ಮುಂಬೈ: ಇತ್ತೀಚೆಗೆ ತೆರೆಕಂಡ ‘ಪುಷ್ಪ 2’ (Pushpa 2) ಚಿತ್ರದ ‘ಕಿಸಕ್’ ಸ್ಪೆಷಲ್ ಹಾಡಿನ ಮೂಲಕ ಪಡ್ಡೆಗಳ ನಿದ್ದೆ ಕದ್ದ ಕನ್ನಡತಿ ಶ್ರೀಲೀಲಾ (Sreeleela) ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ಹಿಂದೆಯೇ ಅವರು ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅಧಿಕೃತ ಘೋಷಣೆಯಾಗಿರಲಿಲ್ಲ. ಇದೀ ಸ್ವತಃ ಅವರೇ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಅದ್ಭುತ ಡ್ಯಾನ್ಸ್‌ನಿಂದಲೇ ಜನಪ್ರಿಯರಾಗಿರುವ ಶ್ರೀಲೀಲಾ ಕನ್ನಡದ ಜತೆಗೆ ತೆಲುಗಿನ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತಮಿಳು ಚಿತ್ರವೊಂದಕ್ಕೂ ಆಯ್ಕೆಯಾಗುವ ಮೂಲಕ ಸುದ್ದಿಯಾಗಿದ್ದರು. ಇದೀಗ ಬಾಲಿವುಡ್ ಸರದಿ.
ಕಾರ್ತಿಕ್ ಆರ್ಯನ್‌ಗೆ ಜೋಡಿ
ಸದ್ಯ ಬಾಲಿವುಡ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಾಯಕರಲ್ಲಿ ಒಬ್ಬರಾದ ಕಾರ್ತಿಕ್ ಆರ್ಯನ್‌ಗೆ ಜೋಡಿಯಾಗುವ ಮೂಲಕ ಶ್ರೀಲೀಲಾ ಭರ್ಜರಿಯಾಗಿಯೇ ಹಿಂದಿ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇತ್ತೀಚೆಗೆ ತೆರೆಕಂಡ ʼಭೂಲ್ ಭುಲೈಯಾ 3′ ಯಶಸ್ಸಿನಲ್ಲಿ ತೇಲುತ್ತಿರುವ ಕಾರ್ತಿಕ್ ಆರ್ಯನ್ ಅವರ ಮುಂಬರುವ ಚಿತ್ರದಲ್ಲಿ ಶ್ರೀಲೀಲಾ ಗಮನ ಸೆಳೆಯಲಿದ್ದಾರೆ. ಇದರಲ್ಲಿ ಶ್ರೀಲೀಲಾ ಪಾತ್ರ ಬಹಳ ವಿಶೇಷವಾಗಿರಲಿದೆಯಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರೀಲೀಲಾ ಇನ್ನು ಮುಂದೆ ಅಭಿನಯಕ್ಕೆ ಒತ್ತು ಇರುವಂತಹ ಪಾತ್ರಗಳನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದರು. ಅದಕ್ಕೆ ತಕ್ಕಂತೆ ಅವರಿಗೆ ಉತ್ತಮ ಅವಕಾಶ ಅರಸಿಕೊಂಡು ಬಂದಿದೆ.
ವರುಣ್ ಧವನ್ ಚಿತ್ರ ಕೈಬಿಟ್ಟ ಶ್ರೀಲೀಲಾ
ಈ ಹಿಂದೆ ಶ್ರೀಲೀಲಾ ಅವರು ವರುಣ್ ಧವನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಾರೆ ಎನ್ನಲಾಗಿತ್ತು. ಟಿಪ್ಸ್ ಫಿಲ್ಮ್ಸ್ ನಿರ್ಮಾಣದ ದೇವಿಡ್ ಧವನ್ ನಿರ್ದೇಶನದ ಚಿತ್ರದಲ್ಲಿ ವರುಣ್ ಧವನ್‌ಗೆ ನಾಯಕಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಡೇಟ್ ಹೊಂದಿಕೆಯಾಗದ ಕಾರಣ ಅವರು ಆ ಪ್ರಾಜೆಕ್ಟ್‌ನಿಂದ ಹೊರ ಬಂದಿದ್ದರು.
ಬಾಲಿವುಡ್ ಎಂಟ್ರಿ ಬಗ್ಗೆ ಹೇಳಿದ್ದೇನು?
ಇತ್ತೀಚೆಗೆ ರಾಣಾ ದಗ್ಗುಬಾಟಿ ಶೋದಲ್ಲಿ ಭಾಗವಹಿಸಿದ್ದ ಶ್ರೀಲೀಲಾ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದರು. ʼʼಬಾಲಿವುಡ್‌ಗೆ ಪ್ರವೇಶಿಸುತ್ತಿರುವುದು ನಿಜ. ಮೊದಲ ಬಾರಿಗೆ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದು ಹೊಸ, ವಿಭಿನ್ನ ಅನುಭವʼʼ ಎಂದು ಹೇಳಿದ್ದರು. ಸದ್ಯ ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ.
2017ರಲ್ಲಿ ತೆರೆಕಂಡ ತೆಲುಗಿನ ಹಾರರ್ ಚಿತ್ರ ʼಚಿತ್ರಾಂಗದʼ ಮೂಲಕ ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಬಳಿಕ 2019ರಲ್ಲಿ ʼಕಿಸ್ʼ ಕನ್ನಡ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಿತರಾದರು. ಅದಾದ ಬಳಿಕ ಶ್ರೀಮುರಳಿ, ನಂದಮುರಿ ಬಾಲಕೃಷ್ಣ, ಮಹೇಶ್ ಬಾಬು, ನಿತಿನ್, ರವಿ ತೇಜಾ ಮುಂತಾದ ಸ್ಟಾರ್ ಹೀರೋಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ಅವರ ಮುಂಬರ ತಮಿಳು ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಜಯಂ ರವಿ, ಶಿವಕಾರ್ತಿಕೇಯನ್ ಮತ್ತು ಅಥರ್ವ ನಾಯಕರಾಗಿ ನಟಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: Actress Sreeleela: ಕಾಲಿವುಡ್‌ಗೆ ಕಾಲಿಟ್ಟ ಶ್ರೀಲೀಲಾ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಚಿತ್ರಕ್ಕೆ ಆಯ್ಕೆ