Sunday, 15th December 2024

Actor Upendra: ʼಯುಐʼ ಚಿತ್ರ ಬಿಡುಗಡೆ ಬಗ್ಗೆ ಉಪೇಂದ್ರ ಹೇಳಿದ್ದೇನು?

Actor Upendra

ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಇಂದು ʼಯುಐʼ ಚಿತ್ರ (UI Movie)ಕ್ಕೆ ಸಂಬಂಧಿಸಿ ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಸುಮಾರು 10 ವರ್ಷಗಳ ಬಳಿಕ ತಾವು ನಿರ್ದೇಶಿಸುತ್ತಿರುವ ಈ ಸಿನಿಮಾದ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಉಪೇಂದ್ರ ವಿಶೇಷ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ ʼಯುಐʼ ಚಿತ್ರದ ನಿರ್ಮಾಪಕರು, ನಾಯಕಿ, ಸಂಗೀತ ನಿರ್ದೇಶಕರು ಸೇರಿದಂತೆ ಚಿತ್ರತಂಡ ಹಾಜರಿತ್ತು. ಈ ವೇಳೆ ಉಪೇಂದ್ರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಬಿಡುಗಡೆ ಯಾವಾಗ?

ಸೆಟ್ಟೇರಿದಾಗಿನಿಂದಲೂ ಕುತೂಹಲ ಮೂಡಿಸಿರುವ ʼಯುಐʼ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ರಿಲೀಸ್‌ ಆಗಿರುವ ಹೊಸ ಪೋಸ್ಟರ್‌ರಲ್ಲಿ ʼರಿಲೀಸಿಂಗ್‌ ಇನ್‌ ಅಕ್ಟೋಬರ್‌ʼ ಎಂದು ಬರೆಯಲಾಗಿದೆ. ಹೀಗಾಗಿ ಅಭಿಮಾನಿಗಳು ಮುಂದಿನ ತಿಂಗಳು ಉಪ್ಪಿಯನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು ಎಂದು ಖುಷಿಪಟ್ಟಿದ್ದಾರೆ. ಆದರೆ ಇದೀಗ ಉಪೇಂದ್ರ ಈ ವಿಚಾರಕ್ಕ ಸಂಬಂಧಿಸಿ ಟ್ವಿಸ್ಟ್‌ ನೀಡಿದ್ದಾರೆ.

ʼʼಅಕ್ಟೋಬರ್‌ನಲ್ಲಿ​ ರಿಲೀಸ್ ಆಗಲಿದೆ ಎಂದು ಹೇಳಿದ್ದೇವೆ. ಆದರು ಏನು ಎಂದು ಹೇಳಿದ್ದೀವಾ?ʼʼ ಎಂದು ಉಪೇಂದ್ರ ಪ್ರಶ್ನಿಸಿರುವುದು ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಚಿತ್ರ ಬಿಡಿಗಡೆ ದಿನಾಂಕವನ್ನು ಘೋಷಿಸುವುದಾಗಿ ಚಿತ್ರತಂಡ ತಿಳಿಸಿದೆ. ಹೊಸ ಪೋಸ್ಟರ್‌ನಲ್ಲಿ ಉಪೇಂದ್ರ ಕುದುರೆ ಮೇಲೆ ಕುಳಿತಿರುವುದು ಕಂಡು ಬಂದಿದ್ದು, ಇದು ಕಲ್ಕಿಯ ಕಥೆಯಾ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರಿಸಿದ ಅವರು ಇಲ್ಲಿರುವುದು ಲಾಜಿಕಲ್‌, ಸೈಕಾಲಾಜಿಕಲ್‌ ಕಲ್ಕಿ ಎನ್ನುವ ಮೂಲಕ ಕುತೂಹಲವನನು ಇನ್ನಷ್ಟು ಹೆಚ್ಚಿಸಿದ್ದಾರೆ. ತಂತ್ರಜ್ಞಾನ, ಮೇಕಿಂಗ್‌ ಶೈಲಿ ಬದಲಾಗಿರುವುದರಿಂದ ಚಿತ್ರ ಬಿಡುಗಡೆ ತಡವಾಗುತ್ತಿದೆ ಎಂದು ಉತ್ತರಿಸಿದ್ದಾರೆ.

ʼʼಸಿನಿಮಾ ನಿರ್ದೇಶನ ಎನ್ನುವುದು ದೊಡ್ಡ ಸಾಹಸ. ಪ್ರತಿಯೊಂದು ಹಂತದಲ್ಲೂ ಫೈಟ್ ಮಾಡಿ ಸಿನಿಮಾ ತಲುಪಿಸಬೇಕು. ಹಲವು ಕಾರಣದಿಂದ ಸಿನಿಮಾ ವಿಳಂಬ ಆಗಿದೆ. ಒಟ್ಟಿನಲ್ಲಿ ಜನರು ಅತೀ ಬುದ್ಧಿವಂತರು ಎಂಬ ನಂಬಿಕೆ ಮೇಲೆ ಈ ಸಿನಿಮಾ ಮಾಡಿದ್ದೇವೆ. ಜನರಿಗೆ ಒಳ್ಳೆಯದನ್ನು ನೀಡಲು ಪ್ರಯತ್ನಿಸುತ್ತೇವೆʼʼ ಎಂದು ಭರವಸೆ ನೀಡಿದ್ದಾರೆ.

ಶುಭ ಕೋರಿದ ’45’ ಚಿತ್ರತಂಡ

ಕರುನಾಡ ‌ಚಕ್ರವರ್ತಿ ಡಾ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ʼ45ʼ ಚಿತ್ರದ ಕಡೆಯಿಂದಲೂ ರಿಯಲ್ ಸ್ಟಾರ್‌ಗೆ ಶುಭ ಕೋರಲಾಯಿತು. ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ʼ45ʼ ಚಿತ್ರತಂಡ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದೆ. ಉಪೇಂದ್ರ ಅವರ ನಿವಾಸಕ್ಕೆ ʼ45ʼ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಮುಂತಾದವರು ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಸುದ್ದಿಯನ್ನೂ ಓದಿ: Actor Upendra: ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪೇಂದ್ರ; ‘ಯುಐ’, ’45’ ಚಿತ್ರದಿಂದ ಬಂತು ಹೊಸ ಅಪ್‌ಡೇಟ್‌