ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಹೊಸ ಹೆಜ್ಜೆ ಇಟ್ಟಿರುವ ಭಾಗ್ಯಾಗೆ ಕಷ್ಟಗಳು ಕಡಿಮೆ ಆಗಿಲ್ಲ. ಒಂದಲ್ಲ ಒಂದು ತೊಂದರೆ ಎದುರಾಗುತ್ತಲೇ ಇದೆ. ಸದ್ಯ ತನ್ನ ಕುಟುಂಬದಿಂದ ಆಗಿರುವ ತಪ್ಪುಗಳನ್ನೆಲ್ಲ ಸರಿ ಮಾಡಲು ಹೊರಟಿದ್ದಾಳೆ. ಒಂದುಕಡೆ ತಾನು ಅನುಭವಿಸಿದ ಕಷ್ಟವನ್ನು ತಾಂಡವ್ಗೆ ರಿಟರ್ನ್ ಕೊಡುತ್ತಿದ್ದರೆ ಮತ್ತೊಂದೆಡೆ ಮಕ್ಕಳ ಜೀವನವನ್ನು ಸರಿಪಡಿಸಲು ಭಾಗ್ಯ ಕಷ್ಟಪಡುತ್ತಿದ್ದಾಳೆ.
ಕಾಲೇಜಿನಿಂದ ಸಸ್ಪೆಂಡ್ ಆಗಿರುವ ಮಗಳು ತಾನ್ವಿಯನ್ನು ಹೇಗಾದರು ಮಾಡಿ ಪುನಃ ಕಾಲೇಜಿಗೆ ಸೇರಿಸಬೇಕು ಎಂದು ಕಷ್ಟಪಡುತ್ತಿದ್ದಾಳೆ. ಇದಕ್ಕಾಗಿ ಭಾಗ್ಯಾ ತಾಂಡವ್ನನ್ನು ಕಾಲೇಜಿಗೆ ಹೋಗಿ ಮಾತಾಡೋಣ ಎಂದು ಕರೆದುಕೊಂಡು ಹೋಗಿದ್ದಾಳೆ. ಆರಂಭದಲ್ಲಿ ಇದಕ್ಕೆ ತಾಂಡವ್ ಒಪ್ಪಿರಲಿಲ್ಲ. ನಾನು ಎಲ್ಲೂ ಹೋಗಲ್ಲ, ನಾನು ಎಲ್ಲಿಗೂ ಬರಲ್ಲ ಎಂದು ಹೇಳಿದ್ದಾನೆ. ಬಳಿಕ ನಾವಿಬ್ರೂ ಹೋಗ್ಲೆಬೇಕು ಎಂದು ಭಾಗ್ಯಾ ಎಳೆದುಕೊಂಡು ಹೋಗಿದ್ದಾಳೆ.
ಇವತ್ತು ನಾವು ನಿನ್ನನ್ನ ಕಾಲೇಜಿಗೆ ವಾಪಾಸ್ ಸೇರ್ಸಿಯೇ ಇಲ್ಲಿಂದ ಹೋಗೋದು ಎಂದು ಭಾಗ್ಯ ತನ್ವಿ ಬಳಿ ಹೇಳಿದ್ದಾಳೆ. ಅದರಂತೆ ಮೂರೂ ಜನ ಪ್ರಿನ್ಸಿಪಾಲ್ ಭೇಟಿ ಆಗಲು ತೆರಳಿದ್ದಾರೆ. ಸರ್, ದಯವಿಟ್ಟು ಕ್ಷಮಿಸಿ ಬಿಡಿ, ನಮ್ಮ ಮಗಳು ಗೊತ್ತಿಲ್ಲದೆ ತಪ್ಪು ಮಾಡಿದ್ದಾಳೆ. ಅವಳ ಪರವಾಗಿ ನಾವಿಬ್ರೂ ಕ್ಷಮೆ ಕೇಳುತ್ತೇವೆ ಎಂದು ಭಾಗ್ಯಾ ಪ್ರಿನ್ಸಿಪಾಲ್ ಬಳಿ ಹೇಳಿದ್ದಾಳೆ. ಸುಮ್ಮನೆ ಕೂತಿದ್ದ ತಾಂಡವ್ ಬಳಿಯೂ ಕ್ಷಮೆ ಕೇಳಲು ಹೇಳುತ್ತಾಳೆ.
ಆದರೆ, ತಾಂಡವ್ ಕಾಟಾಚಾರಕ್ಕೆ ಸ್ವಾರಿ ಎಂದು ಹೇಳುತ್ತಾನೆ. ನೀವು ತನ್ವಿ ಅವರ ಫಾದರ್ ಹಾ? ಎಂದು ಪ್ರಿನ್ಸಿಪಾಲ್ ತಾಂಡವ್ ಬಳಿ ಕೇಳಿದ್ದಾರೆ. ಬಳಿಕ ನೀವಾದ್ರೂ ನಿಮ್ ಮಗಳಿಗೆ ಯಾವ ರೀತಿ ಇರ್ಬೇಕು, ಯಾವ ರೀತಿ ಇರಬಾರದು ಎಂದು ಹೇಳೋಕೆ ಆಗಲ್ವಾ ಎಂದಿದ್ದಾರೆ. ನೀವಿಬ್ರು ಅಪ್ಪ-ಅಮ್ಮ ಮಾಡುವ ಕೆಲಸಕ್ಕೆ ಮಕ್ಕಳು ಸಫರ್ ಆಗುತ್ತಾರೆ ಎಂದು ಪ್ರಿನ್ಸಿಪಾಲ್ ಹೇಳುತ್ತಾರೆ. ಈ ಮಾತುಕತೆಯ ಮಧ್ಯೆ ತಾಂಡವ್ಗೆ ಅನೇಕ ಬಾರಿ ಶ್ರೇಷ್ಠಾಳ ಕಾಲ್ ಬರುತ್ತೆ.
ತಾಂಡವ್ ಫೋನನ್ನು ಸೈಲೆಂಟ್ ಮೋಡ್ನಲ್ಲಿ ಕೂಡ ಇಟ್ಟಿರಲಿಲ್ಲ. ಪದೇ ಪದೇ ರಿಂಗ್ ಆಗುವುದನ್ನು ಕಂಡು ಪ್ರಿನ್ಸಿಪಾಲ್ ಅವರು ತಾಂಡವ್ ಬಳಿ, ಫೋನ್ನ ಸೈಲೆಂಟ್ ಮೋಡ್ನಲ್ಲಿ ಇಟ್ಟಿರಬೇಕು ಎಂಬ ಕಾಮನ್ಸೆನ್ಸ್ ಇಲ್ವೇನ್ರೀ ನಿಮ್ಗೆ ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ತಾಂಡವ್, ನೀವು ಪ್ರಿನ್ಸಿಪಾಲ್ ಆಗಿರೋದು ನನ್ನ ಮಗಳಿಗೆ ನನ್ಗೆ ಅಲ್ಲ, ನಿಮ್ಮ ಕೆಲ್ಸ ಎಷ್ಟಿದೆ ಅಷ್ಟು ನೋಡ್ಕೊಳಿ ಎಂದು ಹೇಳಿದ್ದಾನೆ. ಪ್ರಿನ್ಸಿ ಹಾಗೂ ತಾಂಡವ್ಗೆ ಮಧ್ಯೆ ಮಾತಿನಚಮಕಿ ನಡೆಯುತ್ತದೆ.
ಆಗ ತಾಂಡವ್ಗೆ ಒಂದು ಮೆಸೇಜ್ ಬರುತ್ತದೆ. ‘‘ಇದು ನಿನ್ಗೆ ನನ್ ಕಡೆಯಿಂದ ಬರೋ ಕೊನೇ ಮೆಸೇಜ್. ಇವತ್ತು ನಾನು ನಿನ್ ಹೆಸರು ಬರೆದಿಟ್ಟು ಸೂಸೈಡ್ ಮಾಡಿಕೊಳ್ತಾ ಇದ್ದೇನೆ’’ ಎಂದು ಶ್ರೇಷ್ಠಾ ಮೆಸೇಜ್ ಬರುತ್ತದೆ. ಇದರಿಂದ ಗಾಬರಿಗೊಂಡ ತಾಂಡವ್ ಪ್ರಿನ್ಸಿಪಾಲ್ ಚೇಂಬರ್ನಿಂದ ಶ್ರೇಷ್ಠಾ ಮನೆ ಕಡೆಗೆ ಹೋಗುತ್ತಾನೆ. ದಾರಿಯಲ್ಲಿ ಹೋಗುತ್ತಿರುವಾಗ ಮತ್ತೊಂದು ಮೆಸೇಜ್ ಬರುತ್ತದೆ. ‘‘ಸೂಸೈಡ್ ಮಾಡಿಕೊಳ್ತಾ ಇದ್ದೇನೆ, ಇದಕ್ಕೆಲ್ಲ ಕಾರಣ ನೀನೆ, ಇಂತಿ ಶ್ರೇಷ್ಠಾ’’ ಎಂಬ ಸಂದೇಶ ಇರುತ್ತದೆ. ಅತ್ತ ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಳ್ಳಲು ಬಿಲ್ಡಿಂಗ್ ಮೇಲೆ ನಿಂತಿದ್ದಾಳೆ. ಸದ್ಯ ತಾಂಡವ್ ಬಂದು ಶ್ರೇಷ್ಠಾಳನ್ನು ಕಾಪಾಡುತ್ತಾನ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.