ಬೆಂಗಳೂರು: ಸದ್ಯ ಸ್ಯಾಂಡಲ್‌ವುಡ್ ಮಾತ್ರವಲ್ಲ ಇಡೀ ದೇಶವೇ ಕೂತೂಹಲದಿಂದ ಎದುರು ನೋಡುತ್ತಿರುವ ಚಿತ್ರ ‘ಟಾಕ್ಸಿಕ್’ (Toxic). ‘ಕೆಜಿಎಫ್’ ಸರಣಿ ಚಿತ್ರಗಳ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಯಶ್ (Actor Yash) ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಮೂಲದ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಇದೀಗ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈಗಾಗಲೇ ಶೂಟಿಂಗ್ ಆರಂಭಗೊಂಡಿದ್ದು, ಯಶ್ ಹುಟ್ಟಹಬ್ಬದ ಪ್ರಯುಕ್ತ ಜ. 8ರಂದು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಲು ಚಿತ್ರತಂಡ ಯೋಜನೆ ರೂಪಿಸಿದೆ.
‘ಟಾಕ್ಸಿಕ್’ ಚಿತ್ರ ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಈ ಬಗ್ಗೆ ಸೂಚನೆ ನೀಡಿದೆ. ಜ. 8ರಂದು ʼಟಾಕ್ಸಿಕ್ʼ ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಪೋಸ್ಟರ್‌ನಲ್ಲಿ ಘೋಷಿಸಿದೆ. ಈ ಮೂಲಕ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದೆ.
ಪೋಸ್ಟರ್‌ನಲ್ಲಿ ಏನಿದೆ?
ʼಟಾಕ್ಸಿಕ್ʼ ಚಿತ್ರತಂಡ ಸೋಮವಾರ ಹಂಚಿಕೊಂಡಿರುವ ಈ ಹೊಸ ಪೋಸ್ಟರ್ ಇದೀಗ ವೈರಲ್ ಆಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಹಳದಿ ಮತ್ತು ಕಪ್ಪು ಬ್ಯಾಕ್‌ಗ್ರೌಂಡ್ ಹಿನ್ನೆಲೆಯಲ್ಲಿ ಕಂಡು ಬಂದಿದೆ. ಜತೆಗೆ ರೆಟ್ರೋ ಶೈಲಿಯಲ್ಲಿ ಮೂಡಿಬಂದಿದೆ. ಇದರಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಬಳಿ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಜತೆಗೆ ಜ. 8ರಂದು ಬೆಳಗ್ಗೆ 10.25ಕ್ಕೆ ಗ್ಲಿಂಪ್ಸ್ ಹೊರ ಬೀಳಲಿದೆ ಎಂದು ಪ್ರಕಟಿಸಲಾಗಿದೆ. ಸದ್ಯ ಪೋಸ್ಟರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಇತ್ತೀಚೆಗೆ ಯಶ್ ತಾವು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಇದರಿಂದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿತ್ತು. ಇದೀಗ ಅವರ ನೋವನ್ನು ಮರೆಸುವಂತೆ ಬಹು ದೊಡ್ಡ ಉಡುಗೊರೆಯನ್ನು ಹೊತ್ತು ಬರಲು ʼಟಾಕ್ಸಿಕ್ʼ ಚಿತ್ರತಂಡ ತಯಾರಿ ನಡೆಸಿದೆ. ಅದ್ಧೂರಿಯಾಗಿ ಮೂಡಿ ಬರುತ್ತಿರುವ ʼಟಾಕ್ಸಿಕ್ʼ ಅನ್ನು ಪ್ಯಾನ್ ವರ್ಲ್ಡ್ ಚಿತ್ರವಾಗಿ ತೆರೆಗೆ ತರಲು ಕೆವಿಎನ್ ಪ್ರೊಡಕ್ಷನ್ಸ್ ಸಿದ್ಧತೆ ನಡೆಸುತ್ತಿದೆ. ಅದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಖ್ಯಾತಿಯ ತಂತ್ರಜ್ಞರು ಚಿತ್ರಕ್ಕಾಗಿ ದುಡಿಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಏ. 10ರಂದು ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ತಡವಾಗುತ್ತಿದ್ದು, ಈ ವರ್ಷದ ಕೊನೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.
ಗೋವಾದ ಡ್ರಗ್ ಮಾಫಿಯಾದ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಚಿತ್ರತಂಡ ಕಥೆಯ ಕುರಿತಾಗಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ʼಟಾಕ್ಸಿಕ್ʼನ ಕಥೆ ಹೇಳುವ ಮಾದರಿ ಮತ್ತು ದೃಶ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿದೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ.
ಈ ಸುದ್ದಿಯನ್ನೂ ಓದಿ: Actor Yash: ಈ ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ ಯಶ್! ಅಭಿಮಾನಿಗಳಿಗೆ ಭಾರಿ ನಿರಾಸೆ; ರಾಕಿ ಭಾಯ್ ಬರೆದ ಪತ್ರದಲ್ಲಿ ಏನಿದೆ?