Monday, 25th November 2024

ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ ನಿಧನ

ಬೆಂಗಳೂರು : ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ (82) ಮಂಗಳವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು.

ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಚಿತ್ರದ ಸಹಾಯಕ ನಿರ್ದೇಶಕರಾಗಿ ಅವರ ಚಿತ್ರರಂಗದ ನಂಟು ಆರಂಭವಾಯ್ತು. ‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ, ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ. ‘ತೂಗುದೀಪ’, ‘ನನ್ನ ಕರ್ತವ್ಯ’ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಅನಿರೀಕ್ಷಿತ’ (1970) ಅವರು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ.

ಕೃಷ್ಣಮೂರ್ತಿ ಪುರಾಣಿಕರ ‘ವಸುಂಧರೆ’ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಚಿತ್ರಕ್ಕೆ ವಿಜಯಭಾಸ್ಕರ್ ಸಂಯೋಜಿಸಿದ ಎರಡು ಟ್ಯೂನ್‌ಗಳಿಗೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಮದರಾಸಿಗೆ ತೆರಳಿ ಗೀತೆ ರಚಿಸಿಕೊಟ್ಟಿದ್ದು ವಿಶೇಷ. ಈ ಸಿನಿಮಾ ತೆರೆ ಕಂಡು ಈ ಹೊತ್ತಿಗೆ ಐವತ್ತು ವರ್ಷ.

ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ. ವೆಂಕಟೇಶ್ವರನ್ ಅವರೊ ಡಗೂಡಿ ‘ತ್ರೀ ಸ್ಟಾರ್ಸ್’ ಸ್ಥಿರಚಿತ್ರ ಛಾಯಾಗ್ರಹಣ ಸಂಸ್ಥೆ ಆರಂಭಿಸಿದರು. ಮುಂದೆ ಬೆಂಗಳೂರಿಗೆ ಮರಳಿದ ನಂತರ ಗಾಂಧಿನಗರ ದ 6ನೇ ಕ್ರಾಸ್‌ನಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದರು. ಮುಂದೆ ‘ಪ್ರಗತಿ’ ಸ್ಟುಡಿಯೋ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಥಾನ ಪಡೆಯಿತು. 350ಕ್ಕೂ ಹೆಚ್ಚು ಸಿನಿಮಾಗಳಿಗೆ ‘ಪ್ರಗತಿ’ಯ ಸ್ಥಿರಚಿತ್ರ ಛಾಯಾಗ್ರಾಹಣವಿದೆ. ಚಿತ್ರನಿರ್ದೇ ಶಕರು, ನಟ-ನಟಿ ಯರಿಗೆ ‘ಪ್ರಗತಿ’ ಆಗ ಮೀಟಿಂಗ್ ಪಾಯಿಂಟ್ ಆಗಿತ್ತು.

ಹಲವು ವರ್ಷಗಳ ಕಾಲ ಅವರು ಮದರಾಸಿನಲ್ಲಿದ್ದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡ್ ಆಗಿ ಕಾರ್ಯನಿರ್ವಹಿದ್ದರು. ಆಗೆಲ್ಲಾ ಕನ್ನಡ ನಿರ್ಮಾಪಕರು, ನಿರ್ದೇಶಕರಿಗೆ ತಮ್ಮ ಶಿಫಾರಸು ಬಳಸಿ ಕಚ್ಛಾ ಫಿಲ್ಮ್ ದೊರಕಿಸಿ ಕೊಡು ವಲ್ಲಿ ನೆರವಾಗುತ್ತಿದ್ದರು. 2005ರಲ್ಲಿ ‘ಪ್ರಗತಿ’ ಸ್ಟುಡಿಯೋ ಕಾರ್ಯ ಸ್ಥಗಿತಗೊಳಿಸಿದ ನಂತರ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು.

ನಾಗೇಶ್ ಬಾಬ ಅವರು ಪತ್ನಿ ಶ್ಯಾಮಲಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.