ಚೆನ್ನೈ: ಕೆಲವು ದಿನಗಳ ಹಿಂದೆ ನಯನತಾರಾ (Nayanthara) ಮತ್ತು ಧನುಷ್ (Actor Dhanush) ನಡುವಿನ ಜಗಳ ತಾರಕಕ್ಕೇರಿ ಭಾರೀ ಸದ್ದು ಮಾಡಿತ್ತು. ಸದ್ಯ ಈ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು, ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ನಿರತರಾಗಿದ್ದಾರೆ. ಇದೀಗ ಧನುಷ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಸೆಟ್ಟೇರುವ ಮೊದಲೇ ನಿರೀಕ್ಷೆ ಮೂಡಿಸಿದೆ. ಅದಕ್ಕೂ ಕಾರಣವಿದೆ. ಈ ಹಿಂದೆ ಧನುಷ್‌ಗೆ 2 ಸಾರಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಿರ್ದೇಶಕ ವೆಟ್ರಿಮಾರನ್ (Vetrimaaran) ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಈ ಹಿಟ್ ಕಾಂಬಿನೇಷನ್ 5ನೇ ಬಾರಿ ಒಂದಾಗುತ್ತಿದೆ.
ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ವಿಭಿನ್ನ ಅಲೆಯ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಕಮರ್ಷಿಯಲ್ ಚಿತ್ರಗಳ ಜತೆಗೆ ಸಂವೇದನಾಶೀಲ ಅಂಶಗಳನ್ನು ಬೆರೆಸಿ ಚಿತ್ರ ತೆರೆ ಮೇಲೆ ಮೂಡಿಸುವುದು ಇವರ ವಿಶೇಷತೆ. ನಿರ್ದೇಶನದ ಜತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಇವರು ರಾಷ್ಟ್ರ ಪ್ರಶಸ್ತಿ ವಿಜೇತರೂ ಹೌದು.
— Vetri Maaran (@Dir_Vetrimaaran) January 13, 2025
5ನೇ ಬಾರಿ ಒಂದಾಗುತ್ತಿದೆ ಹಿಟ್ ಜೋಡಿ
2007ರಲ್ಲಿ ರಿಲೀಸ್ ಆದ ಧನುಷ್ ಅಭಿನಯದ ʼಪೊಲ್ಲಾಧವನ್ʼ ಸಿನಿಮಾ ಮೂಲಕ ವೆಟ್ರಿಮಾರನ್ ನಿರ್ದೇಶಕರಾಗಿ ಕಾಲಿವುಡ್‌ಗೆ ಕಾಲಿಟ್ಟರು. ಅದಾದ ಬಳಿಕ ವೆಟ್ರಿಮಾರನ್-ಧನುಷ್ ಕಾಂಬಿನೇಷನ್‌ನಲ್ಲಿ ʼಆಡುಕ್ಕಳಂʼ, ʼವಡಾ ಚೆನ್ನೈʼ ಮತ್ತು ʼಅಸುರನ್ʼ ಚಿತ್ರ ತೆರೆ ಕಂಡಿದೆ. ಇದೀಗ 5ನೇ ಬಾರಿ ಮತ್ತೆ ಒಂದಾಗುತ್ತಿದ್ದಾರೆ.
ಧನುಷ್‌ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಿರ್ದೇಶಕ
ವಿಶೇಷ ಎಂದರೆ ಧನುಷ್ ಪಡೆದುಕೊಂಡ 2 ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ವೆಟ್ರಿಮಾರನ್ ಚಿತ್ರದಿಂದಲೇ ಬಂದಿದೆ. 2011ರಲ್ಲಿ ರಿಲೀಸ್ ಆದ ʼಆಡುಕ್ಕಳಂʼ ಮತ್ತು 2019ರಲ್ಲಿ ಬಿಡುಗಡೆಗೊಂಡ ʼಅಸುರನ್ʼ ಸಿನಿಮಾದ ನಟನೆಗೆ ಧನುಷ್ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯೂ ಧನುಷ್‌ಗೆ ಮತ್ತೊಂದು ಪ್ರಶಸ್ತಿ ಖಚಿತ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಆರ್.ಇನ್ಫೋಟೈನ್‌ಮೆಂಟ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗಲಿದೆ.
ಇತ್ತೀಚೆಗೆ ತೆರೆಕಂಡ ವೆಟ್ರಿಮಾರನ್ ನಿರ್ದೇಶನದ ʼವಿಡುತಲೈ ಪಾರ್ಟ್ 2ʼ ವಿಮರ್ಶಕರ ಗಮನ ಸೆಳೆದಿದೆ. ವಿಜಯ್ ಸೇತುಪತಿ ಮತ್ತು ಮಂಜು ವಾರಿಯರ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ಧನುಷ್ ಶೇಖರ್ ಕಮ್ಮುಲ ನಿರ್ದೇಶನದ ʼಕುಬೇರʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಟಾಲಿವುಡ್ ಸ್ಟಾರ್ ನಾಗಾರ್ಜುನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ʼಇಡ್ಲಿ ಕಡಾಯಿʼ ಚಿತ್ರದಲ್ಲಿ ನಿತ್ಯಾ ಮೆನನ್ ಜತೆ ಅಭಿನಯಿಸುತ್ತಿದ್ದಾರೆ. ಮಾತ್ರವಲ್ಲ ಅಮರನ್ ನಿರ್ದೇಶ್ ರಾಜ್‌ಕುಮಾರ್ ಪೆರಿಯಸಾಮಿ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಇತ್ತ ವೆಟ್ರಿಮಾರನ್ ಅವರು ಕಾಲಿವುಡ್ ಸ್ಟಾರ್ ಸೂರ್ಯ ಜತೆ ʼವಾಡಿವಾಸಲ್ʼ ಸಿನಿಮಾ ಘೋಷಿಸಿದ್ದಾರೆ. ಸಿ.ಎಸ್.ಚೆಲ್ಲಪ್ಪ ಅವರ ಕಾದಂಬರಿ ಆಧರಿಸಿ ಈ ಚಿತ್ರ ತಯಾರಾಗಲಿದೆ. ಪ್ರಸ್ತುತ ʼಕಂಗುವʼ ಸೋಲಿನಿಂದ ಕಂಗೆಟ್ಟಿರುವ ಸೂರ್ಯ ಕಂಬ್ಯಾಕ್ ಮಾಡುವ ಸಿದ್ಧತೆಯಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ: Dhanush v/s Nayanthara: ತಾರಕಕ್ಕೇರಿದ ಧನುಷ್-ನಯನತಾರಾ ಜಗಳ; ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ