Friday, 22nd November 2024

BBH 18: ಹಿಂದಿಯಲ್ಲೂ ಶುರುವಾಯಿತು ಬಿಗ್ ಬಾಸ್: ಮನೆಯೊಳಗೆ ಕಾಲಿಟ್ಟ 18 ಸ್ಪರ್ಧಿಗಳು ಇವರೇ ನೋಡಿ

Bigg Boss Hindi

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಹಿಂದಿ ಬಿಗ್ ಬಾಸ್​ನ 18ನೇ ಆವೃತ್ತಿ (Bigg Boss 18) ಶುರುವಾಗಿದೆ. ಭಾನುವಾರ ಗ್ರ್ಯಾಂಡ್ ಓಪನಿಂಗ್ ಮೂಲಕ ಹೊಸ ಸೀಸನ್​ಗೆ ಚಾಲನೆ ದೊರಕಿದೆ. ಬಾಲಿವುಡ್‌ನ ದಬಾಂಗ್ ಸಲ್ಮಾನ್ ಖಾನ್ ಈ ರಿಯಾಲಿಟಿ ಶೋ ಅನ್ನು ಮತ್ತೊಮ್ಮೆ ನಿರೂಪಕರಾಗಿ ಮುನ್ನಡೆಸಲಿದ್ದಾರೆ. ಈ ಮೂಲಕ ಇನ್ನು ಮೂರು ತಿಂಗಳ ಕಾಲ ಕಿರುತೆರೆಯಲ್ಲಿ ಮತ್ತೊಮ್ಮೆ ಬಿಗ್ ಬಾಸ್ ಸದ್ದು ಕೇಳಿಸಲಿದೆ. ಈ ಸೀಸನ್‌ನಲ್ಲಿ ಒಟ್ಟು 18 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ. ಟಿವಿ ಮತ್ತು ಬಾಲಿವುಡ್ ಸ್ಟಾರ್‌ಗಳು ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಮಿಂಚಿದವರು ಮತ್ತು ರಾಜಕಾರಣಿಗಳೂ ಸಹ ಕಾಣಿಸಿಕೊಂಡಿದ್ದಾರೆ. 18 ಸ್ಪರ್ಧಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಶಿಲ್ಪಾ ಶಿರೋಡ್ಕರ್

ಶಿಲ್ಪಾ ಶಿರೋಡ್ಕರ್ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅತ್ತಿಗೆ ಮತ್ತು ನಮ್ರತಾ ಶಿರೋಡ್ಕರ್ ಅವರ ಸಹೋದರಿ. ಇವರು 90 ರ ದಶಕದ ಪ್ರಸಿದ್ಧ ನಟಿ. ಶಾರುಖ್ ಖಾನ್‌ನಿಂದ ಹಿಡಿದು ಗೋವಿಂದ ಅವರ ಜೊತೆಗೆ ಇವರು ಕೆಲಸ ಮಾಡಿದ್ದಾರೆ. 13 ವರ್ಷಗಳ ಸುದೀರ್ಘ ವಿರಾಮದ ನಂತರ, ಅವರು ‘ಏಕ್ ಮುತ್ತಿ ಆಸ್ಮಾನ್’ (2013) ಧಾರಾವಾಹಿ ಮೂಲಕ ಪುನರಾಗಮನ ಮಾಡಿದರು.

2. ಕರಣ್ ವೀರ್ ಮೆಹ್ರಾ

ಕರಣ್ ವೀರ್ ಮೆಹ್ರಾ ಇತ್ತೀಚೆಗೆ ಮುಕ್ತಾಯಗೊಂಡ ‘ಖತ್ರೋನ್ ಕೆ ಕಿಲಾಡಿ ಸೀಸನ್ 14’ ವಿಜೇತ. ಇವರು ಕಿರುತೆರೆ ನಟ ಕೂಡ ಹೌದು. ಅವರು ‘ರಾಗಿಣಿ ಎಂಎಂಎಸ್ 2’, ‘ಮೇರೆ ಡ್ಯಾಡ್ ಕಿ ಮಾರುತಿ’, ‘ಬ್ಲಡ್ ಮನಿ’, ‘ಬದ್ಮಶಿಯಾನ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

3. ವಿವಿಯನ್ ಡಿಸೇನಾ

ವಿವಿಯನ್‌ ಪ್ಯಾರ್ ಕಿ ಏಕ್ ಕಹಾನಿ ಧಾರಾವಾಹಿಯಿಂದ ಸಾಕಷ್ಟು ಪ್ರಸಿದ್ಧಿ ಪಡೆದವರು. ‘ಮಧುಬಾಲಾ’, ‘ಶಕ್ತಿ’ಯಂತಹ ಸೂಪರ್‌ಹಿಟ್ ಶೋಗಳ ಭಾಗವಾಗಿದ್ದಾರೆ. ‘ಝಲಕ್ ದಿಖ್ಲಾ ಜಾ 8’ ಮತ್ತು ‘ಖತ್ರೋನ್ ಕೆ ಖಿಲಾಡಿ 7’ ನಲ್ಲಿಯೂ ಭಾಗವಹಿಸಿದ್ದಾರೆ. ಬೆಳೆದದ್ದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ. 10 ನೇ ವಯಸ್ಸಿಗೆ, ಅವರು ತಮ್ಮ ತಂದೆಯಂತೆ ಫುಟ್ಬಾಲ್ ಆಟಗಾರನಾಗಲು ಬಯಸಿದ್ದರು. 2013 ರಲ್ಲಿ ವಹ್ಬಿಜ್ ದೊರಾಬ್ಜಿ ಅವರನ್ನು ವಿವಾಹವಾದರು, ಆದರೆ ಅವರ ಸಂಬಂಧವು 2016 ರಲ್ಲಿ ಮುರಿದುಬಿತ್ತು. ಇದರ ನಂತರ, 2022 ರಲ್ಲಿ, ವಿವಿಯನ್ ಈಜಿಪ್ಟ್ ಪತ್ರಕರ್ತ ನೂರಾನ್ ಅಲಿ ಅವರ ಕೈಯನ್ನು ಹಿಡಿದಿದ್ದರು.

4. ಶಹಜಾದ್ ಧಾಮಿ

ಪಂಜಾಬ್ ಮೂಲದ ಶಹಜಾದಾ ಇದುವರೆಗೆ 4 ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ, ‘ಯೇ ಜಾದೂ ಹೈ ಜಿನ್ ಕಾ!’ ಧಾರಾವಾಹಿಯಿಂದ ನಟನಾ ಲೋಕಕ್ಕೆ ಕಾಲಿಟ್ಟಿದ್ದರು. ‘ಛೋಟಿ ಸರ್ದಾರ್ನಿ’, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಕಾರ್ಯಕ್ರಮದ ನಡುವೆ ಇವರನ್ನು ಹೊರಹಾಕಲಾಯಿತು. ಅವರು ಇದಕ್ಕೆ ವೃತ್ತಿಪರರಲ್ಲ ಎಂದು ಆರೋಪಿಸಲಾಗಿತ್ತು. ಆದರೆ ಅವರು ಅದನ್ನು ಆಧಾರರಹಿತ ಎಂದು ಕರೆದರು.

5. ಹೇಮಾ ಶರ್ಮಾ

ವೈರಲ್ ಭಾಭಿ ಎಂಬ ಹೆಸರಿನಿಂದ ಎಲ್ಲರಿಗೂ ಇವರು ಪರಿಚಿತರು. ಸಲ್ಮಾನ್ ಖಾನ್ ಅವರ ‘ದಬಾಂಗ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರು ಫುಲ್ ಫೇಮಸ್. 2023 ರಲ್ಲಿ, ಅವರು ಸಲ್ಮಾನ್ ಅವರ ಭದ್ರತಾ ತಂಡದ ನನ್ನ ಮೇಲೆ ಹಲ್ಲೆ ನಡೆಸಿ ಸೆಟ್‌ನಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಸುದ್ದಿಯಾಗಿದ್ದರು.

6. ಅರುಣಾಚಲ ನಟಿ ಚುಮ್ ದರಂಗ್

ಚುಮ್ ದರಂಗ್ ಅವರು ಭೂಮಿ ಪೆಡ್ನೇಕರ್ ಮತ್ತು ರಾಜ್‌ಕುಮಾರ್ ರಾವ್ ಅವರ ‘ಬಧಾಯಿ ದೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆ ಅರುಣಾಚಲ ಪ್ರದೇಶದ ನಿವಾಸಿ. ಆಲಿಯಾ ಭಟ್ ಅವರ ‘ಗಂಗೂಬಾಯಿ ಕಥಿವಾಡಿ’ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

7. ಆಲಿಸ್ ಕೌಶಿಕ್

ಎಲಿಶ್ ಕಿರುತೆರೆ ನಟಿ. ಅವರು ‘ಪಾಂಡ್ಯ ಸ್ಟೋರ್’ನಲ್ಲಿ ರವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಬಿಗ್ ಬಾಸ್ 12’ ವಿಜೇತ ದೀಪಿಕಾ ಕಕ್ಕರ್ ಅವರೊಂದಿಗೆ ‘ಸಸುರಲ್ ಸಿಮಾರ್ ಕಾ’ ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ ಮತ್ತು ‘ಕಹಾನ್ ಹಮ್ ಕಹಾನ್ ತುಮ್’ ನಂತಹ ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದಾರೆ.

8. ಅರ್ಫೀನ್ ಖಾನ್

ಅರ್ಫೀನ್ ಖಾನ್ ಕೂಡ ‘ಬಿಗ್ ಬಾಸ್ 18’ ಸ್ಪರ್ಧಿಯಾಗಿದ್ದಾರೆ. ಅವರು ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರ ಜೊತೆ ಕಾಣಿಸಿಕೊಂಡಿದ್ದಾರೆ. ಹೃತಿಕ್ ಮತ್ತು ಕಂಗನಾ ಸಂಬಂಧದ ಬಗ್ಗೆ ಗಲಾಟೆ ನಡೆದಾಗಲೂ ಅರ್ಫೀನ್ ಹೃತಿಕ್ ಅವರನ್ನು ಬೆಂಬಲಿಸಿದ್ದರು.

9. ಸಾರಾ ಅರ್ಫೀನ್ ಖಾನ್

ಸಾರಾ ಅರ್ಫೀನ್ ಖಾನ್ ಬಾಲಿವುಡ್ ಸೆಲೆಬ್ರಿಟಿಗಳಿಗೆ ತುಂಬಾ ಹತ್ತಿರವಾದವರು. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಅನೇಕ ತಾರೆಯರೊಂದಿಗಿನ ಚಿತ್ರಗಳಿವೆ. ನಟಿಯೂ ಹೌದು. ಈ ದಂಪತಿ ದುಬೈನಲ್ಲಿ ನೆಲೆಸಿದೆ.

10. ಚಾಹತ್ ಪಾಂಡೆ

ಚಾಹತ್ ಕಿರುತೆರೆ ನಟಿ. ಅವರು 2016 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಾಥ್: ಜೇವರ್ ಯಾ ಜಂಜೀರ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ತೆನಾಲಿ ರಾಮ, ಹಮಾರಿ ಸಿಲ್ಕ್ ಬಹು ಮತ್ತು ದ್ವಾರಕಾಧೀಶ್ ಲಾರ್ಡ್ ಶ್ರೀ ಕೃಷ್ಣ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡರು. ಅವರು ರಾಧಾ ಕೃಷ್ಣ ಧಾರಾವಾಹಿಯಲ್ಲೂ ನಟಿಸಿದ್ದಾರೆ.

11. ಮುಸ್ಕಾನ್ ಬಾಮ್ನೆ

ಇವರು ರಾಜನ್ ಶಾಹಿಯವರ ಧಾರಾವಾಹಿ ಅನುಪಮಾ ಮೂಲಕ ಮನೆಮಾತಾದರು. ಈ ಕಾರ್ಯಕ್ರಮದಲ್ಲಿ ಅವರು ರೂಪಾಲಿ ಗಂಗೂಲಿ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರು ಶ್ರದ್ಧಾ ಕಪೂರ್ ಅವರ ‘ಹಸೀನಾ ಪಾರ್ಕರ್’ ಮತ್ತು ‘ಹೆಲಿಕಾಪ್ಟರ್ ಈಲಾ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

12. ನೈರಾ ಬ್ಯಾನರ್ಜಿ

ನೈರಾ ಟಿವಿ ನಟಿಯೂ ಹೌದು. ಅವರು ‘ದಿವ್ಯ ದೃಷ್ಟಿ’ ಧಾರಾವಾಹಿ ಮೂಲಕ ಹೆಸರುವಾಸಿಯಾಗಿದ್ದಾರೆ. ಪಿಶಾಚಿನಿಯಲ್ಲೂ ಕಾಣಿಸಿಕೊಂಡಿದ್ದರು. ಖತ್ರೋನ್ ಕೆ ಕಿಲಾಡಿ 13 ಚಿತ್ರದಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ಅವರು ‘ಒನ್ ನೈಟ್ ಸ್ಟ್ಯಾಂಡ್’ ಮತ್ತು ‘ಅಜರ್’ ನಲ್ಲಿ ಕಾಣಿಸಿಕೊಂಡಿದ್ದಾರೆ.

13. ಅವಿನಾಶ್ ಮಿಶ್ರಾ

ಅವಿನಾಶ್ ತಮ್ಮ ವೃತ್ತಿಜೀವನವನ್ನು ಜಾಹೀರಾತುಗಳೊಂದಿಗೆ ಪ್ರಾರಂಭಿಸಿದರು. 2017 ರಲ್ಲಿ ‘ಸೇಠ್ ಜಿ’ ಧಾರಾವಾಹಿಯೊಂದಿಗೆ ಟಿವಿಗೆ ಪಾದಾರ್ಪಣೆ ಮಾಡಿದರು. ‘ಪ್ಯಾರ್ ತುನೆ ಕ್ಯಾ ಕಿಯಾ’, ‘ಇಷ್ಕ್ಬಾಜ್’, ‘ಕ್ರಾಸ್ರೋಡ್ಸ್’, ‘ಯೇ ರಿಷ್ಟೇ ಹೈ ಪ್ಯಾರ್ ಕೆ’, ‘ತಿತ್ಲಿ’, ‘ಮೀತಾ ಖಟ್ಟಾ ಪ್ಯಾರ್ ಹಮಾರಾ’ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

14. ತಜಿಂದರ್ ಪಾಲ್ ಸಿಂಗ್ ಬಗ್ಗಾ- ಬಿಜೆಪಿ ನಾಯಕ

ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಬಿಜೆಪಿ (ಭಾರತೀಯ ಜನತಾ ಪಕ್ಷ) ದ ದೆಹಲಿ ಘಟಕದ ವಕ್ತಾರರಾಗಿದ್ದಾರೆ. ಅವರು ದೇಶಭಕ್ತಿ ಮತ್ತು ರಾಷ್ಟ್ರೀಯತಾವಾದಿ ಟಿ-ಶರ್ಟ್‌ಗಳನ್ನು ಮಾರಾಟ ಮಾಡುವ ಆನ್‌ಲೈನ್ ಟಿ-ಶರ್ಟ್ ಬಟ್ಟೆ ಅಂಗಡಿಯ ಮಾಲೀಕರೂ ಆಗಿದ್ದಾರೆ.

15. ರಜತ್ ದಲಾಲ್

ರಜತ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹೆಸರಿ ಮಾಡಿರುವುದರ ಜೊತೆಗೆ, ಫಿಟ್‌ನೆಸ್ ತರಬೇತುದಾರ ಮತ್ತು ಪವರ್ ಲಿಫ್ಟರ್ ಕೂಡ ಆಗಿದ್ದಾರೆ.

16. ಗುಣರತ್ನ ಸದಾವರ್ತೆ

ಎಸ್ಟಿ ನೌಕರರ ಮುಷ್ಕರದಿಂದಾಗಿ ವಕೀಲರಾದ ಗುಣರತ್ನ ಸದಾವಾರ್ತೆ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದರು. ಅವರು ನೌಕರರ ಸ್ವತಂತ್ರ ಸಂಘಟನೆಯನ್ನು ಪ್ರಾರಂಭಿಸಿ ಕಾರ್ಮಿಕ ನಾಯಕರಾಗಿದ್ದಾರೆ.

17. ಶ್ರುತಿಕಾ ಅರ್ಜುನ್

ಶ್ರುತಿಕಾ 1987 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಅವರು ಕಿರುತೆರೆ ನಟಿ, ಉದ್ಯಮಿ. ಅವರು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದರು. ನಟನೆಗೆ ಪಾದಾರ್ಪಣೆ ಮಾಡಿದ ಎರಡು ವರ್ಷಗಳ ನಂತರ ಅವರು ಉದ್ಯಮವನ್ನು ತೊರೆದರು. ಇವರು ಉದ್ಯಮಿ ಅರ್ಜುನ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಒಬ್ಬ ಮಗನೂ ಇದ್ದಾನೆ.

18. ಇಶಾ ಸಿಂಗ್

ಇಶಾ ‘ಇಷ್ಕ್ ಕಾ ರಂಗ್ ಸಫೇದ್’, ‘ಇಷ್ಕ್ ಸುಭಾನ್ ಅಲ್ಲಾ’ ಮತ್ತು ‘ಸಿರ್ಫ್ ತುಮ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 25 ವರ್ಷದ ಇಶಾ ಭೋಪಾಲ್ ನಿವಾಸಿ. ಇವರು ‘ಮಿಡಲ್ ಕ್ಲಾಸ್ ಲವ್’ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ.

19. ಸಲ್ಮಾನ್ ಖಾನ್ ಬಿಗ್ ಬಾಸ್ 18 ರ ಸ್ಪರ್ಧಿಗಳಲ್ಲಿ ಒಬ್ಬರಾಗಿ ಗಡ್ರಾಜ್ ಎಂಬ ಕತ್ತೆಯನ್ನು ಕೂಡ ಪರಿಚಯಿಸಿದರು.