Monday, 13th January 2025

Eddelu Manjunatha 2: ಗುರುಪ್ರಸಾದ್ ನಿರ್ದೇಶನದ ಕೊನೆಯ ಸಿನಿಮಾ ‘ಎದ್ದೇಳು ಮಂಜುನಾಥ 2’ ಬಿಡುಗಡೆಗೆ ಸಿದ್ಧ

Eddelu Manjunatha 2

ಬೆಂಗಳೂರು: ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ (Guruprasad) ಅವರ ಕೊನೆ ಕನಸು ‘ಎದ್ದೇಳು ಮಂಜುನಾಥ 2’ (Eddelu Manjunatha 2) ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಫೆ. 21ರಂದು ತೆರೆಗೆ ಬರಲಿದೆ. 2009ರಲ್ಲಿ ತೆರೆಕಂಡ ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ (Jaggesh) ನಾಯಕನಾಗಿ ಅಭಿನಯಿಸಿ ಮೋಡಿ ಮಾಡಿದ್ದರು. ಈಗ ‘ಎದ್ದೇಳು ಮಂಜುನಾಥ್ 2’ಗೆ ಗುರುಪ್ರಸಾದ್ ಅವರೇ ಕಥೆ ಬರೆದು ನಿರ್ದೇಶನದ ಜತೆ ನಾಯಕನಾಗಿಯೂ ನಟಿಸಿದ್ದಾರೆ. ಈ ಚಿತ್ರದ ʼಕಿತ್ತೋದ ಪ್ರೇಮʼ ಹಾಡು ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ, ನಿರ್ಮಾಪಕ ಉದಯ್ ಕೆ. ಮೆಹ್ತಾ ಮತ್ತಿತರರು ʼಎದ್ದೇಳು ಮಂಜುನಾಥ್ 2ʼಗೆ ಶುಭ ಹಾರೈಸಿದರು.

ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಮಾತನಾಡಿ, ʼʼಗುರುಪ್ರಸಾದ್ ಇದ್ದಿದ್ದರೆ ಈ ಆಡಿಟೋರಿಯಂನಲ್ಲಿ ನಗು, ಅವರ ಓಡಾಟ, ಅಬ್ಬರ ಎಲ್ಲ ಇರುತಿತ್ತೇನೋ? ನಾವು ಇಂದು ಅದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾನು ಅವರನ್ನು ಅಭಿಮಾನಿಯಾಗಿ ನೋಡಿದ್ದೆ. ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿಲ್ಲ. ನಾನು ಹಿಂದೆ ಹಲವು ಬಾರಿ ಹೇಳಿದ್ದೇನೆ. ನಮ್ಮ ತಂದೆ ʼಮಠʼ, ʼಎದ್ದೇಳು ಮಂಜುನಾಥʼ ಸಿನಿಮಾವನ್ನು ಟಿವಿಯಲ್ಲಿ ನೋಡಿ ನಗು, ನಗುತ್ತಾ ಎಂಜಾಯ್ ಮಾಡುತ್ತಿದ್ದರು. ನಾನು ಅಪ್ಪನ ಜತೆ ಆ ಚಿತ್ರ ನೋಡಿ ಎಂಜಾಯ್ ಮಾಡಿದ್ದೇನೆ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆ ನಿರ್ದೇಶಕರೊಂದಿಗೆ ಕೆಲಸ‌ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆʼʼ ಎಂದರು.

ನಾಯಕಿ ರಚಿತಾ ಮಹಾಲಕ್ಷ್ಮೀ ಮಾತನಾಡಿ, ʼʼಇಲ್ಲಿಗೆ ಬಂದಾಗ ಸ್ವಲ್ಪ ಫೀಲಿಂಗ್ ಆಯ್ತು. ʼರಂಗನಾಯಕʼ ಸಿನಿಮಾ ಸಮಯದಲ್ಲಿ ಗುರುಪ್ರಸಾದ್ ಸರ್ ಬನ್ನಿ ಕುತ್ಕೊಳ್ಳಿ ಅಂತೆಲ್ಲಾ ಆತಿಥ್ಯ ಮಾಡಿದ್ದು ನೆನಪಾಯ್ತು. ಆ ವ್ಯಕ್ತಿಯನ್ನು ಈ ರೀತಿ ನೋಡಿದ್ದು ಬೇಸರವಾಗುತ್ತಿದೆ. ನಾನು ʼರಂಗನಾಯಕʼ ಸಿನಿಮಾಗೂ ಮೊದಲು ಸೈನ್ ಮಾಡಿದ್ದು
ʼಎದ್ದೇಳು ಮಂಜುನಾಥ 2ʼ ಚಿತ್ರಕ್ಕೆ. 2020ನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಿದ್ದು, ಈ ದಾರಿ ಬಹಳ ಸುಲಭವಾಗಿ ಇರಲಿಲ್ಲ. ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆʼʼ ಎಂದು ಹೇಳಿದರು.

ನಿರ್ಮಾಪಕ ಮೈಸೂರು ರಮೇಶ್ ಮಾತನಾಡಿ, ʼʼಎದ್ದೇಳು ಮಂಜುನಾಥ್ 2ʼ ಸಿನಿಮಾದಿಂದ ಬರುವ ಲಾಭದ ಶೇ. 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲಾಗುವುದುʼʼ ಎಂದು ಭರವಸೆ ನೀಡಿದರು.

ʼಕಿತ್ತೋದ ಪ್ರೇಮʼ ಎಂಬ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ಬರೆದಿದ್ದು, ನವೀನ್ ಸಜ್ಜು ಧ್ವನಿಯಾಗಿದ್ದಾರೆ. ಅನೂಪ್ ಸೀಳಿನ್ ಹಾಡಿಗೆ ಟ್ಯೂನ್ ಹಾಕಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್ ಅವರಿಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮೀ ನಟಿಸಿದ್ದು, ಉಳಿದಂತೆ ಶರತ್ ಲೋಹಿತಾಶ್ವ, ಚೈತ್ರಾ ಆಚಾರ್, ವಿಘ್ನೇಶ್ ಕಟ್ಟಿ, ರವಿ ದೀಕ್ಷಿತ್ ತಾರಾಬಳಗದಲ್ಲಿದ್ದಾರೆ.

ʼಎದ್ದೇಳು ಮಂಜುನಾಥ್ 2ʼ ಸಿನಿಮಾಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡಿದ್ದು, ರವಿ ದೀಕ್ಷಿತ್ ಕೋ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. ರಾಮ್ ಮೂವೀಸ್, ಗುರುಪ್ರಸಾದ್ ಹಾಗೂ ಫ್ರೆಂಡ್ಸ್ ಫೋರ್ಮ್ ಬ್ಯಾನರ್‌ನಡಿ ಮೂಡಿಬಂದಿರುವ ಈ ಚಿತ್ರಕ್ಕೆ ಅಶೋಕ ಸಾಮ್ರಾಟ್ ಕ್ಯಾಮೆರಾ ಹಿಡಿದಿದ್ದು, ಲಿಂಗರಾಜು ಹಾಗೂ ಉದಯ್ ಸಂಕಲನ ಜವಾಬ್ದಾರಿ ನಿಭಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Daiji Movie: ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿದ ʼದೈಜಿʼ ಚಿತ್ರದ ಮುಹೂರ್ತ

Leave a Reply

Your email address will not be published. Required fields are marked *