Sunday, 15th December 2024

Actor Govinda: ಅಭಿಮಾನ ಎಂದರೆ ಹೀಗೂ ಇರುತ್ತಾ? ನಟ ಗೋವಿಂದ ಮನೆಯಲ್ಲಿ ಮನೆಕೆಲದವಳಂತೆ ತಂಗಿದ್ದ ಸಚಿವನ ಪುತ್ರಿ!

Actor Govinda

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ನಟ ಗೋವಿಂದ (Actor Govinda). ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇವರು ಅಸಂಖ್ಯಾತ ಅಭಿಮಾನಿ ಮನಸ್ಸು ಗೆದ್ದಿದ್ದರು. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು, ಮಾತನಾಡಿಸಲು ನೂರಾರು ಮಂದಿ ಕಾಯುತ್ತಿದ್ದರು. ಇಂತಹ ಅಭಿಮಾನಿಯೊಬ್ಬರ ಅತಿರೇಕದ ವರ್ತನೆಯೊಂದನ್ನು ಇತ್ತೀಚೆಗೆ ಗೋವಿಂದ ಅವರ ಪತ್ನಿ ಸುನೀತಾ ಹಂಚಿಕೊಂಡಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ಮನೆಕೆಲಸದಾಕೆಯಂತೆ ನಟಿಸಿ 20 ದಿನಗಳ ಕಾಲ ತಮ್ಮ ಮನೆಯಲ್ಲಿ ತಂಗಿದ್ದ ಅಪರೂಪದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸುನೀತಾ ಈ ಘಟನೆಯನ್ನು ವಿವರಿಸಿದ್ದಾರೆ. “ಈ ಅಭಿಮಾನಿ ಮನೆಗೆಲಸದವಳಂತೆ ನಟಿಸಿದ್ದರು ಮತ್ತು ಅವರು ಸುಮಾರು 20-22 ದಿನಗಳ ಕಾಲ ನಮ್ಮೊಂದಿಗೆ ತಂಗಿದ್ದರು. ಕೊನೆಗೆ ನನಗೆ ಅವರು ಶ್ರೀಮಂತ ಕುಟುಂಬದ ಹಿನ್ನಲೆಯವರು ಎನ್ನುವ ಅನುಮಾನ ಮೂಡಿತು. ಪಾತ್ರೆಗಳನ್ನು ತೊಳೆಯಲು ಅಥವಾ ಮನೆಯನ್ನು ಹೇಗೆ ಸ್ವಚ್ಛಗೊಳಿಸಬೇಕು ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಈ ಬಗ್ಗೆ ನಾನು ಅತ್ತೆಯ ಬಳಿ ಅನುಮಾನವನ್ನು ವ್ಯಕ್ತಪಡಿಸಿದೆ. ಅಂತಿಮವಾಗಿ ಆಕೆ ಸಚಿವರೊಬ್ಬರ ಪುತ್ರಿ ಮತ್ತು ಗೋವಿಂದ ಅವರ ಮೇಲಿನ ಅಭಿಮಾನದಿಂದ ಹೀಗೆ ಮಾಡಿದ್ದಾರೆ ಎನ್ನುವುದು ತಿಳಿದು ಬಂತುʼʼ ಎಂದು ಸುನೀತಾ ತಿಳಿಸಿದ್ದಾರೆ.

“ಅವರು ಪ್ರತಿದಿನ ತಡವಾಗಿ ಎದ್ದು ಗೋವಿಂದನಿಗಾಗಿ ಕಾಯುತ್ತಿದ್ದರು. ಕೊನೆಗೆ ವಿಚಾರಿಸಿದಾಗ ಸತ್ಯ ಒಪ್ಪಿಕೊಂಡರು. ನಂತರ ಅವರ ತಂದೆ ನಾಲ್ಕು ಕಾರುಗಳನ್ನು ತಂದು ಕರೆದುಕೊಂಡು ಹೋದರು. ಈ ರೀತಿಯ ಅಪರೂಪದ ಅಭಿಮಾನಿಗಳನ್ನು ಗೋವಿಂದಾ ಹೊಂದಿದ್ದರುʼʼ ಎಂದು ವಿವರಿಸಿದ್ದಾರೆ.

2019ರಿಂದ ಗೋವಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 80 ಮತ್ತು 90 ದಶಕಗಳಲ್ಲಿ ಅವರ ಚಿತ್ರಗಳಿಗಾಗಿಯೇ ಅಭಿಮಾನಿಗಳು ಕಾದು ಕುಳಿತಿರುತ್ತಿದ್ದರು. ಆ ಸಮಯದಲ್ಲಿ ಬಾಲಿವುಡ್‌ನ ಟಾಪ್‌ ನಾಯಕ ಎನಿಸಿಕೊಂಡಿದ್ದರು. ಆದರೆ ಕ್ರಮೇಣ ಅವರ ಜನಪ್ರಿಯತೆ ಕಡಿಮೆಯಾಗುತ್ತಾ ಬಂತು. 2007ರಲ್ಲಿ ತೆರೆಕಂಡ ಸಲ್ಮಾನ್‌ ಖಾನ್‌ ಜೊತೆ ನಟಿಸಿದ್ದ ʼಪಾರ್ಟನರ್‌ʼ ಸಿನಿಮಾ ಗೋವಿಂದ ನಟಿಸಿದ್ದ ಕೊನೆಯ ಯಶಸ್ವಿ ಚಿತ್ರ. ಬಳಿಕ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೂ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿಲ್ಲ.

2007ರಿಂದೀಚೆಗೆ ಗೋವಿಂದ ಅಭಿನಯದ ಸುಮಾರು 13 ಚಿತ್ರಗಳು ತೆರೆಕಂಡಿವೆ. ಆದರೆ ಇದ್ಯಾವುದೂ ಹಿಟ್‌ ಆಗಿಲ್ಲ. ʼರಂಗೀಲಾ ರಾಜʼ, ʼಪ್ರೈಡೇʼ, ʼಆ ಗಯಾ ಹೀರೋʼ, ʼಹ್ಯಾಪಿ ಎಂಡಿಂಗ್‌ʼ, ʼಕಿಲ್‌ ದಿಲ್‌ʼ, ʼದೀವಾನ ಮೇ ದೀವಾನʼ, ʼಲೂಟ್‌ʼ, ʼನಾಟಿ @ 40ʼ, ʼರಾವಣʼ, ʼಡು ನಾಟ್‌ ಡಿಸ್ಟರ್ಬ್‌ʼ, ʼಲೈಫ್‌ ಪಾರ್ಟನರ್‌ʼ, ʼಚಲ ತಲ ಚಲ್‌ʼ ಮತ್ತು ʼಮನಿ ಹೆ ತೊ ಹನಿ ಹೆʼ ಸಿನಿಮಾಗಳು ರಿಲೀಸ್‌ ಆದರೂ ಯಾವುದೂ ಯಶಸ್ವಿಯಾಗಲಿಲ್ಲ.

2019ರಲ್ಲಿ ತೆರೆಕಂಡ ʼರಂಗೀಲಾ ರಾಜʼ ಗೋವಿಂದ ಅಭಿನಯದ ಕೊನೆಯ ಚಿತ್ರ. ಬಳಿಕ ಅವರು ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Priyanka Chopra: ಬಿಕಿನಿ ತೊಟ್ಟು ಬೀಚ್‌ ಬದಿ ಹಾಟ್‌ ಆಗಿ ಪೋಸ್‌ ನೀಡಿದ ಪ್ರಿಯಾಂಕಾ ಚೋಪ್ರಾ; ಕಿಕ್ಕೇರಿಸುವ ಫೋಟೊ ಇಲ್ಲಿದೆ