ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajinikanth)ಗೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ತಮ್ಮ ವಿಶಿಷ್ಟ ಸ್ಟೈಲ್, ಮ್ಯಾನರಿಸಂನಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ವರ್ಷಕ್ಕೆ ಕನಿಷ್ಠ 1 ಚಿತ್ರದಲ್ಲಾದರೂ ಅಭಿನಯಿಸುವ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಸದ್ಯ ಅವರು ತಮಿಳಿನ ಜನಪ್ರಿಯ ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಕೂಲಿʼ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಮುಂದಿನ ಬೇಸಗೆ ವೇಳೆಗೆ ಈ ಚಿತ್ರ ತೆರೆ ಕಾಣಲಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕನ್ನಡದ ಉಪೇಂದ್ರ ಮತ್ತು ರಚಿತಾ ರಾಮ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಈ ಮಧ್ಯೆ ರಜನಿಕಾಂತ್ ಇನ್ನೊಂದು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅವರೊಂದಿಗೆ ಕನ್ನಡತಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಹಾಗಾದರೆ ಯಾರು ಆ ನಟಿ? (Jailer 2 Movie)
ವಿಶಿಷ್ಟ ಶೈಲಿಯ ಸಿನಿಮಾಗಳ ಮೂಲಕ ಕಾಲಿವುಡ್‌ನ ಗಮನ ಸೆಳೆದ ಯುವ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ʼಜೈಲರ್ʼ ಚಿತ್ರ 2023ರಲ್ಲಿ ತೆರೆಕಂಡಿತ್ತು. ರಜನಿಕಾಂತ್ ಜತೆಗೆ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್, ಮೋಹನ್‌ಲಾಲ್, ತಮನ್ನಾ, ರಮ್ಯಾಕೃಷ್ಣ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್‌ಗೆ ಅವರು ಸಿದ್ಧತೆ ನಡೆಸುತ್ತಿದ್ದಾರೆ. ʼಜೈಲರ್ 2ʼ ಹೆಸರಿನಲ್ಲಿ ಇದು ತೆರೆಗೆ ಬರಲಿದೆ. ರಜನಿಕಾಂತ್ ಪಾತ್ರ ಈ ಸಿನಿಮಾದಲ್ಲಿ ಮುಂದುವರಿಯಲಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.
Happy happy birthday thalaivaaa @rajinikanth ❤️❤️
— Lokesh Kanagaraj (@Dir_Lokesh) December 12, 2024
Our gift to you from Team #Coolie 🔥🔥 💥https://t.co/jghTSP2VHd
ಕನ್ನಡತಿಗೆ ಒಲಿದ ಲಕ್
ವಿಶೇಷ ಎಂದರೆ ಈ ಚಿತ್ರದ ಮುಖ್ಯ ಪಾತ್ರಕ್ಕೆ ಕನ್ನಡತಿ ಆಯ್ಕೆಯಾಗಿದ್ದಾರೆ. ಹೌದು, ʼಕೆಜಿಎಫ್ʼ ಸರಣಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ ಶ್ರೀನಿಧಿ ಶೆಟ್ಟಿ ʼಜೈಲರ್ 2ʼ ಸಿನಿಮಾದಲ್ಲಿ ರಜನಿಕಾಂತ್ ಮಗಳ ಪಾತ್ರ ನಿರ್ವಹಿಸಲಿದ್ದಾರೆ. ಸದ್ಯ ಈ ಬಗ್ಗೆ ಚಿತ್ರತಂಡ ಎಲ್ಲೂ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದರೆ ಶ್ರೀನಿಧಿ ಶೆಟ್ಟಿ ʼಜೈಲರ್ 2ʼ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನಲಾಗಿದೆ.
ಈ ಸುದ್ದಿ ನಿಜವಾದರೆ ಇದು ಶ್ರೀನಿಧಿ ಶೆಟ್ಟಿ ಅವರ 2ನೇ ತಮಿಳು ಚಿತ್ರ ಎನಿಸಿಕೊಳ್ಳಲಿದೆ. 2022ರಲ್ಲಿ ತೆರೆಕಂಡ ʼಕೋಬ್ರಾʼ ಸಿನಿಮಾ ಮೂಲಕ ಅವರು ಮೊದಲ ಬಾರಿಗೆ ಕಾಲಿವುಡ್‌ಗೆ ಕಾಲಿಟ್ಟಿದ್ದರು. ವಿಕ್ರಂ ನಾಯಕನಾಗಿ ಕಾಣಿಸಿಕೊಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿತ್ತು. ಸದ್ಯ ಶ್ರೀನಿಧಿ ಶೆಟ್ಟಿ ತೆಲುಗಿನ ʼತೆಲುಸು ಕದಾʼ, ʼಹಿಟ್: ಡಿ ಥರ್ಡ್ ಕೇಸ್ʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಸುದೀಪ್ ಅವರ ಮುಂದಿನ ಕನ್ನಡ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ ರಜನಿಕಾಂತ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈ ಸುದ್ದಿಯನ್ನೂ ಓದಿ: Aamir Khan: ದಕ್ಷಿಣ ಭಾರತದ ಚಿತ್ರದಲ್ಲಿ ಆಮೀರ್ ಖಾನ್; ಸೂಪರ್ ಸ್ಟಾರ್‌ನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ಪರ್ಫೆಕ್ಷನಿಸ್ಟ್