Thursday, 12th December 2024

Actor Upendra: ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪೇಂದ್ರ; ‘ಯುಐ’, ’45’ ಚಿತ್ರದಿಂದ ಬಂತು ಹೊಸ ಅಪ್‌ಡೇಟ್‌

Actor Upendra

ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಇಂದು ʼಯುಐʼ ಚಿತ್ರ (UI Movie)ದ ಹೊಸ ಪೋಸ್ಟರ್‌ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಜತೆಗೆ ʼ45ʼ ಸಿನಿಮಾದ ಫಸ್ಟ್‌ಲುಕ್‌ ಕೂಡ ಹೊರ ಬಿದ್ದಿದೆ. ಆ ಮೂಲಕ ಅಭಿಮಾನಿಗಳಿಗೆ ಡಬಲ್‌ ಧಮಾಕ ಸಿಕ್ಕಂತಾಗಿದೆ.

ಉಪೇಂದ್ರ ಹಲವು ದಿನಗಳ ಬಳಿಕ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ʼಯುಐʼ ಈಗಾಗಲೇ ಕುತೂಹಲ ಕೆರಳಿದೆ. ವಿಭಿನ್ನ ಟೈಟಲ್‌, ಫಸ್ಟ್‌ ಲುಕ್‌, ಟೀಸರ್‌ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ ಈ ಚಿತ್ರದ ಹೊಸ ಪೋಸ್ಟರ್‌ ಗಮನ ಸೆಳೆದಿದೆ.

ಕೊಂಬು ಇರುವ ಕುದುರೆ ಮೇಲೆ ಕುಳಿತು ಉಪೇಂದ್ರ ಗಂಭೀರವಾಗಿ ನೋಟ ಹರಿಸುವ ಪೋಸ್ಟರ್‌ ಇದಾಗಿದ್ದು, ಕಥೆಯ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆ ಕಾಣಲಿದೆ.

ಈಗಾಗಲೇ ರಿಲೀಸ್‌ ಆಗಿರುವ ʼಟ್ರೋಲ್‌ ಆಗುತ್ತೆʼ ಹಾಡು ಟ್ರೆಂಡ್‌ ಸೃಷ್ಟಿಸಿದರೆ, ʼಎಲ್ಲ ಚೀಪ್‌ ಚೀಪ್‌ʼ ಹಾಡು ವಿಭಿನ್ನ ಸಾಹಿತ್ಯದಿಂದ ಅನೇಕರನ್ನು ಆಕರ್ಷಿಸಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಈಗಾಗಲೇ ಗಮನ ಸೆಳೆದಿದೆ. ಜತೆಗೆ ಟೀಸರ್‌ ಹೊಸತನದ ಅನುಭವ ನೀಡಿದೆ. ಈ ಎಲ್ಲ ಕಾರಣಗಳಿಂದ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಸೋತು ಸೊರಗಿರುವ ಸ್ಯಾಂಡಲ್‌ವುಡ್‌ಗೆ ಈ ಸಿನಿಮಾ ಚೈತನ್ಯ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

8 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಪಕರಾದ ಜಿ.ಮನೋಹರನ್‌ ಮತ್ತು ಶ್ರೀಕಾಂತ್‌ ಕೆ.ಪಿ. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್‌, ಮುರಳಿ ಶರ್ಮಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ತೆರೆಕಂಡ ʼಉಪ್ಪಿ 2ʼ ಚಿತ್ರದ ಬಳಿಕ ಉಪೇಂದ್ರ ನಿರ್ದೇಶಿಸುತ್ತಿರುವ ಸಿನಿಮಾ ಎನ್ನುವ ಕಾರಣಕ್ಕೆ ʼಯುಐʼ ಸೆಟ್ಟೇರಿದಾಗಿನಿಂದಲೇ ಸದ್ದು ಮಾಡುತ್ತಿದೆ.

ʼ45ʼ ಚಿತ್ರದಿಂದಲೂ ಹೊಸ ಅಪ್‌ಡೇಟ್‌

ಉಪೇಂದ್ರ, ಡಾ. ಶಿವರಾಜ್‌ ಕುಮಾರ್‌ ಮತ್ತು ರಾಜ್‌ ಬಿ. ಶೆಟ್ಟಿ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸುತ್ತಿರುವ ʼ45ʼ ಚಿತ್ರತಂಡವೂ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ರಿಯಲ್‌ ಸ್ಟಾರ್‌ಗೆ ಶುಭ ಹಾರೈಸಿದೆ. ಮೋಷನ್ ಪೋಸ್ಟರ್ ಕೂಡ ಹೊರ ಬಂದಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼ45ʼ ಚಿತ್ರದಲ್ಲಿನ ಉಪೇಂದ್ರ ಅವರ ಫಸ್ಟ್‌ ಲುಕ್‌ ಈಗಾಗಲೇ ವೈರಲ್‌ ಆಗಿದೆ. ಇದರಲ್ಲಿ ಉಪೇಂದ್ರ ಕೈಯಲ್ಲಿ ಸಿಗಾರ್ ಹಿಡಿದುಕೊಂಡಿದ್ದಾರೆ. ಲಾಂಗ್ ಹೇರ್, ಕೈಗಳಲ್ಲಿ ವಿಶೇಷ ಉಂಗುರ ಕಂಡು ಬಂದಿದೆ. ಕೂಲಿಂಗ್ ಗ್ಲಾಸ್ ಕೂಡ ಇದೆ. ಧರಿಸಿರುವ ಡ್ರೆಸ್ ಕೂಡ ಸ್ಪೆಷಲ್ ಫೀಲ್ ಕೊಡುತ್ತಿದೆ. ಬಹುಕೋಟಿ ರೂ. ವೆಚ್ಚದಲ್ಲಿ ’45’ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ‌. ಸಿನಿಮಾದ ಕ್ಲೈಮಾಕ್ಸ್‌ ಅನ್ನು ವಿಶೇಷವಾಗಿ ಕಟ್ಟಿಕೊಡಲು ಅರ್ಜುನ್‌ ಜನ್ಯ ಮುಂದಾಗಿದ್ದಾರೆ. ಕ್ಲೈಮಾಕ್ಸ್‌ ಅನ್ನು ಸುಮಾರು 1 ತಿಂಗಳ ಕಾಲ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿದೆ. ಇದು ಕೂಡ ಬಹು ನೀರಿಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: ವಿಶ್ವದ ದಿ ಬೆಸ್ಟ್ 50 ಡೈರೆಕ್ಟರ್ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ..!