Monday, 16th September 2024

ಕ್ರೈಮ್‌ಥ್ರಿಲ್ಲರ್ ಚಿತ್ರಗಳ ಕಿಮ್‌ದರಿಜೋಗಿ

ವಾರದ ತಾರೆ ಕಿಮ್ ಕಿ ಡುಕ್‌

ಭಯಪಡುತ್ತ, ಬೈದುಕೊಂಡೇ ಹೋಗಿ ಕಿಮ್ ಚಿತ್ರಗಳನ್ನು ನೋಡುವವರ ದಂಡೇ ಇರುತ್ತಿತ್ತು. ನಂತರ ಅವರೇ ಸಾವರಿಸಿಕೊಂಡು ಬಂದು ‘ಕಿಮ್ ಈಸ್ ಗ್ರೇಟ್’ ಎಂದು ಹೇಳುತ್ತಿದ್ದರು.

ಲೇಖನ: ವಿರಾಜ್.ಕೆ.ಅಣಜಿ

ಕ್ರೊಕೊಡೈಲ್! ಅದೇ ಆತನ ಹೆಸರು. ಏಕೆಂದರೆ ಆತ ಸೋಲ್‌ನ ಹ್ಯಾನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಹೆಣದಲ್ಲೇ ಸಿಗುವ ವಸ್ತುಗಳನ್ನು ಮಾರಿಕೊಳ್ಳುತ್ತಿದ್ದವ. ಅಥವಾ ಹೆಣಗಳನ್ನು ಕುಟುಂಬದರಿಗೆ ಎತ್ತಿ ತಂದು ಕೊಟ್ಟು ಹಣ ಪಡೆಯುತ್ತಿದ್ದವ.
ಕ್ರೊಕೊಡೈಲ್ ಜತೆಗೊಬ್ಬ ಪೋರ, ಮತ್ತೊಬ್ಬ ಮುದುಕನೂ ಇರುತ್ತಿದ್ದ.

ಕ್ರೊಕೊಡೈಲ್ ಅತ್ಯಂತ ನಿಷ್ಕಾರುಣಿ ಮನುಷ್ಯನಾಗಿದ್ದ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದವಳನ್ನು ಒಮ್ಮೆ ಏನಕೇನ ಬದುಕಿಸಿ, ಜತೆಗಿಟ್ಟು ಕೊಂಡಿದ್ದ. ನಂತರ ಆಕೆಯನ್ನೇ ಮೃಗೀಯವಾಗಿ ಅತ್ಯಾಚಾರ ಮಾಡಿಬಿಡುತ್ತಿದ್ದ. ಯುವತಿ
ಸಾಯಲೂ ಆಗದೇ, ಬದುಕಲೂ ಆಗದಂ ತಾದಳು. ಕ್ರಮೇಣ ಆಕೆಯ ಜತೆಗೇ ಕ್ರೊಕೊಡೈಲ್ ಗೆ ಸ್ನೇಹ….ಕತೆ ಹೀಗೇ ಮುಂದು ವರಿಯುತ್ತದೆ.

ಉಫ್! ಇದನ್ನೆಲ್ಲ ಒಮ್ಮೆ ಕಲ್ಪಿಸಿಕೊಳ್ಳುವುದೂ ಕಷ್ಟ. ಆದರೆ ಇಂತಹ ಕಲ್ಪನೆಗೂ ನಿಲುಕದ ವಾಸ್ತವಗಳನ್ನು ತಾನು ನಿರ್ದೇ ಶಿಸಿದ ಮೊಟ್ಟ ಮೊದಲ ಚಿತ್ರದಲ್ಲೇ ತೆರೆಗೆ ತಂದಾತನೇ ದಕ್ಷಿಣ ಕೋರಿಯಾದ ಚಿತ್ರ ನಿರ್ದೇಶಕ ಕಿಮ್ ಕಿ ಡುಕ್. ಕಿಮ್‌ನನ್ನು ಚಿತ್ರ ನಿರ್ದೇಶಕ ಎನ್ನುವ ಬದಲಾಗಿ ಚಿತ್ರಕಾರ ಎನ್ನುವುದೇ ಹೆಚ್ಚು ಸೂಕ್ತ. ಜುಗುಪ್ಸೆ ಆಗುವಂತಹ, ಥೂ ಅಸಹ್ಯ ಎನಿಸುವ, ಇಷ್ಟೊಂದು ಭೀಕರತೆಯಾ, ಇಷ್ಟೊಂದು ಅಮಾವೀಯವಾ ಎಂದೆಲ್ಲ ಹೇಳುವಂತೆ ಕಿಮ್ ಚಿತ್ರಗಳಿರುತ್ತಿದ್ದವು.

ಆದರೆ, ಅವೆಲ್ಲವೂ ವಾಸ್ತವ ನೆಲೆಗಟ್ಟಿನಲ್ಲೇ ಇವೆ ಎಂಬುದನ್ನು ಅರಿತಾಕ್ಷಣ ಕಿಮ್ ಬಗ್ಗೆ ಗೌರವ ಮೂಡುತ್ತಿತ್ತು. ಇಡೀ ಜಗತ್ತೇ ತನ್ನ ಚಿತ್ರಗಳನ್ನು ಮೆಚ್ಚಿ ಕೊಂಡಾಡುತ್ತಿದ್ದರೂ, ದಕ್ಷಿಣ ಕೋರಿಯಾದಲ್ಲಿ ಕಿಮ್ ಅಷ್ಟಾಗಿ ಮಿಂಚಿರಲಿಲ್ಲ. ಆದರೂ ಕಿಮ್ ಅದಕ್ಕೆಲ್ಲ ಕಮಕ್ ಗಿಮಕ್ ಎನ್ನುತ್ತಿರಲಿಲ್ಲ. ‘ಕಸದ ರಾಶಿಯ ಮಧ್ಯೆಯೇ ನಿಜವಾದ ಸುವಾಸನೆ ಅಡಗಿದೆ. ಅದನ್ನೇ ನಾನು
ಹುಡುಕುತ್ತೇನೆ. ಅದನ್ನೇ ನನ್ನ ಮೂವಿಗಳಲ್ಲಿ ಚಿತ್ರಿಸುತ್ತೇನೆ. ನನ್ನನ್ನು ಮೂದಲಿಸುವವರ ಬಗ್ಗೆ ನನಗೇನೂ ಚಿಂತೆಯಿಲ್ಲ. ನನ್ನ ನೈಜತೆ ಅರಿತವರಿಗೆ ನನ್ನ ಬಗ್ಗೆ ಬಿಡಿಸಿ ಹೇಳಬೇಕಿಲ್ಲ ಅಲ್ಲವೇ?’ ಎಂದು ಕಿಮ್ ತನ್ನ ಕೆಲಸದಲ್ಲಿ ಲೀನರಾಗಿರುತ್ತಿದ್ದರು.

ನಾವೆಲ್ಲಾದರೂ ಬೆಚ್ಚಿ ಬೀಳಿಸುವಂತಹ ಕ್ರೈಮ್ ಚಿತ್ರ ನೋಡಿದ್ದರೆ, ಆ ಸಿನಿಮಾ ಥೇಟ್ ಕೋರಿಯನ್ ಮೂವಿ ಥರವೇ ಮಾಡಿದ್ದಾರೆ ಎಂದು ಹೇಳುವಷ್ಟು ಛಾಪು ಮೂಡಿದ್ದರೆ ಅದಕ್ಕೆ ಮುಖ್ಯ ಕಾರಣವೇ ಕಿಮ್ ಚಿತ್ರಗಳು. ಪಿಯೆಟಾ ಚಿತ್ರದಲ್ಲಿ ತೋರಿಸುವ ಕ್ರೌರ್ಯವನ್ನು ಕನಸಿನಲ್ಲಿಯೂ ನೆನಪಿಸಿಕೊಂಡರೂ ಮೈನಡುಗುತ್ತದೆ.

ಇನ್ನು ಮೋಬಿಯಸ್ ಚಿತ್ರದ ಭಯಾನಕತೆ ನಮ್ಮ ಶತ್ರುವಿಗೂ ಬೇಡ ಎನ್ನುವಂತಿದೆ. ಆದರೂ ಕಿಮ್ ವಿಶ್ವಮಾನ್ಯ, ಜಗತ್ತಿನಲ್ಲಿ
ಎಲ್ಲೇ ಚಿತ್ರೋತ್ಸವ ನಡೆರೂ ಅಲ್ಲೆಲ್ಲ ಕಿಮ್ ಚಿತ್ರಗಳು ಇರಲೇ ಬೇಕು. ಭಯಪಡುತ್ತಲೇ, ಬೈದುಕೊಂಡೇ ಹೋಗಿ ಚಿತ್ರಗಳನ್ನು ನೋಡುವವರ ದಂಡೇ ಇರುತ್ತಿತ್ತು. ನಂತರ ಅವರೇ ಸಾವರಿಸಿಕೊಂಡು ಬಂದು ‘ಕಿಮ್ ಈಸ್ ಗ್ರೇಟ್’ ಎಂದು ಹೇಳುತ್ತಿದ್ದರು. ಕಿಮ್ ಜಗತ್ತಿನ ಶ್ರೇಷ್ಠ ಚಿತ್ರಕಾರ ಎಂದು ಅಚ್ಚಳಿಯದೇ ಜನಮನದಲ್ಲಿ ಉಳಿದಿರುವುದು ಇದಕ್ಕಾಗಿಯೇ.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಅಗ್ರ ಮಾನ್ಯ ಪ್ರಶಸ್ತಿಗಳಾದ ಗೋಲ್ಡನ್ ಲಯನ್, ಸಿಲ್ವರ್ ಲಯನ್, ಸಿಲ್ವರ್ ಬೀಯರ್ ಟ್ರೋಫಿಗಳೆಲ್ಲವೂ ಕಿಮ್‌ರನ್ನು ಅರಸಿ ಬಂದು ತಮ್ಮ ಗೌರವ ಹೆಚ್ಚಿಸಿಕೊಂಡಿದ್ದವು. ಅದೇ ಕಿಮ್ ತಾಕತ್ತು.

ವೃತ್ತಿಜೀವನದಲ್ಲಿ 24 ಚಿತ್ರಗಳನ್ನು ನಿರ್ದೇಶಿಸಿ, 33 ಚಿತ್ರಕತೆಗಳನ್ನು ಬರೆದು, 19 ಚಿತ್ರಗಳನ್ನು ನಿರ್ಮಿಸಿ ವಿಶ್ವಮಾನ್ಯ ಚಿತ್ರಕಾರ ನಾಗಿ ಮಿಂಚಿದ್ದ ಕಿಮ್‌ಗೆ ವಿವಾದಗಳ ಕಾರ್ಮೋಡಗಳೂ ಕವಿದಿದ್ದವು. ತನ್ನನ್ನು ಹೊಡೆದು ಬಡೆದು ಸೆಕ್ಸ್ ಸೀನ್ ಮಾಡುವಂತೆ ಕಿಮ್ ಒತ್ತಾಯಿಸಿದರು ಎಂದು ಮೋಬಿಯಸ್ ಚಿತ್ರದ ನಟಿ ಕಿಮ್ ಮೇಲೆ ಆರೋಪ ಹೊರಿಸಿದ್ದರು. ನಂತರ ಇನ್ನಿಬ್ಬರು ನಟಿಯರೂ ಇದೇ ರೀತಿಯ ಆರೋಪವನ್ನು ಕಿಮ್ ಮೇಲೆ ಹೊರಿಸಿದ್ದರು. ಕೋರ್ಟ್ ಕೂಡ ಕಿಮ್‌ಗೆ ಛೀಮಾರಿ ಹಾಕಿ, ದಂಡ ತೆರುವಂತೆ ಹೇಳಿತ್ತು.

ಜೀವನವನ್ನು ಇನ್ನೊಂದು ಮಜಲನ್ನು ಚಿತ್ರಗಳ ಮೂಲಕ ಕಟ್ಟಿ ಕೊಟ್ಟು, ಜಗತ್ತಿನಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ಕಿಮ್, ಈ ಆರೋಪಗಳಿಂದಾಗಿ ಕುಗ್ಗಿದ್ದೂ ನಿಜ. ತನಗಾದ ನೋವು, ಅವಮಾನದಿಂದಾಗಿ, ಎರಡು ವರ್ಷಗಳ ಹಿಂದೆ ತಾಯ್ನಾಡು ದಕ್ಷಿಣ ಕೋರಿಯಾವನ್ನೇ ತೊರೆದು ಬೇರೆಡೆ ಹೋಗಿ ನೆಲೆಸಬೇಕಾದ ಸಂಕಟವೂ ಕಿಮ್‌ಗೆ ಪ್ರಾಪ್ತಿಯಾದದ್ದು ಬದುಕಿನ ಕ್ರೂರದ
ಮುಖದ ಅನಾವರಣದಂತಿತ್ತು.

1960 ಡಿಸೆಂಬರ್ 20ರಂದು ಹುಟ್ಟಿದ್ದ ಕಿಮ್ ಬದುಕಿದ್ದರೆ ಇಂದು ತಮ್ಮ 60ನೇ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿದ್ದರು. ಆದರೆ, ಇದೇ ತಿಂಗಳ 11ರಂದು ಕಿಮ್‌ರನ್ನು ಮಾರಕ ಕರೋನಾ ಬಲಿ ಪಡೆದಿದೆ. ತನ್ನ ಚಿತ್ರಗಳಲ್ಲಿ ಬದುಕಿನ ವಿಪರೀತಗಳನ್ನು ಭೀಕರ ವಾಗಿ, ಹಸಿಹಸಿಯಾಗಿ ಸೆರೆ ಹಿಡಿದಿದ್ದ ಶ್ರೇಷ್ಠ ತಂತ್ರಜ್ಞನ ಜೀವನದ ಅಂತ್ಯವೂ ಕೂಡ ಅಷ್ಟೇ ಭೀಕರವಾಗಿ ಅಂತ್ಯವಾಗಿದ್ದು
ಬದುಕಿನ ಕ್ರೂರತೆಯ ಅನಾವರಣವಷ್ಟೇ.

ನಮಗೆ ಕಂಡದಷ್ಟೇ ಬದುಕಲ್ಲ, ನಮಗೆ ಕಾಣದ, ಅರಿವಿಗೂ ಬಾರದ, ಕಲ್ಪನೆಗೂ ನಿಲುಕದ ಬದುಕನ್ನು ತೆರೆಗೆ ತಂದು, ಬದುಕಿನ ಪಾಠ ಹೇಳಿ ಕೊಟ್ಟ ಕಿಮ್ ತಮ್ಮ ಚಿತ್ರಗಳಲ್ಲಿಯೇ ಸದಾ ಜೀವಂತ.

Leave a Reply

Your email address will not be published. Required fields are marked *