ಚೆನ್ನೈ: ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಯುವ ಆಟಗಾರ ಡಿ. ಗುಕೇಶ್(D Gukesh) ಇಂದು(ಗುರುವಾರ) ತಮ್ಮ ನೆಚ್ಚಿನ ಸೂಪರ್‌ಸ್ಟಾರ್, ತಮಿಳು ಚಿತ್ರರಂಗದ ತಲೈವಾ (Thalaivaa), ರಜನಿಕಾಂತ್ (Rajinikanth) ಅವರನ್ನು ಭೇಟಿಯಾಗಿದ್ದಾರೆ.
ತಮ್ಮ ಕುಟುಂಬದೊಂದಿಗೆ ರಜನಿಕಾಂತ್ ಅವರನ್ನು ಭೇಟಿಯಾದ ಫೋಟೊಗಳನ್ನು ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗುಕೇಶ್, ‘ಸೂಪರ್ ಸ್ಟಾರ್ ರಜನಿಕಾಂತ್ ಸರ್, ನಿಮ್ಮ ಆತ್ಮೀಯ ಹಾರೈಕೆಗಳು.ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಬರೆದಿದ್ದಾರೆ. ರಜನಿಕಾಂತ್ ಅವರು ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು.
ರಜನಿಕಾಂತ್ ಭೇಟಿಗೂ ಮುನ್ನ ಗುಕೇಶ್ ಅವರನ್ನು ತಮಿಳು ನಟ ಶಿವಕಾರ್ತಿಕೇಯನ್ ತಮ್ಮ ಕಚೇರಿಗೆ ಆಹ್ವಾನಿಸಿ ಕೇಕ್ ಕತ್ತರಿಸಿ ಅಭಿನಂದಿಸಿದ್ದರು. ಅಲ್ಲದೆ ದುಬಾರಿ ಬೆಲೆಯ ವಾಚ್ ಉಡುಗೊರೆಯಾಗಿ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೊಗಳು ಕೂಡ ವೈರಲ್ ಆಗಿತ್ತು.
18 ವರ್ಷದ ಗುಕೇಶ್ ಅವರು ಈಚೆಗೆ ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೇನ್ ವಿರುದ್ಧ ಗೆದ್ದು ದಾಖಲೆ ಬರೆದಿದ್ದರು. ಗುಕೇಶ್ 2006ರ ಮೇ 29ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿ ಅಲ್ಲೇ ಬೆಳೆದಿದ್ದರೂ, ಅವರ ಮಾತೃಭಾಷೆ ತೆಲುಗು. ಯಾಕೆಂದರೆ ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ ಗೋದಾವರಿ ಆಗಿದೆ.
ಗುಕೇಸ್ ಎಂದರೆ ಸದ್ಗುಣ, ಶಿವ ಅಥವಾ ಜಗತ್ತನ್ನೇ ಗೆದ್ದವನು ಎಂದರ್ಥ. ಮಗನಿಗೆ ‘ಜಿ’ ಅಥವಾ ‘ಗು’ ನಿಂದ ಆರಂಭವಾಗುವ ಅಕ್ಷರದ ಹೆಸರಿಡಲು ಜ್ಯೋತಿಷಿ ಸೂಚಿಸಿದ್ದರಂತೆ, ಅದರಂತೆ ಅವರ ಪೋಷಕರು ಈ ವಿಶೇಷ ಹೆಸರನ್ನು ಆಯ್ದುಕೊಂಡರಂತೆ. ಅವರ ಪೂರ್ಣ ಹೆಸರು ದೊಮ್ಮರಾಜು ಗುಕೇಶ್. ಮಗನ ಚೆಸ್ ಕನಸು ನನಸಾಗಿಸುವ ಸಲುವಾಗಿ ತಂದೆ ರಜನಿಕಾಂತ್ ವೈದ್ಯ ವೃತ್ತಿಯನ್ನೇ ತೊರೆದು ಮಗನೊಂದಿಗೆ ವಿವಿಧ ಚೆಸ್ ಟೂರ್ನಿಗಳಿಗೆ ಪ್ರಯಾಣಿಸಲಾರಂಭಿಸಿದ್ದರು. ಮಗನ ಎಲ್ಲ ಸಾಧನೆಗೂ ತಂದೆ ಬೆನ್ನುಲುಬಾಗಿ ನಿಂತಿದ್ದಾರೆ.
ತಮ್ಮ 12ನೇ ವಯಸ್ಸಿನಲ್ಲಿ ಗುಕೇಶ್ 2017ರಲ್ಲಿ 34ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್‌ನಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸ್ಪರ್ಧೆಯಾದ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೂರನೇ ಕಿರಿಯ ಆಟಗಾರನೆನಿಸಿಕೊಂಡಿದ್ದರು. ಇದರ ಜೊತೆಗೆ ಈ ಪಂದ್ಯಾವಳಿಯಲ್ಲಿ 9 ಅಂಕ ಗಳಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿದಲ್ಲದೆ, ಕೇವಲ 17ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದರು. ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಈ ಮೂಲಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.