Saturday, 11th January 2025

Jai Hanuman Movie: ರಿಷಬ್‌ ಶೆಟ್ಟಿಗೆ ಕಾನೂನು ಸಂಕಷ್ಟ; ‘ಜೈ ಹನುಮಾನ್‌’ ಚಿತ್ರತಂಡದ ವಿರುದ್ಧ ಕೇಸ್‌ ದಾಖಲು

Jai Hanuman Movie

ಹೈದರಾಬಾದ್‌: ʼಕಾಂತಾರʼ (Kantara) ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ, ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಇದೀಗ ಕನ್ನಡ ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ‘ಕಾಂತಾರ’ದ ಪ್ರೀಕ್ವೆಲ್‌, ಬಹು ನಿರೀಕ್ಷಿತ ‘ಕಾಂತಾರ: ಚಾಪ್ಟರ್‌ 1’ ಸಿನಿಮಾದಲ್ಲಿ ನಿರತರಾಗಿದ್ದಾರೆ. ಅವರ ಹುಟ್ಟೂರು ಕುಂದಾಪುರದಲ್ಲಿ ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ನಟನೆಯ ಜತೆಗೆ ನಿರ್ದೇಶನದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಅವರು ಟಾಲಿವುಡ್‌ಗೂ ಕಾಲಿಟ್ಟಿದ್ದು, ಕಳೆದ ವರ್ಷ ಸೂಪರ್‌ ಹಿಟ್‌ ಆಗಿದ್ದ ʼಹನುಮಾನ್‌ʼ (Hanu-Man) ಸಿನಿಮಾದ ಸೀಕ್ವೆಲ್‌ ‘ಜೈ ಹನುಮಾನ್‌’ (Jai Hanuman Movie) ಚಿತ್ರದಲ್ಲಿ ರಿಷಬ್‌ ನಟಿಸುತ್ತಿದ್ದಾರೆ. ಬಹುಮುಖ್ಯ ಹನುಮಂತನ ಪಾತ್ರದಲ್ಲಿ ರಿಷಬ್‌ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರ ವಿವಾದಕ್ಕೆ ಕಾರಣವಾಗಿದ್ದು, ವಕೀಲ ಮಮಿದಾಲ್‌ ತಿರುಮಲ ರಾವ್‌ ಎನ್ನುವವರು ರಿಷಬ್‌ ಶೆಟ್ಟಿ, ನಿರ್ದೇಶಕ ಪ್ರಶಾಂತ್‌ ವರ್ಮಾ ಮತ್ತು ನಿರ್ಮಾಪಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಏನಿದು ವಿವಾದ?

ಇತ್ತೀಚೆಗೆ ಚಿತ್ರದ ಪೋಸ್ಟರ್‌, ಟೀಸರ್‌ ರಿಲೀಸ್‌ ಆಗಿತ್ತು. ಅದರಲ್ಲಿ ಹನುಮಂತನ ಪಾತ್ರಧಾರಿ ರಿಷಬ್‌ ರಾಮನ ಮೂರ್ತಿ ಹಿಡಿದು ಭಕ್ತಿ ಪರವಶವಾಗಿರುವುದು ಕಂಡು ಬಂದಿತ್ತು. ಸದ್ಯ ಈ ದೃಶ್ಯಕ್ಕೆ ತಿರುಮಲ ರಾವ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಂಜನೇಯನ ದೇಹದಲ್ಲಿ ರಿಷಬ್‌ ಶೆಟ್ಟಿಯ ಮುಖ ಕಂಡು ಬಂದಿದೆ ಎಂದು ಅವರು ದೂರು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿರುಮಲ ರಾವ್‌ ಅವರು, ʼಜೈ ಹನುಮಾನ್‌ʼ ಸಿನಿಮಾದ ವಿರುದ್ಧ ಹೈದರಾಬಾದ್‌ನ ನಾಂಪಲ್ಲಿ ಕ್ರಿಮಿನಲ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಸಾಂಪ್ರದಾಯಿಕ ಅವತಾರದ ಬದಲು ಹನುಮಂತನನ್ನು ‘ಮಾನವ ಮುಖ’ದೊಂದಿಗೆ ಚಿತ್ರಿಸಲಾಗಿದೆ. ಈ ಮೂಲಕ ದೇವರಿಗಿಂತ ನಟನ ಮೇಲೆ ಹೆಚ್ಚು ಗಮನ ಹರಿಸಲಾಗಿದೆ ಎಂದು ದೂರಿದ್ದಾರೆ.

ʼʼಜೈ ಹನುಮಾನ್‌ʼ ಚಿತ್ರದ ಟೀಸರ್‌ ಅನ್ನು ಮೈತ್ರಿ ಮೂವಿ ಮೇಕರ್ಸ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿಲೀಸ್‌ ಮಾಡಿದೆ. ಈ ಸಿನಿಮಾದಲ್ಲಿ ರಿಷಬ್‌ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹನುಮಂತನ ದೇಹದಲ್ಲಿ ರಿಷಬ್‌ ಶೆಟ್ಟಿಯ ಮುಖ ಕಂಡು ಬಂದಿದೆ. ಇದರರ್ಥ ಅವರು ಹನುಮಂತನನ್ನು ಮಾನವ ಮುಖದೊಂದಿಗೆ ಚಿತ್ರಿಸಿದ್ದಾರೆʼʼ ಎಂಬುದಾಗಿ ಆರೋಪಿಸಿದ್ದಾರೆ.

ʼʼರಿಷಬ್‌ ಶೆಟ್ಟಿ ರಾಷ್ಟ್ರ ಪ್ರಶಸ್ತಿ ವಿಜೇತ ನಟನಾಗಿರುವುದರಿಂದ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿದ್ದೇನೆ. ಹನುಮಾನ್ ಹೇಗೆ ಕಾಣುತ್ತಾನೆ ಎಂಬುದನ್ನು ನಾನು ಸಾಬೀತುಪಡಿಸಬೇಕಾಗಿದೆ. ಇದಕ್ಕಾಗಿ ವಿವಿಧ ದೇಶಗಳಲ್ಲಿ ಹನುಮಂತನನ್ನು ಹೇಗೆ ಚಿತ್ರಿಸಲಾಗಿದೆ ಎಂಬುದನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆʼʼ ಎಂದು ತಿಳಿಸಿದ್ದಾರೆ.

2024ರಲ್ಲಿ ತೆರೆಕಂಡ ʼಹನುಮಾನ್‌ʼ ಚಿತ್ರದ ಸೀಕ್ವೆಲ್‌ ʼಜೈ ಹನುಮಾನ್‌ʼ. ಈ ಚಿತ್ರದಲ್ಲಿ ತೇಜ್ ಸಜ್ಜಾ, ರಾಣಾ ದಗ್ಗುಬಾಟಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. 2024ರ ಜನವರಿಯಲ್ಲಿ ತೆರೆಕಂಡ ʼಹನುಮಾನ್‌ʼ ಸಿನಿಮಾ 40 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 350 ಕೋಟಿ ರೂ. ಗಳಿಸಿದೆ. ಹೀಗಾಗಿ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಆದರೆ ಇದೀಗ ಕಾನೂನು ಸಂಕಷ್ಟ ಎದುರಾಗಿರುವುದು ಚಿತ್ರತಂಡದ ನಿದ್ದೆಗೆಡಿಸಿದೆ.

ಈ ಸುದ್ದಿಯನ್ನೂ ಓದಿ: Rishab Shetty: ಮತ್ತೊಂದು ಮೈಲಿಗಲ್ಲು ನೆಡಲು ಡಿವೈನ್ ಸ್ಟಾರ್ ರೆಡಿ; ಹನುಮಾನ್ ಪಾತ್ರದಲ್ಲಿ ರಿಷಬ್ ಮೋಡಿ

Leave a Reply

Your email address will not be published. Required fields are marked *