ಅಪರ್ಣಾ ಎ.ಎಸ್ ಬೆಂಗಳೂರು
ರಾಜಧಾನಿ ಬೆಂಗಳೂರಿನ ಪಿಜಿ ದರ ಹೆಚ್ಚಳಕ್ಕೆ ಪಿಜಿ ಅಸೋಸಿಯೇಷನ್ ಚಿಂತನೆ
ದಿನದಿಂದ ದಿನಕ್ಕೆ ದೈನಂದಿನ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಪಿಜಿ ನಿವಾಸಿಗಳಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನಲ್ಲಿ ಪ್ರಯಾಣ ದರ, ನೀರಿನ ದರ, ಹಾಲಿನ ದರ, ಕರೆಂಟ್ ದರ ಹೆಚ್ಚಳದ ಹೊರೆಯ ನಡುವೆ ಇದೀಗ ನಗರದಲ್ಲಿನ ಪಿಜಿಗಳ ದರವನ್ನು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ ನಡೆಸಿದ್ದು, ಸದ್ಯದಲ್ಲಿಯೇ ಪಿಜಿ
ವಾಸಿಗಳಿಗೆ ಅತಿಥಿ ಗೃಹದ ದರ ಹೆಚ್ಚಳದ ಬರೆ ಬೀಳಲಿದೆ.
ಬೆಂಗಳೂರಿಗೆ ಉದ್ಯೋಗ ಹಾಗೂ ಕಲಿಕೆಗಾಗಿ ಆಗಮಿಸುವವರಿಗೆ ಪಿಜಿಗಳೇ ಆಶ್ರಯ ತಾಣವಾಗಿದ್ದು, ನಗರದಲ್ಲಿ ಪಿಜಿ ಹಾಗೂ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ನಗರದಲ್ಲಿ ವಾಸಿಸುತ್ತಿರುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಪಿಜಿ ದರ ಹೆಚ್ಚಳವು ಹೊರೆಯಾಗಲಿದ್ದು, ಮಧ್ಯಮ ವರ್ಗದ ಹಾಗೂ ಕಡಿಮೆ ಮೊತ್ತದಲ್ಲಿ ಜೀವನ ಸಾಗಿಸುವ
ಬ್ಯಾಚ್ಯುಲರ್ಸ್ಗೆ ದೊಡ್ಡ ಹೊಡೆತವೇ ಬೀಳಲಿದೆ. ಕೋವಿಡ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ನಲ್ಲಿದ್ದ ಕಂಪನಿಗಳು ಈಗ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿರುವುದರಿಂದ ನಗರ ತೊರೆದು ಹೋದವರೆಲ್ಲಾ ನಗರಕ್ಕೆ ವಾಪಾಸಾಗಿದ್ದಾರೆ.
ಇದರಿಂದಾಗಿ ಮನೆ, ಪಿಜಿ ಬಾಡಿಗೆಗಳೂ ಹೆಚ್ಚಾಗಲಿವೆ. ಒಂದೊಂದು ಪಿಜಿಗಳಲ್ಲಿ ಒಂದೊಂದು ದರವಿದೆ. ಆದರೆ
ಮೂಲಗಳ ಪ್ರಕಾರ, ಎಲ್ಲ ಪಿಜಿಗಳಲ್ಲಿ ಶೇ.5ರಷ್ಟು ದರ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ.
ಶೇ.೫ ರಷ್ಟು ದರ ಏರಿಸಲು ನಿರ್ಧಾರ ಪಿಜಿ ಬಾಡಿಗೆಯನ್ನು ಹೆಚ್ಚಿಸುವ ಕುರಿತಂತೆ ಪ್ರಮುಖ ಪ್ರದೇಶಗಳ ಪಿಜಿ ಮಾಲೀಕರೊಂದಿಗೂ ಸಭೆ ನಡೆಸಲಾಗಿದ್ದು, ಅಗತ್ಯ ವಸ್ತುಗಳ ಜತೆಗೆ ವಿದ್ಯುತ್, ನೀರಿನ ದರ, ಖಾಸಗಿ ಬಿಲ್ಡಿಂಗ್
ದರವೂ ಹೆಚ್ಚಾಗಿದ್ದು, ದಿನನಿತ್ಯ ಪಿಜಿಗಳನ್ನು ನಿರ್ವಹಿಸುವುದೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿರುವುದರಿಂದ ನಿರ್ವಹಣೆಗಾಗಿ ದರ ಏರಿಕೆಯು ಅನಿವಾರ್ಯವಾಗಿದೆ. ಗುಣಮಟ್ಟದ ಊಟ, ಸ್ವಚ್ಛ ಹಾಗೂ ಸುರಕ್ಷತೆಯ ವ್ಯವಸ್ಥೆಯನ್ನು ಪಿಜಿಗಳು ನೀಡುತ್ತಿದ್ದು, ವಿವಿಧ ವಸ್ತುಗಳ ದರ ಏರಿಕೆಯ ಹಿನ್ನೆಲೆ ಪಿಜಿಗಳ ನಿರ್ವಹಣೆಗೆ ಕಷ್ಟ
ಆಗುತ್ತಿದೆ ಹೀಗಾಗಿ ದರ ಹೆಚ್ಚಳವು ಅನಿವಾರ್ಯ. ಹಾಗಾಗಿ ದರ ಹೆಚ್ಚಳದ ನಿರ್ಧಾರ ಮಾಡಿರುವುದಾಗಿ ಪಿಜಿ ಮಾಲೀಕರು ಹೇಳುತ್ತಾರೆ.
10 ಸಾವಿರಕ್ಕೂ ಅಧಿಕ ಪಿಜಿಗಳು ನೋಂದಾಯಿಸಿಲ್ಲ
ನಗರದಲ್ಲಿ ಪಿಜಿ ಅಸೋಸಿಯೇಷನ್ ನಲ್ಲಿ 2000ಕ್ಕೂ ಅಧಿಕ ಪಿಜಿಗಳು ನೋಂದಾವಣಿ ಮಾಡಿಕೊಂಡಿದ್ದು,
ನೋಂದಾವಣಿ ಮಾಡಿಕೊಳ್ಳದೇ ಇರುವವುಗಳ ಸಂಖ್ಯೆಯೂ ಹೆಚ್ಚಿದೆ. ಈ ನಡುವೆ ಪಾಲಿಕೆಯ ಎಂಟು
ವಲಯಗಳಲ್ಲಿ 10000ಕ್ಕೂ ಅಧಿಕ ಪಿಜಿಗಳು ನೋಂದಾಯಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
*
ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ನೋಂದಾಯಿಸಲಾದ ಪಿಜಿಗಳಿದ್ದು, ಈಗಾಗಲೇ ಹೇಳಿದಂತೆ ಶೇ.೫ರಷ್ಟು ದರ ಹೆಚ್ಚಳಕ್ಕೆ ಚಿಂತನೆ ನಡೆಸಿದ್ದು, ಎಲ್ಲಾ ಮಾಲೀಕರ ಅಭಿಪ್ರಾಯವನ್ನು ಕೇಳಿ ಮುಂದಿನ
ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ನಗರದಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಪ್ರತಿದಿನ ಬಳಸುವ
ದಿನಸಿ, ವಿದ್ಯುತ್, ಬಿಲ್ಡಿಂಗ್ ಬಾಡಿಗೆ ಹೆಚ್ಚಿಸುವುದರಿಂದ ನಮಗೂ ಸಮಸ್ಯೆಯಾಗುತ್ತಿದೆ. ಇಲ್ಲಿಯವರೆಗೆ ಪಿಜಿ ವಾಸಿಗಳಿಗೆ ಬೆಲೆ ಹೆಚ್ಚಿಸಿಲ್ಲ. ಮುಂದಿನ ದಿನಗಳಲ್ಲಿ ಆಗಮಿಸುವವರಿಗೆ ದರ ಹೆಚ್ಚಿಸಲು ಚಿಂತನೆ ನಡೆಸಿದೆ.
-ಅರುಣ್ ಕುಮಾರ್, ಅಧ್ಯಕ್ಷ, ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ
ಇದನ್ನೂ ಓದಿ: #BangalorePGs