ಕೆಎಚ್ ಮುನಿಯಪ್ಪ-ರಮೇಶ್ ಕುಮಾರ್ ಕಚ್ಚಾಟ ನಿಲ್ಲಲ್ಲ
ದಳಪತಿಗಳ ಆಟವೇ ಇನ್ನೆಲ್ಲ, ವರ್ತೂರ್ ಕಾಟ ತಪ್ಪಲ್ಲ
ಕೆ.ಎಸ್. ಮಂಜುನಾಥರಾವ್ ಕೋಲಾರ
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದು, ಚುನಾ ವಣೆಗೆ ನಿಲ್ಲುವುದು ಬಹುತೇಕ ಖಚಿತವಾಗಿ ರುವ ಬೆನ್ನಲ್ಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ವಿಜಯಮಾಲೆ ಅಷ್ಟು ಸುಲಭವಲ್ಲ ಎಂಬ ಮಾತು ಕೇಳಿಬರುತ್ತಿದೆ.
ಇದಕ್ಕೆ ಕಾರಣ ಮಾಜಿ ಸ್ಪೀಕರ್ ರಮೇಶ್ ಕುಮಾರ್ (ಸ್ವಾಮಿ) ಮತ್ತು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ನಡುವಿನ ರಾಜಕೀಯ ವೈಷಮ್ಯ. ಒಂದೇ ಪಕ್ಷದಲ್ಲಿದ್ದರೂ ಎಣ್ಣೆ-ಸೀಗೇಕಾಯಿಯಂತೆ ಇರುವ ಇವರಿಬ್ಬರ ಮೈಮನಸ್ಸು. ಚುನಾವಣೆ ವೇಳೆಯೂ ಮುಂದುವರಿದರೆ ಸಿದ್ದರಾಮಯ್ಯ ಸಮಸ್ಯೆ ಎದುರಿಸಬೇಕಾಗಿ ಬರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ನೀವು ನಾಮಪತ್ರ ಹಾಕಿ ರಾಜ್ಯಾದ್ಯಂತ ಪ್ರಚಾರ ಮಾಡಿ. ನಾವಿಲ್ಲಿ ಚುನಾವಣೆ ನಡೆಸಿ ಗೆಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ರಮೇಶ್ ಕುಮಾರ್ ಮತ್ತು ಅವರ ಗುಂಪು ಭರವಸೆ ನೀಡಿದೆ. ಆದರೆ, ಗೆಲುವು ಹೇಳಿಕೊಂಡಷ್ಟು ಸುಲಭವಲ್ಲ ಎಂಬುದನ್ನು ಸಿದ್ದರಾ ಮಯ್ಯ ಅವರಿಗೆ ಕೆ.ಎಚ್. ಮುನಿಯಪ್ಪ ಈಗಾಗಲೇ ಮನದಟ್ಟು ಮಾಡಿದ್ದಾರೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದ ರಮೇಶ್ ಕುಮಾರ್ ಹೇಳಿದಂತೆ ಕೇಳಿದರೆ ತಾವು ಚುನಾವಣೆ ವೇಳೆ ಸುಮ್ಮನೆ ಕುಳಿತಿರಬೇಕಾಗುತ್ತದೆ ಎಂಬ ಸಂದೇಶವನ್ನು ಕೆ.ಎಚ್.ಮುನಿಯಪ್ಪ ಈಗಾಗಲೇ ನೀಡಿದ್ದಾರೆ.
ಅವರ ಪುತ್ರಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕೂಡ ತಮ್ಮ ತಂದೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ನಮ್ಮ ಪಾಡಿಗೆ
ನಾವಿರುತ್ತೇವೆ ಎಂದಿದ್ದಾರೆ. ಆದರೆ, ಮುನಿಯಪ್ಪ ಮತ್ತು ರಮೇಶ್ಕುಮಾರ್ ಒಟ್ಟಾಗುವುದು ಕಷ್ಟಸಾಧ್ಯ. ಹೀಗಾಗಿ ಸಿದ್ದರಾ ಮಯ್ಯ ಕೋಲಾರದಲ್ಲಿ ಚುನಾವಣೆ ಎದುರಿಸುವುದು ಹೇಳಿಕೊಂಡಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ವರ್ತೂರು ತಂತ್ರ: ಮತ್ತೊಂದೆಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದ ಮಾಜಿ ಶಾಸಕ ವರ್ತೂರು ಪ್ರಕಾಶ್ ಇದೀಗ ಬಿಜೆಪಿ ಸೇರಿಕೊಂಡಿದ್ದು, ಆ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವರ್ತೂರು
ಪ್ರಕಾಶ್ ಕೂಡ ಹಿಂದುಳಿದ ಮತಗಳನ್ನು ತಮ್ಮತ್ತೆ ಸೆಳೆದುಕೊಳ್ಳುತ್ತಿದ್ದಾರೆ. ಹಣದ ಲೆಕ್ಕಾಚಾರದಲ್ಲಿ ಬಲಾಢ್ಯರಾಗಿರುವ ವರ್ತೂರು, ಆ ಮೂಲಕವೇ ಸಾಕಷ್ಟು ಮತ ಸೆಳೆದುಕೊಳ್ಳುತ್ತಾರೆ. ಮೇಲಾಗಿ ಅವರೂ ಕುರುಬ ಸಮುದಾಯಕ್ಕೆ ಸೇರಿದವರು.
ಆದರೆ, ಸಿದ್ದರಾಮಯ್ಯ ಮುಂದೆ ಅವರ ಆಟ ನಡೆಯದೇ ಇದ್ದರೂ ಸ್ವಲ್ಪ ಮಟ್ಟಿನ ಮತಗಳನ್ನು ಸೆಳೆಯಬಹುದು.
ಮತ್ತೊಂದೆಡೆ ಜೆಡಿಎಸ್ನಿಂದ ಗೆದ್ದು ಇದೀಗ ಕಾಂಗ್ರೆಸ್ ಸೇರಿರುವ ಹಾಲಿ ಶಾಸಕ ಕೆ.ಶ್ರೀನಿವಾಸ ಗೌಡ ಕೂಡ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ತಂದೊಡ್ಡಬಹುದು. ಶ್ರೀನಿವಾಸಗೌಡ ಅವರ ನಡೆ ಜೆಡಿಎಸ್ನ ಒಕ್ಕಲಿಗ ಸಮುದಾಯದವರಿಗೆ ಇರುಸು-ಮುರುಸು ಉಂಟುಮಾಡಿದೆ. ಅವರೇನಾದರೂ ಒಟ್ಟಾಗಿ ನಿಂತು ಕಾಂಗ್ರೆಸ್ ವಿರುದ್ಧ ಹೋರಾಟಕ್ಕಿಳಿದರೆ ಹಾಗೂ ಜೆಡಿಎಸ್ ಬಲಾಢ್ಯ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತ್ತೆ ಸಿದ್ದರಾಮಯ್ಯ ಸಮಸ್ಯೆ ಎದುರಿಸಬೇಕಾಗಿ ಬರಬಹುದು.
ಕ್ಷೇತ್ರದಲ್ಲಿ ನಿರ್ಣಾಯಕ ಎನಿಸಿರುವ ಮುಸ್ಲಿಂ ಮತದಾರರು ಸದ್ಯ ಕಾಂಗ್ರೆಸ್ ಜತೆಗಿದ್ದಾರೆ. ಹೀಗಾಗಿ ಇತರೆ ವಿಚಾರಗಳು ಗೌಣ ವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಚುನಾವಣೆ ಬಂದಾಗ ಜೆಡಿಎಸ್ ಮತ್ತು ಬಿಜೆಪಿ ಯಾವ ಅಭ್ಯರ್ಥಿ ಕಣಕ್ಕಿಳಿಸು ತ್ತಾರೆ ಎಂಬುದರ ಮೇಲೆ ಚುನಾವಣಾ ಆಖಾಡ ಸಿದ್ಧವಾಗುತ್ತದೆ. ಸಿದ್ದರಾಮಯ್ಯ ಗೆಲ್ಲಬಹುದಾದರೂ ಅಂದುಕೊಂಡಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ಮೂರ್ತಿ ಉಳಿವಿಗೆ ಸಿದ್ದರಾಮಯ್ಯ ಸ್ಪರ್ಧೆ?
ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಮಾಲೂರು ಶಾಸಕ ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಅವರಿಗೆ ಈ ಬಾರಿ ಚುನಾವಣೆ ಕಷ್ಟ ಎಂಬುದು ಅರ್ಥವಾಗಿದ್ದು, ಹೀಗಾಗಿ ಏನಾದರೂ ಮಾಡಿ ತಾವು ಗೆಲ್ಲಬೇಕೆಂಬ ಉಮೇದಿನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರುವ ಮೂಲಕ ತಾವು ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರು ಮೂವರೂ ಚುನಾವಣೆ ಬಂದಾಗ ತಮ್ಮ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಾರೆ. ಹೀಗಾಗಿ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಶಾಸಕ ಶ್ರೀನಿವಾಸಗೌಡ ಮಾತ್ರ ಕೋಲಾರದಲ್ಲಿ ಚುನಾವಣೆ ನಡೆಸಬೇಕು.
ಇವರೊಂದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೇರಿಕೊಳ್ಳಬೇಕು. ಕೋಲಾರ ಕ್ಷೇತ್ರದಲ್ಲಿ ದಿವಂಗತ
ಸಿ.ಬೈರೇಗೌಡ ಅವರ ಪ್ರಭಾವ ಇನ್ನೂ ಇದೆಯಾದರೂ ಅವರ ಪುತ್ರ ಕೃಷ್ಣಬೈರೇಗೌಡ ಬೆಂಗಳೂರಿನಲ್ಲಿ ತಮ್ಮ ಕ್ಷೇತ್ರದಲ್ಲಿರುತ್ತಾರೆ. ಹೀಗಾಗಿ ಗೆಲ್ಲಲು ಸಿದ್ದರಾಮಯ್ಯ ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ.
*
ಕೋಲಾರ ವಿಧಾನಸಭಾ ಕ್ಷೇತ್ರದ ೫ ಸಾವಿರ ಮತದಾರರನ್ನು ಕಾಂಗ್ರೆಸ್ ಮುಖಂಡರು ಒಂದೆಡೆ ಸೇರಿಸಿದರೆ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಅವರು 2023 ಚುನಾವಣೆಗೆ ನಾಮಪತ್ರವನ್ನೇ ಹಾಕುವುದಿಲ್ಲ. ಕಾಂಗ್ರೆಸ್ಗೆ ಕಾರ್ಯಕರ್ತರು ಎಲ್ಲಿದ್ದಾರೆ?
– ಪೆಟ್ರೋಲ್ ಬಂಕ್ ಮಂಜುನಾಥ್, ಬಿಜೆಪಿ ಮುಖಂಡ