ಹೂವಪ್ಪ ಐ.ಎಚ್.
25 ರು.ಗಳಿದ್ದ ತೆಂಗಿನಕಾಯಿ ದರ 50 ರು.ಗಳಿಗೆ ಏರಿಕೆ, ಎರಡೇ ವಾರದಲ್ಲಿ ಬೆಲೆ ದುಪ್ಪಟ್ಟು
ಬೆಂಗಳೂರು: ತೆಂಗಿನಕಾಯಿ ದರ ತಿಂಗಳ ಅಂತರದಲ್ಲಿ ದುಪ್ಪಟ್ಟು ಏರಿಕೆ ಕಂಡಿದೆ. ಗಣೇಶ ಚತುರ್ಥಿ ವೇಳೆ 25 ರು.ಗಳಿದ್ದ ಕಾಯಿ ಬೆಲೆ ಈಗ 50 ರು.ಗಳಿಗೆ ಏರಿಕೆಯಾಗಿದೆ. ಆದರೆ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಎಳ ನೀರನ್ನೇ ಮಾರಾಟ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದಾಸ್ತಾನು ಕಡಿಮೆ ಇದ್ದು, ಧಾರಣೆಯ ಪ್ರಯೋಜನ ರೈತರಿಗೆ ಸಿಗದಂತಾಗಿದೆ.
ಸದ್ಯ ಉತ್ತರಭಾರತಕ್ಕೆ ಶೇ.40 ರಷ್ಟು ಎಳನೀರು ಕರ್ನಾಟಕದಿಂದಲೇ ರವಾನೆಯಗುತ್ತಿದೆ. ಇದಲ್ಲದೇ ಕೊಬ್ಬರಿ ಎಣ್ಣೆ, ತೆಂಗಿನಪುಡಿಗೆ ಹಾಗೂ ಉಂಡೆಕೊಬ್ಬರಿಗೆ ತೆಂಗಿನಕಾಯಿ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ದಾಖಲೆ ಮಟ್ಟದ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ ತೆಂಗಿನಕಾಯಿ ದಾಸ್ತಾನು ಕೊರತೆಯಾಗಿದೆ.
ಉತ್ಪಾದನೆ ಕುಸಿತ: ಹಾಸನದ ಚನ್ನರಾಯಪಟ್ಟಣದಿಂದ ಬಂದ ಕಾಯಿಯನ್ನು ಬೆಂಗಳೂರಿನಲ್ಲಿ ಸಗಟು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕಳೆದ ತಿಂಗಳು ದಪ್ಪ ಗಾತ್ರದ ತೆಂಗಿನಕಾಯಿ ಸಗಟು ದರ ೨೫-೨೬ ರು.ಗೆ ಇತ್ತು. ಇದೇ ಕಾಯಿ ದರವೀಗ ೪೫-೫೦ ರು. ಗೆ ತಲುಪಿದೆ. ಇನ್ನು ಸಾಧಾರಣ ದಪ್ಪ ೨೦-೨೨ ರು. ಗೆ ಇದ್ದ ಬೆಲೆ ೩೮-೪೦ ರು. ಗೆ ತಲುಪಿದೆ. ಸಣ್ಣ ಗಾತ್ರದ ಕಾಯಿ ದರ ೧೦-೧೫ ರು. ಇದ್ದದ್ದು, ೨೦-೨೫ ಗೆ ಮಾರಾಟ ವಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಚಿಲ್ಲರೆ ದರ ಏರಿಕೆ ಕಂಡಿದೆ.
ಸಣ್ಣ ಕಾಯಿಗೆ ಡಿಮ್ಯಾಂಡ್: ಗ್ರಾಹಕರು ದಪ್ಪ ತೆಂಗಿನಕಾಯಿ ಬೆಲೆ ವಿಚಾರಿಸಿ ಸಣ್ಣಕಾಯಿಯಯನ್ನೇ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಮಧ್ಯಮ ಗಾತ್ರದ ತೆಂಗಿನಕಾಯಿ ಹೆಚ್ಚು ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಅಫ್ರೋಜ್ ಖಾನ್. ಮಾರುಕಟ್ಟೆಯಲ್ಲಿ ಕೆ.ಜಿ. ಲೆಕ್ಕದಲ್ಲಿ ತೆಂಗಿನಕಾಯಿ ಸದ್ಯ ರು. ೫೭-೫೦ ರು. ಗೆ ಮಾರಾಟ ವಾಗುತ್ತಿದೆ. ಮುಂದಿನ ದಸರಾ, ದೀಪಾವಳಿ ಹಬ್ಬ, ಮದುವೆ ಸೀಸನ್ನಲ್ಲಿ ಇನ್ನೂ ಬೇಡಿಕೆ ಹೆಚ್ಚಲಿದೆ. ಬೇಕರಿ , ಸಿಹಿ ತಿಂಡಿ -ತಿನಿಸು ತಯಾರಿಸಲೂ ತೆಂಗಿನ ಎಣ್ಣೆ ಹೆಚ್ಚು ಬಳಸಲಾಗುತ್ತದೆ.
ಇದು ಕೂಡಾ ತೆಂಗಿನಕಾಯಿ ಬೇಡಿಕೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ವ್ಯಾಪಾರಿಗಳು ಬೆಳೆಗಾರರಿಗೆ ಮುಂಗಡ ಹಣ ನೀಡಿ ಕೆ.ಜಿ.ಗೆ ೫೦ ರು. ದರದಲ್ಲಿ ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ದರವಿದ್ದರೂ ಇಳುವರಿ ಇಲ್ಲ: ತೆಂಗಿನಬೆಳೆಗೆ ಆಗಾಗ ನುಸಿರೋಗ ಬಾಧಿಸುತ್ತಲೇ ಇರುತ್ತದೆ. ಅಲ್ಲದೇ ಕಟಾವಿಗೆ ಬಂದ ಸಂದರ್ಭದಲ್ಲಿ ಕಟಾವು, ಕಾಯಿ ಸುಲಿಯುವ ಕೂಲಿ, ಮಾರುಕಟ್ಟೆ ಸಾಗಣೆ – ಹೀಗೆ ಸಾಕಷ್ಟು ಖರ್ಚು ಬರುತ್ತದೆ. ಈ ಹಿಂದೆ ದರ ಇಲ್ಲದ ಸಮಯದಲ್ಲಿ ಖರ್ಚುಮಾಡಿದ ಹಣ ಸಿಗುತ್ತಿರಲಿಲ್ಲ. ಈಗ ಉತ್ತಮ ದರವಿದೆ ,ಆದರೆ ಇಳುವರಿ ಇಲ್ಲ. ಆದರೂ ಹೆಚ್ಚು ಬೆಲೆ ಇರುವುದರಿಂದ ಸ್ವಲ್ಪ ದುಡ್ಡು ಉಳಿಯುತ್ತಿದೆ ಎಂದು ರೈತರು ಹೇಳುತ್ತಾರೆ. ಪ್ರತಿ ಮರದಲ್ಲಿ ವರ್ಷಕ್ಕೆ ಸರಾಸರಿ ೨೦೦-೨೧೦ ತೆಂಗಿನಕಾಯಿ ಫಸಲು ಬರುತ್ತಿತ್ತು. ಆದರೆ ಇದೀಗ ಅದೀಗ ೨೦-೪೦ ಕ್ಕಿಳಿದಿದೆ ಎಂದು ರೈತರು ಹೇಳುತ್ತಾರೆ.
ಎಳನೀರಿನ ಬೆಲೆಯೂ ಏರಿಕೆ: ಸಾಮನ್ಯವಾಗಿ ಮಳೆಗಾಲದಲ್ಲಿ ಎಳನೀರಿನ ಬೆಲೆ ತುಂಬ ಕಡಿಮೆ ಬೇಡಿಕೆ ಇರುತ್ತದೆ. ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳನೀರಿನ ಬೆಲೆ ಹೆಚ್ಚಾಗಿಯೇ ಇದೆ. 50 ರಿಂದ 60 ರು.ಗೆ
ಮಾರಾಟವಾಗುತ್ತಿದೆ. ಫಸಲು ಕಡಿಮೆಯಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಯಾಗುತ್ತಿಲ್ಲ. ಸದ್ಯ ಮಳವಳ್ಳಿ, ಪಾಂಡವಪುರದಿಂದ ಮಾತ್ರ ಎಳನೀರು ಪೂರೈಕೆಯಾಗುತ್ತಿದೆ. ರಾಮನಗರ,
ಮಂಡ್ಯ, ಮದ್ದೂರಿನಿಂದ ಪೂರೈಕೆ ನಿಂತಿದೆ. ಕಳೆದ ವರ್ಷದ ಬಿಸಿಲಿನ ತಾಪಕ್ಕೆ ತೆಂಗಿನ ಮರಗಳು ಕುಗ್ಗಿ ಹೋಗಿವೆ. ಮುಂದಿನ ಬೇಸಿಗೆ ವೇಳೆಗೆ ಎಳನೀರಿಗೆ ಮತ್ತಷ್ಟು ಬೇಡಿಕೆ ಹೆಚ್ಚಬಹುದು ಎನ್ನಲಾಗುತ್ತಿದೆ.
*
ಕರ್ನಾಟಕ ೩ನೇ ಅತಿದೊಡ್ಡ ತೆಂಗು ಉತ್ಪಾದಕ ಕೇರಳ ಮತ್ತು ತಮಿಳುನಾಡು ನಂತರ ಕರ್ನಾಟಕ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯವಾಗಿದೆ. ರಾಜ್ಯದಲ್ಲಿ 5.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 512.88 ಕೋಟಿ ತೆಂಗಿನ ಕಾಯಿ ಉತ್ಪಾದನೆಯಾಗುತ್ತದೆ. ತುಮಕೂರು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟಾಗಿ ಶೇಕಡಾ 85ಕ್ಕಿಂತ ಹೆಚ್ಚು ತೆಂಗಿನಕಾಯಿ ಬೆಳೆಯಲಾಗುತ್ತದೆ.
*
ಹಿಂದೆ ತೆಂಗಿನಕಾಯಿ ದರ ಇಲ್ಲದ ಸಮಯದಲ್ಲಿ ಖರ್ಚು ಮಾಡಿದ ಹಣ ಸಿಗುತ್ತಿರಲಿಲ್ಲ. ಈಗ ಉತ್ತಮ ದರವಿದೆ. ಆದರೆ ಇಳುವರಿ ಇಲ್ಲ. ಆದರೂ ಹೆಚ್ಚು ಬೆಲೆ ಇರುವುದರಿಂದ ಸ್ವಲ್ಪ ದುಡ್ಡು ಉಳಿಯುತ್ತಿದೆ. ಕುಮಾರಸ್ವಾಮಿ, ರೈತ, ತುಮಕೂರು ಈ ವರ್ಷ ಶೇ.70ರಷ್ಟು ತೆಂಗಿನಕಾಯಿ ಕೊರತೆ ಇದೆ. ಕೊಬ್ಬರಿ ಎಣ್ಣೆ, ತೆಂಗಿನ ಪುಡಿ ಹಾಗೂ ಉಂಡೆ ಕೊಬ್ಬರಿಗೆ ಹೆಚ್ಚು ಬೇಡಿಕೆ ಇದೆ. ಇದರ ಪರಿಣಾಮ ದಾಖಲೆ ಮಟ್ಟಕ್ಕೆ ದರ ಏರಿಕೆಯಾಗಿದೆ.
ಬಿ ವಿ ಶ್ರೀಧರ್,
ಎಪಿಎಂಸಿ ತೆಂಗಿನಕಾಯಿ ವ್ಯಾಪಾರಿ, ಬೆಂಗಳೂರು