ಮುಂಬೈ: ಸದಾ ಒಂದಲ್ಲೊಂದು ವಿಭಿನ್ನ ಪಾತ್ರಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಅಕ್ಷಯ್ ಕುಮಾರ್ (Akshay Kumar) ಇದೀಗ ಲಾಯರ್( lawyer) ಆಗಿ ತೆರೆ ಮೇಲೆ ಮಿಂಚಲಿದ್ದಾರೆ. ಲಾಯರ್ ಸಿ.ಶಂಕರನ್ ಜೀವನಾಧಾರಿತ ಸಿನಿಮಾಗೆ ಅಕ್ಷಯ್ ಬಣ್ಣ ಹಚ್ಚಲಿದ್ದು, ಕರಣ್ ಸಿಂಗ್ ತ್ಯಾಗಿ ನಿರ್ದೇಶನ ಹಾಗೂ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ನ ಸಹಯೋಗದೊಂದಿಗೆ ಚಿತ್ರ ತೆರೆ ಮೇಲೆ ಬರಲಿದೆ. ಅನನ್ಯ ಪಾಂಡೆ (Ananya Panday) ಹಾಗೂ ತಮಿಳು ನಟ ಆರ್.ಮಾಧವನ್ (R Madhavan) ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ.
1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಅಂದಿನ ಪಂಜಾಬ್ ಗವರ್ನರ್ ಮೈಕಲ್ ಓಡ್ವೈರ್ನ ಪಾತ್ರವನ್ನು ಬಹಿರಂಗಪಡಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಲಾಯರ್ ಕಥೆಯನ್ನು ಇದು ಹೇಳುತ್ತದೆ. ಶಂಕರನ್ ಬ್ರಿಟಿಷರ ಆಡಳಿತವನ್ನು ಹೇಗೆ ವಿರೋಧಿಸಿದ್ದರು ಎಂಬುದನ್ನು ಚಿತ್ರ ತೆರೆ ಮೇಲೆ ವಿವರಿಸಲಿದೆ. ಇದು ಸಿ.ಶಂಕರನ್ ಜೀವನಾಧಾರಿತ ಚಿತ್ರವಾಗಿದ್ದು, ಅವರ ಮರಿ ಮೊಮ್ಮಗ ರಘು ಪಾಠಕ್ ಹಾಗೂ ಪತ್ನಿ ಪುಷ್ಪಾ ಪಾಠಕ್ ಬರೆದಿರುವ ʼದಿ ಕೇಸ್ ದಟ್ ಷೂಕ್ ದಿ ಎಂಪೈರ್ ʼ ಪುಸ್ತಕವನ್ನು ಆಧರಿಸಿದ ಚಿತ್ರವಾಗಿದೆ.
ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಅಕ್ಷಯ್ ಕುಮಾರ್ ನಟನೆಯ ʼಬಡೆ ಮಿಯಾನ್ ಚೋಟೆ ಮಿಯಾನ್ʼ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಹೀಗಾಗಿ ಸಿ.ಶಂಕರನ್ ಜೀವನಾಧಾರಿತ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. 2025ರ ಮಾರ್ಚ್ 14ರಂದು ಇದು ತೆರೆ ಮೇಲೆ ಬರಲಿದೆ. ಸದ್ಯ ಚಿತ್ರಕ್ಕೆ ಯಾವುದೇ ಹೆಸರನ್ನು ಘೋಷಿಸದ ಚಿತ್ರ ತಂಡ “ಅನ್ ಟೈಟಲ್ ಫಿಲ್ಮ್ ಆನ್ ಸಿ.ಶಂಕರನ್ ಎಂದು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದ್ದು , ಚಿತ್ರ ತಂಡ ಸಿನಿಮಾದ ಹೆಸರನ್ನು ಘೋಷಣೆ ಮಾಡಬೇಕಾಗಿದೆ.
ಬಾಲಿವುಡ್ನ ಟಾಪ್ ಹೀರೋಗಳ ಪೈಕಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ಷಯ್ ನಟನೆಯ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿವೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುವ ನಟ ಒಂದು ಹಿಟ್ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಭಾರತದ ಇತಿಹಾಸವನ್ನು ಸಾರುವ ಈ ಸಿನಿಮಾ ಅವರಿಗೆ ಯಶ್ಸನ್ನು ತಂದು ಕೊಡುತ್ತಾ ಎಂದು ಕಾದು ನೋಡಬೇಕಿದೆ. ಮಾಧವನ್ ಹಾಗೂ ಅನನ್ಯ ಪಾಂಡೆ ಅವರೊಂದಿಗೆ ಅಕ್ಷಯ್ ಕುಮಾರ್ ಅವರ ಮೊದಲ ಸಿನಿಮಾ ಇದಾಗಿದೆ. ʼವೆಲ್ಕಮ್ 5′ ಹಾಗೂ ಇನ್ನು ಹಲವು ಚಿತ್ರಗಳಲ್ಲಿ ಸದ್ಯ ಅಕ್ಷಯ್ ಬ್ಯುಸಿಯಾಗಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ ಸಿನಿಮಾದಲ್ಲಿ ಮಾಧವನ್ ರಣ್ವೀರ್ ಸಿಂಗ್ ಜತೆ ತೆರೆಯನ್ನು ಹಂಚಿಕೊಂಡಿದ್ದು, ಟೈಟಲ್ ಇನ್ನಷ್ಟೇ ಅಂತಿಮವಾಗಬೇಕಿದೆ.
ಈ ಸುದ್ದಿಯನ್ನೂ ಓದಿ: Rishab Shetty: ಟಾಲಿವುಡ್ನತ್ತ ಹೊರಟ ಡಿವೈನ್ ಸ್ಟಾರ್; ಬಹುನಿರೀಕ್ಷಿತ ಸೀಕ್ವೆಲ್ಗೆ ರಿಷಭ್ ಶೆಟ್ಟಿ ನಾಯಕ?