Saturday, 14th December 2024

ದೇವರಕೊಂಡ ಹೇಳಿಕೆಗೆ ಆಕ್ರೋಶ: ಟ್ರೆಂಡ್‌ ಆದ ‘BoycottLigerMovie’ ಹ್ಯಾಶ್‌ಟ್ಯಾಗ್

ಮುಂಬೈ: ‘ಲೈಗರ್’ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ವಿಜಯ್ ದೇವರ ಕೊಂಡ ಅವರು ಅಮೀರ್ ಖಾನ್-ಕರೀನಾ ಕಪೂರ್ ಅವರ ‘ಲಾಲ್ ಸಿಂಗ್ ಚಡ್ಡಾ’ ಕುರಿತಾಗಿ ನೀಡಿದ ಹೇಳಿಕೆ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.

‘ಲಾಲ್ ಸಿಂಗ್ ಚಡ್ಡಾ’ ಮತ್ತು ಇತರ ಕೆಲವು ಚಿತ್ರಗಳ ಬಹಿಷ್ಕಾರ ಕುರಿತಾದ ಪ್ರವೃತ್ತಿಯ ಬಗ್ಗೆ ಈ ಸಂದರ್ಶನದಲ್ಲಿ ದೇವರಕೊಂಡ ಅವರ ಪ್ರತಿಕ್ರಿಯೆ ಕೇಳಲಾಗಿತ್ತು. ಬಾಲಿವುಡ್ ಚಿತ್ರಗಳ ವಿರುದ್ಧದ ಬಹಿಷ್ಕಾರದ ಕರೆ ಕೇವಲ ನಟರ ಮೇಲೆ ಮಾತ್ರವೇ ಪರಿಣಾಮ ಬೀರುವುದಿಲ್ಲ, ಈ ಚಿತ್ರಗಳ ನಿರ್ಮಾಣ ಕ್ಕಾಗಿ ತಮ್ಮ ರಕ್ತ ಮತ್ತು ಬೆವರು ಹರಿಸಿರುವ ನೂರಾರು ಕಾರ್ಮಿಕರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಅಮೀರ್ ಖಾನ್ ಸರ್ ಅವರು ಲಾಲ್ ಸಿಂಗ್ ಚಡ್ಡಾದಲ್ಲಿ ನಟಿಸಿದ್ದಾರೆಂದು ನೀವು ಚಲನಚಿತ್ರವನ್ನು ಬಹಿಷ್ಕರಿಸಲು ನಿರ್ಧರಿಸಿ ದರೆ ಅದರ ಪರಿಣಾಮ ಚಿತ್ರಕ್ಕೆ ದುಡಿದ ಸಾವಿರಾರು ಜನರ ಮೇಲಾಗುತ್ತದೆ ಎಂದು ವಿಜಯ್‌ ದೇವರ ಕೊಂಡ ಅಭಿಪ್ರಾಯ ಪಟ್ಟಿದ್ದರು.

ಬಾಯ್ಕಾಟ್ ಅಭಿಯಾನದ ಬಗ್ಗೆ ವಿಜಯ್ ಅಭಿಪ್ರಾಯ ಹೊರಬೀಳುತ್ತಿದ್ದಂತೆ ಹಲವಾರು ಜನರು ʼಲೈಗರ್‌ʼ ಬಾಯ್ಕಾಟ್‌ ಸಂದೇಶವನ್ನು ಹಂಚಿಕೊಳ್ಳು ತ್ತಿದ್ದಾರೆ.‌

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಮೂಲಕ ಸ್ಪೋರ್ಟ್ಸ್-ಆಕ್ಷನ್ ಡ್ರಾಮಾ ‘ಲೈಗರ್’ ಚಿತ್ರವನ್ನು ನಿರ್ಮಿಸಲಾಗಿದೆ. ತೆಲುಗು ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ದೇಶದ ಪ್ರಮುಖ ನಗರಗಳಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.

ಬಾಲಿವುಡ್‌ ನಿರ್ಮಾಪಕ ಕರಣ್ ಜೋಹರ್ ಅವರೊಂದಿಗೆ ಸಹಕರಿಸಿದ್ದಕ್ಕಾಗಿ ಹಲವಾರು ನೇಟಿಜನ್‌ಗಳು ‘BoycottLigerMovie’ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ.