Maratha Nigam: ಉದ್ದೇಶ ಮರೆತ ಮರಾಠ ನಿಗಮ, ನಿಲ್ಲದ ಗಡಿತಂಟೆ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗ ಕಂಡ ಕ್ಟರ್‌ಗೆ ಹಲ್ಲೆ ಮಾಡಿದ್ದೂ ಅಲ್ಲದೆ ಫೋಕ್ಸೋ ಪ್ರಕರಣವನ್ನೂ ದಾಖಲಿಸುವುದಾದರೆ, ರಾಜ್ಯ ದಲ್ಲಿ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ಉದ್ದೇಶ ಈಡೇರುತ್ತಿದೆಯೇ ಎನ್ನುವುದು ನಾಡಿನ ಸಾಹಿತಿ, ಹೋರಾಟಗಾರರ ಮೂಲಪ್ರಶ್ನೆಯಾಗಿದೆ


ಶಿವಕುಮಾರ್ ಬೆಳ್ಳಿತಟ್ಟೆ
ಕಾಸಿಲ್ಲದೆ ಸಾಮರಸ್ಯ ಸಾರುವಲ್ಲಿ ಸೋತ ಸಂಸ್ಥೆ
ಕನ್ನಡ ಹೋರಾಟಗಾರರ ಆಕ್ರೋಶ
ಬೆಂಗಳೂರು: ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಸಾರಿಗೆ ನಿಗಮದ ಕಂಡಕ್ಟರ್ ಮಹದೇವ ಹುಕ್ಕೇರಿ ಅವರ ಮೇಲೆ ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಮರಾಠಿ ಪುಂಡರು ಹಲ್ಲೆ ಮಾಡಿರುವ ಘಟನೆ ಈಗ ರಾಜಕೀಯ ಚರ್ಚೆಗೆ ದಾರಿ ಮಾಡಿದೆ. ಅದರಲ್ಲೂ ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಔಚಿತ್ಯದ ಪ್ರಶ್ನೆಗಳು ಉದ್ಭವವಾಗಿವೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗ ಕಂಡ ಕ್ಟರ್‌ಗೆ ಹಲ್ಲೆ ಮಾಡಿದ್ದೂ ಅಲ್ಲದೆ ಫೋಕ್ಸೋ ಪ್ರಕರಣವನ್ನೂ ದಾಖಲಿಸುವುದಾದರೆ, ರಾಜ್ಯದಲ್ಲಿ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ಉದ್ದೇಶ ಈಡೇರುತ್ತಿದೆಯೇ ಎನ್ನುವುದು ನಾಡಿನ ಸಾಹಿತಿ, ಹೋರಾಟಗಾರರ ಮೂಲಪ್ರಶ್ನೆಯಾಗಿದೆ.
ಮರಾಠಿ ಭಾಷಿಗರು ಮತ್ತು ಕನ್ನಡಿಗರ ನಡುವಿನ ಶಾಂತಿ ಮತ್ತು ಸಾಮರಸ್ಯದ ಉದ್ದೇಶ ಕ್ಕಾಗಿ (ದೇಶದ ಯಾವುದೇ ರಾಜ್ಯದಲ್ಲೂ ಕನ್ನಡಿಗರ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೂ) ರಾಜ್ಯದಲ್ಲಿ 2020ರ ನವೆಂಬರ್‌ನಲ್ಲಿ ಮರಾಠ ಸಮಾದಾಯಗಳ ಅಭಿವೃದ್ದಿ ನಿಗಮ ಸ್ಥಾಪಿಸ ಲಾಗಿತ್ತು. ರಾಜ್ಯದಲ್ಲಿರುವ ಮರಾಠಿ ಭಾಷಿಗರ ಶ್ರೇಯೋಭಿವೃದ್ಧಿ, ಅದೇ ರೀತಿ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಯಂಥ ಪರಸ್ಪರ ಸಹಕಾರಗಳು ದೊರೆಯಲಿವೆ ಎನ್ನು ವುದು ನಿಗಮದ ಸ್ಥಾಪಿಸಿದ ಅಂದಿನ ಬಿಜೆಪಿ ಸರಕಾರದ ಸಮರ್ಥನೆಯಾಗಿತ್ತು. ಆದರೆ ಈಗ ನಿಗಮ ಕಾಸು-ಕರಿಮಣಿ ಏನೂ ಇಲ್ಲದೆ ಬಡಕಲಾಗಿ ತನ್ನ ಮೂಲ ಚಿಂತನೆ ಎಲ್ಲವನ್ನೂ ಮರೆತು ಬೆಪ್ಪಾಗಿ ಕುಳಿತಿದೆ.
ಇದನ್ನೂ ಓದಿ: Surendra Pai Column: ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಹೊಣೆ ಯಾರದ್ದು ?
50 ಕೋಟಿ ರು. ಘೋಷಣೆಯೊಂದಿಗೆ ಆರಂಭವಾದ ನಿಗಮವು ಈಗ ಸುಮಾರು ಎರಡು ವರ್ಷಗಳಿಂದ ಅಧ್ಯಕ್ಷರನ್ನೂ ಕಾಣದೆ, ಅನುದಾನವನ್ನೂ ನೋಡದೆ ಮಂಕಾಗಿದೆ. ಇಂಥ ಸ್ಥಿತಿಯಲ್ಲಿ ನಿಗಮದ ಮೂಲಕ ಮರಾಠಿಗರ ಅಭಿವೃದ್ಧಿಯಾಗಲಿ, ಕನ್ನಡ, ಮರಾಠಿ ನಡುವೆ ಸಾಮರಸ್ಯವಾಗಲಿ, ಗಡಿಯಲ್ಲಿ ಕನ್ನಡಿಗರ ರಕ್ಷಣೆಯಾಗಲಿ ಸಾಧ್ಯವೇ ಎನ್ನುವುದು ಕನ್ನಡ ಹೋರಾಟಗಾರ ಪ್ರಶ್ನೆಯಾಗಿದೆ.

ಹಾಗಾದರೆ ನಿಗಮದ ಕೆಲಸವೇನು?: ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ 12 ನಿಗಮಗಳ ಪೈಕಿ ಮರಾಠ ಅಭಿವೃದ್ಧಿ ನಿಗಮವೂ ಒಂದು. ಎಲ್ಲ ನಿಗಮಗಳಿಗೆ 50 ರಿಂದ 100 ಕೋಟಿ ರು. ವರೆಗೂ ಅನುದಾನ ಸಿಕ್ಕರೆ, ಈ ನಿಗಮಕ್ಕೆ 12 ಕೋಟಿ ರು. ಮಾತ್ರ ಲಭಿಸಿದೆ. ಇದರಲ್ಲಿ ಮರಾಠಿ ಮಿಲಿಟರಿ ಹೋಟೆಲ್, ಶಹಜೀ ರಾಜೇ ಸಮೃದ್ಧಿ ಹಾಗೂ ಜೀಜಾವು ಹೆಸರಿನ ಜಲಭಾಗ್ಯ ಸೇರಿದಂತೆ ಕೆಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಆದರೆ ಅನುಷ್ಠಾನಕ್ಕೆ ಹಣವಿಲ್ಲ. ಈ ಬಾರಿ ನಿಗದಿತ ಅನುದಾನಕ್ಕಿಂತ ಕಡಿಮೆ ಸಿಕ್ಕಿರುವ ಕಾರಣ ನಿಗಮದ ಸಿಬ್ಬಂದಿ ಸಂಬಳ ಮತ್ತು ಕಚೇರಿ ಮಾತ್ರ ನಡೆದಿದೆ. ಅಂದರೆ ಇಲ್ಲಿ ನಿಗಮ ಸ್ಥಾಪಿಸಿದ ಉದ್ದೇಶವೂ ಸರಿಯಾಗಿಲ್ಲ. ಅದನ್ನು ಮುಂದುವರಿಸುತ್ತಿರುವ ರೀತಿಯೂ ಸಮಂಜಸವಲ್ಲ ಎನ್ನುತ್ತಾರೆ ರಂಗ ನಿರ್ದೇಶಕ ಕೆ.ಎಚ್.ಕುಮಾರ್.
ನಿಗಮದ ಹಿಂದಿನ ಕರಾಮತ್ತೇನು?
ಈ ಹಿಂದೆ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದ ನಂತರ ಬೆಳಗಾವಿ ಲೋಕ ಸಭೆ ಮತ್ತು ಆಪರೇಷನ್ ಕಮಲ ಪರಿಣಾಮ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿತ್ತು. ಈ ಮೂರು ಕ್ಷೇತ್ರಗಳಲ್ಲೂ ಮರಾಠಿ ಸಮು ದಾಯದವರು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ಸರಕಾರ ತೀವ್ರ ವಿರೋಧದ ನಡುವೆಯೂ ಮರಾಠ ಅಭಿವೃದ್ಧಿ ನಿಗಮದ ಸ್ಥಾಪಿಸಿತ್ತು. ಇದಕ್ಕೆ ಕನ್ನಡ ಹೋರಾಟ ಗಾರರು, ಸಾಹಿತಿಗಳು, ಲೇಖಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರಿಗೆ ಖಾಲಿ ತಟ್ಟೆ, ಮರಾಠಿಗರಿಗೆ ಮೃಷ್ಟಾನ್ನ ಎಂದು ಸಾಹಿತಿ ಜಿ.ಎ.ಸಿದ್ದರಾಮಯ್ಯ ಜರಿದಿದ್ದರು. ಕೆಲವು ಕಡೆ ಬಿಜೆಪಿ ಶಾಸಕರೇ ಇದಕ್ಕೆ ಅಪಸ್ವರ ಎತ್ತಿದ್ದರು. ಮರಾಠ ಮತ್ತು ಕನ್ನಡಿಗರ ನಡುವೆ ನಿರಂತರ ಹೋರಾಟ ನಡೆಯುತ್ತಿರುವ ವೇಳೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅರ್ಥಹೀನ. ಇದರಿಂದ ಸಾಮರಸ್ಯ ಮೂಡುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ವಿರೋ ಧಿಸಿದ್ದರು.
*
ಈ ಬಾರಿ ಕಡಿಮೆ ಅನುದಾನ ಸಿಕ್ಕಿದ್ದು, ವೇತನ ಮತ್ತು ನಿರ್ವಹಣೆಗೆ ಆಗಿದೆ. ಒಂದಷ್ಟು ಕೆಲಸ ಮಾಡಿದ್ದೇವೆ. ಮುಂದಿನ ವರ್ಷ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ.
-ಡಾ.ಪ್ರಕಾಶ್ ಆರ್. ಪಾಗೋಜಿ, ನಿಗಮ ವ್ಯವಸ್ಥಾಪಕ ನಿರ್ದೇಶಕ
ಚುನಾವಣಾ ಉದ್ದೇಶಕ್ಕಾಗಿ ನಿಗಮ ಸ್ಥಾಪಿಸಿ ಈಗ ಮುಚ್ಚುವ ಬದಲು ಅನುದಾನ ಸ್ಥಗಿತ ಗೊಳಿಸಲಾಗಿದೆ. ಇದರಿಂದ ಕನ್ನಡ-ಮರಾಠಿ ಸಾಮರಸ್ಯ ಸಾಧ್ಯವೇ?
- ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ