Sunday, 29th September 2024

Bigg Boss Kannada 11: ಬಿಗ್‌ ಬಾಸ್‌ ಮನೆಗೆ ಹಿಂದೂ ಫೈರ್‌ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಎಂಟ್ರಿ; ವಿವಾದಿತ ನಾಯಕಿಯ ಪಯಣ ಹೇಗಿತ್ತು?

Bigg Boss Kannada 11

ಬೆಂಗಳೂರು: ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್‌ 11’ (Bigg Boss Kannada 11) ರಿಯಾಲಿಟಿ ಶೋ ಆರಂಭಕ್ಕೆ ಕ್ಷಣಗಣನೆ ಅರಂಭವಾಗಿದೆ. ಇಂದು (ಸೆಪ್ಟೆಂಬರ್‌ 29) ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಓಪನಿಂಗ್‌ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ನಾಲ್ವರು ಸ್ಪರ್ಧಿಗಳ ಹೆಸರು ರಿವೀಲ್‌ ಆಗಿದೆ. ಆ ಪೈಕಿ ಹಿಂದೂ ಫೈರ್‌ಬ್ರ್ಯಾಂಡ್‌ ಖ್ಯಾತಿಯ ಚೈತ್ರಾ ಕುಂದಾಪುರ (Chaitra Kundapura) ಕೂಡ ಒಬ್ಬರು.

ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ವಂಚಿಸಿದ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಚೈತ್ರಾ ಕುಂದಾಪುರ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಗಾಳಿ ಸುದ್ದಿ ಈ ಹಿಂದೆಯೇ ಹರಡಿತ್ತು. ಇದೀಗ ಅಧಿಕೃತವಾಗಿ ಕಲರ್ಸ್‌ ಕನ್ನಡ ವಾಹಿನಿ ಘೋಷಿಸಿದೆ.

ಚೈತ್ರಾ ಕುಂದಾಪುರ ಹಿನ್ನೆಲೆ

ಚೈತ್ರಾ ಕುಂದಾಪುರ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ತೆಕ್ಕಟ್ಟೆಯೊಂದರ ಪುಟ್ಟ ಗ್ರಾಮದವರು. ತೆಕ್ಕಟ್ಟೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಡೆದು ಬಳಿಕ ಕುಂದಾಪುರದಲ್ಲಿ ಪದವಿ ವಿದ್ಯಾಭ್ಯಾಸ ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೈತ್ರಾ ಆರಂಭದ ದಿನಗಳಲ್ಲಿ ಟಿವಿ ನಿರೂಪಕಿಯಾಗಿ ಗಮನ ಸೆಳೆದಿದ್ದರು. ಕೆಲವು ಚಾನಲ್‌ನಲ್ಲಿ ನಿರೂಪಕಿಯಾಗಿದ್ದ ಅವರು ದಿನಪತ್ರಿಕೆಯೊಂದರಲ್ಲಿ ಉಪಸಂಪಾದಕಿಯಾಗಿಯೂ ಕೆಲಸ ಮಾಡಿದ್ದರು. ಜತೆಗೆ ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ನಿರೂಪಕಿ, ಪತ್ರಕರ್ತೆ, ಉಪನ್ಯಾಸಕಿಯಾಗಿ ಗಮನ ಸೆಳೆದ ಅವರಿಗೆ ಯುವ ಮಾಧ್ಯಮ ಪ್ರಶಸ್ತಿಯೂ ಬಂದಿತ್ತು.

ಎಬಿವಿಪಿ ಮೂಲಕ ರಾಜಕೀಯಕ್ಕೆ

ಕಾಲೇಜಿನಲ್ಲಿ ಓದುತ್ತಿರುವಾಗ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆಯಾಗಿದ್ದರು. ಚಿಕ್ಕಂದಿನಿಂದಲೇ ಭಾಷಣಗಳ ಮೂಲಕ ಗಮನ ಸೆಳೆಯುತ್ತಿದ್ದ ಅವರು ನಾಯಕಿಯಾಗಿಯೂ ಹೆಸರು ಗಳಿಸಿದ್ದರು. ಫೈರ್‌ ಬ್ರ್ಯಾಂಡ್‌ ಭಾಷಣಕಾರ್ತಿಯಾಗಿದ್ದರು. ಹಿಂದುತ್ವದ ವಿಚಾರಧಾರೆಗಳನ್ನು ಜನರಿಗೆ ಮುಟ್ಟುವಂತೆ, ಕೆಲವೊಮ್ಮೆ ಕೆರಳಿಸುವಂತೆ, ಪ್ರಚೋದನಾಕಾರಿಯಾಗಿ ಪ್ರತಿಪಾದಿಸುತ್ತಿದ್ದರು.

ಲವ್‌ ಜಿಹಾದ್‌ ಪ್ರಕರಣಗಳ ವಿರುದ್ಧ ಚೈತ್ರಾ ಕುಂದಾಪುರ ದೊಡ್ಡ ಹೋರಾಟ ನಡೆಸಿದ್ದರು. ಇದನ್ನೇ ಆಧರಿಸಿ ಅವರು ಬರೆದಿರುವ ʼಪ್ರೇಮಪಾಶʼ ಎನ್ನುವ ಕೃತಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. 2021ರಲ್ಲಿ ಭಾರಿ ಸದ್ದು ಮಾಡಿದ ಹಿಜಾಬ್‌ ಗಲಾಟೆಯ ವೇಳೆಯಲ್ಲಿ ಚೈತ್ರಾ ಕುಂದಾಪುರ ಹೆಸರು ಇನ್ನಷ್ಟು ಜನಪ್ರಿಯಗೊಂಡಿತ್ತು. ಹಲವು ಕಡೆಗಳಲ್ಲಿ ಅವರ ಪ್ರಖರ ಭಾಷಣಗಳು ಸುದ್ದಿ ಮಾಡಿದ್ದವು. ಜತೆಗೆ ಗೋ ಹತ್ಯೆ ವಿರುದ್ಧ ಧ್ವನಿ ಎತ್ತಿದ್ದರು. ಉತ್ತರ ಕರ್ನಾಟಕದಲ್ಲಿಯೂ ಅವರ ಭಾಷಣ ಸಂಚಲನ ಸೃಷ್ಟಿಸಿದೆ.

ಕೆಲವು ತಿಂಗಳ ಹಿಂದೆ ಚೈತ್ರಾ ವಂಚನೆ ಪ್ರಕರಣ ಭಾರಿ ಸುದ್ದಿಯಾಗಿತ್ತು. ಬೆಂಗಳೂರಿನ ಉದ್ಯಮಿಯೊಬ್ಬರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಲು ಮುಂದಾಗಿ ಬಂಧನಕ್ಕೊಳಗಾಗಿದ್ದರು. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿ ಗೇಮ್‌ ಪ್ಲ್ಯಾನ್‌ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada 11: ದರ್ಶನ್‌ ಪರ ಹೋರಾಟದಿಂದ ಜಾತಿ ನಿಂದನೆ ಆರೋಪದವರೆಗೆ; ಬಿಗ್‌ ಬಾಸ್‌ ಸ್ಪರ್ಧಿ ಲಾಯರ್ ಜಗದೀಶ್ ಹಿನ್ನೆಲೆ ಇದು