Thursday, 12th December 2024

Bigg Boss Kannada 11: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಕೆಜಿಗಟ್ಟಲೆ ಚಿನ್ನ ಧರಿಸುವ ಗೋಲ್ಡ್‌ ಸುರೇಶ್‌; ಏನಿವರ ಹಿನ್ನೆಲೆ?

Bigg Boss Kannada 11

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 11’ (Bigg Boss Kannada 11) ರಿಯಾಲಿಟಿ ಶೋ ಇಂದು (ಸೆಪ್ಟೆಂಬರ್‌ 29) ಆರಂಭವಾಗಲಿದೆ. ಅದಕ್ಕೂ ಮುಂಚಿತವಾಗಿ ಶನಿವಾರ (ಸೆಪ್ಟೆಂಬರ್‌ 28) ನಡೆದ ʼರಾಜಾ ರಾಣಿʼ ಶೋ ಫಿನಾಲೆಯಲ್ಲಿ ನಾಲ್ವರ ಹೆಸರು ರಿವೀಲ್‌ ಆಗಿದೆ. ಈ ಪೈಕಿ ಕೆಜಿಗಟ್ಟಲೆ ಚಿನ್ನ ಧರಿಸಿ ಗಮನ ಸೆಳೆದವರು ‘ಗೋಲ್ಡ್ ಸುರೇಶ್’ (Gold Suresh).

ಮೈ ಮೇಲೆ ಸದಾ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಧರಿಸಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಹೀಗಾಗಿ ಇವರು ‘ಗೋಲ್ಡ್ ಸುರೇಶ್’ ಎಂದೇ ಜನಪ್ರಿಯರಾಗಿದ್ದಾರೆ.

ಗೋಲ್ಡ್‌ ಸುರೇಶ್‌ ಪರಿಚಯ

ಕೈ ತುಂಬಾ ಚಿನ್ನದ ಬಳೆ, ಕುತ್ತಿಗೆ ತುಂಬಾ ಕೆಜಿಗಟ್ಟಲೆ ಚಿನ್ನದ ಸರ, ಬೆರಳುಗಳಿಗೆ ದಪ್ಪ ದಪ್ಪ ಉಂಗುರಗಳನ್ನ ಧರಿಸಿ ಮನೆಯೊಳಗೆ ಬಂದ ಅವರು ‘’ಈ ಬಾರಿ ನಾನು ‘ಬಿಗ್ ಬಾಸ್’ ಗೆದ್ದೇ ಗೆಲ್ತೀನಿ’’ ಎಂದು ಹೇಳಿದ್ದಾರೆ. ಇವರು ಮೂಲತಃ ಉತ್ತರ ಕರ್ನಾಟಕದ ಬೆಳಗಾವಿ ಮೂಲದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಆರ್‌ಎಸ್‌ಎಸ್‌ ಕಾರ್ಯಕರ್ತನೂ ಹೌದು. 10ನೇ ಕ್ಲಾಸ್‌ವರೆಗೂ ಓದಿದ ಸುರೇಶ್ ಅನಂತರ ಊರು ಬಿಟ್ಟು ಓಡಿ ಬೆಂಗಳೂರಿಗೆ ಬಂದಿದ್ದಾರೆ.

ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಅವರು ಕನ್‌ಸ್ಟ್ರಕ್ಷನ್‌ನ ಸೂಪರ್​ವೈಸರ್ ಆಗಿದ್ದರು. ʼʼಸಣ್ಣ ವಯಸ್ಸಿನಲ್ಲಿ ಕಾರುಗಳ ಬಗ್ಗೆ, ಚಿನ್ನದ ಬಗ್ಗೆ ನನಗೆ ವಿಶೇಷ ಪ್ರೀತಿ. ಆರಂಭದಲ್ಲಿ ಒಂದು ಸಣ್ಣ ಲಕ್ಷ್ಮೀ ಡಾಲರ್ ಅನ್ನು ಧರಿಸಲು ಪ್ರಾರಂಭಿಸಿದೆ. ಈಗ ಎಲ್ಲ ರೀತಿಯ ಡಿಸೈನ್​ನ ಚಿನ್ನ ನನ್ನ ಬಳಿ ಇದೆʼʼ ಎಂದು ಅವರು ಹೇಳಿದ್ದಾರೆ. ವಿಶೇಷ ಎಂದರೆ ಇವರ ಪತ್ನಿಗೆ ಕಾರು, ಚಿನ್ನದ ಬಗ್ಗೆ ಕ್ರೇಜ್‌ ಇಲ್ಲವಂತೆ.

ನಾಯಿಗೂ ಚಿನ್ನದ ಸರ

ʼʼನನಗೆ ಒಂದು ಹೆಣ್ಣು ಮಗು ಇದೆ. ಹೆಣ್ಣು ಮಗುವೇ ಬೇಕೆಂದು ನಾನು ಕೋರಿಕೊಂಡಿದ್ದೆ. ಬಿಗ್​ ಬಾಸ್‌ಗೆ ದೊಡ್ಡ ದೊಡ್ಡವರು ಇರುತ್ತಾರೆ. ನಮಗೆಲ್ಲ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವಕಾಶ ಸಿಕ್ಕಿದೆ. ಅಲ್ಲಿಗೆ ಹೋಗಿ ಗೆದ್ದು ಬರುತ್ತೇನೆʼʼ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ತಮ್ಮ ಮನೆಯ ನಾಯಿಗೂ ಅವರು ಚಿನ್ನದ ಸರ ಹಾಕಿದ್ದಾರೆ. ಸದ್ಯ ಅವರು ಸೋಷಿಯಲ್‌ ಮೀಡಿಯಾದಲ್ಲಿ ಚಿನ್ನದ ಕ್ರೇಜ್‌ನ ಕಾರಣಕ್ಕೇ ಜನಪ್ರಿಯರಾಗಿದ್ದಾರೆ.

ಸ್ವರ್ಗಕ್ಕೋ ನರಕಕ್ಕೋ: ನೀವೇ ನಿರ್ಧರಿಸಿ

ವಿಶೇಷ ಎಂದರೆ ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್‌ ಓಪನಿಂಗ್‌ಗೆ ಮೊದಲೇ ನಾಲ್ವರು ಸ್ಪರ್ಧಿಗಳ ವಿವರ ರಿವೀಲ್‌ ಆಗಿದೆ. ಉಳಿದ ಸ್ಪರ್ಧಿಗಳ ವಿವರ ಇನ್ನಷ್ಟೇ ಹೊರ ಬೀಳಬೇಕಿದೆ. ವಿಶೇಷ ಎಂದರೆ ಈ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಗೆ ಇರುವ ಸ್ವರ್ಗ ಅಥವಾ ನರಕಕ್ಕೆ ಹೋಗಬೇಕೆ ಎನ್ನುವುದನ್ನು ವೀಕ್ಷಕರೇ ವೋಟು ಮೂಲಕ ನಿರ್ಧರಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada 11: ದರ್ಶನ್‌ ಪರ ಹೋರಾಟದಿಂದ ಜಾತಿ ನಿಂದನೆ ಆರೋಪದವರೆಗೆ; ಬಿಗ್‌ ಬಾಸ್‌ ಸ್ಪರ್ಧಿ ಲಾಯರ್ ಜಗದೀಶ್ ಹಿನ್ನೆಲೆ ಇದು