Sunday, 13th October 2024

Dadasaheb Phalke Award: ಮಿಥುನ್‌ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

Dadasaheb Phalke Award

ಮುಂಬೈ: ಈ ವರ್ಷದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award)ಯನ್ನು ಖ್ಯಾತ ನಟ ಮಿಥುನ್ ಚಕ್ರವರ್ತಿ (Mithun Chakraborty) ಅವರಿಗೆ ಘೋಷಿಸಲಾಗಿದೆ. ಸೋಮವಾರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಿದರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾಗಿದ್ದು, ಇದನ್ನು ಕೇಂದ್ರ ಸರ್ಕಾರ ಕೊಡಮಾಡುತ್ತದೆ. ಚಲನಚಿತ್ರರಂಗಕ್ಕೆ ನೀಡುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗುತ್ತದೆ.

3 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಿಥುನ್ ಚಕ್ರವರ್ತಿ ಅವರು ಹಿಂದಿ ಮಾತ್ರವಲ್ಲಿದೆ ಬೆಂಗಾಲಿ, ಭೋಜ್‌ಪುರಿ, ಒಡಿಯಾ, ತೆಲುಗು, ಕನ್ನಡ ಮತ್ತು ತಮಿಳಿನ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನೃತ್ಯ ಕೌಶಲ್ಯಗಳಿಗೆ ಹೆಸರುವಾಸಿಯಾದ ಮಿಥುನ್ 80 ಮತ್ತು 90ರ ದಶಕದಲ್ಲಿ ಬಾಲಿವುಡ್‌ ಆಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ʼಡಿಸ್ಕೋ ಡ್ಯಾನ್ಸರ್ʼ, ʼಮೃಗಯಾʼ, ʼಗುಡಿಯಾʼ, ʼಗುರುʼ ಮತ್ತು ʼಓ ಮೈ ಗಾಡ್ʼ ಮಿಥುನ್ ಚಕ್ರವರ್ತಿ ಅಭಿನಯಿಸಿದ ಪ್ರಮುಖ ಚಿತ್ರಗಳು. 2018ರಲ್ಲಿ ತೆರೆಕಂಡ ಶಿವರಾಜ್‌ ಕುಮಾರ್‌-ಸುದೀಪ್‌ ನಟನೆಯ ʼದಿ ವಿಲನ್‌ʼ ಕನ್ನಡ ಚಿತ್ರದಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ.

“ಮಿಥುನ್ ದಾ ಅವರ ಸಿನಿ ಪ್ರಯಾಣವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸುತ್ತಿದ್ದೇವೆ. ಅಕ್ಟೋಬರ್‌ 8ರಂದು ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣ ಸಭಾರಂಭದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರದಾನ ಮಾಡಲಾಗುವುದುʼʼ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಪದ್ಮಭೂಷಣ ಪ್ರಶಸ್ತಿ ಪಡೆದ ಕೆಲವೇ ತಿಂಗಳುಗಳ ಅಂತರದಲ್ಲಿ ಮಿಥುನ್ ಚಕ್ರವರ್ತಿ ಅವರನ್ನು ಅರಸಿಕೊಂಡು ಈ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಬಂದಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಮಿಥುನ್ ಚಕ್ರವರ್ತಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು.

ಗಣನೀಯ ಕೊಡುಗೆ

74 ವರ್ಷದ ಮಿಥುನ್‌ ಚಕ್ರವರ್ತಿ ಭಾರತೀಯ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. 1950ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ಅವರು 1976ರಲ್ಲಿ ತೆರೆಕಂಡ ʼಮೃಗಯಾʼ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೃಣಾಲ್‌ ಸೇನ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು.

ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಗರಿ

ವಿಶೇಷ ಎಂದರೆ ಮಿಥುನ್‌ ಚಕ್ರವರ್ತಿ ಅವರು ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದರು. ʼಮೃಗಯಾʼ ಸಿನಿಮಾದ ಘಿನುವಾ ಪಾತ್ರಕ್ಕಾಗಿ ಅವರು ಈ ಗೌರವಕ್ಕೆ ಪಾತ್ರರಾದರು. ಆ ಮೂಲಕ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಕೆಲವೇ ಕೆಲವು ನಟರ ಪೈಕಿ ಮಿಥುನ್‌ ಒಬ್ಬರೆನಿಸಿಕೊಂಡಿದ್ದಾರೆ. ಇದಾದ ಬಳಿಕ 1992ರ ಬಂಗಾಳಿ ಚಿತ್ರ ʼತಹದೆರ್‌ ಕಥಾʼ ಮತ್ತು 1998ರಲ್ಲಿ ಬಿಡುಗಡೆಯಾದ ʼಸ್ವಾಮಿ ವಿವೇಕಾನಂದʼ ಹಿಂದಿ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಿರುತೆರೆಯಲ್ಲಿ ಅವರು ಜಡ್ಜ್‌ ಆಗಿಯೂ ಗಮನ ಸೆಳೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Devara Box Office Collection: ಮೊದಲ ದಿನದ ಕಲೆಕ್ಷನ್‌ನಲ್ಲಿ ಶಾರುಖ್‌ ಖಾನ್‌ ಹಿಂದಿಕ್ಕಿದ ಜೂನಿಯರ್‌ ಎನ್‌ಟಿಆರ್‌; ʼದೇವರʼ ಗಳಿಸಿದ್ದೆಷ್ಟು?