ರಂಜಿತ್ ಎಚ್. ಅಶ್ವತ್ಥ
ಪೂರ್ಣ ಪ್ರಮಾಣದ ಆರತಿಗೆ ಇನ್ನಷ್ಟು ಅಧ್ಯಯನ ಅಗತ್ಯ
ಹರಿದ್ವಾರ, ಕಾಶಿ ಪಂಡಿತರಿಂದ ರಾಜ್ಯದವರಿಗೆ ತರಬೇತಿ
ಶೀಘ್ರದಲ್ಲಿಯೇ ಸಿಎಂ, ಡಿಸಿಎಂಗೆ ವರದಿ: ಚಲುವರಾಯಸ್ವಾಮಿ
ಹರಿದ್ವಾರ/ವಾರಾಣಸಿ: ಗಂಗಾರತಿ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡಲು ಮುಂದಾ ಗಿರುವ ರಾಜ್ಯ ಸರಕಾರ ಈ ಸಂಬಂಧ ಪರಿಶೀಲನೆ ನಡೆಸಲು ಮತ್ತೊಂದು ನಿಯೋಗದ ಭೇಟಿ ಅಗತ್ಯವಿದ್ದು, ಶೀಘ್ರದಲ್ಲಿಯೇ ಮತ್ತೊಮ್ಮೆ ಅಧಿಕಾರಿಗಳು ಭೇಟಿ ನೀಡಲು ತೀರ್ಮಾನಿಸಿದ್ದಾರೆ.
ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಈ ವೇಳೆ ಗಂಗಾರತಿ ಟ್ರಸ್ಟ್ ಸದಸ್ಯರೊಂದಿಗೆ ಚರ್ಚಿಸಿದರು.
ಸರಣಿ ಸಭೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿ ನಾವು ನೋಡಿರುವ ಅಂಶ ಹಾಗೂ ಕಾವೇರಿ ಆರತಿಗೆ ಆಗಬೇಕಿರುವ ಮೂಲಸೌಕರ್ಯದ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ವರದಿ ಸಲ್ಲಿಸಲಾಗುವುದು.
ಇದರೊಂದಿಗೆ ಕಾವೇರಿ ಆರತಿಗೆ ಇನ್ನಷ್ಟು ಅಧ್ಯಯನ ಅಗತ್ಯವಿರು ವುದರಿಂದ ರಾಜ್ಯದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದಸರಾಗೆ ಪ್ರಾಯೋಗಿಕ ಆರತಿ: ಆರಂಭದಲ್ಲಿ ಕಾವೇರಿ ಆರತಿಯನ್ನು ಮುಂಬರುವ ದಸರಾದಲ್ಲಿಯೇ ಪ್ರಾರಂಭಿ ಸಲು ಚರ್ಚಿಸಲಾಗಿತ್ತು. ಆದರೆ ಇದಕ್ಕೆ ಸಾಕಷ್ಟು ಪೂರ್ವ ತಯಾರಿಯ ಅಗತ್ಯ ವಿರುವುದರಿಂದ ಅಧ್ಯಯನ ಹಾಗೂ ಸಿದ್ಧತೆ ಯಾಗುವುದು ಅನಿ ವಾರ್ಯ. ಆದ್ದರಿಂದ ಈ ದಸರಾ ವೇಳೆಗೆ ಪ್ರಾಯೋಗಿಕವಾಗಿ ಕಾವೇರಿ ಆರತಿ ಮಾಡ ಬಹುದು. ಬಳಿಕ ಧಾರ್ಮಿಕ ಹಾಗೂ ಮೂಲಸೌಕರ್ಯ ತಯಾರಿಗಳು ಪೂರ್ಣಗೊಂಡ ಬಳಿಕ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು. ನಿತ್ಯ ಆರತಿಯೋ ಅಥವಾ ವಾರಕ್ಕೆ ಎರಡು, ಮೂರು ದಿನವೋ ಎನ್ನುವ ಬಗ್ಗೆ ಸಿಎಂ, ಡಿಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿ ದರು.
ಹರಿದ್ವಾರ, ಕಾಶಿಯಿಂದ ಪಂಡಿತರಿಗೆ ಆಹ್ವಾನ: ಇದೇ ಮೊದಲ ಬಾರಿಗೆ ಕಾವೇರಿ ಆರತಿ ಮಾಡುತ್ತಿರುವುದ
ರಿಂದ ಇದಕ್ಕೆ ಬೇಕಾದ ತಯಾರಿ, ಕರ್ನಾಟಕದ ಅರ್ಚಕರಿಗೆ ತರಬೇತಿ ಸೇರಿದಂತೆ ಧಾರ್ಮಿಕ ವಿಧಿ ವಿಧಾನದ
ಬಗ್ಗೆ ತರಬೇತಿ ನೀಡಲು ಹರಿದ್ವಾರ ಹಾಗೂ ಕಾಶಿಯ ಪಂಡಿತರಿಗೆ ನಿಯೋಗ ಮನವಿ ಮಾಡಿದೆ. ಈ ಬಗ್ಗೆ
ಸಿಎಂ, ಡಿಸಿಎಂ ಜತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮನ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಕಾವೇರಿ ಆರತಿಗೆಂದೇ ಸಾಧು ಸಂಗೀತ: ಹರಿದ್ವಾರ ಹಾಗೂ ಕಾಶಿಯಲ್ಲಿ ನಡೆಯುವ ಗಂಗಾರತಿ ವೇಳೆ ಮಂತ್ರ ಘೋಷದೊಂದಿಗೆ ಗಂಗಾದೇವಿಯ ಮೇಲೆ ರಚಿಸಿರುವ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಎರಡು ಭಾಗದಲ್ಲಿಯೂ ಒಂದು ಗಂಟೆಗಳ ಕಾಲ ಆರತಿ ನಡೆಯುತ್ತದೆ. ಅದಕ್ಕೂ ಒಂದು ತಾಸಿಗೂ ಮೊದಲೇ ಜನರು ನದಿದಂಡೆಯಲ್ಲಿ ಆಸೀನರಾಗಿರುತ್ತಾರೆ. ಕರ್ನಾಟಕದಲ್ಲಿ ನಡೆಸುವ ಕಾವೇರಿ ಆರತಿಯೂ ಬಹುತೇಕ ಇದೇ ಮಾದರಿ ಯಲ್ಲಿ ನಡೆಯುವುದರಿಂದ ಸುಮಾರು ಎರಡು ಗಂಟೆಗಳ ಕಾಲ ಜನರನ್ನು ‘ಎಂಗೇಜ್’ ಮಾಡಬೇಕಾಗುತ್ತದೆ. ಆದ್ದರಿಂದ ಕಾವೇರಿ ಮಾತೆಯ ಇತಿಹಾಸ, ವೈಶಿಷ್ಟ್ಯ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರುವ ಸಾಹಿತ್ಯ ವನ್ನು ರಚಿಸಿ, ಅದಕ್ಕೆ ಸಂಗೀತ ನಿರ್ದೇಶನವನ್ನು ಕರ್ನಾಟಕ ಸಿನಿಮಾ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಸಾಧುಕೋಕಿಲ ಅವರೂ ನಿಯೋಗದಲ್ಲಿದ್ದರು.
ಯಾವ ಭಾಗದಲ್ಲಿ ಎನ್ನುವ ಬಗ್ಗೆಯೂ ಪರಿಶೀಲನೆ: ಕಾವೇರಿ ಆರತಿಯನ್ನು ನಡೆಸುವುದಕ್ಕೆ ಪೂರ್ವ ತಯಾ
ರಿಗೂ ಮೊದಲು ಯಾವ ಭಾಗದಲ್ಲಿ ಆರತಿ ಕಟ್ಟೆಯನ್ನು ನಿರ್ಮಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಕಾವೇರಿ ಹರಿಯುವ ಬಹುತೇಕ ಭಾಗದಲ್ಲಿ ಸಮತಟ್ಟಾದ ಪ್ರದೇಶಗಳಿಲ್ಲ. ಆದ್ದರಿಂದ ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭಾ ದೇವಾಲಯ, ಕೆಆರ್ಎಸ್ ಅಣೆಕಟ್ಟು ಅಥವಾ ಬಲಮುರಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ನಡೆಸ ಬಹುದೇ ಎನ್ನುವ ಚರ್ಚೆಗಳು ನಡೆದಿವೆ. ಎಲ್ಲಿಯೇ ಮಾಡಿದರೂ, ಜನ ಸೇರುವಂತೆ ಹಾಗೂ ಕನೆಕ್ಟಿವಿಟಿ ಕಲ್ಪಿಸುವು ದನ್ನು ಗಮನಿಸಿ ಅಂತಿಮ ಗೊಳಿಸುವ ಸಾಧ್ಯತೆಯಿದೆ. ಈ ವಿಷಯವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ
ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ತೀರ್ಮಾನಿಸಲಿ ಎನ್ನುವ ಚರ್ಚೆ ನಿಯೋಗದಲ್ಲಿ ಕೇಳಿಬಂದಿದೆ.
ಕರ್ನಾಟಕ ನಿಯೋಗದೊಂದಿಗೆ ಸಭೆ ನಡೆಸಿದ ಹರಿದ್ವಾರ ಗಂಗಾ ಮಹಾಸಭಾ ಮಹಾಮಂತ್ರಿ ತನ್ಮಯ ವಸಿಷ್ಠ, ಗಂಗಾ ಆರತಿಯ ರೀತಿಯಲ್ಲಿ ಕಾವೇರಿ ಆರತಿಯನ್ನು ಮಾಡಲು ಮುಂದಾಗಿರು ವುದು ಶ್ಲಾಘನೀಯ. ಆದರೆ. ಇದನ್ನು ಉದ್ಯಮದ ರೀತಿಯಾಗಿ ನೋಡುವ ಬದಲು ಧಾರ್ಮಿಕ ಭಾವನೆ ಮುಖ್ಯ. ಟ್ರಸ್ಟ್ ಅಥವಾ ನಿಗಮವನ್ನು ಮಾಡಿ ದರೂ, ಅದರಲ್ಲಿ ಕಾನೂನು ಸುವ್ಯವಸ್ಥೆ, ಮೂಲಸೌಕರ್ಯದ ನಿರ್ವಹಣೆಯನ್ನು ಅಧಿಕಾರಿಗಳು ಮಾಡಿದರೂ, ಧಾರ್ಮಿಕ ವಿಧಿ ವಿಧಾನಕ್ಕೆ ಸಂಬಂಧಿಸಿದ ತೀರ್ಮಾನ ಗಳನ್ನು ಧಾರ್ಮಿಕ ಮುಖ್ಯಸ್ಥರು ತೆಗೆದುಕೊಂಡರೆ ಸೂಕ್ತ ಎನ್ನುವ ಸಲಹೆಯನ್ನು ನೀಡಿದರು.
ಹರಿದ್ವಾರ ಹಾಗೂ ಕಾಶಿಯಲ್ಲಿ ನಿತ್ಯ ಸೂರ್ಯೋದಯ ಹಾಗೂ ಸೂರ್ಯಸ್ತದ ಸಮಯದಲ್ಲಿ ನಡೆಯುವ ಗಂಗಾ ರತಿಗೆ ಐತಿಹಾಸಿಕ ಹಿನ್ನಲೆಯಿದೆ. ಕಾಶಿಯಲ್ಲಿ ಈ ಆರತಿ ಆರಂಭಗೊಂಡು 35 ವರ್ಷ ಕಳೆದಿದೆ. ಆದರೆ ಹರಿದ್ವಾರದ ಹರ್ ಕೀ ಪೌಡಿಯಲ್ಲಿ ನಡೆಯುವ ಗಂಗಾ ರತಿಗೆ ಅಧಿಕೃತ ದಾಖಲೆಗಳಲ್ಲಿ ಶತಮಾನದ ಇತಿಹಾಸ ವಿದೆ. ಈಗಲೂ ಪ್ರತಿನಿತ್ಯ ಹರಿದ್ವಾರದಲ್ಲಿರುವ ಮೂಲ ನಿವಾಸಿಗಳು ಗಂಗಾರತಿಯಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ. ಗಂಗಾ ರತಿಯ ವೇಳೆ ಕನಿಷ್ಠ 40 ರಿಂದ 50 ಸಾವಿರ ಜನ ಭಾಗವಹಿಸುತ್ತಾರೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ 10ರಿಂದ 20 ಲಕ್ಷ ಜನ ಸೇರುತ್ತಾರೆ. ಆರತಿಯನ್ನು 21 ಪಂಡಿತರು, 21 ಅಭಿಷೇಕವನ್ನು ನೆರವೇರಿಸುತ್ತಾರೆ.
ಸವಾಲುಗಳೇನು?
? ಸಮತಟ್ಟಾದ ಪ್ರದೇಶ ಗುರುತಿಸ ಬೇಕಿದೆ
? ಕಾವೇರಿ ಆರತಿ ಪ್ರತಿ ನಿತ್ಯ ನಡೆಸಿದರೆ, ಸ್ಥಳೀಯರು ಭಾಗವಹಿಸುವುದನ್ನು ಗಮನಿಸಬೇಕು
? ಆರತಿ ನಡೆಸುವ ಪ್ರದೇಶದಲ್ಲಿ 365 ದಿನವೂ ನೀರು ಹರಿಯುವುದೇ ಎನ್ನುವುದನ್ನು ಗಮನಿಸಬೇಕು
? ಆರತಿಯ ಪೂಜಾ ಕೈಂಕರ್ಯ ನಡೆಸಲು ಅಗತ್ಯ ತರಬೇತಿಯನ್ನು ಅರ್ಚಕರಿಗೆ ನೀಡಬೇಕು
? ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ, ಕಾನೂನು ಸುವ್ಯವಸ್ಥೆಗೂ ಸಮಸ್ಯೆಯಾಗದ ರೀತಿಯಲ್ಲಿ ನಿಗಮ
ಅಥವಾ ಟ್ರಸ್ಟ್ ಮಾಡು ವುದು ಹೇಗೆ? ಮಾಡಿದರೂ, ಅದಕ್ಕೆ ರಾಜಕೀಯ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬೇಕು
*
ಕಾವೇರಿ ಆರತಿ ಒಮ್ಮೆ ಆರಂಭಿಸಿದರೆ ಶತಮಾನಗಳವರೆಗೆ ನಡೆಯಬೇಕು ಎನ್ನುವುದು ನಮ್ಮ ಅಭಿಲಾಷೆ. ಆದ್ದರಿಂದ
ಹರಿದ್ವಾರ ಹಾಗೂ ಕಾಶಿಯಲ್ಲಿ ನಡೆಯುವ ಗಂಗಾರತಿಯ ಬಗ್ಗೆ ಪರಿಶೀಲನೆ ನಡೆಸಿದ್ದು, ಸಲಹೆಗಳನ್ನು ಪಡೆದಿ ದ್ದೇವೆ. ಮುಂದಿನ ದಿನದಲ್ಲಿ ಅಽಕಾರಿಗಳು ಭೇಟಿ ನೀಡಿ ಇನ್ನಷ್ಟು ಮಾಹಿತಿ ಪಡೆದು ಬಳಿಕ ರೂಪುರೇಷೆ
ಸಿದ್ಧಪಡಿಸಲಾಗುವುದು.
-ಚಲುವರಾಯಸ್ವಾಮಿ, ಮಂಡ್ಯ ಉಸ್ತುವಾರಿ ಸಚಿವ
ಹರಿದ್ವಾರದಲ್ಲಿ ನಡೆಯುವ ಗಂಗಾರತಿಯ ರೀತಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡಲು ಸರಕಾರ ಮುಂದಾಗಿರುವುದು ಶ್ಲಾಘನೀಯ. ಇದರಿಂದ ಧಾರ್ಮಿಕ ಆಚರಣೆಯೊಂದಿಗೆ ಜನರಲ್ಲಿ ಜಲದ ಬಗ್ಗೆ ಜಾಗೃತಿಯೂ ಮೂಡುತ್ತದೆ.
-ತನ್ಮಯ ವಸಿಷ್ಠ, ಮಹಾಮಂತ್ರಿ, ಹರಿದ್ವಾರ ಗಂಗಾ ಮಹಾಸಭಾ
ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯ. ಕಾವೇರಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಂತರ ಜನರ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಹಾಯವನ್ನು ಮಾಡಿದೆ. ಪ್ರವಾಸೋದ್ಯಮ ಇರಬಹುದು, ವ್ಯವಸಾಯ ಇರಬಹುದು ಅಥವಾ ನದಿ ದಂಡೆಯ ಮೇಲೆ ಇರುವ ಧಾರ್ಮಿಕ ಕೇಂದ್ರಗಳು ಇರಬಹುದು, ಇದರಿಂದ ಕೋಟ್ಯಂತರ ಜನರ ಬದುಕು
ಹಸನಾಗುತ್ತಿದೆ. ಕಾವೇರಿ ನದಿಗೆ ಕಾವೇರಿ ಆರತಿಯನ್ನು ಮಾಡುವ ರಾಜ್ಯ ಸರಕಾರದ ನಿರ್ಧಾರ ಹೆಮ್ಮೆಯ
ವಿಚಾರವಾಗಿದೆ. ಹಾಗಾಗಿ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇನೆ.
-ದಿನೇಶ್ ಗೂಳಿಗೌಡ, ಶಾಸಕ
ಇದನ್ನೂ ಓದಿ: Ranjith H Ashwath Special Column: ಪ್ರಶ್ನೆ ಅದಲ್ಲ, ಎನ್ನುತ್ತಲೇ ಉತ್ತರಿಸುತ್ತಿದ್ದ ನಾಡಿಗೇರರು