Sunday, 29th December 2024

Geetha Shivarajkumar: ನೀಮೋ ಸದಾ ನಮ್ಮೊಳಗಿದ್ದಾನೆ; ಮುದ್ದಿನ ಶ್ವಾನವನ್ನು ನೆನೆದು ಗೀತಾ ಶಿವರಾಜ್‌ಕುಮಾರ್‌ ಭಾವುಕ ಪತ್ರ

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವ ರಾಜ್​ಕುಮಾರ್ (Shiva Rajkumar) ಅವರು ಅಮೆರಿಕದಲ್ಲಿ ಕ್ಯಾನ್ಸರ್​ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅವರ ಚಿಕಿತ್ಸೆ ನೆರವೇರಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರ ಮನೆಯ ಪ್ರೀತಿಯ ಶ್ವಾನ ನೀಮೋ ನಿಧನ ಹೊಂದಿದೆ. ಈ ಬಗ್ಗೆ ಶಿವಣ್ಣ ಅವರ ಪತ್ನಿ ಗೀತಾ (Geetha Shivarajkumar) ಭಾವುಕ ಪತ್ರ ಬರೆದಿದ್ದಾರೆ.

ಗೀತಾ ಶಿವರಾಜ್‌ಕುಮಾರ್‌ ಪೋಸ್ಟ್‌ನಲ್ಲಿ ಏನಿದೆ?

ʼʼನಮ್ಮ ಮನೆಯಲ್ಲಿ ನಾವು ಐದಲ್ಲ, ಆರು ಜನ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ. ನಿಶು ಮದುವೆಗೆ ಮುಂಚೆ ಅವಳ ಬರ್ತ್​ಡೇಗೆ ದಿಲೀಪ್ ನೀಮೋನ ಗಿಫ್ಟ್ ಆಗಿ ಕೊಟ್ಟರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನನ್ನು ನೋಡಿಕೊಳ್ಳಲು ಸಮಯ ಆಗುತ್ತಿರಲಿಲ್ಲ. ಈ ಮೂಲಕ ಅವನು ನಮ್ಮ ಮನೆಯ ಆರನೆಯವನಾದ. ನಮ್ಮ ಜೀವನಕ್ಕೆ ನೀಮೋನನ್ನು ಕರೆ ತಂಡ ದಿಲೀಪ್‌ಗೆ ಧನ್ಯವಾದʼʼ ಎಂದು ಗೀತಾ ಬರೆದುಕೊಂಡಿದ್ದಾರೆ.

ಮುಂದುವರಿದು, ʼʼಎಲ್ರೂ ಅವರ ಪೆಟ್‌ ಹಿಂದೆ ಓಡಾಡ್ತಾ ಇರ್ತಾರೆ. ಆದ್ರೆ ನೀಮೋ ಯಾವಾಗ್ಲೂ ನನ್ನ ಹಿಂದೆ. ನಾನು ಕಿಚನ್ನಲ್ಲಿ ಇರುವಾಗ ಅತವಾ ಮನೆಯಲ್ಲಿ ಎಲ್ಲೇ ಹೋದ್ರೂ ಅವನು ಯಾವಾಗಲೂ ನನ್ನ ಹಿಂದೆ. ನನ್ನ ಕೆಲಸ್‌ ಮುಗಿಯುವುದು ಎಷ್ಟೇ ಹೊತ್ತಾದರೂ ಅವನು ಮಾತ್ರ ನನ್ನ ಹಿಂದೆ. ಶಿವಣ್ಣ ಅವರ ಕಾಲ ಬಳಿ ಅಂಡಿಕೊಂಡು, ಆ್ಯಂಗಲ್ ಅಡ್ಡೆಸ್ಟ್ ಮಾಡಿಕೊಂಡು ನನ್ನ ಮುಖ ಕಾಣೋ ಹಾಗೆ ಕೂರ್ತಿದ್ದ ನೀಮೋʼʼ ಎಂದು ಸ್ಮರಿಸಿಕೊಂಡಿದ್ದಾರೆ.

ʼʼನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ, ನಾವಿಬ್ಬರೂ ಒಂದೇ. ಅವನು ಬೆಳೆಯುವಾಗ ಅವನು ಎಷ್ಟೇ ದೊಡ್ಡವನಾದರೂ ಮಗುವಿನಂತೆ ಆರೈಕೆ ಮಾಡಿ, ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟ್ರೇಟ್‌ಮೆಂಟ್, ಅದಾದಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್, ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲಾ ಬಿಟ್ಟು ದೇವರ ಹತ್ತಿರ ಹೋದ. ನನ್ನ ಮರಿ ನಾನು ಅಮೆರಿಕಕ್ಕೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗುವುದಿಲ್ಲ. ನಾವು ಅಮೆರಿಕಕ್ಕೆ ಬಂದ ಮೇಲೆನೇ ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ಸುತ್ತೆʼʼ ಎಂದು ಗೀತಾ ತಿಳಿಸಿದ್ದಾರೆ.

ʼʼಊಟ ಮಾಡುವಾಗ ನಿಶು ಚೇರ್‌ ಹಿಂದೆ, ಆಮೇಲೆ ನಿವಿ ಜತೆಗೆ ಹಾಗೂ ಮಲಗುತ್ತಿದ್ದುದು ನಮ್ಮ ಜತೆಗೆ. ಈಗ ಒಂದು ತಿಂಗಳಿಂದ ರಾತ್ರಿ ಶಿವಣ್ಣನಿಗೆ ಅಂಟಿಕೊಂಡು ಮಲಗುತ್ತಿದ್ದ. ಮೊದಲ್ಲೆಲ್ಲಾ ಅವನು ಹೀಗೆ ಮಾಡಿದವನಲ್ಲ. ನೆನ್ನೆ ಮಾತನಾಡುವಾಗ ನಿವಿ ‘ಪಪ್ಪನಿಗೆ ಏನು ಆಗ್ತಾ ಇತ್ತು ಅಂತ ಅವನಿಗೆ ಗೊತ್ತಿತ್ತು ಅನಿಸುತ್ತದೆ, ಅದಕ್ಕೆ ಹಾಗೆ ಮಲಗುತ್ತಿದ್ದ’ ಎಂದಳು. ನನಗೂ ಹಾಗೆ ಅನ್ನಿಸಿತು. ನಾವು ಅಲ್ಲೇ ಇದ್ದರೆ ತುಂಬಾ ಕಷ್ಟ ಪಡ್ತೀವಿ ಹಾಗೂ ಈ ಸಮಯದಲ್ಲಿ ಕಷ್ಟ ಪಡಬಾರದೆಂದು ಕಾದು ನನ್ನ ಮರಿ ನಮ್ಮೆಲ್ಲರನ್ನು ಬಿಟ್ಟು ಹೋದ. ಅವನನ್ನು ನಮ್ಮ ಜೀವನದ ಭಾಗವಾಗಿ ಕರೆದುಕೊಂಡು ಬಂದಿದ್ದು ಹಾಗೂ ಅವನು ಹೊರಡುವಾಗ ಜತೆಯಲ್ಲೇ ನಿಂತಿದ್ದು ದಿಲೀಪ್. ನಮ್ಮ ಮನೆಯ ಎಲ್ಲರೂ ನೀಮೋನನ್ನು ಅವರ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಾರೆʼʼ ಎಂದು ಗೀತಾ ಹೇಳಿದ್ದಾರೆ.

ಸದಾ ನಮ್ಮೊಳಗೆ ಜೀವಂತ

ʼʼನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗಲೂ ಇರುತ್ತಾನೆ. ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ. ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಎಂದೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜತೆಯಲ್ಲಿ ತಗೆದುಕೊಂಡು ಹೋಗುತ್ತವಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆʼʼ ಎಂದು ಗೀತಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Shivarajkumar: ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ಶಿವರಾಜ್‌ಕುಮಾರ್‌ ದಂಪತಿ