Friday, 22nd November 2024

ನಟಿ ಅಮೀಶಾ ರಾಂಚಿ ನ್ಯಾಯಾಲಯಕ್ಕೆ ಶರಣು

ರಾಂಚಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿ ದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ವಿಭಾಗದ ನ್ಯಾಯಾಧೀಶ ಡಿ.ಎನ್. ಶುಕ್ಲಾ ನಟಿಗೆ ಜಾಮೀನು ಮಂಜೂರು ಮಾಡಿದ್ದು, ಜೂನ್ 21ರಂದು ಮತ್ತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.

2018ರಲ್ಲಿ ಜಾರ್ಖಂಡ್ ಮೂಲದ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ನಟಿ ಅಮೀಶಾ ಪಟೇಲ್‌ ವಿರುದ್ಧ ವಂಚನೆ ಮತ್ತು ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಕೂಡ ನಟಿ ಕೋರ್ಟ್​ಗೆ ಹಾಜರಾಗಿರಲಿಲ್ಲ.

ಸಿನಿಮಾ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ‘ದೇಸಿ ಮ್ಯಾಜಿಕ್‌’ ಎಂಬ ಶೀರ್ಷಿಕೆಯ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಈ ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ನಟಿ ಅಮೀಶಾ ಪಟೇಲ್‌ ಅವರಿಗೆ 2.5 ಕೋಟಿ ರೂಪಾಯಿ ಹಣ ನೀಡಿದ್ದರು.

ಅಮೀಶಾ ಅವರು ಚಿತ್ರದಲ್ಲಿ ನಟಿಸದ ಕಾರಣ ಹಣ ವಾಪಸ್​ ಕೊಡುವಂತೆ ತಿಳಿಸಿದ್ದರು. ಅಮೀಶಾ ಅವರು 2.5 ಕೋಟಿ ಚೆಕ್‌ ಕಳುಹಿಸಿದ್ದರೂ ಅದು ಬೌನ್ಸ್‌ ಆಗಿತ್ತು. ಈ ಕುರಿತು ಇಬ್ಬರ ನಡುವೆ ಜಗಳ ನಡೆದು ಕೊನೆಗೆ ಅಜಯ್ ಕುಮಾರ್ ಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಅಮೀಶಾ ಪಟೇಲ್‌ಗೆ ಜಾಮೀನು ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಜೂ.21ರಂದು ನಡೆಯಲಿದೆ.

ನವೆಂಬರ್ 16, 2017ರಂದು ಮೊರಾದಾಬಾದ್‌ನ ಹಾಲಿಡೇ ರೀಜೆನ್ಸಿ ಹೋಟೆಲ್‌ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿ ನಟಿ ಅಮೀಶಾ ಪಟೇಲ್ ನೃತ್ಯ ಕಾರ್ಯಕ್ರಮವನ್ನು ಮಾಡಬೇಕಿತ್ತು. ಆದ್ರೆ, ಅವರು ಮಾಡಿಲ್ಲ ಎಂದು ಈವೆಂಟ್​ ಕಂಪೆನಿ ಡ್ರೀಮ್​ ವಿಷನ್​ ಮಾಲೀಕ ಪವನ್​ ಕುಮಾರ್​ ಆರೋಪಿಸಿದ್ದರು.