ಓಲಾ, ಉಬರ್, ರ್ಯಾಪಿಡೋ ರಿಯಾಲಿಟಿ ಚೆಕ್
ವಿಧಾನಸೌಧದಿಂದ ಹೈಕೋರ್ಟ್ಗೆ ೮೦ ರು. ಶುಲ್ಕ
ಅಪರ್ಣಾ.ಎ.ಎಸ್ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸಲು ಮಿನಿಮಂ ದರ ೩೦ ರು. ಇದ್ದರೂ, ಅದು ಓಲಾ, ರ್ಯಾಪಿಡೋ ಹಾಗೂ ಊಬರ್ಗೆ ಅನ್ವಯಿಸುವುದಿಲ್ಲ. ಪಕ್ಕದ ರಸ್ತೆಗೆ ನೀವು ಆಟೋ ಬುಕ್ ಮಾಡಿದರೂ ಕನಿಷ್ಠ ೮೦ ರು. ಮೊತ್ತ ತೆರಬೇಕು.
ವಿಧಾನಸೌಧದಿಂದ ಹೈಕೋರ್ಟ್ಗೆ ಹೋಗಬೇಕು ಎಂದರೂ ೮೦ ರು. ತೆರಬೇಕಂತೆ. ಹೌದು, ‘ವಿಶ್ವವಾಣಿ’ ದುಬಾರಿ ದರಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಚೆಕ್ ಮಾಡಿದಾಗ ಈ ವಿಷಯ ಬಹಿರಂಗವಾಗಿದೆ. ಒಂದು ಕಿಮೀ ದೂರ ಕ್ರಮಿಸಬೇಕೆಂದರೂ ದುಬಾರಿ ಬೆಲೆ ನೀಡಬೇಕು. ಬಸ್ನಲ್ಲಿ ಹೋದರೆ ೫ ರು. ಆಟೋ ಮಾಡಿಕೊಂಡರೆ ೩೦ ರುಪಾಯಿ ಖರ್ಚಾಗುವ ಜಾಗದಲ್ಲಿ ಆಪ್ ಆಧಾರಿತ ಆಟೋಗಳು ಮಾತ್ರ ದುಪ್ಪಟ್ಟು ದರ ವಿಧಿಸುವುದು ಬಹಿರಂಗವಾಗಿದೆ.
ಸಾರಿಗೆ ಇಲಾಖೆ ಸೇವೆಯನ್ನು ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದರು ಕೂಡಾ ತಮ್ಮ ದುಬಾರಿ ಸೇವೆಯನ್ನು ನಿಲ್ಲಿಸದೇ ಮುಂದುವರಿಸಿಕೊಂಡು ಹೋಗಿದೆ. ೧.೮ ಕಿಮೀಗೆ ೧೦೦ ರು.ನ್ನು ನಿಗದಿಪಡಿಸಿದ್ದು, ತಗಲುವ ವೆಚ್ಚವೇ ೩೦ ರು. ಆಗಿದೆ. ಹಾಗೇ ೭೫೦ ಮೀಟರ್ಗೆ ೭೫ ರು. ನಿಗದಿ ಪಡಿಸಿದ್ದಾರೆ. ಇನ್ನು ಓಲಾ ಹಾಗೂ ಉಬರ್ ರ್ಯಾಪಿಡೋ ಗಳಲ್ಲಿ ಆಟೋ ಚಾಲಕರಿಗೆ ದೊರೆಯುವುದು ಕೇವಲ ೩೦.ರು ಆಗಿದ್ದು ಉಳಿದ ೭೦ರು. ಅನ್ನು ಕಮಿಷನ್ ಎಂದು ಕಂಪನಿಯೇ ಪಡೆಯುತ್ತಿದೆ.
ಉದಾಹರಣೆಗೆ ಕೆಆರ್ ಪುರದಿಂದ ರಿಚ್ಮಂಡ್ ರೋಡ್ಗೆ ೨೦೬ ರು. ಓಲಾದಲ್ಲಿ ಆದರೆ ಚಾಲಕರಿಗೆ ದೊರೆಯುವುದು ೧೧೦ ರು. ಇನ್ನುಳಿದ ೭೦ ರು. ವನ್ನು ಓಲಾ, ಉಬರ್ ಹಾಗೂ ರ್ಯಾಪಿಡೋದ ಕಂಪನಿ ಸುಲಿಗೆ ಮಾಡುತ್ತಿದ್ದಾರೆ. ಮಳೆ ಸಮಯದಲ್ಲಿ ದುಬಾರಿ ದರ: ಮಳೆ ಬರುವ ಸಂದರ್ಭಗಳಲ್ಲಿ ಅದರಲ್ಲೂ ರಾತ್ರಿಯ ವೇಳೆ ಮಳೆ ಬರುತ್ತಿದ್ದರೆ ೧ ಕಿ.ಮೀಗೂ ದುಪ್ಪಟ್ಟು ದರವನ್ನು ವಿಧಿಸುತ್ತಿದ್ದು, ೧ ಕಿ.ಮೀ ಪ್ರಯಾಣಕ್ಕೂ ೪೦ ರು. ಆಗುವಲ್ಲಿ ೮೦ ರು.ಕಸಿದುಕೊಳ್ಳುತ್ತಿದೆ.
ಐದು ನಿಮಿಷದ ದಾರಿಗೂ ಅರ್ಧ ಗಂಟೆಯ ದಾರಿಯಂತೆ ಮೊತ್ತ ಹೇಳುತ್ತಾ ಕಣ್ಣಮುಂದೆಯೇ ಪ್ರಯಾಣಿಕರ ಅಸಹಾಯಕತೆಯನ್ನು ತನ್ನ ಲಾಭಕ್ಕಾಗಿ ಓಲಾ ಉಬರ್ ರ್ಯಾಪಿಡೋಗಳು ಬಳಸಿಕೊಳ್ಳುತ್ತಿವೆ.
ಇನ್ನು ರಾತ್ರಿಯ ವೇಳೆ ತಲುಪಬೇಕಾದ ಸ್ಥಳವನ್ನು ನಮೂದಿಸುವ ಮೊದಲು ಸಾವಿರಾರು ಆಟೋಗಳು ಕಾಣಿಸಿಕೊಂಡು ಬಳಿಕ ಒಂದು ಆಟೋ ದೊರಕಿದರೆ ಆ ಪ್ರಯಾಣಿಕನ ಪೂರ್ವಜನ್ಮದ ಪುಣ್ಯವೆಂದೇ ಹೇಳಬಹುದು. ಕೆಲವು ದಿನಗಳಂತೂ ಒಂದು ಗಂಟೆ ಎರಡು ಗಂಟೆ ಕಾದರೂ ಒಂದು ಆಟೋ ಇರಲಿ ಕ್ಯಾಬ್ಗಳೂ ದೊರಕುವುದಿಲ್ಲ. ದೊರಕಿದರೂ ಒಂದರ ಮೇಲೆ ಎರಡು ಚಾರ್ಜ್.ಇದರೊಂದಿಗೆ ಅನೇಕ ಬಾರಿ ಅರ್ಧ ಗಂಟೆ ಕಾಯಿಸಿ ಬಳಿಕ ಕ್ಯಾನ್ಸ ಲ್ ಮಾಡುವ ಸಂದರ್ಭಗಳೇ ಹೆಚ್ಚು. ಬುಕ್ ಮಾಡುವ ಮೊದಲು ಒಂದು ದರ ಬುಕ್ ಮಾಡಿದ ಬಳಿಕ ಡಬಲ್. ಹಣ ಕಡಿತಗೊಂಡ ಬಳಿಕವಷ್ಟೇ ಪ್ರಯಾಣಿಕರಿಗೆ ಡಬಲ್ ಮೊತ್ತ ಕೈಜಾರಿರುವುದು ಅರಿವಾಗುತ್ತದೆ. ಇನ್ನು ಕೆಲವು ವೇಳೆಯಂತೂ ಟ್ರಿಪ್ ಕ್ಯಾನ್ಸಲ್ ಆಗಿರುವುದೂ ತಿಳಿದಿ ರುವುದಿಲ್ಲ. ಆದರೆ ಕ್ಯಾನ್ಸಲ್ ಆದ ಬಳಿಕ ಕ್ಯಾನ್ಸಲೇಷನ್ ಚಾರ್ಜ್ ಎಂದು ೬೦ ರು. ಕಡಿತವಾಗಿರುತ್ತದೆ.
ಸುಳ್ಳು ಭರವಸೆಗಳು
ಕಸ್ಟಮರ್ ಕೇರ್ ಸಂಪರ್ಕ ಸಂಖ್ಯೆಯಂತೂ ವ್ಯರ್ಥ. ನಮಗೆ ಅನಿವಾರ್ಯತೆ ಇದ್ದಾಗ ಒಂದೂ ಕನೆಕ್ಟ್ ಆಗುವುದಿಲ್ಲ. ಆದರೆ ಅವರಿಗೆ ರೇಟಿಂಗ್ ಬೇಕಾದ ದಿನಕ್ಕೆ ೨೦ ಸಾರಿ ಕಾಲ್ ಗಳು, ಮೆಸೇಜ್ಗಳಂತೂ ಬರುತ್ತಲೇ ಇರುತ್ತವೆ.ಅನಗತ್ಯವಾಗಿ ಸರಿಯಾದ ದಾರಿಯ ಬದಲಾಗಿ ಸುತ್ತಿ ಸುತ್ತಿ ನಿಗಧಿತ ಪ್ರದೇಶಕ್ಕೆ
ತಲುಪಿಸುವ ಬಳಿಕ ಡಬಲ್ ಚಾರ್ಜ್ ಮಾಡಿಸಿಕೊಂಡು ನಿಮಗೆ ನಮ್ಮ ಸೇವೆ ಇಷ್ಟವಾಯಿತೇ ಎಂದು ಕೇಳುವುದೆ ಈ ಆಪ್ ಗಳ ಚಾಳಿಯಾಗಿ ಹೋಗಿದೆ.
***
ಒಲಾ, ಊಬರ್ ಎರಡನ್ನೂ ಬಳಸುತ್ತಿದ್ದೇನೆ. ಸ್ಥಗಿತಗೊಳಿಸಬೇಕು ಎಂಬುದರ ಬಗ್ಗೆ ಕಂಪನಿಯವರು ನಮಗೆ ಏನೂ ಹೇಳಿಲ್ಲ. ಹಗಲು ರಾತ್ರಿ ಆಟೋ ಓಡಿಸಿದರೂ ಕೂಡಾ ನಮಗೆ ಏನೂ ಲಾಭ ಆಗುವುದಿಲ್ಲ. ನಮ್ಮ ಮೀಟರ್ ಚಾರ್ಜ್ ಏನಿರುತ್ತದೋ ಅದಷ್ಟೇ ನಮಗೆ ನೀಡುತ್ತಾರೆ. ಮೀಟರ್ ಹಾಕಿ ಓಡಿಸೋಣ ಎಂದರೆ ಜನರ್ಯಾರು ಬರಲ್ಲ.ಕೈ ಬಾಡಿಗೆ ಯಾರೂ ಬರಲ್ಲ.ಮೀಟರ್ ಹಾಕ್ತೀವಿ ಅಂದ್ರೂ ಬರಲ್ಲ. ಓಲಾ,ಉಬರ್ ನಿಲ್ಲಿಸಿದರೆ ನಮಗೆ
ಸಂತೋಷವೇ.
– ಹರೀಶ್ ಆಪ್ ಆಧಾರಿತ ಆಟೋ ಚಾಲಕ