ಕೆಲವರ ಹಿತಾಸಕ್ತಿಗಾಗಿ ಮಹಾನ್ ಗಾಯಕರಿಗೆ ಅವಮಾನ
ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ್ ಬೆಂಗಳೂರು
ನಾಡಗೀತೆ ಗೊಂದಲಕ್ಕೆ ಇತಿಶ್ರೀ ಹಾಡಲು ಮೈಸೂರು ಅನಂತಸ್ವಾಮಿ ಬಣದಿಂದ ನೂತನ ಸೂತ್ರವೊಂದನ್ನು ಸರಕಾರದ ಮುಂದಿಡಲಾಗಿದೆ. ‘ನಾಡಗೀತೆಯನ್ನು ಅನಂತಸ್ವಾಮಿ ಅವರಿಗೆ ನೀಡಿ, ರೈತಗೀತೆಯ ಗೌರವ ಹೇಗೂ ಸಿ.ಅಶ್ವತ್ಥ್ ಅವರಿಗಿದೆ’
ಎಂದು ಸಲಹೆ ನೀಡಿದೆ.
ನಾಡಗೀತೆಯನ್ನು ಯಾರ ಧಾಟಿಯಲ್ಲಿ ಹಾಡಬೇಕು ಎನ್ನುವ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಈ ವಾದವನ್ನು ಮಂಡಿಸಿರುವ ಕೆಲ ಸಂಗೀತಗಾರರು, ‘ಇಲ್ಲಿ ಅಶ್ವತ್ಥ್ ರನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ. ಆದರೆ ಅವರಿಗಿಂತ ಮೊದಲೇ ಮೈಸೂರು ಅನಂತಸ್ವಾಮಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆದ್ದರಿಂದ ಅವರ ಧಾಟಿಯನ್ನು ಅಂತಿಮಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದಿ ದ್ದಾರೆ. ನಾಡಗೀತೆಯನ್ನು ಒಂದೂವರೆ ದಶಕದ ಹಿಂದೆ ಅಧಿಕೃತಗೊಳಿಸಲಾಗಿದೆ. ಆದರೆ ಹತ್ತಾರು ವರ್ಷಗಳ ಹಿಂದೆಯೇ ಮೈಸೂರು ಅನಂತಸ್ವಾಮಿ ಅವರು ಕುವೆಂಪು ಅವರ ಈ ಗೀತೆಯನ್ನು ನಾಡಿನಾದ್ಯಂತ ಪಸರಿಸಿದ್ದಾರೆ.
ನಾಡಗೀತೆ ಎಂದು ಘೋಷಣೆಯಾದ ಬಳಿಕ ಅಶ್ವತ್ಥ್ ಅವರು ಸ್ವರಸಂಯೋಜನೆ ಮಾಡಿ ಅದನ್ನು ಹಾಡಿದ್ದಾರೆ. ದಶಕಗಳಿಂದ ಮನೆಮನೆಗೆ ತಲುಪಿಸಿರುವುದರಿಂದ ಮೈಸೂರು ಅನಂತಸ್ವಾಮಿ ಅವರ ಧಾಟಿಯೇ ಇರಬೇಕು ಎನ್ನುವ ಆಗ್ರಹವನ್ನು ಸುಗಮ
ಸಂಗೀತ ಗಾರರು ಸರಕಾರದ ಮುಂದೆ ಇಟ್ಟಿದ್ದಾರೆ.
ರಾಜಕೀಯಕ್ಕೆ ಸುಗಮ ಸಂಗೀತ ಬಲಿಯಾಗದಿರಲಿ: ಈ ಬಗ್ಗೆ ವಿಶ್ವವಾಣಿಯೊಂದಿಗೆ ಮಾತನಾಡಿದ ಸಂಗೀತ ನಿರ್ದೇಶಕ ಉಪಾಸನ ಮೋಹನ್ ಅವರು, ನಾಡಗೀತೆಯ ಧಾಟಿ ಅಂತಿಮಗೊಳಿಸುವಲ್ಲಿ ಯಾವುದೇ ಬಣಗಳಿಲ್ಲ. ಇಡೀ ಸುಗಮ ಸಂಗೀತ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನೇ ಅಂತಿಮಗೊಳಿಸಬೇಕು ಎಂದು ಒತ್ತಾಯ ಮಾಡಿದೆ. ಆದರೆ, ಕೇವಲ ಒಂದಿ ಬ್ಬರು ಮಾತ್ರ ಅಶ್ವತ್ಥ್ ಅವರ ಧಾಟಿ ಅಂತಿಮಗೊಳಿಸಬೇಕು ಎಂದು ಹೇಳುತ್ತಿದ್ದಾರೆ.
ಈ ರೀತಿ ಹೇಳುವುದಕ್ಕೆ ಸಂಗೀತ ಅಥವಾ ಸಾಹಿತ್ಯಕ್ಕೆ ಸಂಬಂಧಿಸಿದ ಕಾರಣಗಳಿಲ್ಲ. ಬದಲಿಗೆ ಅವರಿಗೆ ಅಶ್ವತ್ಥ್ ಇಲ್ಲದೇ
ಐಡೆಂಟಿಟಿ ಇಲ್ಲ. ಆದ್ದರಿಂದ ಅಶ್ವತ್ಥ್ ಧಾಟಿಯನ್ನು ಅಂತಿಮಗೊಳಿಸಿ ಐಡೆಂಟಿಟಿ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮನವಿ ಸಲ್ಲಿಕೆ
ಇನ್ನು ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನೇ ಅಂತಿಮಗೊಳಿಸಬೇಕು ಹಾಗೂ ಈ ಕಾರ್ಯಕ್ಕೆ ವೇಗ ನೀಡಬೇಕು ಎಂದು ಆಗ್ರಹಿಸಿ, ಮಂಗಳವಾರದಂದು ಸುಗಮ ಸಂಗೀತ ಕ್ಷೇತ್ರದ ಹಲವು ಕಲಾವಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಮೂಲಕ ಸರಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ. ಉಪಾಸನ ಮೋಹನ್, ಬಿ.ಕೆ.ಸುಮಿತ್ರಾ, ಕಸ್ತೂರಿ ಶಂಕರ್ ಸೇರಿದಂತೆ ಹಲವು ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
***
ನಮಗೆ ಅಶ್ವತ್ಥ್ ಹಾಗೂ ಅನಂತಸ್ವಾಮಿ ಎರಡು ಕಣ್ಣುಗಳಿದ್ದ ಹಾಗೆ. ಈಗಾಗಲೇ ರೈತಗೀತೆ ಅಶ್ವತ್ಥ್ ಸಂಯೋಜನೆಯಲ್ಲಿದೆ. ನಾಡ ಗೀತೆ ಅನಂತಸ್ವಾಮಿ ಧಾಟಿಯಲ್ಲಿ ಇರಲಿ. ಈ ಮೂಲಕ ಇಬ್ಬರೂ ಮಹಾನ್ ಸಂಗೀತ ಗಾರರನ್ನು ನೆನಪು ಮಾಡಿ ಕೊಳ್ಳಬಹುದು.
ಕೆಲವರ ಹಿತಾಸಕ್ತಿ ಇದಕ್ಕೆ ಅಡ್ಡಿಯಾಗಿದೆ.
– ಉಪಾಸನ ಮೋಹನ್
ಸುಗಮ ಸಂಗೀತ ನಿರ್ದೇಶಕ