Monday, 14th October 2024

Actress Padmapriya: ತಮಿಳು ಚಿತ್ರ ನಿರ್ದೇಶಕನ ಜತೆಗಿನ ಕೆಟ್ಟ ಅನುಭವ ಹಂಚಿಕೊಂಡ ಶಿವಣ್ಣ ಸಿನಿಮಾದ ನಾಯಕಿ

Actress Padmapriya

ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆದಿರುವ ದೌರ್ಜನ್ಯ ಬಗ್ಗೆ ನ್ಯಾಯಮೂರ್ತಿ ಹೇಮಾ ಸಮಿತಿ ಕೇರಳ ಸರ್ಕಾರಕ್ಕೆ ನೀಡಿದ್ದ ವರದಿ ಸದ್ಯ ಸಂಚಲನ ಸೃಷ್ಟಿಸಿದೆ. ಇದು ಬಹಿರಂಗವಾದ ಬಳಿಕ ಒಬ್ಬೊಬ್ಬರಾಗಿಯೇ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸುತ್ತಿದ್ದಾರೆ. ಜತೆಗೆ ಇತರ ಚಿತ್ರರಂಗದವರವೂ ಧ್ವನಿ ಎತ್ತತೊಡಗಿದ್ದಾರೆ. ಇದೀಗ ಬಹುಭಾಷಾ ನಟಿ ಪದ್ಮಪ್ರಿಯಾ (Actress Padmapriya) ಅವರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ತಮಿಳು ಚಿತ್ರವೊಂದರ ಶೂಟಿಂಗ್‌ ವೇಳೆ ನಡೆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಎಲ್ಲರೆದುರೇ ತಮಿಳು ನಿರ್ದೇಶಕರೊಬ್ಬರು ತಮ್ಮ ಕಪಾಳಕ್ಕೆ ಹೊಡೆದಿದ್ದರು. ಈ ಬಗ್ಗೆ ದೂರನ್ನೂ ನೀಡಿದ್ದೆ ಎಂದು ಪದ್ಮಪ್ರಿಯಾ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʼʼಆ ವೇಳೆ ನಾನು ನಿರ್ದೇಶಕರಿಗೆ ಕಪಾಳಮೋಕ್ಷ ಮಾಡಿದ್ದೇನೆ ಎಂದು ಮಾಧ್ಯಮಗಳು ಸುಳ್ಳು ವರದಿ ಮಾಡಿದ್ದವು. ನಾನೇ ಅವರ ಕಪಾಳಕ್ಕೆ ಹೊಡೆದಿದ್ದರೆ ಚಲನಚಿತ್ರ ಮಂಡಳಿಗೆ ಯಾಕೆ ದೂರು ನೀಡುತ್ತಿದ್ದೆ?ʼʼ ಎಂದು ಅವರು ಪ್ರಶ್ನಿಸಿದ್ದಾರೆ. ಈ ಘಟನೆಯ ನಂತರ ನಿರ್ದೇಶಕರನ್ನು 6 ತಿಂಗಳ ಕಾಲ ಚಿತ್ರರಂಗದಿಂದ ಬ್ಯಾನ್‌ ಮಾಡಲಾಯಿತು. ಅದರ ನಂತರ ತಾವು ತಮಿಳು ಚಿತ್ರಗಳನ್ನು ಒಪ್ಪಿಕೊಳ್ಳುವುದನ್ನು ಕಡಿಮೆ ಮಾಡಿದ್ದಾಗಿ ತಿಳಿಸಿದ್ದಾರೆ. ಅದಾದ ಬಳಿಕ ತಮಗೆ ಚಿತ್ರರಂಗದಲ್ಲಿ ಅಂತಹ ಕೆಟ್ಟ ಅನುಭವವಾಗಿಲ್ಲ ಎಂದು ವಿವರಿಸಿದ್ದಾರೆ.

ನಿರ್ದೇಶಕರ ಹೆಸರನ್ನು ಉಲ್ಲೇಖಿಸದ ಪದ್ಮಪ್ರಿಯಾ ಚಿತ್ರೀಕರಣ ಮುಗಿದ ನಂತರ ನಿರ್ದೇಶಕ ಎಲ್ಲರ ಮುಂದೆ ಕಪಾಳಮೋಕ್ಷ ಮಾಡಿದ್ದಾಗಿ ಹೇಳಿದ್ದಾರೆ. ʼʼಅದಾಗಿ ಬಹಳ ಸಮಯದವರೆಗೆ ನನ್ನೊಳಗೆ ಏನೋ ಸಮಸ್ಯೆ ಇದೆ ಎಂದು ಭಾವಿಸಿದ್ದ” ಎಂದು ಪದ್ಮಪ್ರಿಯಾ ತಿಳಿಸಿದ್ದಾರೆ. “ಮಹಿಳೆಯೊಬ್ಬರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಆಕೆಯದ್ದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತದೆʼʼ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಅಸಮಾನತೆ

ಹಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಪದ್ಮಪ್ರಿಯಾ ಅವರು ಮಾಲಿವುಡ್‌ನಲ್ಲಿ ಮಹಿಳೆಯರು ಅಸಮಾನತೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಪದ್ಮಪ್ರಿಯಾ ಅವರು ಮಲಯಾಳಂ ಚಿತ್ರರಂಗದ ಕಲಾವಿದರ ಸಂಸ್ಥೆಯಾದ ಅಮ್ಮಾ (Association of Malayalam Movie Artists)ವನ್ನು ಅಸಂಘಟಿತ ಮತ್ತು ಪರಿಣಾಮಕಾರಿಯಲ್ಲದ ಸಂಸ್ಥೆ ಎಂದು ಕರೆದಿದ್ದರು. ಅಮ್ಮಾ ಕಾರ್ಯಕಾರಿ ಸಮಿತಿಯ ಸಾಮೂಹಿಕ ರಾಜೀನಾಮೆಯನ್ನು ಬೇಜವಾಬ್ದಾರಿಯುತ ಕ್ರಮ ಎಂದು ಅವರು ಬಣ್ಣಿಸಿದ್ದರು. ಚಲನಚಿತ್ರ ಸಂಘಟನೆಗಳು ಪ್ರಸ್ತುತ ಕೇವಲ ಲೈಂಗಿಕ ಕಿರುಕುಳವನ್ನು ಮಾತ್ರ ಪರಿಗಣಿಸುತ್ತಿವೆ ಎಂದು ಟೀಕಿಸಿದ್ದಾರೆ. ನ್ಯಾಯಮೂರ್ತಿ ಹೇಮಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪದ್ಮಪ್ರಿಯಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮಲೆಯಾಳಂನ ಸೂಪರ್‌ ಸ್ಟಾರ್‌ಗಳಾದ ಮೋಹನ್‌ಲಾಲ್‌, ಮಮ್ಮುಟ್ಟಿ, ಜಯರಾಂ ಮುಂತಾದವರ ಸಿನಿಮಾಗಳಲ್ಲಿ ಅಭಿನಯಿಸಿರುವ ಹೆಗ್ಗಳಿಕೆ ಇವರದ್ದು. 2010ರಲ್ಲಿ ತೆರೆಕಂಡ ಶಿವರಾಜ್‌ ಕುಮಾರ್‌ ಅಭಿನಯದ ʼತಮಸ್ಸುʼ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರು 2011ರಲ್ಲಿ ಬಿಡುಗಡೆಯಾದ ʼಐದೊಂದ್ಲ ಐದುʼ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Nivin Pauly: ಮೀಟೂ ಕೇಸ್‌ ಬಗ್ಗೆ ಮೌನ ಮುರಿದ ನಿವಿನ್‌ ಪೌಲಿ-ಕಾನೂನು ಸಮರಕ್ಕೆ ಸಿದ್ದ ಎಂದ ʻಪ್ರೇಮಂʼ ನಟ