Tuesday, 7th January 2025

Actress Nayanthara: ನಯನತಾರಾಗೆ‌ ಮತ್ತೊಂದು ಕಾನೂನು ಸಂಕಷ್ಟ; ಧನುಷ್‌ ಬೆನ್ನಿಗೆ ‘ಚಂದ್ರಮುಖಿ’ ಚಿತ್ರತಂಡದಿಂದಲೂ ನೋಟಿಸ್‌

Actress Nayanthara

ಚೆನ್ನೈ: ಕಾಲಿವುಡ್‌ ಲೇಡಿ ಸೂಪರ್‌ಸ್ಟಾರ್‌ ನಯನತಾರಾ (Actress Nayanthara) ಮತ್ತು ವಿವಾದಕ್ಕೆ ಬಿಟ್ಟಿರಲಾರದ ನಂಟು. ಹೀಗೆ ಹೇಳುವುದಕ್ಕೂ ಕಾರಣವಿದೆ. ಕೆಲವು ದಿನಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆದ ನಯನತಾರಾ ಕುರಿತಾದ ಸಾಕ್ಷ್ಯಚಿತ್ರ ʼನಯನತಾರಾ: ಬಿಯಾಂಡ್‌ ದಿ ಫೇರ್‌ ಟೇಲ್‌ʼ (Nayanthara: Beyond The Fairy Tale)ನಲ್ಲಿ ಅನುಮತಿಯನ್ನು ಪಡೆಯದೆ ತಾವು ನಿರ್ಮಿಸಿದ ʼನಾನ್‌ ರೌಡಿ ಧಾನ್‌ʼ ಸಿನಿಮಾದ ದೃಶ್ಯಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ನಟ ಧನುಷ್ ಅವರು ಕಾನೂನು ಸಮರ ಸಾರಿದ್ದರು. 10 ಕೋಟಿ ರೂ. ಪರಿಹಾರಕ್ಕಾಗಿ ಲೀಗಲ್‌ ನೋಟಿಸ್‌ ಕೂಡ ನೀಡಿದ್ದರು. ಈ ವಿವಾದ ತಣ್ಣಗಾಗುವ ಮೊದಲೇ ಲೇಡಿ ಸೂಪರ್‌ಸ್ಟಾರ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಈ ಡಾಕ್ಯುಮಂಟ್ರಿ ಸಂಬಂಧ ಇದೀಗ 2005ರಲ್ಲಿ ತೆರೆಕಂಡ ಸೂಪರ್‌ ಹಿಟ್‌ ʼಚಂದ್ರಮುಖಿʼ ಚಿತ್ರತಂಡ ನಯನತಾರಾಗೆ ಮತ್ತೊಂದು ನೋಟಿಸ್‌ ನೀಡಿದೆ.

ರಜನಿಕಾಂತ್‌, ಜ್ಯೋತಿಕಾ ಮತ್ತು ನಯನತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ʼಚಂದ್ರಮುಖಿʼ ಚಿತ್ರ ಮಲಯಾಳಂನ ʼಮಣಿಚಿತ್ರತಾಳ್‌ʼ ಸಿನಿಮಾದ ರಿಮೇಕ್‌. 2005ರಲ್ಲಿ ರಿಲೀಸ್‌ ಆದ ʼಚಂದ್ರಮುಖಿʼ ಚಿತ್ರ ತಮಿಳುನಾಡಿನಲ್ಲಿ ಸೂಪರ್‌ ಹಿಟ್‌ ಎನಿಸಿಕೊಂಡಿತ್ತು. ಈ ಚಿತ್ರದಲ್ಲಿನ ದೃಶ್ಯವನ್ನು ಡಾಕ್ಯುಮಂಟ್ರಿಯಲ್ಲಿ ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ಇದೀಗ ಆರೋಪಿಸಲಾಗಿದೆ.

ನಯನತಾರಾ, ನೆಟ್‌ಫ್ಲಿಕ್ಸ್‌ಗೆ ನೋಟಿಸ್‌

ಮೂಲಗಳ ಪ್ರಕಾರ ಚಿತ್ರತಂಡ ಇದೀಗ ನಯನತಾರಾ ಮತ್ತು ಡಾಕ್ಯುಮೆಂಟ್ರಿ ನಿರ್ಮಿಸಿದ ನೆಟ್‌ಫ್ಲಿಕ್ಸ್‌ಗೆ ನೋಟಿಸ್‌ ಜಾರಿ ಮಾಡಿದೆ. ʼಚಂದ್ರಮುಖಿʼ ಚಿತ್ರದಲ್ಲಿನ ದೃಶ್ಯವನ್ನು ಅನುಮತಿ ಇಲ್ಲದೆ ಬಳಕೆ ಮಾಡಲಾಗಿದೆ ಎಂದು ದೂರಿದ್ದು, 5 ಕೋಟಿ ರೂ. ಪರಿಹಾರ ಕೋರಿದೆ. ಈ ಬಗ್ಗೆ ಇದುವರೆಗೆ ನಯನತಾರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ʼನಯನತಾರಾ: ಬಿಯಾಂಡ್‌ ದಿ ಫೇರ್‌ ಟೇಲ್‌ʼ ಡಾಕ್ಯುಮೆಂಟ್ರಿಯಲ್ಲಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಅವರ ಮದುವೆ ಕ್ಷಣ, ಅವರ ಜರ್ನಿಯನ್ನು ಸೆರೆ ಹಿಡಿಯಲಾಗಿದೆ. 2022ರಲ್ಲಿ ಇವರಿಬ್ಬರು ಮಹಾಬಲಿಪುರಂನಲ್ಲಿ ಸಪ್ತಪದಿ ತುಳಿದಿದ್ದರು. ಅವರು ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ, ಹೇಗಿತ್ತು ಅವರ ಪ್ರಣಯದ ದಿನಗಳು ಎನ್ನುವುದನ್ನೂ ವಿವರಿಸಲಾಗಿದೆ. ಇದರ ಜತೆಗೆ ನಯನತಾರಾ ಅಭಿನಯದ ಪ್ರಮುಖ ಚಿತ್ರಗಳ ತುಣಕನ್ನೂ ಈ ಡಾಕ್ಯುಮೆಂಟ್ರಿಯಲ್ಲಿ ಬಳಸಲಾಗಿದೆ. ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಧನುಷ್‌ ತಮ್ಮನ್ನು ಗುರಿಯಾಗಿಸಿಕೊಂಡು ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ ಎಂದು ಕೆಲವು ದಿನಗಳ ಹಿಂದೆ ನಯನತಾರಾ ಸೋಶಿಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡು ನೋವು ತೋಡಿಕೊಂಡಿದ್ದರು.

1993ರಲ್ಲಿ ತೆರೆಕಂಡ ಮಲಯಾಲಂನ ಸೂಪರ್‌ ಹಿಟ್‌ ಚಿತ್ರ ʼಮಣಿಚಿತ್ರತಾಳ್‌ʼ. ಇದನ್ನು ʼಆಪ್ತಮಿತ್ರʼ ಹೆಸರಿನಲ್ಲಿ ನಿರ್ದೇಶಕ ಪಿ.ವಾಸು 2004ರಲ್ಲಿ ಕನ್ನಡಕ್ಕೆ ರಿಮೇಕ್‌ ಮಾಡಿದ್ದರು. ಬಳಿಕ 2005ರಲ್ಲಿ ಅವರೇ ಇದರ ತಮಿಳು ಆವೃತ್ತಿ ʼಚಂದ್ರಮುಖಿʼಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ಸೈಕಾಲಾಜಿಕಲ್‌ ಥ್ರಿಲ್ಲರ್‌ ಆಗಿದ್ದ ಈ ಚಿತ್ರದಲ್ಲಿ ರಜನಿಕಾಂತ್‌ ಮತ್ತು ಜ್ಯೋತಿಕಾ ಜತೆಗೆ ನಯನತಾರಾ ಅಭಿನಯವೂ ಗಮನ ಸೆಳೆದಿತ್ತು. ದುರ್ಗಾ ಪಾತ್ರದಲ್ಲಿ ನಯನತಾರಾ ಮೋಡಿ ಮಾಡಿದ್ದರು. ತಮಿಳಿನ ಕ್ಲಾಸ್‌ ಚಿತ್ರಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಈ ಚಿತ್ರದ ಬಳಿಕ ನಯನತಾರಾ ಲಕ್‌ ಬದಲಾಯಿತು. ಅವರು ಕಾಲಿವುಡ್‌ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರೆನಿಕೊಂಡರು. ಇದೀಗ ಸುಮಾರು 20 ವರ್ಷಗಳ ಬಳಿಕ ಇದೇ ಚಿತ್ರದಿಂದ ಅವರು ಕಾನೂನು ಸಂಕಷ್ಟ ಎದುರಿಸುವಂತಾಗಿದೆ.

ಈ ಸುದ್ದಿಯನ್ನೂ ಓದಿ: Dhanush v/s Nayanthara: ತಾರಕಕ್ಕೇರಿದ ಧನುಷ್‌-ನಯನತಾರಾ ಜಗಳ; ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೊಕದ್ದಮೆ

Leave a Reply

Your email address will not be published. Required fields are marked *