ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ
ಮಹಿಳಾ ಮತದಾರರೇ ನಿರ್ಣಾಯಕ
ವಿಶೇಷ ವರದಿ: ಚಂದ್ರಶೇಖರ ಎಂ.ಹಿರೇಮಠ
ಹುಬ್ಬಳ್ಳಿ: ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದ್ದು, ಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿಗಳು ಹರ ಸಾಹಸ ಪಡುತ್ತಿದ್ದರೆ, ಜೆಡಿಎಸ್, ಆಮ್ ಆದ್ಮಿ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳು ಕಿಂಗ್ ಮೇಕರ್ ಆಗಲು ಹವಣಿಸುತ್ತಿವೆ.
ಸೆ.3ರಂದು ನಡೆಯಲಿರುವ ಪಾಲಿಕೆ ಚುನಾವಣೆಗೆ ಆ.16 ರಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಟಿಕೆಟ್ ಅಂತಿಮಗೊಳಿಸುವ ಬಿಜೆಪಿ ಮತ್ತು ಕಾಂಗ್ರೆಸ್ನ ಪ್ರಮುಖ ನಾಯಕರುಗಳು ಸೋಮವಾರದಿಂದ ನಗರ ದಲ್ಲಿ ಅರ್ಜಿಗಳ ಪರಿಶೀಲನೆ, ಕಿರುಪಟ್ಟಿ ತಯಾರಿ ನಡೆಸಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಕಸರತ್ತು ಜೋರಾಗಿಯೇ ನಡೆಯುತ್ತಿದೆ. ನೆಚ್ಚಿನ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗುತ್ತಿದ್ದಾರೆ.
ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡುವುದಾಗಿ ಬಿಜೆಪಿ ಜಿ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದ್ದಾರೆ. ಕಾರ್ಯಕರ್ತರು ಮಹಿಳಾ ಮೀಸಲಾತಿ ಇರುವ ಕಡೆ ತಮ್ಮ ಮನೆ ಯವರಲ್ಲಿ ಯಾರಿಗಾದರೂ ಟಿಕೆಟ್ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದಿನ ಪಾಲಿಕೆ ಚುನಾವಣೆಯಲ್ಲಿಯೇ ನನಗೆ ಟಿಕೆಟ್ ಸಿಗಬೇಕಿತ್ತು.
ಇದಕ್ಕಾಗಿ ಕೊನೆಯವರೆಗೆ ಪೈಪೋಟಿ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡುವುದಾಗಿ ಖಚಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಕಣದಿಂದ ಹಿಂದೆ ಸರಿದಿದ್ದೆ. ಆದರೆ, ಈ ಬಾರಿ ನನ್ನ ವಾರ್ಡ್ ಮಹಿಳೆಗೆ ಮೀಸಲಾಗಿದೆ. ಎಲ್ಲ ಕಡೆಯೂ ಸಾಕಷ್ಟು ಸ್ಪರ್ಧೆ ಇರುವ ಕಾರಣ ಬೇರೆ ವಾರ್ಡ್ ಗಳಿಗೆ ಹೋಗಿ ಸ್ಪರ್ಧಿಸುವಂತಿಲ್ಲ. ಈ ಸಲವೂ ನನಗೆ ಪಾಲಿಕೆ ಸದಸ್ಯನಾಗುವ ಅದೃಷ್ಟವಿಲ್ಲ. ಆದ್ದರಿಂದ ಪತ್ನಿಗೆ ಟಿಕೆಟ್ ಕೊಡಬೇಕೆಂದು ನಾಯಕರಲ್ಲಿ ಮನವಿ ಮಾಡಿದ್ದೇನೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮಹಿಳಾ ಮತದಾರರೇ ನಿರ್ಣಾಯಕ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ಗಳಲ್ಲಿ ಒಟ್ಟು 8,11,632 ಮತದಾರರಿದ್ದರು. ಮಹಿಳಾ ಮತದಾರರು, 407891 ಇದ್ದಾರೆ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಪುರುಷರು 403657 ಇದ್ದಾರೆ. 52ಕ್ಕೂ ಅಧಿಕ ವಾರ್ಡ್ಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 33ನೇ ವಾರ್ಡ್ನಲ್ಲಿ ಅತಿ ಹೆಚ್ಚು 13648 ಹಾಗೂ 78ನೇ ವಾರ್ಡ್ನಲ್ಲಿ ಅತಿ ಕಡಿಮೆ 5924 ಮಹಿಳಾ ಮತದಾರರಿದ್ದಾರೆ.
ಸ್ಫರ್ಧಾಳುಗಳಿಗೆ ಶುಲ್ಕ ಭಾರ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತಲಾ ೫5 ಸಾವಿರ ರು. ಅರ್ಜಿ ಶುಲ್ಕ ನಿಗದಿಪಡಿಸಿ ಅಚ್ಚರಿ ಮೂಡಿಸಿದೆ. ಇದರ ಮಧ್ಯೆ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ, ಬಹುಜನ ಸಮಾಜದ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಶುಲ್ಕದ ಭಾರವಿಲ್ಲ ದಂತಾಗಿದೆ. ಅರ್ಜಿ ಶುಲ್ಕ ಪಾವತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಜೆಡಿಎಸ್ ಪಕ್ಷ ಶೇ.೫೦ ರಷ್ಟು ರಿಯಾಯಿತಿ (2500 ರು.) ಪ್ರಕಟಿಸಿದೆ. ಸಾಮಾನ್ಯ ವರ್ಗದ ಟಿಕೆಟ್ ಆಕಾಂಕ್ಷಿಗಳು ಮಾತ್ರ 5 ಸಾವಿರ ರು. ಪಾವತಿಸಬೇಕು. ಆದರೆ, ಸಾಮಾಜಿಕ ನ್ಯಾಯವೇ ತಮ್ಮ ಧ್ಯೇಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಎಲ್ಲ ವರ್ಗದವರಿಗೂ 5 ಸಾವಿರ ರು.ನಿಗದಿಪಡಿಸಿದೆ. ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ಪ್ರಕಟಿಸದಿರುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ಆಕ್ರೋಶ ಹೆಚ್ಚಿಸಿದೆ.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸುವ ಟಿಕೆಟ್ ಆಕಾಂಕ್ಷಿಗಳು ಹುಬ್ಬಳ್ಳಿಯ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 100 ರು. ಪಾವತಿಸಿ ಅರ್ಜಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ 5 ಸಾವಿರ ರು. ಶುಲ್ಕವನ್ನು ಡಿಡಿ ಮೂಲಕ ಅಥವಾ ನಗದು ರೂಪದಲ್ಲಿ ಪಾವತಿಸಲು ಸೂಚಿಸಲಾಗಿತ್ತು.