Thursday, 19th September 2024

Martin: ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌; ʼಮಾರ್ಟಿನ್‌ʼ ಚಿತ್ರದ ಹಾಡು ರಿಲೀಸ್‌

Martin

ಬೆಂಗಳೂರು: ಪ್ಯಾನ್‌ ವರ್ಲ್ಡ್‌ ಚಿತ್ರ, ಸ್ಯಾಂಡಲ್‌ವುಡ್‌ನ ʼಮಾರ್ಟಿನ್‌ʼ (Martin) ಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಹಿಟ್‌ ಜೋಡಿ ನಿರ್ದೇಶಕ ಎ.ಪಿ.ಅರ್ಜುನ್‌ ಮತ್ತು ನಟ ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್‌ನ ಈ ಸಿನಿಮಾ 13 ಭಾಷೆಗಳಲ್ಲಿ ಏಕಕಾಲದಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೈಲರ್‌ ಸಿನಿ ಪ್ರಿಯರ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ಹಾಡು ಬಿಡುಗಡೆ ಮಾಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಕನ್ನಡ ಜೊತೆಗೆ ಈ ಹಾಡು 5 ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿದೆ. ‘ಜೀವ ನೀನೆ…’ ಹೆಸರಿನ ರೊಮ್ಯಾಂಟಿಕ್ ಹಾಡು ಇದಾಗಿದ್ದು,  ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಅವರ ಕೆಮಿಸ್ಟ್ರಿ ಫ್ಯಾನ್ಸ್‌ಗೆ ಇಷ್ಟ ಆಗಿದೆ.

‘ಮಾರ್ಟಿನ್’ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜಿಸಿದ್ದು, ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ‘ಜೀವ ನೀನೆ…’ ಹಾಡನ್ನು ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಲಾಗಿದ್ದು, ಇಮ್ರಾನ್‌ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ರೊಮ್ಯಾಂಟಿಕ್‌ ಆಗಿ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿ ಸೋನು ನಿಗಮ್‌ ಮತ್ತು ಶ್ರುತಿಕಾ ಸಮುದ್ರಲಾ ಅವರು ಹಾಡಿಗೆ ಧ್ವನಿ ನೀಡಿದ್ದು, ನಿರ್ದೇಶಕ ಎ.ಪಿ.ಅರ್ಜುನ್ ಅವರೇ ಸಾಹಿತ್ಯ ಬರೆದಿರುವುದು ವಿಶೇಷ. ಸದ್ಯ ಈ ಹಾಡು ಯೂ ಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಲಿಸ್ಟ್‌ನಲ್ಲಿದೆ. ಆ ಮೂಲಕ ಸೋನ್‌ ನಿಗಮ್‌ ಹಿಟ್‌ ಲಿಸ್ಟ್‌ಗೆ ಇನ್ನೊಂದು ಹಾಡು ಸೇರಿದಂತಾಗಿದೆ.

 

ಹಿಟ್‌ ಕಾಂಬಿನೇಷನ್‌

ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಕಥೆ ಬರೆದಿರುವ ʼಮಾರ್ಟಿನ್‌ʼ ಸಿನಿಮಾ ಆಕ್ಷನ್‌ ಥ್ರಿಲ್ಲರ್‌ ಆಗಿದ್ದು, ಬಿಡುಗಡೆಯಾಗಿರುವ ಟ್ರೈಲರ್‌ ನೋಡಿಯೇ ಧ್ರುವ ಸರ್ಜಾ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಅಕ್ಟೋಬರ್‌ 11ರಂದು ಸಿನಿಮಾ ತೆರೆ ಕಾಣಲಿದ್ದು, ಸಿನಿಪ್ರಿಯರು ಕಾತುರದಿಂದ ಕಾಯುವಂತೆ ಮಾಡಿದೆ. ವಿಶೇಷ ಎಂದರೆ ಎ.ಪಿ.ಅರ್ಜುನ್‌ ಮತ್ತು ಧ್ರುವ ಸರ್ಜಾ ಅವರದ್ದು ಹಿಟ್‌ ಕಾಂಬಿನೇಷನ್‌. ಈ ಹಿಂದೆ ಇವರು ಒಟ್ಟಿಗೆ ಕೆಲಸ ಮಾಡಿದ್ದ ʼಅ‍ದ್ಧೂರಿʼ ಸಿನಿಮಾ 2012ರಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಗಿತ್ತು. ಹೀಗಾಗಿ ʼಮಾರ್ಟಿನ್‌ʼ ಸಿನಿಮಾ ಸೆಟ್ಟೇರಿದಾಗಿನಿಂದಲೇ ನಿರೀಕ್ಷೆ ಹುಟ್ಟು ಹಾಕಿತ್ತು.

ಧ್ರುವ ಸರ್ಜಾ 3 ವರ್ಷಗಳ ಬಳಿಕ ತೆರೆಗೆ

ಧ್ರುವ ಸರ್ಜಾ ಅಭಿನಯದ ಸಿನಿಮಾ ಕೊನೆಯದಾಗಿ ರಿಲೀಸ್‌ ಆಗಿದ್ದು 2021ರಲ್ಲಿ. ರಶ್ಮಿಕಾ ಜೊತೆ ಅಭಿನಯಿಸಿದ ʼಪೊಗರುʼ ಪ್ಯಾನ್‌ ಇಂಡಿಯಾ ಚಿತ್ರವಾಗಿ 2021ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡು ಸೂಪರ್‌ ಹಿಟ್‌ ಆಗಿತ್ತು. ಅದಾದ ಬಳಿಕ ಧ್ರುವ ಸರ್ಜಾ ನಟನೆಯ ಯಾವೊಂದು ಸಿನಿಮಾವೂ ತೆರೆಕಂಡಿಲ್ಲ. ಹೀಗಾಗಿ ಅವರ ಅಭಿಮಾನಿಗಳು 3 ವರ್ಷಗಳಿಂದ ಕಾಯುತ್ತಿದ್ದಾರೆ. ʼಮಾರ್ಟಿನ್‌ʼ ಚಿತ್ರವನ್ನು ಉದಯ್ ಮೆಹ್ತಾ ಅವರು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ʼಮಾರ್ಟಿನ್‌ʼ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜೊತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ, ರೋಹಿತ್‌ ಪಾಠಕ್‌ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Deepika Padukone: ಕಪ್ಪು ಬಿಳುಪು ಫೋಟೋಗಳಲ್ಲಿ ಫಳಫಳ ಮಿಂಚಿದ ದೀಪಿಕಾ ಪಡುಕೋಣೆ ಬೇಬಿ ಬಂಪ್!‌