಲ್ಲಿ ಸರಣಿ ಅಪಘಾತ; ಭಾರತ ಮೂಲದ ನಾಲ್ವರ ದುರ್ಮರಣ

Leave a Reply

Your email address will not be published. Required fields are marked *