ಶೀಘ್ರದಲ್ಲೇ ಧಾಟಿ, ಸಮಯದ ಗಮನ ಹರಿಸಲಿ
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಲೋಕದಲ್ಲಿ ಕೇಳಿಬರುತ್ತಿರುವ ಏಕೈಕ ಪ್ರಶ್ನೆ ಎಂದರೆ ‘ನಾಡಗೀತೆಗೆ ಯಾರ ಧಾಟಿ
ಅಂತಿಮ?’. ಈ ವಿಷಯವಾಗಿ ಗಾಂಧಿ ಜಯಂತಿಯೊಳಗೆ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿ ತಿಂಗಳು ಕಳೆದಿದೆ.
ಸರಕಾರ ಕೂಡಲೇ ಸ್ಪಷ್ಟ ಆದೇಶವನ್ನು ಹೊರಡಿಸಿ, ಈ ವಿವಾದಕ್ಕೆ ತಾರ್ತಿಕ ಅಂತ್ಯ ನೀಡಬೇಕಿದೆ. ಪ್ರಮುಖವಾಗಿ ಕುವೆಂಪು ಅವರು ರಚಿಸಿರುವ ನಾಡಗೀತೆಗೆ ಈಗಾಗಲೇ ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್ ಸೇರಿದಂತೆ ಹಲವರು ಬೇರೆ ಬೇರೆ ಧಾಟಿಯಲ್ಲಿ ಸ್ವರ ಸಂಯೋಜನೆ ಮಾಡಿದ್ದಾರೆ. ಜಯ ಭಾರತ ಜನನಿಯ ತನುಜಾತೆ ಎನ್ನುವ ಸಾಹಿತ್ಯ ವನ್ನು ನಾಡಗೀತೆ ಎನ್ನುವ ಮೊದಲೇ ಅನಂತಸ್ವಾಮಿ ಅವರು ಸ್ವರ ಸಂಯೋಜನೆ ಮಾಡಿದ್ದರು.
ಆದರೆ ಪೂರ್ಣ ಪಾಠಕ್ಕೆ ಮಾಡಿಲ್ಲ ಎನ್ನುವ ಮಾತು ಇದೆ. ಆದರೆ ಅಶ್ವತ್ಥ್ ಅವರು ನಾಡ ಗೀತೆಗೆಂದೇ ಸ್ವರ ಸಂಯೋಜನೆ ಮಾಡಿ ಅದನ್ನು ಜನಪ್ರಿಯಗೊಳಿಸಿದ್ದರು. ಆದರೆ ಒಂದೂವರೆ ದಶಕದಿಂದ ಯಾರ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎನ್ನುವ ವಿವಾದ ಶುರುವಾಗಿದ್ದು, ಅದನ್ನು ತಾರ್ತಿಕ ಅಂತ್ಯಗೊಳಿಸುವಲ್ಲಿ ಮಾತ್ರ ಸರಕಾರ ಹೆಚ್ಚಿನ ಆಸಕ್ತಿ ತೋರಿಲ್ಲ.
ಪಠ್ಯ, ಸಮಯ ನಿಗದಿ ಹಾಗೂ ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ವಿಷಯವಾಗಿ ರಾಜ್ಯ ಸರಕಾರ ಈಗಾಗಲೇ ಮೂರು
ಸಮಿತಿಗಳನ್ನು ರಚಿಸಿ, ಮೂರು ಸಮಿತಿಗಳಿಂದಲೂ ವರದಿ ಪಡೆದಿವೆ. ಇದಾದ ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದ
ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸುನೀಲ್ ಕುಮಾರ್ ಅವರು ಮತ್ತೊಂದು ಸಮಿತಿಯನ್ನು ರಚಿಸಿ ಅದರಿಂದಲೂ ವರದಿ ತರಿಸಿಕೊಂಡಿದ್ದಾರೆ. ಆದರೆ ಸರಕಾರ ಕೇವಲ ವರದಿ ತರಿಸಿ ಕೊಳ್ಳುವಲ್ಲಿ ನಿರತವಾಗಿದೆಯೇ ಹೊರತು, ಯಾವ ವರದಿಯನ್ನೂ ಒಪ್ಪಿ ಜಾರಿಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ.
ಸರಕಾರಗಳ ಈ ನಡೆಯಿಂದ ಈ ವಿಷಯ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಲೀಲಾವತಿ ಅವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ಬಳಿಕ, ಸುಗಮ ಸಂಗೀತದ ಒಂದು ಬಣ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನೇ ಅಂತಿಮ ಗೊಳಿಸಬೇಕು ಎಂದರೆ, ಇನ್ನೊಂದು ಬಣ ಅಶ್ವತ್ಥ್ ಅವರ ಸಂಯೋಜನೆಯನ್ನು ಅಧಿಕೃತಗೊಳಿಸಿ ಎಂದು ಪಟ್ಟು ಹಿಡಿದಿದೆ. ಈಗಾಗಲೇ ಮುಖ್ಯಮಂತ್ರಿಗಳ ಬಳಿ ಈ ಕುರಿತಾದ ಫೈಲ್ ಇದ್ದರೂ, ಅದನ್ನು ಅಂತಿಮಗೊಳಿಸದೇ ಕಾದು ನೋಡುವ ತಂತ್ರಕ್ಕೆ
ಹೋಗಿದ್ದಾರೆ.
ಸರಕಾರದ ಈ ನಡೆಯಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಭಿನ್ನಾಭ್ರಿಪಾಯಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರಕಾರ ಕೂಡಲೇ ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇದರೊಂದಿಗೆ ಪಠ್ಯ ಹಾಗೂ ಸಮಯದ ಬಗ್ಗೆಯೂ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಬೇಕು.
ಇಬ್ಬರೂ ಶ್ರೇಷ್ಠ ಕಲಾವಿದರು: ಹಾಗೇ ನೋಡಿದರೆ ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವತ್ಥ್ ಇಬ್ಬರೂ ಸಂಗೀತ ಕ್ಷೇತ್ರ ಕಂಡ ಅತ್ಯಂತ ಶ್ರೇಷ್ಠ ಗಾಯಕರು ಹಾಗೂ ಸಂಗೀತ ನಿರ್ದೇಶಕರು. ಇಬ್ಬರು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜ್ಯದ ಪರಂಪರೆಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಇಂತಹ ಶ್ರೇಷ್ಠ ಕಲಾವಿದರು ಒಬ್ಬರನ್ನು ಒಬ್ಬರು ಗೌರವಿಸಿಕೊಂಡು, ಒಬ್ಬರ ಸ್ವರ ಸಂಯೋಜನೆಯನ್ನು ಇನ್ನೊಬ್ಬರು ಒಪ್ಪಿ ಅಪ್ಪಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇದೀಗ ಈ ಇಬ್ಬರ ಧಾಟಿಯ ವಿಷಯದಲ್ಲಿ ಎರಡೂ ಕಡೆಯವರು ವಾದ-ವಿವಾದ ಮಾಡಿಕೊಂಡು ಇಬ್ಬರ ಹೆಸರಿಗೂ ಮಸಿ ಬಳಿಯುವ ಕೆಲಸ ಮಾಡಬಾರದು.
ಇದೇ ವಿಷಯವಾಗಿ ಈಗಾಗಲೇ ಸುಗಮ ಸಂಗೀತ ಪರಿಷತ್ನ ಅಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣ ಅವರು ಮಾತನಾಡಿದ್ದು,
ನಾಡಗೀತೆ ಧಾಟಿಯ ವಿಷಯದಲ್ಲಿ ಸುಗಮ ಸಂಗೀತವನ್ನು ಒಡೆಯುವ ಕೆಲಸವಾಗಬಾರದು. ಈ ಇಬ್ಬರೂ ಪ್ರೀತಿಯಿಂದ ಕಟ್ಟಿ,
ಬೆಳೆಸಿದ ಸುಗಮ ಸಂಗೀತ ಕ್ಷೇತ್ರ ಧಾಟಿ ಕಾರಣಕ್ಕೆ ಒಡೆದು ಚೂರಾಗಬಾರದು. ಆದ್ದರಿಂದ ಸರಕಾರ ಕೂಡಲೇ ನಾಡಗೀತೆಯ ಪಠ್ಯ, ಸಮಯ ಹಾಗೂ ಧಾಟಿಯ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ವಿಷಯವಾಗಿಯೇ ಸುಗಮ ಸಂಗೀತ ‘ಮನೆಯೊಂದು ಎರಡು ಬಾಗಿಲಿನಂತಾಗುತ್ತದೆ’ ಎನ್ನುವ ಆತಂಕವನ್ನು ಹೊರಹಾಕಿದ್ದರು.