ವಾದಿರಾಜ್ ಬಿ. ಬೆಂಗಳೂರು
ಉತ್ತರ ಕರ್ನಾಟಕದಲ್ಲಿ ಇನ್ನೂ ಶುರುವೇ ಆಗದ ನೋಂದಣಿ ಕಾರ್ಯ
ಒಂದೂವರೆ ಕೋಟಿ ಗುರಿ ದಾಟಲು ರಾಜ್ಯ ಬಿಜೆಪಿ ಘಟಕ ಪರದಾಟ
ವರಿಷ್ಠರ ಸೂಚನೆಯ ಹೊರತಾಗಿಯೂ ಆಸಕ್ತಿ ತೋರದ ನಾಯಕರು
ರಾಜ್ಯ ಬಿಜೆಪಿಯ ಘಟಕದ ಆಂತರಿಕ ಕಿತ್ತಾಟದ ಹೊರತಾಗಿಯೂ, ಒಂದುವರೆ ಕೋಟಿ ಸದಸ್ಯತ್ವ ಗುರಿಯೊಂದಿಗೆ ಆರಂಭಗೊಂಡ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಆರಂಭಗೊಂಡು 13 ದಿನ ಕಳೆದರೂ ‘ಟೇಕ್ ಆಫ್’ ಆಗಿಲ್ಲ
ಎನ್ನುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
ಸೆ.೪ರಂದು ಶುರುವಾದ ನೋಂದಣಿ ಕಾರ್ಯಕ್ಕೆ 13 ದಿನ ಕಳೆದಿದ್ದರೂ ರಾಜ್ಯಾದ್ಯಂತ ಸುಮಾರು ಎಂಟು ಲಕ್ಷ
ಸದಸ್ಯತ್ವ ನೋಂದಣಿ ಅಥವಾ ನವೀಕರಣವಾಗಿದೆ. ನಿಧಾನವಾಗಿರುವ ನೋಂದಣಿಯ ಬಗ್ಗೆ ಬಿಜೆಪಿ ವರಿಷ್ಠರು
ಅಸಮಾಧಾನ ವ್ಯಕ್ತಪಡಿಸಿದ್ದರೂ, ರಾಜ್ಯ ನಾಯಕರು ಮಾತ್ರ ನೋಂದಣಿಗೆ ವೇಗ ನೀಡುವತ್ತ ಗಮನಹರಿಸಿಲ್ಲ
ಎನ್ನುವ ಆರೋಪಗಳು ಪಕ್ಷದಲ್ಲಿ ಶುರುವಾಗಿದೆ. ನೋಂದಣಿ ಕಾರ್ಯದಲ್ಲಿ ‘ಹಿನ್ನಡೆ’ಯಾಗಲು ರಾಜ್ಯದಲ್ಲಿ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಣ ಬಡಿದಾಟವೇ ಕಾರಣ ಎನ್ನುವ ಮಾತುಗಳು ಕೇಳಿಬಂದಿದೆ. ಗೊಂದಲ,
ಗದ್ದಲದಿಂದ ಪಕ್ಷದ ಕೆಲಸಗಳಿಂದ ಹಲವು ನಿಷ್ಠ ಕಾರ್ಯಕರ್ತರು ಮೌನವಾಗಿದ್ದಾರೆ. ಆದ್ದರಿಂದ ಪಕ್ಷ ಸಂಘಟನೆ,
ಸೇರಿದಂತೆ ಭಾರಿ ನಿರೀಕ್ಷೆಯಿಂದ ಪ್ರಾರಂಭವಾದ ಸದಸ್ಯತ್ವ ನೋಂದಣಿ ಅಭಿಯಾನ ಗುರಿ ತಲುಪದೇ ಕುಂಟುತ್ತಿದೆ
ಎಂದು ಮೂಲಗಳು ತಿಳಿಸಿವೆ.
ಅಭಿಯಾನದಲ್ಲಿ ಪ್ರತಿ ಮತಗಟ್ಟೆಯಿಂದ ಕನಿಷ್ಠ 3000 ಸದಸ್ಯರನ್ನು ಸೇರ್ಪಡೆಗೊಳಿಸಲು ಯೋಜನೆ ರೂಪಿಸ
ಲಾಗಿತ್ತು. ಅಲ್ಲದೇ ಕಳೆದ ವರ್ಷ ಪಕ್ಷವು 1.04 ಕೋಟಿ ಸದಸ್ಯರನ್ನು ಸೇರ್ಪಡೆಗೊಳಿಸಿತ್ತು. ಆದರೆ ನೋಂದಣಿ
ಕಾರ್ಯ ಆರಂಭಗೊಂಡು ಹದಿಮೂರು ದಿನ ಕಳೆದರೂ ಎಂಟು ಲಕ್ಷ ಕೂಡ ದಾಟಿಲ್ಲ ಎನ್ನುವ ಮಾತುಗಳು
ಕೇಳಿಬಂದಿದೆ.
ವಿಜಯೇಂದ್ರ ನಾಯಕತ್ವಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ನಾಯಕರು ಬಹಿರಂಗವಾಗಿ ವಿರೋಧ
ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರದ ಮುಂದೆಯೂ ವಿರೋಧ ವ್ಯಕ್ತಪಡಿಸಿರುವ ಮುಖಂಡರು ಪಕ್ಷದ ಕಾರ್ಯ
ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಸುಮಾರು ಹದಿಮೂರು ದಿನಗಳು ಕಳೆದಿದ್ದರೂ ಉತ್ತರ ಕರ್ನಾಟಕದಲ್ಲಿ
ಸದಸ್ಯತ್ವ ಅಭಿಯಾನಕ್ಕೆ ಮುಖಂಡರು ಇನ್ನೂ ಚಾಲನೆ ನೀಡಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
ವರಿಷ್ಠರ ಸೂಚನೆಗೂ ಕೇರ್ ಇಲ್ಲ: ಕಳೆದ ವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ನೋಂದಣಿ
ಕಾರ್ಯಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ, ನಾಯಕರಿಗೆ ಕೆಲ ವೊಂದು ಸಲಹೆ ನೀಡಿದ್ದರು. ಸದಸ್ಯತ್ವ ಅಭಿಯಾನಕ್ಕೆ ಚುರುಕು ಮುಟ್ಟಿಸುವಂತೆ ಮೋರ್ಚಾಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದ ವರಿಷ್ಠರು, ಪ್ರಮುಖ ನಾಯಕರು ಪ್ರತಿ ಜಿಲ್ಲೆಗೆ ತೆರಳಿ ಎರಡು ದಿನಗಳ ಕಾಲ ಅಲ್ಲೇ ತಂಗಬೇಕು ಮತ್ತು ಸದಸ್ಯತ್ವದ ನೇತೃತ್ವ ವಹಿಸಿಕೊಳ್ಳಬೇಕು. ಯಾರು ಸರಿಯಾಗಿ ಜವಾಬ್ದಾರಿ ನೀಡುವುದಿಲ್ಲವೋ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಆದರೂ, ಬಹುತೇಕ ನಾಯಕರು ಜಿಲ್ಲಾ ಕೇಂದ್ರಗಳಿಗೆ ತಲೆಹಾಕಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
ನೊಂದಣಿಯೇ ಆರಂಭವಾಗಿಲ್ಲ
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಈವರೆಗೆ ನೋಂದಣಿ ಕಾರ್ಯವೇ ಆಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರೊಂದಿಗೆ ಪ್ರತಿಬೂತ್ಗೆ ಮೂರು ಸಾವಿರ ನೋಂದಣಿ ಮಾಡುವಂತೆ ಪಕ್ಷದ ವರಿಷ್ಠರು ಹೇಳಿದ್ದರೆ, ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಮೂರು ಸಾವಿರ ನೋಂದಣಿಯಾಗುತ್ತಿವೆ ಎನ್ನುವ ಮಾತುಗಳು ಕೇಳಿಬಂದಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರೊಬ್ಬರು ಮಾತನಾಡಿದ್ದು. ಗಣೇಶ ಹಬ್ಬದ
ಕಾರ್ಯಕ್ರಮದಿಂದಾಗಿ ಸದಸ್ಯತ್ವ ಅಭಿಯಾನ ಕುಂಟಿತ್ತವಾಗಿದೆ. ಈ ಬಾರಿ ಮಿಸ್ಡ್ ಕಾಲ್ ನಂತರ ಓಟಿಪಿ ನೀಡ ಬೇಕಾಗುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ಜನರಲ್ಲಿ ಸದಸ್ಯತ್ವ ಮಾಡುವುದರಲ್ಲಿ ವಿಳಂಬವಾಗುತ್ತಿದೆ. ಒಬ್ಬ ಕಾರ್ಯಕರ್ತ ಒಂದು ದಿನಕ್ಕೆ 25 ಮಾತ್ರ ಮಾಡುತ್ತಿರುವುದು ಈ ಸಮಸ್ಯೆಗೆ ಕಾರಣ ಎನ್ನುವ ಮಾತುಗಳನ್ನು ಆಡಿದ್ದಾರೆ.
*
ಕೆಲವು ತಾಂತ್ರಿಕ ಸಮಸ್ಯೆಯಿಂದ ಸದಸ್ಯತ್ವ ನೋಂದಣಿಯಲ್ಲಿ ಅಡಚಣೆ ಉಂಟಾಗಿತ್ತು. ಆದ್ದರಿಂದ ಹಲವು ಕಡೆ
ಪತ್ರದ ಮೂಲಕ ಸದಸ್ಯತ್ವ ಮಾಡಿಸಲಾಗುತ್ತಿದೆ. ಗೌರಿ ಗಣೇಶ ಹಬ್ಬದಿಂದ ಕೂಡ ನೋಂದಣಿಗೆ ವಿಳಂಬವಾಗಿತ್ತು. ಎಷ್ಟು ನೋಂದಣಿಯಾಗಿದೆ ಎನ್ನುವ ಬಗ್ಗೆ ನಿಖರವಾಗಿ ಈಗಲೇ ಹೇಳಲು ಬರುವುದಿಲ್ಲ.
ಸುನೀಲ್ ಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಇದನ್ನೂ ಓದಿ: BJP Padayatra: ಬಿಜೆಪಿಯಿಂದ ಮತ್ತೊಂದು ಪಾದಯಾತ್ರೆ?; ಯತ್ನಾಳ್ ಟೀಂ ಸೇರಿಸಿಕೊಂಡು ಪ್ಲ್ಯಾನ್ ಮಾಡಲು ಹೈಕಮಾಂಡ್ ಸೂಚನೆ