ಚೆನ್ನೈ: ಹಲವು ಭಾಷೆಯಲ್ಲಿ ಬಿಗ್ ಬಾಸ್ ಶೋ ಮೂಡಿಬಂದಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಯಶಸ್ವಿ ಆಗಿದೆ. ವೀಕ್ಷಕರು ಇಷ್ಟಪಡುವ ನಿರೂಪಕರು ಇದ್ದರೆ ಕಾರ್ಯಕ್ರಮಕ್ಕೆ ಹೆಚ್ಚು ಟಿಆರ್ಪಿ ಸಿಗುತ್ತದೆ. ಇಲ್ಲದಿದ್ದರೆ ಶೋ ಆಯೋಜಕರು ನಷ್ಟ ಅನುಭವಿಸ ಬೇಕಾಗುತ್ತದೆ.
ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತಾ ಬಂದಿ ದ್ದಾರೆ.
ತಮಿಳಿನಲ್ಲಿ ಕಮಲ್ ಹಾಸನ್ ಅವರು ಈ ವಿಚಾರದಲ್ಲಿ ಯಶಸ್ವಿ ಆಗಿದ್ದಾರೆ. ತೆಲುಗಿನಲ್ಲಿ ನಾನಿ, ನಾಗಾರ್ಜುನ, ಜ್ಯೂ.ಎನ್ಟಿಆರ್ ಕೂಡ ನಿರೂಪಕರಾಗಿ ಗಮನ ಸಳೆದಿದ್ದಾರೆ. ಈಗ ಕಮಲ್ ಹಾಸನ್ ಅವರು ತಮಿಳು ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ತೀರ್ಮಾನಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಕಮಲ್ ಹಾಸನ್ ಅವರು ನಟನೆ, ನಿರ್ದೇಶನ, ನಿರ್ಮಾಣ, ರಾಜಕೀಯ.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿ ದ್ದಾರೆ. ‘ಬಿಗ್ ಬಾಸ್ ತಮಿಳು ಅಲ್ಟಿಮೇಟ್’ ಕಾರ್ಯಕ್ರಮದ ನಿರೂಪಣೆ ಕೂಡ ಮಾಡುತ್ತಿದ್ದರು. ಇದು ತಮಿಳು ಬಿಗ್ ಬಾಸ್ನ ಒಟಿಟಿ ವರ್ಷನ್. ಆದರೆ ಈಗ ಅವರು ಈ ಶೋ ನಿರೂಪಣೆಯಿಂದ ಹೊರಬರುವುದಾಗಿ ತಿಳಿಸಿದ್ದಾರೆ.
ಕಮಲ್ ಹಾಸನ್ ಅವರು ಬಹುನಿರೀಕ್ಷಿತ ‘ವಿಕ್ರಮ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಾಸ್ನಿಂದಾಗಿ ಈ ಸಿನಿಮಾದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಮಯ ನೀಡಲು ಕಮಲ್ ಹಾಸನ್ ಅವರಿಗೆ ಕಷ್ಟ ಆಗುತ್ತಿದೆ. ಹಾಗಾಗಿ ‘ಬಿಗ್ ಬಾಸ್ ತಮಿಳು ಅಲ್ಟಿಮೇಟ್’ ಶೋನಿಂದ ಹೊರಬರಲು ತೀರ್ಮಾನಿಸಿದ್ದಾರೆ.
‘ವಿಕ್ರಮ್’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಕಮಲ್ ಹಾಸನ್ ಅವರ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗಿದೆ. ಆ ಕಾರಣದಿಂದ ಅವರು ‘ಬಿಗ್ ಬಾಸ್ ಅಲ್ಟಿಮೇಟ್’ ಕಾರ್ಯಕ್ರಮದ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ.
‘ವಿಕ್ರಮ್’ ಸಿನಿಮಾದಲ್ಲಿ ನನ್ನ ಸಲುವಾಗಿ ದೊಡ್ಡ ದೊಡ್ಡ ಸ್ಟಾರ್ ನಟರು ಮತ್ತು ತಂತ್ರಜ್ಞರು ಕಾಯುವಂತೆ ಮಾಡುವುದು ನ್ಯಾಯಸಮ್ಮತ ಅಲ್ಲ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.