ಹೂವಪ್ಪ ಐ.ಎಚ್. ಬೆಂಗಳೂರು
ಧಾರಣೆ ದುಪ್ಪಟ್ಟು
ಕ್ವಿಂಟಲ್ಗೆ ೧೫ ಸಾವಿರ ದಾಟಿದ ಬೆಲೆ
ಇನ್ನೂ ತಿಳಿಯದ ನಿರ್ದಿಷ್ಟ ಕಾರಣ
ಏಷ್ಯಾದ ಅತಿ ದೊಡ್ಡದೆನಿಸಿರುವ ತಿಪಟೂರು ಮತ್ತು ಅರಸೀಕೆರೆ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊಬ್ಬರಿ ಬೆಲೆ ಏರಿಕೆ ಕಾಣುತ್ತಿರುವುದು ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿ ಸಿದೆ. ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಬುಧವಾರದ ರಾಜಿನಲ್ಲಿ ಕನಿಷ್ಠ 13800 ರು. ರಿಂದ ಗರಿಷ್ಠ ದರ 15022 ರು.ಗೆ ಮಾರಾಟವಾಗಿದೆ. ಇನ್ನು ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ 11000 ರು. ಯಿಂದ ಗರಿಷ್ಠ ದರ 15000 ರು. ಮಾರಾಟವಾಗಿದೆ.
ಕಳೆದ ಸಾಲಿನಲ್ಲಿ ಕ್ವಿಂಟಲ್ಗೆ 11000 ರು. ಗೆ ಇದ್ದ ಬೆಲೆ ನಿರಂತರವಾಗಿ ಕುಸಿತ ಕಂಡ ಕೊಬ್ಬರಿ ಬೆಲೆ 7500 ರು.ನಿಂದ 8000 ರು. ಗೆ ಬಂದು ನಿಂತಿತ್ತು. ಇದರಿಂದ ರಾಜ್ಯದ ತೆಂಗು ಬೆಳೆಯುವ ರೈತರನ್ನು ಬಾರಿ ನಿರಾಶೆಗೊಳಿಸಿತ್ತು. ನಂತರ ನಾಫೆಡ್ ಮೂಲಕ ಕೇಂದ್ರ ಸರಕಾರ 12000 ರು. ಹಾಗೂ ರಾಜ್ಯ ಸರಕಾರದ ಪ್ರೊತ್ಸಾಹಧನ 1500 ರು. ನೀಡಿ ಕೊಬ್ಬರಿ ಕೊಂಡಿದ್ದರಿಂದ ರೈತರು ಸಮಾಧಾನ ಪಟ್ಟುಕೊಂಡಿದ್ದರು.
ಇದನ್ನೂ ಓದಿ: ತೆಂಗಿನಕಾಯಿಯ ಜುಟ್ಟು, ಒಳಗೆ ಅವಿತಿದೆಯೊಂದು ಗುಟ್ಟು
ಇಷ್ಟಾದರೂ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಏರಿಕೆ ಕಂಡಿರಲಿಲ್ಲ. ಹಂತಹಂತವಾಗಿ ಬೆಲೆ ಇನ್ನೂ ಹೆಚ್ಚಾಗುವ
ಸಾಧ್ಯತೆಯಿದೆ. ಏಕೆಂದರೆ, ಮುಂದೆ ಸಾಲು ಸಾಲು ಹಬ್ಬಗಳಿದ್ದು ಅದರಲ್ಲೂ ಉತ್ತರ ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ಕೊಬ್ಬರಿ ಬೇಡಿಕೆ ಹೆಚ್ಚುವುದರಿಂದ ಉತ್ತಮ ಬೆಲೆ ನಿರೀಕ್ಷಿಸಬಹುದಾಗಿದೆ. ತಿಪಟೂರು ಕೊಬ್ಬರಿಗೆ ಮಾರು ಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಕೇರಳ ಮತ್ತು ತಮಿಳುನಾಡು ಕೊಬ್ಬರಿಗಿಂತ ಹೆಚ್ಚು ಮೌಲ್ಯ ಹೊಂದಿದೆ.
ಕೊಬ್ಬರಿ ಬೆಲೆ ಏರಿಕೆ ಹಾಗೂ ಇಳಿಕೆಗೆ ಇದುವರೆಗೂ ಯಾವುದೇ ನಿರ್ದಿಷ್ಟ ಕಾರಣ ಎಂಬುದು ಇಲ್ಲ. ಸರಕಾರ ಇದರ ಬಗ್ಗೆ ಅಧ್ಯಯನ ಮಾಡಿ ಯಾವ ಕಾರಣಕ್ಕೆ ಬೆಲೆ ಏರಿಕೆ ಆಗುತ್ತದೆ ಮತ್ತು ಯಾವಾಗ ಆಗುತ್ತದೆ ಎಂಬುದನ್ನು ತಿಳಿಸಿದರೆ ರೈತರಿಗೆ ಕೊಬ್ಬರಿ ಮಾರಲು, ಉತ್ತಮ ಬೆಲೆ ಪಡೆಯಲು ಅನುಕೂಲವಾಗುತ್ತದೆ ಎಂದು ತೆಂಗು ಬೆಳೆಗಾ ರರು ಹೇಳುತ್ತಾರೆ. ಬೇಡಿಕೆಗೆ ತಕ್ಕಷ್ಟು ಕೊಬ್ಬರಿ ಬರದಿರುವುದು ಕೂಡಾ ಕೊಬ್ಬರಿ ಬೆಲೆ ಏರಿಕೆಯಾಗಲು ಕಾರಣ ವಾಗಿದೆ. ಜತೆಗೆ ಬಹಳಷ್ಟು ರೈತರು ಎಳನೀರು ಮಾರಾಟ ಮಾಡಿರುವುದೂ ಕೊಬ್ಬರಿ ಆವಕ ಕಡಿಮೆಯಾಗಲು ಕಾರಣವಿರಬಹುದು. ಆದರೆ ಉತ್ತರ ಭಾರತದಿಂದ ದೀಪಾವಳಿ ಹಬ್ಬದ ಋತುವಿನಲ್ಲಿ ಬೆಲೆ ಏರಿಕೆ ಸಹಜ ಎಂದು ತಿಪಟೂರಿನ ಕೊಬ್ಬರಿ ವ್ಯಾಪಾರಿಗಳು ಹೇಳುತ್ತಾರೆ.
ತಿಪಟೂರು ಕೊಬ್ಬರಿ ವಿಶೇಷತೆ
ತಿಪಟೂರು ಕೊಬ್ಬರಿ ರುಚಿ ಮತ್ತು ಗುಣಮಟ್ಟದಲ್ಲಿ ಹೆಚ್ಚಿರುವ ಕಾರಣ ಇಲ್ಲಿನ ಕೊಬ್ಬರಿಗೆ ಬಹಳ ಬೇಡಿಕೆ ಇದೆ. ಉತ್ತರ ಭಾರತದಲ್ಲಿ ಕೊಬ್ಬರಿಯನ್ನು ಅಡುಗೆಗೆ ಹಾಗೂ ಸಿಹಿ ಪದಾರ್ಥ ತಯಾರಿಕೆಗೆ ಹೆಚ್ಚಾಗಿ ಬಳಸುತ್ತಾರೆ. ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಗುಣಮಟ್ಟದ ಎಣ್ಣೆ ತಯಾರಿಕೆಗೂ ಬಳಸುವುದರಿಂದ ತಿಪಟೂರು ಕೊಬ್ಬರಿ ಪ್ರಖ್ಯಾತ ಪಡೆದಿದೆ ಜತೆಗೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡದ ಜಿಲ್ಲೆಗಳಲ್ಲಿ ಅಡುಗೆಗೆ ಕೊಬ್ಬರಿ ಬಳಸುವ ಹಾಗೆ ಇತರ ಜಿಲ್ಲೆಗಳಲ್ಲೂ ಕೊಬ್ಬರಿ ಎಣ್ಣೆಯನ್ನು ಜನಸಾಮಾನ್ಯರು ಅಡುಗೆಗೆ ಬಳಸಿದರೆ ಜನರಿಗೆ ಉತ್ತಮ ಆರೋಗ್ಯವೂ ಲಭಿಸುತ್ತದೆ, ಜತೆಗೆ ರಾಜ್ಯದ ಕೊಬ್ಬರಿ ಬೆಳೆಗಾರಿಗೆ ಒಳ್ಳೆಯ ಬೆಲೆಯೂ ಸಿಗುತ್ತದೆ. ಎಂದು ಕೊಬ್ಬರಿ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡು ಕೇರಳ ಕೊಬ್ಬರಿ ಎಣ್ಣೆ ತಯಾರಿಕರು ಇಲ್ಲಿನ ಉಂಡೆ ಕೊಬ್ಬರಿಯನ್ನು ಎಣ್ಣೆ ತಯಾರಿಸಲು ಖರೀದಿಸಿದ್ದಾರೆ. ಇದು ಕೊಬ್ಬರಿ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ತಿಪಟೂರು ಕೊಬ್ಬರಿವ್ಯಾಪಾರಿಗಳು.
ತೆಂಗು ಬೆಳೆ ಕ್ಷೀಣ
ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ ತೆಂಗು ಬೆಳೆಯುವ ಪ್ರಮುಖ
ಜಿಗಲಾಗಿದ್ದು, ಅಂದಾಜು ಅಂಕಿ ಸಂಖ್ಯೆ ಪ್ರಕಾರ ರಾಜ್ಯದಲ್ಲಿ 693516 ಹೆಕ್ಟೇರ್ ಪ್ರದೇಶದಲ್ಲಿ ಇದ್ದ ತೆಂಗು ಪ್ರದೇಶ ಈ ವರ್ಷಕ್ಕೆ 576249 ಹೆಕ್ಟೇರ್ಗೆ ಇಳಿಕೆಯಾಗಿದೆ. ಅಂದರೆ 117267 ಹೆಕ್ಟೇರ್ ಪ್ರದೇಶ ಕಡಿಮೆ ಆಗಿದೆ. ಕರ್ನಾಟಕ ಅಷ್ಟೆ ಅಲ್ಲದೇಶದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಲ್ಲೂ ತೆಂಗು ಬೆಳೆ ಪ್ರದೇಶ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.